ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕುಗಳು: ಸಿಹಿಯಾಗದ ಸಹಿ...

Last Updated 10 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಧ್ವನಿ ಎತ್ತಿ ‘ಅಂತರ­ರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ಗೆ ಸಹಿ ಹಾಕಿದ ಭಾರತದ ಸ್ಥಿತಿ ವಿಳಾಸವಿಲ್ಲದೇ ಬರೆದ ಪತ್ರದಂತಾಗಿದೆ ಎನಿಸುತ್ತಿದೆ. ಉತ್ತಮ ಕಾನೂನುಗಳಿದ್ದರೂ ಅವುಗಳನ್ನು ಮಾನವೀಯತೆಯೊಂದಿಗೆ ಮೇಳೈಸಿ, ಅನುಷ್ಠಾನಕ್ಕೆ ತರುವ ಕಾನೂನು ಸುವ್ಯವಸ್ಥೆ ನಮಗೆ ಇಂದು ಬೇಕಾಗಿದೆ.

ಅಂತರರಾಷ್ಟ್ರೀಯ ಮಾನ್ಯತೆ ಹಾಗೂ ರಾಜ­ಕೀಯ ಬದ್ಧತೆಯ ಕಾರಣ­ದಿಂದ ನಮ್ಮ ದೇಶ ಇತರ ಪ್ರಗತಿಪರ ರಾಷ್ಟ್ರಗಳ ಜೊತೆ ಸೇರಿ ‘ಅಂತರರಾಷ್ಟ್ರೀಯ ಮಕ್ಕಳ ಹಕ್ಕು­ಗಳ ಒಡಂಬಡಿಕೆ’ಗೆ ಸಹಿ ಹಾಕಿ ಎರಡು ದಶಕ­ಗಳೇ ಕಳೆದುಹೋಗಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಈ ಒಡಂಬಡಿಕೆಗೆ ಸಹಿ ಹಾಕಿದ್ದು 1992ರಲ್ಲಿ. ಆದರೆ ನಂತರದ ಅವಧಿ­ಯಲ್ಲೂ ಮಕ್ಕಳ ಶೋಷಣೆಯನ್ನು ಹತ್ತಿಕ್ಕ­ಲಾ­ಗದ ಈ ಸಹಿ ಮಕ್ಕಳ ಪಾಲಿಗೆ ‘ಸಿಹಿ’ ಆಗದೇ ಇರು­ವುದು ನಾಗರಿಕ ಸಮಾಜಕ್ಕೆ  ಭ್ರಮನಿರಸನ­ವನ್ನು ಉಂಟುಮಾಡಿದೆ. ದೇಶದ ಒಟ್ಟಾರೆ ಮಕ್ಕಳ ಅಂಕಿ-ಅಂಶವನ್ನು ಬದಿ­ಗಿಟ್ಟು, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಹೇಳುವುದಾದರೆ, ಇಲ್ಲಿನ ಒಟ್ಟು ಜನಸಂಖ್ಯೆ­ಯಲ್ಲಿ ಶೇಕಡ 34.6ರಷ್ಟು ಮಕ್ಕಳಿದ್ದಾರೆ.

ಇವ­ರಲ್ಲಿ ಬಹುತೇಕರು ಇಂದಿಗೂ ಹಲವಾರು ಶೋಚ­ನೀಯ ಪರಿಸ್ಥಿತಿಗಳಲ್ಲಿ ನಲುಗಿ ಹೋಗುತ್ತಿ­ದ್ದಾರೆ. ಕಡ್ಡಾಯ ಶಿಕ್ಷಣ ಪದ್ಧತಿ ಜಾರಿಯಾ­ಗಿ­ದ್ದರೂ ಶೇ 18ರಷ್ಟು ಮಕ್ಕಳು ಪ್ರಾಥಮಿಕ ಶಾಲೆ­ಯನ್ನು ಮುಗಿಸಿ, ಮಾಧ್ಯಮಿಕ ಶಾಲೆಯನ್ನು ಪ್ರವೇಶಿಸುತ್ತಿಲ್ಲ. ಅಲ್ಲದೆ ದೇಶದಲ್ಲಿ  ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವ  8ನೇ ರಾಜ್ಯ­ವೆಂಬ ಕುಖ್ಯಾತಿ ಸಹ ಇದ್ದು, ಈ ಕಳಂಕವನ್ನು ತೊಳೆದುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ­ದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿ­ರು­ವುದು ಅಂಕಿ–ಅಂಶಗಳಿಂದ ತಿಳಿದುಬರುತ್ತದೆ.
ಅಪರಾಧ ದಾಖಲೆ ಬ್ಯೂರೊ ಪ್ರಕಾರ, ರಾಜ್ಯದಲ್ಲಿ ಪ್ರತಿನಿತ್ಯ 10 ಮಕ್ಕಳು ವಿವಿಧ ಕಾರಣಗಳಿಗೆ ನಾಪತ್ತೆಯಾಗುತ್ತಿದ್ದಾರೆ. ಹುಟ್ಟುವ ಸಾವಿರ ಮಕ್ಕಳಲ್ಲಿ ಒಂದು ವರ್ಷ ಪೂರೈಸುವುದರೊಳಗೆ 29 ಮಕ್ಕಳು ಮೃತ­ರಾಗು­ತ್ತಿದ್ದಾರೆ. ಚಿಕ್ಕ ವಯಸ್ಸಿನ ಮಕ್ಕಳ ಮೇಲಿನ ಅತ್ಯಾ­ಚಾರ ಪ್ರಕರಣಗಳು, ವೇಶ್ಯಾವಾಟಿಕೆ ಜಾಲ, ಭ್ರೂಣಹತ್ಯೆ, ಶಿಶುಹತ್ಯೆ, ಕುಟುಂಬ­ಗಳಲ್ಲಿನ ಶೋಷಣೆ, ಮನೆ, ಗ್ಯಾರೇಜು, ಹೋಟೆಲು ಉದ್ದಿ­ಮೆ­ಗಳಲ್ಲಿನ ಜೀತ ಹಾಗೂ ಬಿಟ್ಟಿ ಚಾಕರಿ ರಾಜ್ಯದ ಉದ್ದಗಲಕ್ಕೂ ವ್ಯಾಧಿ­ಯಾಗಿ ಬಾಧಿಸುತ್ತಿವೆ. ಇವು ಪ್ರತಿನಿತ್ಯ ವರದಿ­ಯಾಗುವ ಪ್ರಕರಣಗಳಾಗಿ ನಾಗರಿಕರ ಸಂವೇ­ದನೆಯೇ  ಹಂತಹಂತವಾಗಿ ಕ್ಷೀಣಿಸುತ್ತಿದೆ­ಯೇನೋ ಎಂದು ಭಾಸವಾಗುತ್ತಿದೆ.

ಇದಲ್ಲದೆ ಬೃಹತ್ ಮಟ್ಟದಲ್ಲಿ ಕಾಣೆಯಾಗು­ತ್ತಿರುವ ಮಕ್ಕಳ ಅಂಕಿ–ಅಂಶ ಕೂಡ ‘ಅಂತರ­ರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ ನಮ್ಮ ದೇಶದಲ್ಲಿ ಇನ್ನೂ ಶೈಶವಾವಸ್ಥೆಯಲ್ಲೇ ತೆವಳು­ತ್ತಿದೆ ಎಂಬ ಮಾತಿಗೆ ಪುಷ್ಟಿ ನೀಡುವಂತಿದೆ (5 ವರ್ಷಗಳ ಅವಧಿಯಲ್ಲಿ  ಸರ್ಕಾರಿ ಬಾಲ­ಮಂದಿ­ರ­ಗಳಿಂದ ಕಾಣೆಯಾಗಿರುವ ಮಕ್ಕಳ ಸಂಖ್ಯೆ -2,112). ಭ್ರೂಣ ವ್ಯವಸ್ಥೆಯಲ್ಲಿ ಹಾಗೂ ಹುಟ್ಟಿ­ದೊಡನೆ ಲಿಂಗ ತಾರತಮ್ಯದ ಕಾರಣದಿಂದ, ಬೆಳಕು ಕಾಣುವ ಮುನ್ನವೇ ತನ್ನವರಿಂದಲೇ ಚಿವುಟಿ ಹೋಗುತ್ತಿರುವ ಅದೆಷ್ಟೋ ಎಳೆಯ ಆತ್ಮಗಳ ಸಂಖ್ಯೆ ದಾಖಲೆಗೆ ಸಿಗುತ್ತಿಲ್ಲ. ಈ ಮಕ್ಕಳನ್ನು ಇನ್ನಿಲ್ಲವೆನಿಸಿದ ‘ಸಭ್ಯ ಕೊಲೆ­ಗಡು­ಕರು’ ಮಾತ್ರ ಕಾನೂನಿನ ಕುಣಿಕೆಯಿಂದ ಸರಾಗವಾಗಿ ಪಾರಾಗುತ್ತಿದ್ದಾರೆ.

ಮಕ್ಕಳ ಪಾಲನೆ, ಪೋಷಣೆ, ಸಂರಕ್ಷಣೆಗಾಗಿ ಅನುಷ್ಠಾನದಲ್ಲಿರುವ ಕಾನೂನುಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಬಾಲಕಾರ್ಮಿಕ ನಿಷೇಧ ಕಾಯ್ದೆ -1986, ಪೋಷಣೆ- ರಕ್ಷಣೆ ಕಾಯ್ದೆ -2000, ಬಾಲನ್ಯಾಯ ಕಾಯ್ದೆ -2005, ಮಕ್ಕಳ ಮೂಲಭೂತ ಹಕ್ಕೆಂದು ಪರಿಗಣಿಸಲಾಗಿರುವ  ಶಿಕ್ಷಣದ ಹಕ್ಕು, ಅಲ್ಲದೆ ಇತ್ತೀಚೆಗೆ ಜಾರಿಗೆ ಬಂದ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (POCSO)- 2012’ ಇವೆಲ್ಲವೂ ಮಕ್ಕಳನ್ನು ಸಂತುಷ್ಟಿಯಿಂದ ಇಡಬಹುದಾ­ಗಿ­ತ್ತೇನೋ. ಆದರೆ ರಾಜಕೀಯ ಇಚ್ಛಾಶಕ್ತಿ, ಬದ್ಧತೆಯ ಕೊರತೆ ಮತ್ತು ಭ್ರಷ್ಟ ವ್ಯವಸ್ಥೆ­ಯಿಂದಾಗಿ ಆ ಆಶಯ ಮಾಸಲಾಗುತ್ತಿದೆ.

ಮಕ್ಕಳ ಹಕ್ಕುಗಳ ಸಂರಕ್ಷಣೆ ಮತ್ತು ನ್ಯಾಯ ವಿತರಣೆಗಾಗಿ  ಅನುಷ್ಠಾನಕ್ಕೆ ಬಂದಿರುವ ನ್ಯಾಯಿಕ ಸಂಸ್ಥೆಗಳಾದ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿಗಳಲ್ಲೂ ರಾಜಕೀಯ ಪ್ರಭಾವದ ಗಾಳಿ ಬೀಸುತ್ತಿದೆ. ಮಕ್ಕಳ ಸಂರಕ್ಷಣೆ ಸಲುವಾಗಿ ಎಂದೂ ಯಾವ ಕೆಲಸವನ್ನೂ ಮಾಡದ ಹಲವರು ಕೇವಲ ತಮ್ಮ ವೈಯಕ್ತಿಕ ಘನತೆಗಾಗಿ ಈ ಮಂಡಳಿಗಳಿಗೆ ಆಯ್ಕೆಯಾಗುತ್ತಿರುವುದು ಮಕ್ಕಳ ದುರದೃಷ್ಟವೇ ಸರಿ. ಇದಕ್ಕೆ ಒಂದೆರಡು ಘಟನೆಗಳನ್ನು ಉದಾ­ಹರಿಸುವುದು ಸೂಕ್ತ-.

ಘಟನೆ -1
ಭಿಕ್ಷೆ ಬೇಡುತ್ತಿದ್ದ ಒಬ್ಬ ಬಾಲಕಿಯನ್ನು ಮಕ್ಕಳ ವಿಶೇಷ ಪೊಲೀಸ್ ಘಟಕದವರು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಕರೆತಂದರು. ಸಮಿತಿ ಆಶ್ರಯ ನೀಡುವಂತೆ ತಿಳಿಸಿ ಅವಳನ್ನು ಬಾಲಮಂದಿರದ ಸಿಬ್ಬಂದಿಗೆ ವಹಿಸಿತು. ಸೂಕ್ತ ಸಿಬ್ಬಂದಿ ಕೊರತೆ, ಮನಶಾಸ್ತ್ರಜ್ಞರು ಹಾಗೂ ವಿಶೇಷ ತರಬೇತುದಾರರ ಕೊರತೆಯಿಂದಾಗಿ ಬಾಲಕಿಗೆ ಬಾಲಮಂದಿರ ನರಕವಾಗತೊಡಗಿತು. ಅಲ್ಲಿಂದ ಆಕೆ ಕಣ್ಮರೆಯಾದಳು. ಬಾಲ­ಮಂದಿ­ರದ ಪ್ರಕಾರ ಬಾಲಕಿ ಓಡಿಹೋದಳು! ಹಾಗಾಗಿ ಪೊಲೀಸರು ಎಫ್ಐಆರ್ ದಾಖಲಿಸಿದರು. ಈ ವಿಚಾರ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೂ ಬಂತು. ಅಲ್ಲಿಗೆ ಪೊಲೀಸರು, ಬಾಲಮಂದಿರದ ಮೇಲ್ವಿಚಾರಕರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯವರ ಕೆಲಸವೆಲ್ಲ ಮುಗಿಯಿತು!

ಮತ್ತೊಂದು ಆರು ತಿಂಗಳ ನಂತರ ಹದಿ­ನಾಲ್ಕು ವರ್ಷದ ಅದೇ ಬಾಲಕಿ ಆರು ತಿಂಗಳ ಗರ್ಭಿಣಿಯಾಗಿ, ಆಶ್ರಯ ಬೇಡಿ ಮತ್ತೆ ಅದೇ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದಳು! ಸಿಬ್ಬಂದಿಯ ಕೊರತೆಯಿಂದ ಗರ್ಭಿಣಿಯನ್ನು ನೋಡಿಕೊಳ್ಳಲು ಸಾಧ್ಯವಾಗದು ಎಂದು ಬಾಲಮಂದಿರದ ಸಿಬ್ಬಂದಿ ಸಮಿತಿಗೆ ತಿಳಿಸಿದರು. ಬಳಿಕ ಮಗುವನ್ನು ಬೇರೊಂದು ಸಂಸ್ಥೆಗೆ ಕಳುಹಿ­ಸಿಕೊಡಲಾಯಿತು ಹಾಗೂ ಆಕೆಯನ್ನು ಆ ಸ್ಥಿತಿಗೆ ತಂದ ಮತ್ತೊಬ್ಬ ಭಿಕ್ಷುಕನನ್ನು ಜೈಲಿಗೆ ಅಟ್ಟ­ಲಾ­ಯಿತು.

ಈ ಘಟನೆಯನ್ನು ಗಮನಿಸಿದಾಗ, ಬೇಜ­ವಾಬ್ದಾರಿ ವರ್ತನೆಗಳು ಹಾಗೂ ಸಂಕಷ್ಟದಲ್ಲಿ­ರುವವರನ್ನು ಸಂರಕ್ಷಿಸಲಾಗದಂತಹ ಸ್ಥಿತಿಯಲ್ಲಿ­ರುವ ಸರ್ಕಾರಿ ವ್ಯವಸ್ಥೆ ಯಾವುದೇ ಕಾನೂನಿನ ಚೌಕಟ್ಟಿಗೂ ಒಳಪಡದಿರುವುದು ಸ್ಪಷ್ಟವಾಗು­ತ್ತದೆ. ಕೇವಲ ಕಾನೂನುಗಳು ಮಕ್ಕಳ ಬದುಕನ್ನು ಹಸನುಗೊಳಿಸಲಾರವು. ಅವರ ಬದುಕನ್ನು, ಕನಸುಗಳನ್ನು, ಶಿಕ್ಷಣವನ್ನು, ಸೌಜನ್ಯವನ್ನು, ಒಟ್ಟಾರೆ ವಿಕಾಸವನ್ನು ಕಾಪಾಡಬೇಕಾದಂತಹ ಒಂದು ಮಾನವೀಯ ವ್ಯವಸ್ಥೆಯನ್ನು ನಾವೀಗ ನಿರ್ಮಾಣ ಮಾಡಬೇಕಾಗಿದೆ.

ಘಟನೆ- 2
ಅವೆರಡು ಮುದ್ದು ಮಕ್ಕಳು ಹುಟ್ಟುತ್ತಲೇ ಸಮಸ್ಯೆ­ಯನ್ನು ಹೊತ್ತು ತಂದಿದ್ದವು. ಅಪ್ಪನಿಗೆ ಮಕ್ಕಳು ಬೇಡ, ತಾಯಿಗೆ ಮಕ್ಕಳನ್ನು ಕಂಡರೆ ಬಿಟ್ಟಿರ­ಲಾರದ ಪ್ರೀತಿ. ಅವು ಮಾನಸಿಕ, ದೈಹಿಕ ನ್ಯೂನತೆಯಿರುವ  ವಿಶೇಷ ಮಕ್ಕಳು. ಅವರನ್ನು ನೋಡಿಕೊಳ್ಳುವುದು ಕಷ್ಟ. ಕೈ ಹಿಡಿಯಬೇಕಾದ ಬಂಧುಬಳಗದವರು ಬಡತನದ ರೇಖೆಗಿಂತಲೂ ಕೆಳಗಿದ್ದಾರೆ. ಸಾವನ್ನರಸಿ ಹೊರಟ ತಾಯಿ ಮಕ್ಕಳನ್ನು ಯಾರೋ ಬದುಕಿಸಿದರು.  ಸಮಾಜ­ದಿಂದ ದೂರವಾದ ಆ ತಾಯಿಗೆ ಸಂಸ್ಥೆಯೊಂದು ಆಶ್ರಯ ನೀಡಿತು. ಆದರೆ ಹೀಗೆ ಬದುಕಿ ಬಂದ ತಾಯಿ ಮಕ್ಕಳ ಯೋಗಕ್ಷೇಮಕ್ಕೆ, ಆರೋಗ್ಯ ಸಂರಕ್ಷಣೆಗೆ ನಿರಂತರವಾಗಿ ಹಣ ಬೇಕು. ಎಲ್ಲಿಂದ ತರುವುದು? ಸರ್ಕಾರಿ ಘಟಕಗಳಲ್ಲಿ ಇವರಿಗೆ ಉತ್ತರ ನೀಡುವವರಿಲ್ಲ.

ರಾಜ್ಯದ ಜಿಲ್ಲೆಗಳಲ್ಲಿ ಮಾನಸಿಕ, ದೈಹಿಕ ಅಂಗವಿಕಲರನ್ನು ನೋಡಿಕೊಳ್ಳಲು ಸೂಕ್ತ ಜಾಗಗಳಿಲ್ಲ. ಈ ಎಲ್ಲ ಕಾರಣಗಳಿಂದ, ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಧ್ವನಿ ಎತ್ತಿ ‘ಅಂತರ­ರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ಗೆ ಸಹಿ ಹಾಕಿದ ಭಾರತದ ಸ್ಥಿತಿ ವಿಳಾಸವಿಲ್ಲದೇ ಬರೆದ ಪತ್ರದಂತಾಗಿದೆ ಎನಿಸುತ್ತಿದೆ. ಉತ್ತಮ ಕಾನೂನುಗಳಿದ್ದರೂ ಅವುಗಳನ್ನು ಮಾನವೀಯ ಮೌಲ್ಯಗಳೊಡನೆ ಮೇಳೈಸಿ, ವಿವೇ­ಚನೆಯೊಡನೆ ಅನುಷ್ಠಾನಕ್ಕೆ ತರುವ ಕಾನೂನು ಸುವ್ಯವಸ್ಥೆ ನಮಗೆ ಇಂದು ಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಬಾಯಿಗೆ ಬೀಗ ಜಡಿದು­ಕೊಂಡು ಜಡವಾಗಿ ಕುಳಿತಿರುವ ಸುಸಂಸ್ಕೃತರು ಇನ್ನಾದರೂ ಬಾಯ್ತೆರೆಯಬೇಕಾಗಿದೆ. ಮರಗಳ, ಪ್ರಾಣಿಗಳ ಹಕ್ಕುಗಳ ಪ್ರತಿಪಾದಕರು ನಮ್ಮಲ್ಲಿ­ರು­ವಾಗ ಮಕ್ಕಳು ಬೆಳಗಬೇಕು ಎನ್ನುವ ಜನ­ಸಮುದಾಯ ಹೆಚ್ಚಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT