ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಪ್ರಾಣ ಹೋದರೂ ಚಿಂತೆಯಿಲ್ಲ

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನರಗುಂದದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಗ ನಂದೀಶ ಮಠದ ವಿಷ ಸೇವಿಸಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರೂ ಇತ್ತ ಅವರ ತಂದೆ ಗುರುಲಿಂಗಯ್ಯ, ‘ನನ್ನ ಮಗನ ಪ್ರಾಣ ಹೋದರೂ ಚಿಂತೆ ಇಲ್ಲ. ನಮಗೆ ಮಹಾದಾಯಿ ನೀರು ಬರಲೇಬೇಕು. ನಾನು ಯೋಧನಾಗಿ ಎಲ್ಲ ರೀತಿಯ ಸನ್ನಿವೇಶಗಳನ್ನೂ ಎದುರಿಸಿದ್ದೇನೆ’ ಎಂದು ಹೇಳಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದೇ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗಲೇ ಗೆಳೆಯರ ಬಳಿ ಇದ್ದ ಬಾಟಲಿಯನ್ನು ಕಿತ್ತುಕೊಂಡು ನಂದೀಶ ವಿಷ ಕುಡಿದದ್ದು. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಸದರ ಮನೆ ಮುಂದೆ ಧರಣಿ ಚಳವಳಿ: ‘ಮಹಾದಾಯಿ ನ್ಯಾಯಮಂಡಳಿಯ ತೀರ್ಪು ಕನ್ನಡಿಗರನ್ನು ಬಡಿದೆಬ್ಬಿಸಿದೆ. ತೀರ್ಪು, ನ್ಯಾಯಮಂಡಳಿಯ ಬಣ್ಣ ಬಯಲು ಮಾಡಿದೆ. ಆದ್ದರಿಂದ ನ್ಯಾಯಮಂಡಳಿ ರದ್ದಾಗುವ ವ್ಯವಸ್ಥೆ ಬರಬೇಕು. ನಮ್ಮ ಮುಂದಿನ ಹೋರಾಟ ಸಂಸದರ ರಾಜೀನಾಮೆಗೆ ಆಗ್ರಹಿಸಿ ಅವರ ಮನೆ ಮುಂದೆ ಪ್ರಾಣ ಹೋಗುವವರೆಗೂ ಧರಣಿ ನಡೆಸುವುದು. ದೆಹಲಿಗೆ ತೆರಳಿ ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ಗೆ  ಮನವಿ ಸಲ್ಲಿಸುವುದು’ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ನರಗುಂದದಲ್ಲಿ ಹೇಳಿದರು.

ನದಿ ಉಗಮ ಸ್ಥಾನದಲ್ಲಿ ಬಂದ್‌ ವಿಫಲ: ಮಹಾದಾಯಿ ನದಿಯ ಉಗಮ ಸ್ಥಾನವಾದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದಲ್ಲಿನ ಅಂಚೆ ಕಚೇರಿ, ಬ್ಯಾಂಕ್ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳು ತೆರೆದಿದ್ದವು. ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯವಹಾರ ನಿರ್ವಹಿಸಿದವು.

ಶಾಸಕ ಕೋನರಡ್ಡಿ ಪ್ರತಿಭಟನೆ (ಬೆಂಗಳೂರು ವರದಿ): ನವಲಗುಂದದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿಚಾರ್ಜ್‌ ನಡೆಸಿರುವುದನ್ನು ಖಂಡಿಸಿ ಶಾಸಕ ಎನ್‌.ಎಚ್‌. ಕೋನರಡ್ಡಿ ವಿಧಾನಸೌಧದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಮಹದಾಯಿ ನ್ಯಾಯಮಂಡಳಿ ಮಧ್ಯಂತರ ಆದೇಶದ ವಿರುದ್ಧ ಪ್ರತಿಭಟಿಸುತ್ತಿದ್ದ  ರೈತರ ಮೇಲೆ ನವಲಗುಂದದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಇದನ್ನು ಖಂಡಿಸಿ ಕೆಂಗಲ್‌ ಹನುಮಂತಯ್ಯ  ಪ್ರತಿಮೆ ಬಳಿ ಕೋನರಡ್ಡಿ ಪ್ರತಿಭಟನೆ ನಡೆಸಿದರು.

ರಕ್ತದಿಂದ ಮನವಿಪತ್ರ
ಪ್ರಧಾನಿಗೆ ರಕ್ತದಿಂದ ಮನವಿಪತ್ರ ಮಹಾದಾಯಿ ಸಮಸ್ಯೆ ಬಹೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ ರೈತ ಹೋರಾಟಗಾರರು ರಕ್ತದಿಂದ ಬರೆದ ಮನವಿಪತ್ರವನ್ನು ರಾಜ್ಯ ರೈತ ಸಂಘದ (ಅಖಂಡಾನಂದ ಸ್ವಾಮಿ ಬಣ) ಅಧ್ಯಕ್ಷ ಶಿವಪುತ್ರಪ್ಪ ಮಲ್ಲಾಡದ ನೇತೃತ್ವದಲ್ಲಿ ಗುರುವಾರ ರಾಣೆಬೆನ್ನೂರಿನಲ್ಲಿ ತಹಶೀಲ್ದಾರ್ ರಾಮಮೂರ್ತಿ ಅವರಿಗೆ ಸಲ್ಲಿಸಿದರು.

‘ಮನ್‌ ಕೀ ಬಾತ್ ಸಾಕು, ಕುಡಿಯಲು ನೀರು ಬೇಕು’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದ್ದು, ರಾಜ್ಯದಲ್ಲಿನ ನಾಲ್ವರು ಕೇಂದ್ರ ಸಚಿವರು ಹಾಗೂ ಸಂಸದರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕೋಲಾರ ಬಂದ್‌ ಯಶಸ್ವಿ
ತುಮಕೂರು:
ಮಹಾದಾಯಿ ನ್ಯಾಯ ಮಂಡಳಿ ತೀರ್ಪು ಖಂಡಿಸಿ ವಿವಿಧ ಸಂಘಟನೆಗಳು  ಗುರುವಾರ ಕರೆ ನೀಡಿದ್ದ  ಬಂದ್ ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾಯಿತು. ಜನಜೀವನ ಅಸ್ತವ್ಯಸ್ತವಾಗಿದ್ದು ಕಂಡಿತು. ಬಸ್, ಆಟೊ ಸೇವೆ ಸ್ಥಗಿತಗೊಂಡು ಜನ ಪರದಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ಹೊತ್ತು ಜೋರಾಗಿದ್ದ ಪ್ರತಿಭಟನೆ ಮಧ್ಯಾಹ್ನ ಕಾಣಲಿಲ್ಲ. ರೈತ ಸಂಘ, ಕನ್ನಡಪರ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆ ಖಂಡಿಸಿದವು.
ತುಮಕೂರು ಜಿಲ್ಲೆಯ ಬಂದ್ ಆಗಲಿಲ್ಲ. ಎಂದಿನಂತೆಯೇ ಅಂಗಡಿ ಮುಂಗಟ್ಟು ಬೆಳಿಗ್ಗೆಯಿಂದ ತೆರೆದಿದ್ದವು. ಬಸ್, ವಾಹನ ಸಂಚಾರ ಇತ್ತು. ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟ ಮಾತ್ರ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ಲೋಕಸಭೆಯಲ್ಲಿ ಮಹಾದಾಯಿ ಚರ್ಚೆ: ಪ್ರಧಾನಿ ಮಧ್ಯಸ್ಥಿಕೆಗೆ ಕಾಂಗ್ರೆಸ್‌ ಮನವಿ
ನವದೆಹಲಿ:
ಮಹಾದಾಯಿ  ನ್ಯಾಯಮಂಡಳಿಯು ರಾಜ್ಯಕ್ಕೆ ವ್ಯತಿರಿಕ್ತವಾದ ತೀರ್ಪು ನೀಡಿರುವುದರಿಂದ ಕೂಡಲೇ ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಿ, ಮುಂಬೈ ಕರ್ನಾಟಕ ಭಾಗದ ಜನರ  ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಂದಾಗಬೇಕು ಎಂದು ಕಾಂಗ್ರೆಸ್‌ ಸದಸ್ಯರು ಲೋಕಸಭೆಯಲ್ಲಿ ಗುರುವಾರ ಒತ್ತಾಯಿಸಿದರು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಮಹಾದಾಯಿ ವಿಷಯ ಕುರಿತು ಪ್ರಸ್ತಾಪಿಸಲು ಅವಕಾಶ ಕೋರಿದ ಕಾಂಗ್ರೆಸ್‌ ಸದಸ್ಯರು, ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿದಾಗ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಶೂನ್ಯವೇಳೆಯಲ್ಲಿ ಅವಕಾಶ ನೀಡುವುದಾಗಿ ತಿಳಿಸಿದರು.

ಮಧ್ಯಾಹ್ನ ಶೂನ್ಯವೇಳೆಯಲ್ಲಿ ರಾಜ್ಯದ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರಿಗೆ ಮಾತನಾಡಲು ಅವಕಾಶ ದೊರೆಯಿತಾದರೂ, ಉಭಯ ಪಕ್ಷಗಳ ಮುಖಂಡರಿಗೆ ಸಂಬಂಧಿಸಿದಂತೆಯೇ ಮಾತುಕತೆ ನಡೆದಿದ್ದರಿಂದ ಚರ್ಚೆಯು ರಾಜಕೀಯ ಬಣ್ಣ ಪಡೆದುಕೊಂಡಿತು.

ಕಾಂಗ್ರೆಸ್‌ ಪರ ಮಾತನಾಡಿದ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ‘ನ್ಯಾಯಮಂಡಳಿ ತೀರ್ಪಿನಿಂದಾಗಿ ರಾಜ್ಯದಾದ್ಯಂತ ರೈತರು, ಸಾರ್ವಜನಿಕರು ಉಗ್ರ ಸ್ವರೂಪದ ಪ್ರತಿಭಟನೆಗೆ ಇಳಿದಿದ್ದಾರೆ’ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಸಭೆ ಕರೆದು ಕಾನೂನು ಚೌಕಟ್ಟಿನಿಂದ ಹೊರಗೆ, ಸೌಹಾರ್ದಯುತ ಮಾತುಕತೆ ನಡೆಸಿ ಕರ್ನಾಟಕಕ್ಕೆ ನೀರನ್ನು ಕೊಡಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು. ನಂತರ ಮಾತನಾಡಿದ ಬೆಳಗಾವಿಯ ಬಿಜೆಪಿ ಸಂಸದ ಸುರೇಶ ಅಂಗಡಿ, ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿಯೇ ನ್ಯಾಯಮಂಡಳಿ ರಚನೆಯಾಗಿದೆ.

ನ್ಯಾಯಮಂಡಳಿ ಹೊರಗಡೆ ನೀರಿನ ಸಮಸ್ಯೆ ನೀಗಿಸುವ ಸಾಧ್ಯತೆ ಇದ್ದರೂ ಕಡೆಗಣಿಸಿದ್ದರಿಂದ ನೀರು ಹಂಚಿಕೆ ವಿಷಯ ನನೆಗುದಿಗೆ ಬಿದ್ದಿದೆ ಎಂದು ಆರೋಪಿಸುತ್ತಿದ್ದಂತೆ ಕುಡಿಯುವ ನಿರಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು 2007ರಲ್ಲಿ ಗೋವಾದಲ್ಲಿ  ವಿಧಾನಸಭೆ ಚುನಾವಣಾ ಪ್ರಚಾರ ಭಾಷಣ ಮಾಡುತ್ತ, ‘ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಹರಿಸುವುದಿಲ್ಲ’ ಎಂಬ ಬಹಿರಂಗ ಹೇಳಿಕೆ ನೀಡುವ ಮೂಲಕ ತಾರತಮ್ಯ ನೀತಿ ಅನುಸರಿಸಿದ್ದಾರೆ. ಅಲ್ಲದೇ, ಮಹಾದಾಯಿ ನೀರು ನೀಡುವ ವಿಷಯದಲ್ಲಿ ಗೋವಾ ಜನರನ್ನೂ ಕೆರಳಿಸಿದ್ದಾರೆ ಎಂದು ಅವರು ಟೀಕಿಸಿದರು. ಇದಕ್ಕೆ ಕಾಂಗ್ರೆಸ್‌ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತ್ಯೇಕ ಸಭೆ: ಕರ್ನಾಟಕದ ಬಿಜೆಪಿ ಮತ್ತು ಕಾಂಗ್ರೆಸ್‌ ಸಂಸದರು ಮಹಾದಾಯಿ ತೀರ್ಪಿಗೆ ಸಂಬಂಧಿಸಿದಂತೆ ಎದುರಾದ ಬೆಳವಣಿಗೆಗಳ ಕುರಿತು ಚರ್ಚಿಸಲು ಗುರುವಾರ ಕರ್ನಾಟಕ ಭವನದಲ್ಲಿ ಪ್ರತ್ಯೇಕ ಸಭೆ ನಡೆಸಿದರು.

ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಮಹಾದಾಯಿ ಕುರಿತ ಮಾತುಕತೆಗೆ ಒಪ್ಪಿಸುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಆ ರಾಜ್ಯಗಳಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ನ ಮುಖಂಡರ ಮನ ಒಲಿಸುವ ಹೊಣೆಯನ್ನು ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕರು ವಹಿಸಿಕೊಳ್ಳಬೇಕು ಎಂದರು.

ಕಾನೂನು ತಂಡದ ವರದಿ ಬಳಿಕ ಮುಂದಿನ ಹೆಜ್ಜೆ
ಬೆಂಗಳೂರು:
ಮಹಾದಾಯಿ ನೀರಿನ ವ್ಯಾಜ್ಯ ಕುರಿತು ರಾಜ್ಯ ಕಾನೂನು ತಜ್ಞರ ತಂಡ ನೀಡುವ ವರದಿ ಆಧರಿಸಿ, ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ  ತಿಳಿಸಿದ್ದಾರೆ.

ಮಹಾದಾಯಿ ನ್ಯಾಯಮಂಡಳಿ ಯ ರಾಜ್ಯದ ಮುಂದೆ ಪರ ವಾದ ಮಾಡುತ್ತಿರುವ ಕಾನೂನು ಪರಿಣಿತರ ತಂಡದ ನೇತೃತ್ವ ವಹಿಸಿರುವ ಫಾಲಿ ನಾರಿಮನ್‌ ಅವರು, ಮಧ್ಯಂತರ ತೀರ್ಪು ಕುರಿತು ಇನ್ನು ಎರಡು–ಮೂರು ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಎಂದು ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

ವಿದೇಶಕ್ಕೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಪಸ್ ಆದ ಬಳಿಕ ಕಾನೂನು ತಜ್ಞರ ವರದಿ ಮತ್ತು ಸಲಹೆಗಳ ಕುರಿತು ಅವರ ಜೊತೆ ಚರ್ಚಿಸಲಾಗುವುದು. ಕಾನೂನು ತಜ್ಞರ ಸಲಹೆಯನ್ನು ಸರ್ವಪಕ್ಷ ಸಭೆ ಮುಂದೆ ಮಂಡಿಸಿ, ಎಲ್ಲರ ಒಪ್ಪಿಗೆ ಪಡೆದು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಹೇಳಿದರು.

ಇದೇ ಅಂತಿಮ ತೀರ್ಪು ಅಲ್ಲ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಕುಡಿಯುವ ನೀರಿನ ಉದ್ದೇಶಕ್ಕೆ 7.56 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಮಧ್ಯಂತರ ತೀರ್ಪು ನೀಡಲು ಕೋರಿದ್ದ ಅರ್ಜಿಯನ್ನು ಮಾತ್ರ ನ್ಯಾಯಮಂಡಳಿ ವಜಾ ಮಾಡಿದೆ. ಇದೇನು   ಅಂತಿಮ ತೀರ್ಪು ಅಲ್ಲ. ಹಾಗಿದ್ದರೂ ಬಿಜೆಪಿ ನಾಯಕರು ಜನರಿಗೆ ತಪ್ಪು ಮಾಹಿತಿ ನೀಡಿ, ಪ್ರಚೋದಿಸುತ್ತಿದ್ದಾರೆ ಎಂದು ಟೀಕಿಸಿದರು.

ನ್ಯಾಯಕ್ಕಾಗಿ ಜನರು ಹೋರಾಟ ನಡೆಸುತ್ತಿರುವುದು ತಪ್ಪೇನು ಅಲ್ಲ ಎಂದು ಪ್ರತಿಪಾದಿಸಿದ ಅವರು, ಪ್ರತಿಭಟನೆ ಹೆಸರಿನಲ್ಲಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ಸೇರಿದ ಆಸ್ತಿಯನ್ನು ಧ್ವಂಸ ಮಾಡುವುದು ಸರಿಯಲ್ಲ. ಪ್ರತಿಭಟನಾಕಾರರು ಹಿಂಸೆಯ ಹಾದಿ ಹಿಡಿಯದೆ, ಶಾಂತಿಯುತ ಹೋರಾಟ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಮಧ್ಯಂತರ ತೀರ್ಪಿಗೆ ಪ್ರತಿಕ್ರಿಯೆಗಳು
* ಬರಸಿಡಿಲು: ಕೋಳಿವಾಡ
ಮಹಾದಾಯಿ ನ್ಯಾಯಮಂಡಳಿ ಮಧ್ಯಂತರ ತೀರ್ಪು ರಾಜ್ಯದ ಜನತೆಗೆ ಬರಸಿಡಿಲಿನಂತೆ ಅಪ್ಪಳಿಸಿದೆ ಎಂದು ಹೇಳಿದ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ತಮ್ಮ ರಾಜಕೀಯ, ಪ್ರತಿಷ್ಠೆ ಬಿಟ್ಟು ಪ್ರಧಾನಮಂತ್ರಿಯವರ ಮಧ್ಯಸ್ಥಿಕೆಗೆ ಒತ್ತಡಹಾಕಬೇಕು ಎಂದು ಅಭಿಪ್ರಾಯಪಟ್ಟರು.

ಮಧ್ಯಂತರ ತೀರ್ಪಿನ ಸಾರಾಂಶ ಗಮನಿಸಿದರೆ ಅಂತಿಮ ತೀರ್ಪು ರಾಜ್ಯಕ್ಕೆ ಅನುಕೂಲಕಾರಿಯಾಗುವಂತೆ ಕಾಣಿಸುತ್ತಿಲ್ಲ. ಜನರ ಹಿತಕ್ಕೆ ರಾಜಕೀಯ ಪಕ್ಷಗಳು ತಮ್ಮ ಭಿನ್ನತೆ ಮರೆತು ಒಂದಾಗಬೇಕು. ಪ್ರಧಾನಿ ಮಧ್ಯಸ್ಥಿಕೆ ಮಾತ್ರ ಇದಕ್ಕೆ ಪರಿಹಾರ ನೀಡಬಹುದು ಎಂದು ಹೇಳಿದರು.

* ಕೇಂದ್ರ ಮಧ್ಯ ಪ್ರವೇಶಿಸಲಿ: ಸಚಿವ ಕಾಗೋಡು
‘ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು.
ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಸಂಧಾನ ನಡೆಸಬೇಕು’ ಎಂದು ಅವರು ಮನವಿ ಮಾಡಿದರು.

‘ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವುದೊಂದೇ ರಾಜ್ಯಕ್ಕೆ ಉಳಿದಿರುವ ದಾರಿ. ಮಹಾದಾಯಿ ನದಿ ನೀರಿನ ಹಂಚಿಕೆಗಾಗಿ ಅಂತರರಾಜ್ಯ ಒಪ್ಪಂದ ಆಗಬೇಕಿತ್ತು. ಅದು ಆಗಿಲ್ಲ. ನ್ಯಾಯ ಮಂಡಳಿ ರಚಿಸಿದರೂ ರಾಜ್ಯದ ಮನವಿ ತಿರಸ್ಕೃತಗೊಂಡಿದೆ. ಮೂರು ರಾಜ್ಯಗಳ ಸಂಧಾನ ಸಾಧ್ಯವಾಗದಿದ್ದರೆ ಮಹಾದಾಯಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ  ಮೇಲ್ಮನವಿ ಸಲ್ಲಿಸಬೇಕು’ ಎಂದು ಹೇಳಿದರು.

* ಸುಪ್ರೀಂಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಲು  ಒತ್ತಾಯ
ಮಹಾದಾಯಿ  ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಅರ್ಜಿ ಸಲ್ಲಿಸಬೇಕು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಮುಂದಿನ ಕಾನೂನು ಕ್ರಮಕ್ಕೆ ರೂಪುರೇಷೆ ತಯಾರಿಸಲು ತಕ್ಷಣವೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ವಿಳಂಬ ಮಾಡಬಾರದು. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು. 
ಪ್ರಧಾನಿ ಮಧ್ಯ ಪ್ರವೇಶಿಸಲಿಮಹಾದಾಯಿ ಜಲ ವಿವಾದದ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಈ ವಿಷಯ ತಿಳಿಸಿದ ಅವರು, ಪ್ರಧಾನಿಯವರು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಭೆಯನ್ನು ಕರೆಯಬೇಕು. 7.56 ಟಿಎಂಸಿ ಅಡಿ ನೀರು ಬಿಡುವ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಕಳಸಾ–ಬಂಡೂರಿ ಯೋಜನೆ ಅನುಷ್ಠಾನ ಆಗುವ ತನಕ ಹೋರಾಟ ನಿಲ್ಲಿಸುವುದಿಲ್ಲ. ಹೋರಾಟ ಶಾಂತಿಯುತವಾಗಿರಬೇಕು. ಹಿಂಸೆಗೆ ಎಡೆ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT