ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುರಕ್ಷತೆ: ಖಾಸಗಿ ಶಾಲೆಗಳ ಸಭೆಗೆ ಆಗ್ರಹ

Last Updated 22 ಜುಲೈ 2014, 19:44 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಮಾರ್ಗಸೂಚಿ ರೂಪಿಸಲು ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಕೂಡಲೇ ಸಭೆ ಕರೆಯಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ಸಮಿತಿಯ ಅಧ್ಯಕ್ಷ ಎಲ್‌.ಆರ್‌.­ಶಿವ­ರಾಮೇಗೌಡ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಮಂಗಳವಾರ ನಡೆದ ಸಮಿತಿಯ ಸದಸ್ಯರ ಸಭೆಯಲ್ಲಿ ಈ ಒತ್ತಾಯ ಮಾಡಲಾಯಿತು.ವಿಬ್ಗಯೊರ್‌ ಶಾಲೆಯ ಘಟನೆ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಆಸಕ್ತಿ ತೋರಿಸಿದ್ದು ಸ್ವಾಗತಾರ್ಹ. ಆದರೆ, ಖಾಸಗಿ ಶಾಲೆಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಹಲವು ವರ್ಷಗಳಿಂದ ಶಿಕ್ಷಣ ಇಲಾಖೆಯ ಗಮನ ಸೆಳೆಯಲಾಗುತ್ತಿದೆ.

ಇಲಾಖೆ ಈ ಸಮಸ್ಯೆಗಳ ಇತ್ಯರ್ಥಕ್ಕೆ ಗಮನ ಹರಿಸಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಮಕ್ಕಳ ಸುರಕ್ಷತೆಯ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಸಭೆ ಕರೆಯಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

‘ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳು ಶಿಕ್ಷಕರಿಂದಾಗಿ ಕೆಟ್ಟ ಹೆಸರು ಗಳಿಸುತ್ತಿವೆ. ಶಿಕ್ಷಕರೇ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶಿಕ್ಷಕರ ತಪ್ಪುಗಳ ಬಗ್ಗೆ ಆಡಳಿತ ಮಂಡಳಿ ಬೈಯುವಂತಿಲ್ಲ. ಒಂದು ವೇಳೆ ಅವರನ್ನು ಬೈದರೆ ಮರು­ದಿನ ಕೆಲಸಕ್ಕೇ ಬರುವುದಿಲ್ಲ. ಮತ್ತೊಂದು ಶಾಲೆಗೆ ಸದ್ದಿಲ್ಲದೆ ಸೇರಿ­ಕೊಳ್ಳುತ್ತಾರೆ’ ಎಂದು ಸಮಿತಿಯ ಪ್ರಮುಖರೊಬ್ಬರು ಗಮನ ಸೆಳೆದರು.

ವಿಬ್ಗಯೊರ್‌ ಶಾಲೆಯಲ್ಲಿ ತರಬೇತು­ದಾರ­ನಿಂದಲೇ ಕುಕೃತ್ಯ ನಡೆದಿದೆ. ಶಾಲಾ ಆಡಳಿತ ಮಂಡಳಿಗೆ ಆತನ ಹಿನ್ನೆಲೆಯ ಬಗ್ಗೆ ಮಾಹಿತಿ ಇಲ್ಲ. ಮುಂದಿನ
ದಿನ­ಗಳಲ್ಲಿ ಶಿಕ್ಷಕರ ನೇಮಕದ ಸಂದರ್ಭ­ದಲ್ಲಿ ಅವರ ಹಿನ್ನೆಲೆಯ ಮಾಹಿತಿ ಸಂಗ್ರ­ಹಿ­ಸಲು ತೀರ್ಮಾನಿಸ­ಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ­ರಾದ ಶ್ರೀನಿವಾಸನ್‌, ಹನುಮಂತ­ರಾಯ, ಆನಂದ್‌ ಎಂ.ಎ, ಗುಲ್‌ಶದ್‌ ಖಾನ್‌, ಕಾರ್ಯ­ದರ್ಶಿ­ಗಳಾದ ಸೂಡಿ ಸುರೇಶ್‌, ಗಾಯತ್ರಿ, ಶಶಿಕುಮಾರ್‌ ಡಿ. ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT