ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳಲ್ಲ; ಮಗ ಎಂದ ನನ್ನಪ್ಪ

ನಿನ್ನಂತ ಅಪ್ಪ ಇಲ್ಲ
Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಮತ್ತು ಲೇಖಕಿ ಡಾ. ವಸುಂಧರಾ ಭೂಪತಿ ಅವರಿಗೆ ತಂದೆ ಎಂದ ತಕ್ಷಣ ಹಲವು ನೆನಪುಗಳು ಒತ್ತರಿಸುತ್ತವೆ. ಯಾವುದೇ ಕೆಲಸದಲ್ಲಿದ್ದರೂ ಸಂಪೂರ್ಣ ಏಕಾಗ್ರತೆಯಿಂದ ತೊಡಗಿಸಿಕೊಳ್ಳುತ್ತಿದ್ದ ತಂದೆ ಎಂ. ರಾಘವೇಂದ್ರ ರಾವ್‌ ಅವರ ನೆನಪುಗಳಿಗೆ ಇಲ್ಲಿ ಅವರು ಹೊರಳಿದ್ದಾರೆ.

ನನ್ನ ತಂದೆ ಬದುಕುವ ಕಲೆಯನ್ನು ಕಲಿಸಿಕೊಟ್ಟರು. ಬಂಗಾರದ ಬಗ್ಗೆ ಮೋಹ ಹುಟ್ಟದಂತೆ ಮಾಡಿದರು. ‘ಅದೊಂದು ಲೋಹ ಅಷ್ಟೆ. ಅದಕ್ಕಾಗಿ ಆಸೆ ಪಡಬೇಡ. ಬೌದ್ಧಿಕ ಬೆಳವಣಿಗೆ ಹೆಣ್ಣುಮಕ್ಕಳಿಗೆ ತುಂಬ ಅವಶ್ಯ’ ಎನ್ನುತ್ತಿದ್ದರು.

ನಾನಾಗ ಏಳನೇ ತರಗತಿ. ಪರೀಕ್ಷೆ ಸಮಯ. ಕಣ್ಣಿಗೆ ಸೋಂಕಾಗಿ ಕೆಂಪಗಾಗಿ ಬೆಳಕು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅದೊಂದು ರೀತಿಯಲ್ಲಿ ಕುರುಡಿಯೇ ಆಗಿದ್ದೆ. ಕತ್ತಲೆ ಕೋಣೆಯಲ್ಲೇ ಇರಬೇಕಿತ್ತು. ಪುಸ್ತಕವನ್ನು ಬೇರೆಯವರಿಂದ ಓದಿಸಿ ಕೇಳಿಸಿಕೊಳ್ಳುತ್ತಿದ್ದೆ.

ಅಲೋಪತಿ, ಆಯುರ್ವೇದ, ನಾಟಿ, ಎಲ್ಲ ವೈದ್ಯರ ಚಿಕಿತ್ಸೆಯೂ ಆಯಿತು. ಆಗಲೇ ನನ್ನ ತಂದೆ ‘ನೀನು ಡಾಕ್ಟರಾಗಬೇಕು, ಜನರ ನೋವನ್ನು ನೀಗಿಸುವ ವೈದ್ಯವೃತ್ತಿಯನ್ನು ಆಯ್ಕೆ ಮಾಡಿಕೋ’ ಎಂದರು. ನಾನು ನನ್ನ ತಂದೆ ಜೊತೆಗೆ ಹೊರಗೆ ತಿರುಗಾಡುವಾಗ ನೋಡಿದವರೆಲ್ಲ ನಿಮ್ಮ ಮಗಳು ಥೇಟ್ ನಿಮ್ಮ ಹಾಗೆಯೇ ಇದ್ದಾಳೆ ಎಂದಾಗ ಹೆಮ್ಮೆಯಿಂದ ನನ್ನ ಕಡೆಗೆ ನೋಡುತ್ತಿದ್ದರು. ‘ಹೌದು, ಇವಳು ನನಗೆ ಮಗಳಲ್ಲ ಮಗ’ ಅನ್ನುತ್ತಿದ್ದರು.

ಪುಸ್ತಕ ಓದುವ ಗೀಳು ಹತ್ತಿಸಿದ್ದು ತಂದೆಯೇ. ಭಾನುವಾರ ಬಂತೆಂದರೆ ಐದು ಮಕ್ಕಳನ್ನು ಕೂರಿಸಿಕೊಂಡು ತಾವು ಓದಿದ ಪುಸ್ತಕದ ಬಗ್ಗೆ ಹೇಳುತ್ತಿದ್ದರು. ಒಂದು ವಾರ ಶಿಶುನಾಳ ಷರೀಫರ ಬಗ್ಗೆ ಹೇಳಿದರೆ, ಮತ್ತೊಮ್ಮೆ ಜಾನ್ ಕೀಟ್ಸ್ ಬಗ್ಗೆ, ಗಾಂಧೀಜಿಯ ಬಗ್ಗೆ ಹೇಳುತ್ತಿದ್ದರು. ಪಠ್ಯದ ಬಗ್ಗೆ ಕೇಳಿದ್ರೆ ‘ಅವೆಲ್ಲ ನೀನೇ ಓದ್ಕೋ, ಮುಂದೆ ಕಾಲೇಜಿಗೆ ಬಂದಾಗ ನಾನು ಹೇಳಿಕೊಡ್ತೀನಿ ಅಂತಿದ್ರು’.

ನಾನು ನನ್ನ ಪಠ್ಯವನ್ನು ಓದ್ಕೊಂಡು ತಮ್ಮ ತಂಗಿಯರಿಗೂ ಪಾಠ ಹೇಳ್ಕೊಡುತ್ತಿದ್ದೆ. ಕೃಷಿ ವಿಜ್ಞಾನ, ಸಸ್ಯಗಳ ಬಗ್ಗೆ, ಪರಿಸರದ ಬಗ್ಗೆ ಪ್ರೀತಿ ಬೆಳೆಸಿದ್ದಲ್ಲದೇ ಸರಳ ಜೀವನದ ಪಾಠ ಹೇಳಿಕೊಡುತ್ತಿದ್ದರು ಅಪ್ಪ. ವರ್ಷಕ್ಕೆರಡು ಬಾರಿ ಮಾತ್ರ ಎಲ್ಲರಿಗೂ ಹೊಸಬಟ್ಟೆ ಕೊಡಿಸುತ್ತಿದ್ದರು. ನನ್ನ ಕೈಗೆ ಹಣ ಕೊಟ್ಟು ‘ಎಲ್ಲರಿಗೂ ಹೊಸಬಟ್ಟೆ ತೆಗೆದುಕೊಂಡು ಬಾ’ ಎನ್ನುತ್ತಿದ್ದರು. ಪ್ರತಿ ತಿಂಗಳ ಬಜೆಟ್ ಮಾಡುವುದು, ರೇಷನ್ ತರುವುದು ನನ್ನದೇ ಕೆಲಸ.

ತಮ್ಮ ತಂಗಿಯರಿಗೆ ಅವರು ಕೇಳಿದ ಬಟ್ಟೆ ಕೊಡಿಸಿದ ಮೇಲೆ ನನಗೆ ಬಟ್ಟೆ ಕೊಳ್ಳಲು ದುಡ್ಡು ಉಳಿಯುತ್ತಲೇ ಇರಲಿಲ್ಲ. ಹೈಸ್ಕೂಲಿನಲ್ಲಿ ಓದುವುದರೊಂದಿಗೆ ಮನೆ ನಿಭಾಯಿಸುವುದನ್ನು ಕಲಿಸಿದರು. ಅವರು ಕೊಡುವ ಒಂದೊಂದು ರೂಪಾಯಿಗೂ ಲೆಕ್ಕ ಕೊಡಬೇಕಿತ್ತು. ಎಲ್ಲವನ್ನು ಬರೆದಿಡಬೇಕಿತ್ತು.

ಅಮ್ಮನಿಗೆ ನನ್ನ ಕೊನೆಯ ತಂಗಿ ಅಂದರೆ ಐದನೆಯ ಮಗು ಹುಟ್ಟಿದಾಗ ಮಾನಸಿಕ ತೊಂದರೆ ಉಂಟಾಗಿ ಮಗುವನ್ನು ಅವರು ತಮ್ಮ ಹತ್ತಿರಕ್ಕೇ ಬಿಟ್ಟುಕೊಳ್ಳುತ್ತಿರಲಿಲ್ಲ. ಎದೆಹಾಲು ಕುಡಿಸುತಿರಲಿಲ್ಲ. ಆಗ ನನ್ನ ತಂದೆಯೇ ಅಮ್ಮನನ್ನು ಮಗುವಿನ ಹಾಗೆ ನೋಡಿಕೊಂಡಿದ್ದಲ್ಲದೇ ನಮ್ಮೆಲ್ಲರಿಗೂ ಅಡುಗೆ ಮಾಡಿ ಬಡಿಸುತ್ತಿದ್ದರು. ಪುಸ್ತಕವಿಲ್ಲದ ತಂದೆಯನ್ನು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಊಟ ಮಾಡುವಾಗಲೂ ಮಲಗುವಾಗಲೂ ಯಾವಾಗ ನೋಡಿದರೂ ಪುಸ್ತಕ ಓದುತ್ತಿರುತ್ತಿದ್ದರು. ಅವರು ಊಟಕ್ಕೆ ಕುಳಿತಾಗಲೆಲ್ಲ ಪತ್ರಿಕೆ ಇಲ್ಲವೇ ಪುಸ್ತಕ ಕೈಯಲ್ಲಿರುತ್ತಿತ್ತು. ನಿದ್ದೆ ಬರುವವರೆಗೂ ಓದುತ್ತಿದ್ದರು. ಅವರ ತಲೆದಿಂಬಿನ ಬಳಿ ಪುಸ್ತಕ ತೆರೆದುಕೊಂಡಿರುತ್ತಿತ್ತು ಇಲ್ಲವೇ ಎದೆಯ ಮೇಲೆ ಪುಸ್ತಕ ತೆರೆದಿರುವಂತೆ ಮಲಗಿ ನಿದ್ದೆ ಹೋಗಿರುತ್ತಿದ್ದರು. ಅವರು ಮಾಡಿದ ಆಸ್ತಿಯೆಂದರೆ ಪುಸ್ತಕಗಳು. 

ಚಿಕ್ಕ ತಂಗಿಯನ್ನು ಕಾನ್ವೆಂಟ್‌ಗೆ ಸೇರಿಸಿ ಏನೋ ಗೆದ್ದವಳಂತೆ ಮನೆಗೆ ಬಂದಾಗ ‘ಯಾಕೆ ಅವಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಿದ್ದೀಯಾ? ನೀವೆಲ್ಲ ಈಗ ಕನ್ನಡ ಮಾಧ್ಯಮದಲ್ಲಿ ಚೆನ್ನಾಗಿ ಓದ್ತಾ ಇಲ್ವ?  ನಾಳೇನೇ ಹೋಗಿ ಟಿ.ಸಿ. ತೆಗೆದುಕೊಂಡು ಸರ್ಕಾರಿ ಶಾಲೆಗೆ ಸೇರಿಸು’ ಎಂದಿದ್ದರು.

ಅಪ್ಪ, ವಿದ್ಯಾರ್ಥಿ ದೆಸೆಯಿಂದಲೇ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪಡೆದವರು. ಶಾಂತಿನಿಕೇತನ, ಶ್ರೀಲಂಕಾಗೆ ವಿದ್ಯಾರ್ಥಿ ಮುಖಂಡರಾಗಿ ಭೇಟಿ ಕೊಟ್ಟಿದ್ದರು.

ಕೃಷಿ ಸಂಶೋಧನೆಯಲ್ಲಿ ಸಜ್ಜೆ, ನವಣೆ, ಶೇಂಗಾದಲ್ಲಿ ಹೆಚ್ಚು ಪೌಷ್ಟಿಕಾಂಶವಿರುವ, ಇಳುವರಿ ಬರುವ ಧಾನ್ಯಗಳನ್ನು ರೈತರಿಗೆ ಸಂಶೋಧಿಸಿ ಪರಿಚಯಿಸಿದ್ದರು. ರಾಸಾಯನಿಕಗಳಿಲ್ಲದ ಸಾವಯವ ಕೃಷಿಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಹೇಳುತ್ತಿದ್ದರು.

ನನ್ನ ತಂದೆ ಹಾವು, ಚೇಳು ಕಚ್ಚಿದ ಸುತ್ತಮುತ್ತಲಿನ ರೈತರಿಗೆ ಉಚಿತ ಗಿಡಮೂಲಿಕೆಗಳ ಔಷಧಿ ನೀಡುತ್ತಿದ್ದರು. ಆದ್ದರಿಂದ ನನಗೆ ಎಂ.ಬಿ.ಬಿ.ಎಸ್ ಪದವಿಗೆ ಪ್ರವೇಶ ಸಿಕ್ಕಿದ್ದರೂ ಆರ್ಯುವೇದ ಪದವಿಯನ್ನು ಓದಬೇಕೆಂದು ಬಳ್ಳಾರಿಯ ತಾರಾನಾಥ ಕಾಲೇಜಿಗೆ ಸೇರಿಸಿದ್ದರು.

ಸ್ಮಶಾನ ಮತ್ತು ಮೂಳೆ
ನಾನು ಮೊದಲ ವರ್ಷದ ಆಯುರ್ವೇದ ವೈದ್ಯ ಪದವಿ ಓದುತ್ತಿರುವಾಗ ಅನಾಟಮಿ (ಶರೀರ ವಿಜ್ಞಾನ) ಕಲಿಯಲು ಬೋನ್ ಸೆಟ್ ಬೇಕಾಗಿತ್ತು. ಆಗ ಮೂಳೆಗಳ ಸೆಟ್‌ನ ಬೆಲೆ ಕೇವಲ 200 ರೂಪಾಯಿ ಇತ್ತು. ಬಾಬಾ, ‘ನಾಳೆ ಬೋನ್ ಸೆಟ್ ತೆಗೋಬೇಕು’.

‘ಹೌದಾ, ಬುಡ್ಡಿ (ಅಜ್ಜಿ) ಇವತ್ತೇ ನನ್ನ ಜೊತೆ ಬಾ. ನಿನಗೆ ಮೂಳೆಗಳನ್ನು ತೆಗೆಸಿಕೊಡ್ತೀನಿ. ಅದಕ್ಯಾಕೆ 200 ರೂಪಾಯಿ ಕೊಡಬೇಕು’ ಅಂದ್ರು. ನಂತರ ಅವರು ರಾತ್ರಿ 11 ಗಂಟೆಗೆ ಸೀದಾ ನನ್ನನ್ನು ಸ್ಮಶಾನಕ್ಕೆ ಕರೆದೊಯ್ದು ‘ನಿನಗೆ ಬೇಕಾದ ಮೂಳೆಗಳನ್ನು ಆರಿಸಿಕೋ’ ಎಂದರು.

ಅಲ್ಲಿಯ ನೀರವ ಮೌನ, ಆಗ ತಾನೇ ಹೂತಿಟ್ಟ ಸಮಾಧಿ ಮೇಲಿನ ಹೂ, ಊದಬತ್ತಿಯ ಪರಿಮಳ, ಅಲ್ಲಲ್ಲಿ ಹರಡಿಕೊಂಡ ಹಸಿಮಣ್ಣು, ನಾಯಿಗಳ ಬೊಗಳುವಿಕೆ ಇವೆಲ್ಲವನ್ನೂ ಕಂಡು ಭಯವಾಗಿ ‘ಇಲ್ಲ ಬಾಬಾ, ಮನೆಗೆ ಹೋಗೋಣ’ ಎಂದು ಓಡಿಬಂದಿದ್ದೆ. ಅವರೇ ನಂತರ ಕೆಲವು ಮೂಳೆಗಳನ್ನು ಆರಿಸಿಕೊಂಡು ಬಂದಿದ್ದರು.

ನನ್ನ ತಂದೆಗೆ ಯಾವುದರ ಬಗೆಗೂ ಯಾರ ಬಗೆಗೂ ಭಯವೆನ್ನುವುದೇ ಇರಲಿಲ್ಲ. ಒಂದು ದಿನ ಹೊಲದಿಂದ ಬಂದು ‘ಏನೋ ಚುಟು ಚುಟು ಅಂತಿದೆ’ ಅಂದ್ರು, ನೋಡಿದ್ರೆ ಅಲ್ಲಿದ್ದಿದ್ದು ಚೇಳು. ತೊಡೆಯಿಂದ ಕಾಲಿನವರೆಗೂ ಏಳೆಂಟು ಕಡೆ ಚೇಳು ಕಚ್ಚಿತ್ತು. ಅದರೆಡೆಗೆ ಅವರಿಗೆ ಗಮನವಿರಲಿಲ್ಲ.

ಯಾವುದೇ ಕೆಲಸದಲ್ಲಿದ್ದರೂ ಸಂಪೂರ್ಣ ಏಕಾಗ್ರತೆಯಿಂದ ತೊಡಗಿಸಿಕೊಳ್ಳುತ್ತಿದ್ದರು. ಮನೆಯ ಸುತ್ತಮುತ್ತಲಿನ ಜಾಗದಲ್ಲಿ ಹಣ್ಣು, ತರಕಾರಿ, ಸೊಪ್ಪು ಬೆಳೆಯುತ್ತಿದ್ದೆವು. ಯಾವಾಗಲೂ ತಾಜಾ ತರಕಾರಿ, ಹಣ್ಣುಗಳನ್ನು ತಿನ್ನುತ್ತಿದ್ದೆವು. ಎಷ್ಟೋ ವರ್ಷಗಳ ಕಾಲ ಮನೆಗೆ ಟಿ.ವಿ ತಂದಿರಲಿಲ್ಲ.

ನನ್ನ ತಂಗಿ ಪಕ್ಕದ ಮನೆಗೆ ಹೋಗಿ ಟಿ.ವಿ. ನೋಡುತ್ತಿರುವ ವಿಷಯ ತಿಳಿದ ನಂತರ ಮನೆಗೆ ಟಿ.ವಿ. ಬಂತು. ಫಾರಂ ಸೂಪರಿಂಟೆಂಡೆಂಟ್ ಆಗಿದ್ರೂ ಮನೆಗೆ ಫೋನ್ ಹಾಕಿಸಿಕೊಂಡಿರಲಿಲ್ಲ.

ಬೆಂಗಳೂರಿಗೆ ಮೀಟಿಂಗ್‌ಗೆ ಎಂದು ಹೋಗುವಾಗ ನನ್ನ ಅಮ್ಮ ತಾನು ಕೂಡಿಟ್ಟ ಹಣವನ್ನು ನೀಡಿ ಒಂದು ಮೈಸೂರು ಸಿಲ್ಕ್ ಸೀರೆ ತರಲು ಹೇಳಿದ್ದರು. ಆದರೆ ಅವರು ಸೀರೆ ತರದೇ ಪುಸ್ತಕ ತಂದಿದ್ದರು. ಆವೊತ್ತು ಅಪ್ಪ ಅಮ್ಮನ ನಡುವಿನ ಜಗಳ ಕಂಡು ನಾವೆಲ್ಲ ಹೆದರಿ ಕುಳಿತಿದ್ದೆವು. ಹಗರಿ ಫಾರಂ ಸೂಪರಿಂಟೆಂಡೆಂಟ್ ಆಗಿದ್ದಾಗ ಒಂದು ಬಾರಿ ಬಳ್ಳಾರಿ ಶಾಸಕರ ಪುತ್ರ ಅನುಮತಿ ಇಲ್ಲದೇ ಫಾರಂ ಒಳಗಡೆ ಪ್ರವೇಶಿಸಿದ್ದಕ್ಕೆ ಮರಕ್ಕೆ ಕಟ್ಟಿಹಾಕಿದ್ದು ನಾನು ಮರೆಯಲಾಗದ ಘಟನೆ.

ಆಹಾರವನ್ನು ವ್ಯರ್ಥ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಎಷ್ಟುಬೇಕೂ ಅಷ್ಟು ತಟ್ಟೆಯಲ್ಲಿ ಹಾಕಿಕೊಂಡು ತಿನ್ನಿ ಎನ್ನುತ್ತಿದ್ದರು. ನಾನು ರಾತ್ರಿಯೆಲ್ಲ ಓದುತ್ತಿದ್ದು ಬೆಳಿಗ್ಗೆ ತಡವಾಗಿ ಎದ್ದರೆ ಅಮ್ಮ ಬೈಯ್ಯುತ್ತಿದ್ದರೂ ಅಪ್ಪ ಒಂದು ಮಾತನ್ನು ಹೇಳುತ್ತಿರಲಿಲ್ಲ. ಮಲಗಲು ಬಿಡು ಎನ್ನುತ್ತಿದ್ದರು. ಓದುವಾಗ ಅವಳಿಗೆ ಕೆಲಸ ಹೇಳಬೇಡ ಓದಲಿ ಎನ್ನುತ್ತಿದ್ದರು.

ಮೌಢ್ಯಗಳ ಬದಲಾಯಿಸಿ...
ನಮ್ಮ ಪರಿಚಯದವರೊಬ್ಬರಿಗೆ ಜಾತಕದಲ್ಲಿ ಮೂಲಾ ನಕ್ಷತ್ರದ ದೋಷ ಇದೆ, 30 ವರ್ಷವಾದರೂ ಮದುವೆಯಾಗಿಲ್ಲವೆಂದು ತಂದೆಯ ಬಳಿ ಬಂದು ದುಃಖದಿಂದ ಹೇಳುತ್ತಿದ್ದರು. ನನ್ನ ತಂದೆ ಎಲ್ಲಿ, ಜಾತಕ ತಂದುಕೊಡಿ ಎಂದು ತರಿಸಿಕೊಂಡು ಬದಲಾಯಿಸಿ ಕೊಟ್ಟರು. ನಂತರ ಆರು ತಿಂಗಳೊಳಗೆ ಮದುವೆಯಾಯಿತು. ಜ್ಯೋತಿಷ್ಯ ಅದೆಷ್ಟು ಸುಳ್ಳು ಎಂಬುದರ ಬಗ್ಗೆ ಹೇಳುತ್ತಿದ್ದರು.

ಅಂತರ್ಜಾತಿ ವಿವಾಹಗಳ ಬಗ್ಗೆ ಪ್ರಸ್ತಾಪ ಬಂದಾಗಲೆಲ್ಲ ಪ್ರೋತ್ಸಾಹಿಸುತ್ತಿದ್ದರು. ನಾನು ಋತುಮತಿಯಾದಾಗ ಸಂಪ್ರದಾಯದಂತೆ ಹೊರಗೆ ಕೂರಲು ಬಿಡಲಿಲ್ಲ. ಅವರ ಅಣ್ಣಂದಿರ, ಅಮ್ಮನ ತವರು ಮನೆಯಲ್ಲಿ ಮುಟ್ಟಾದಾಗ ಮೂಲೆಯಲ್ಲಿ ಕೂರುವ ಪದ್ಧತಿ ಜಾರಿಯಿತ್ತಾದರೂ ನನಗೆ ಮಾತ್ರ ನೀನು ಸ್ನಾನ ಮಾಡಿ ಸಹಜವಾಗಿ ಇರು ಎಂದರು. ಅಮ್ಮನಿಗೂ ಆ ಬಗ್ಗೆ ತಿಳಿ ಹೇಳಿದರು.

ವೈಚಾರಿಕ  ಮನೋಭಾವ, ಪ್ರಾಮಾಣಿಕತೆ, ಬದ್ಧತೆ, ಸರಳತೆ, ಜ್ಞಾನ ಸಂಪಾದನೆ ಇವುಗಳು ಬದುಕಿನಲ್ಲಿ ಅದೆಷ್ಟು ಮುಖ್ಯವೆಂದು ಹೇಳುತ್ತಿದ್ದರು. ಅವರ ಪ್ರತಿಭೆಗೆ, ಪರಿಶ್ರಮಕ್ಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ದೊರಕಬೇಕಾದ ಮಾನ್ಯತೆ ದೊರಕಲಿಲ್ಲವೆಂದು ಆಗಾಗ ಕೊರಗುತ್ತಿದ್ದರು.

ಅವರು ಸಾವಿನ ಅಂಚಿನಲ್ಲಿದ್ದಾಗ ಭೂಪತಿಯವರನ್ನು ಯಾಕೆ ಪ್ರೀತಿಸುತ್ತಿದ್ದೇನೆ ಮತ್ತು ಮದುವೆಯಾಗುತ್ತಿದ್ದೇನೆ ಎಂಬುದಕ್ಕೆ  ಕಾರಣಗಳನ್ನು ವಿವರಿಸಿ ನನ್ನ ಜೀವನ ನಾನೇ ರೂಪಿಸಿಕೊಳ್ಳುತ್ತಿದ್ದೇನೆ ಎಂದು ಸುದೀರ್ಘವಾದ ಪತ್ರವನ್ನು ತಂದೆಗೆ ಬರೆದಿದ್ದೆ.

ಅವರು ನನ್ನ ಭೂಪತಿಯವರ ವಿವಾಹ ವಿರೋಧಿಸಬಹುದೆಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ಇತರ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಿಸುತ್ತಿದ್ದವರು ನನ್ನ ಮದುವೆಗೆ ಯಾಕೆ ವಿರೋಧಿಸಿದರೆಂಬುದು ಇಂದಿಗೂ ಯಕ್ಷಪ್ರಶ್ನೆ.

ಮದುವೆಗೆ ಆರಂಭದಲ್ಲಿ ವಿರೋಧಿಸಿದರೂ ನಾನು ಗರ್ಭಿಣಿಯಾದಾಗ ತವರಿಗೆ ನನ್ನನ್ನು ಆಹ್ವಾನಿಸಿದರು. ನಂತರ ತಮ್ಮ ಅಂತಿಮ ದಿನಗಳನ್ನು ನಮ್ಮ ಮನೆಯಲ್ಲಿಯೇ ಕಳೆದರು. 

ಹೊತ್ತಲ್ಲದ ಹೊತ್ತಿನಲ್ಲಿ ನಮ್ಮನೆಲ್ಲ ಬಿಟ್ಟು ತಮ್ಮ 54ನೇ ವಯಸ್ಸಿನಲ್ಲಿ ಅಗಲಿದರು. ತಮ್ಮ ತಂಗಿಯರ ಓದು ಮದುವೆ ಯಾವುದೂ ಆಗಿರಲಿಲ್ಲ. ಅವರು ಸಾಯುವ ಸಂದರ್ಭದಲ್ಲಿ ‘ನಿಮ್ಮಮ್ಮನಿಗೆ ಏನು ತಿಳಿಯುವುದಿಲ್ಲ ತಮ್ಮ - ತಂಗಿಯರ ಜವಾಬ್ದಾರಿ ನಿನ್ನದು ನನ್ನ ಪುಸ್ತಕಗಳನ್ನು ನೀನೇ ಜೋಪಾನವಾಗಿ ಕಾಪಾಡಬೇಕು’ ಎಂದು ಕಣ್ಮುಚ್ಚಿಕೊಂಡರು.

ನಾನು ಬರಹಗಾರ್ತಿಯಾಗುವುದು ಅವರ ಕನಸಾಗಿತ್ತು. ಅವರು ಬದುಕಿರುವವರೆಗೆ ಅದು ಸಾಧ್ಯವಾಗಿರಲಿಲ್ಲ. 1992ರ ಏಪ್ರಿಲ್ 4ರ ಶುಭ ಶುಕ್ರವಾರದಂದು ನನ್ನ ಮನೆಯಲ್ಲೇ ನಿಧನ ಹೊಂದಿದರು. ನನ್ನ ಪ್ರಥಮ ಲೇಖನ ‘ಕರ್ಮವೀರ’ದಲ್ಲಿ 1994 ರಲ್ಲಿ ಪ್ರಕಟವಾಯಿತು.

‘ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕಲು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಅಗತ್ಯ’ ಎನ್ನುವ ಅವರ ನುಡಿ ಸದಾ ನನ್ನ ಮನದಲ್ಲಿ ಧ್ವನಿಸುತ್ತಿರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT