ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನಿಗಾಗಿ ಅಪ್ಪನ ಉತ್ಖನನ

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಗಾಂಧಿನಗರದಲ್ಲಿ ಸಕ್ರಿಯರಾಗಿರುವವರಿಗೆ ತಮ್ಮ ಮಕ್ಕಳನ್ನು ಇಲ್ಲಿ ಪರಿಚಯಿಸಬೇಕು ಎನ್ನುವ ಆಸೆ ಇರುತ್ತದೆ. ಒಂದಿಷ್ಟು ದುಡ್ಡು ಹೊಂದಿಸಿ ಮಕ್ಕಳ ಪ್ರತಿಭೆಯ ಮೇಲೆ ಹೂಡುತ್ತಾರೆ. ಈ ಸಾಲಿಗೆ ಹೊಸ ಸೇರ್ಪಡೆ ಶ್ರೀನಿವಾಸ್ ರಾವ್. ಸಿನಿಮಾ ಕ್ಯಾಮೆರಾಗಳನ್ನು ಬಾಡಿಗೆ ನೀಡುವ ಕೆಲಸದಲ್ಲಿ ಎರಡು ದಶಕಗಳಿಂದ ತೊಡಗಿಸಿಕೊಂಡಿರುವ ಶ್ರೀನಿವಾಸ್ ರಾವ್, ತಮ್ಮ ಪುತ್ರ ಸುಶಾಂತ್ ಪ್ರತಿಭೆಯನ್ನು ಪೋಷಿಸಲು ನಿರ್ಮಾಪಕನ ಸ್ಥಾನ ಅಲಂಕರಿಸಿದ್ದಾರೆ. ಅಂದಹಾಗೆ, ಈ ಶ್ರೀನಿವಾಸ್ ರಾವ್ ನಟ ಎನ್‌.ಎಸ್. ರಾವ್ ಅವರ ಹತ್ತಿರದ ಸಂಬಂಧಿ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ದೇವಸ್ಥಾನವೊಂದರಲ್ಲಿ ‘ಖನನ’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ದೊರೆತಿದೆ. ‘ಖನನ’ ಚಿತ್ರದಿಂದ ತಾವು ನಿರ್ಮಾಪಕನ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿರುವ ಉತ್ಸಾಹ ಶ್ರೀನಿವಾಸ್ ರಾವ್ ಅವರಲ್ಲಿದೆ. ‘ತಮ್ಮದು ಕಲಾವಿದರ ಕುಟುಂಬ. ನಾನೂ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ತೊಡಗಿದ್ದೇನೆ’ ಎಂದು ಮಗನನ್ನು ಪರಿಚಯ ಮಾಡಿಕೊಟ್ಟರು ಶ್ರೀನಿವಾಸ್ ರಾವ್.

ಎಂಜಿನಿಯರಿಂಗ್ ಪದವೀಧರರಾದ ಸುಶಾಂತ್ ಇಸ್ರೋದಲ್ಲಿ ವಿಜ್ಞಾನಿಯಾಗಿ ದುಡಿದವರು. ಇಂಗ್ಲೆಂಡಿನಲ್ಲಿ ಕೂಡ ಕೆಲಸ ಮಾಡಿ ಬಂದಿದ್ದಾರೆ. ಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ. ‘ಏನನ್ನಾಧರೂ ಸಾಧಿಸಬೇಕು’ ಎನ್ನುವ ಆಸೆಯೇ ಬಣ್ಣ ಹಚ್ಚಲು ಅವರಿಗೆ ಪ್ರೇರಣೆಯಂತೆ.

‘ಇಲ್ಲಿ ಕಥೆಯೇ ಪ್ರಮುಖ. ಪ್ರಸ್ತುತ ಸನ್ನಿವೇಶದಲ್ಲಿ ಪ್ರೀತಿ ಹೇಗೆ ಮಾರಾಟದ ಸರಕಾಗುತ್ತಿದೆ. ಯಾವ ಕಾರಣಕ್ಕೆ ಮೋಸ ನಡೆಯುತ್ತದೆ ಎನ್ನುವುದನ್ನು ಮೂಲವಾಗಿಟ್ಟುಕೊಂಡು ಕಥೆ ಮಾಡಿದ್ದೇವೆ. ಚಿತ್ರದಲ್ಲಿ ನಾನು ಇಂಟೀರಿಯರ್ ಡೆಕೋರೇಟರ್ ಪಾತ್ರ ಮಾಡುತ್ತಿರುವೆ’ ಎಂದರು ನಾಯಕ ಸುಶಾಂತ್. ತಮ್ಮ ಕುಟುಂಬ ಚಿತ್ರರಂಗದಲ್ಲಿ ಗಳಿಸಿದ ಹಣವನ್ನೇ ಬಂಡವಾಳ ಮಾಡಿಕೊಂಡಿರುವುದಾಗಿ ಅವರು ಹೇಳಿದರು.

ತೆಲುಗಿನಲ್ಲಿ ಆರು ವರುಷಗಳ ಕಾಲ ಸಹಾಯಕ ನಿರ್ದೇಶಕ–ತಂತ್ರಜ್ಞನಾಗಿ ದುಡಿದು ಅನುಭವ ಗಳಿಸಿರುವ ರಾಧಾಕೃಷ್ಣ ಮೊದಲ ಬಾರಿ ಕನ್ನಡದಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ‘ನಿರ್ಮಾಪಕರಿಗೆ ಕಥೆಯ ಒಂದು ಲೈನ್ ಮಾತ್ರ ಹೇಳಿದೆ, ಒಪ್ಪಿಕೊಂಡರು. ಎರಡು ವರುಷಗಳ ಕಾಲ ಕಥೆಯ ಮೇಲೆ ಕೆಲಸ ಮಾಡಿದ್ದೇನೆ’ ಎಂದರು ರಾಧಾಕೃಷ್ಣ. 45 ದಿನಗಳ ದಿನಗಳ ಕಾಲಮಿತಿಯಲ್ಲಿ ಎರಡು ಹಂತದಲ್ಲಿ ಮೈಸೂರು, ಕೇರಳ, ಕೆ.ಜಿ.ಎಫ್, ಹೊಸೂರು ಮತ್ತಿತರ ಕಡೆಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆಯಂತೆ. ತೆಲುಗಿನಲ್ಲೂ ‘ಖನನ’ ರೂಪಗೊಳ್ಳಲಿದೆಯಂತೆ. ಅಸ್ಸಾಂ ಮೂಲದ ಕರಿಷ್ಮಾ ಚಿತ್ರದ ನಾಯಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT