ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ನೆನಪಲ್ಲಿ ಕೊಡೆಯ ನಂಟು

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಬಣ್ಣದ ಕೊಡೆ ಹಿಡಿದು ಓಡಾಡುವ  ಹುಡುಗಿಯರನ್ನು ನೋಡಿದಾಗ ನನಗೆ ಮುದ್ದಿನ ಮಗಳು  ಉಷಾಳ ನೆನಪಾಗುತ್ತದೆ. ಮನೆ ಮುಂದೆ ಯಾರೋ  ಬಣ್ಣದ ಕೊಡೆ ಹಿಡಿದು ಹೋಗುವುದನ್ನು ನೋಡಿ ‘ಅಮ್ಮ ನನಗೂ ಕೊಡೆ ಬೇಕು’ ಎನ್ನುತ್ತಿದ್ದಳು. ನಾನು ಹಳ್ಳಿಯಲ್ಲಿ ಇದ್ದುದರಿಂದ ಪಟ್ಟಣದಲ್ಲಿದ್ದ ನನ್ನಮ್ಮನಿಗೆ ಮೊಮ್ಮಗಳ ಬೇಡಿಕೆಯನ್ನು ತಿಳಿಸಿದೆ.

ನನ್ನಮ್ಮ ಮೊಮ್ಮಗಳಿಗೆ ಕೊಡೆ ತಲುಪಿಸಿಯೇ ಬಿಟ್ಟರು. ಕೊಡೆ ನೋಡಿದ ಮಗಳ ಸಂಭ್ರಮ ಹೇಳತೀರದು. ಕೊಡೆ ಹಿಡಿದು ಮನೆ ತುಂಬ ಓಡಾಡಿದಳು. ಅದನ್ನು ಬಿಚ್ಚಿ, ಗುಡಿಸಲು ಮಾಡಿ ಒಳಗೆ ಕುಳಿತು, ಮಲಗಿ ಸಂತೋಷಪಟ್ಟಳು.

ಮರುದಿನ ತನ್ನ ಅಕ್ಕಂದಿರೊಂದಿಗೆ ಅಂಗನವಾಡಿಗೆ ಹೋಗುವಾಗ ‘ಅಮ್ಮಾ ಶಾಲೆಗೆ ಕೊಡೆ ತೆಗೆದುಕೊಂಡು ಹೋಗುವೆ’ ಎಂದಳು.  ’ಬೇಡ ಕಂದ’ ಎಂದು ಎಷ್ಟು ಹೇಳಿದರೂ  ಹಠಮಾಡಿ ಬಣ್ಣದ ಕೊಡೆಯನ್ನು  ತಲೆಯ ಮೇಲೆ ಹಿಡಿದುಕೊಂಡು ಹೋಗಿಯೇಬಿಟ್ಟಳು.

ನನ್ನ ಗಮನವೆಲ್ಲ ಮಗಳು ಮತ್ತು ಕೊಡೆಯ ಮೇಲೆಯೇ ಇತ್ತು. ಸ್ವಲ್ಪ ಸಮಯದ ನಂತರ ಮಗಳು ಕೊಡೆಯೊಂದಿಗೆ ಬಂದಳು. ನಾನು ಕಳುಹಿಸುವಾಗ ಕೊಡೆ ಹೇಗಿತ್ತೋ ಹಾಗೆ ಇತ್ತು. ತುಂಬಾ ಸಂತೋಷವಾಯಿತು.

ಸಾಯಂಕಾಲ ಮಾತ್ರ ನನ್ನ ಮಗಳು  ತುಂಬಾ ಅಳಲು ಪ್ರಾರಂಭಮಾಡಿದಳು. ಕೇಳಿದರೆ ಅವಳಿಗೆ ಹೇಳಲು ಆಗುತ್ತಿಲ್ಲ. ನಾನು ನನ್ನ ಅತ್ತೆ ಹೇಳಿದ ಹಾಗೆ ದೃಷ್ಟಿ ತೆಗೆದದ್ದಾಯಿತು, ಓಕುಳಿ ಚೆಲ್ಲಿದೆ. ನನ್ನ ಅತ್ತೆಯ ಹತ್ತಿರ ಮಂಗಳಾರತಿಯನ್ನೂ ಮಾಡಿಸಿಕೊಂಡೆ!

ಎಷ್ಟು ರಮಿಸಿದರೂ ಮಗಳ ಅಳು ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಅವಳ ಅಕ್ಕಂದಿರನ್ನು ವಿಚಾರಿಸಿದಾಗ ನಿಜ ಸಂಗತಿ ತಿಳಿಯಿತು. ಮಗಳು ಬೆಳಿಗ್ಗೆ ಬಿಚ್ಚಿ ಹಿಡಿದುಕೊಂಡ ಕೊಡೆಯನ್ನು  ಮರಳಿ ಮನೆಗೆ ಬರುವವರೆಗೂ ಅದೇ ಸ್ಥಿತಿಯಲ್ಲಿ ತಲೆಯ ಮೇಲೆ ಹಿಡಿದುಕೊಂಡಿದ್ದಳಂತೆ. ಹಾಗಾಗಿ ಅವಳ ಕತ್ತು ಮತ್ತು ಕೈ ನೋವಾಗಿ ಅಳುತ್ತಿರುವ ವಿಷಯ ತಿಳಿಯಿತು. ನಂತರ ಬಿಸಿ ನೀರು ಹಾಕಿ, ಲಾಲಿ ಹಾಡಿ ಮಲಗಿಸುವುದರೊಳಗೆ ಸಾಕಾಗಿ ಹೋಗಿತ್ತು.

ಈಗ  ನನ್ನ ಮಗಳಿಗೆ ಹನ್ನೆರಡು ವರ್ಷ . ಈಗ ಅವಳ ಹತ್ತಿರ  ಆ ಕೊಡೆಯೂ ಇಲ್ಲ, ಆ ಸಂತೋಷ ಅನುಭವಿಸಲು ಅವಳಿಗೆ  ಸಮಯವೂ ಇಲ್ಲ. ಮನೆ ಮುಂದೆ ಸ್ಕೂಲ್ ಬಸ್  ಬರುತ್ತಿದ್ದಂತೆ ಟಾಟಾ ಮಾಡುತ್ತ ಬಸ್‌ಹತ್ತಿ ಹೋಗಿ ಬಿಡುತ್ತಾಳೆ. ಅವಳಿಗೆ ಆ ಕೊಡೆ ಹಿಡಿದು ಆಡಲು ಸಮಯವೇ ಇಲ್ಲ. ಈಗೇನಿದ್ದರೂ ಶಾಲೆ,  ಟ್ಯೂಷನ್, ಹೋಂ ವರ್ಕ್ ಇತ್ಯಾದಿ ಇತ್ಯಾದಿ... ಕನಸುಗಳಿಗೆ ಬಣ್ಣ ತುಂಬಿಕೊಳ್ಳುತ್ತಿದ್ದ ಆ ಸಮಯ ಬರೀ ನೆನಪು ಎಂಬಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT