ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಸುಪರ್ದಿ ಅಪ್ಪನಿಗೆ ವಹಿಸಿದ ಹೈಕೋರ್ಟ್‌

ವಿಚ್ಛೇದನ ಪ್ರಕರಣ: ತಾಯಿಗೆ ಸಲಹುವ ‘ಸಾಮರ್ಥ್ಯ’ವಿಲ್ಲ
Last Updated 18 ಜನವರಿ 2016, 19:30 IST
ಅಕ್ಷರ ಗಾತ್ರ

ಬಹುತೇಕ ವಿಚ್ಛೇದನ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಚಿಕ್ಕ ಮಕ್ಕಳನ್ನು ತಾಯಿಯ ಸುಪರ್ದಿಗೆ ವಹಿಸಿ ತಂದೆಗೆ ಭೇಟಿಯ ಹಕ್ಕು (ವಿಸಿಟಿಂಗ್‌ ರೈಟ್‌) ನೀಡುತ್ತವೆ.  

ಆದರೆ ಮಕ್ಕಳನ್ನು ಸಲಹುವಷ್ಟು ಸ್ವತಂತ್ರ ಆದಾಯ, ಉದ್ಯೋಗ ಮಾಡುವಷ್ಟು ಶಿಕ್ಷಣ ತಾಯಿಯಾದವಳಿಗೆ  ಇಲ್ಲದಿದ್ದರೆ ಅಥವಾ ಆಕೆಯ ತವರಿನ ಕೌಟುಂಬಿಕ ಹಿನ್ನೆಲೆ ಸರಿಯಿಲ್ಲದಿದ್ದರೆ ಮಕ್ಕಳು ಅಪ್ರಾಪ್ತರಾಗಿದ್ದರೂ ಅವರ ಸುಪರ್ದಿಯನ್ನು ಅಪ್ಪನಿಗೆ ವಹಿಸಬಹುದು ಎಂಬ ಮಹತ್ವದ ತೀರ್ಪನ್ನು ಹೈಕೋರ್ಟ್‌ ಇತ್ತೀಚೆಗೆ ನೀಡಿದೆ.

14 ವರ್ಷ ಅಮ್ಮನ ಬಳಿ ಇದ್ದ ಬಾಲಕನನ್ನು ಅಪ್ಪನ ಸುಪರ್ದಿಗೆ ವಹಿಸಿ, ಅಮ್ಮನಿಗೆ ಭೇಟಿಯ ಹಕ್ಕನ್ನು ನೀಡುವ ಮೂಲಕ ನ್ಯಾಯಮೂರ್ತಿಗಳಾದ ಎನ್‌.ಕೆ. ಪಾಟೀಲ್‌ ಹಾಗೂ ಪ್ರದೀಪ್‌  ಡಿ. ವೈಂಗಣಕರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇಂಥದ್ದೊಂದು ತೀರ್ಪು ನೀಡಿದೆ. ಮಕ್ಕಳ ಸುಪರ್ದಿಗೆ ಸಂಬಂಧಿಸಿದಂತೆ ಅಪ್ಪ–ಅಮ್ಮಂದಿರ ನಡುವೆ ಕಾನೂನು ಹೋರಾಟ ಹೆಚ್ಚಿರುವ ಇಂದಿನ ದಿನಗಳಲ್ಲಿ ಈ ತೀರ್ಪು ಮಹತ್ವ ಪಡೆದಿದೆ.

ಮಕ್ಕಳ ಸುಪರ್ದಿ ಕೋರಿ 2014ರಲ್ಲಿ ಬೆಂಗಳೂರಿನ ಕೌಟುಂಬಿಕ ಕೋರ್ಟ್‌ಗಳಲ್ಲಿ 308 ಪ್ರಕರಣಗಳು ದಾಖಲಾಗಿದ್ದರೆ 2015ರಲ್ಲಿ (ಸೆಪ್ಟೆಂಬರ್‌ವರೆಗೆ) ಇದರ ಸಂಖ್ಯೆ 240. ಈ ಪ್ರಕರಣಗಳ ಪೈಕಿ ಹಲವು ಪ್ರಕರಣಗಳಲ್ಲಿ ದಂಪತಿಯ ನಡುವೆ ಸಾಮರಸ್ಯ ಹದಗೆಡುವುದಕ್ಕೆ ಗಂಡಂದಿರಷ್ಟೇ ಪಾಲು ಹೆಂಡತಿಯರದ್ದೂ ಇರುವುದು ಕಂಡುಬರುತ್ತದೆ. ಆದರೆ ಮಗುವಿನ ವಿಷಯ ಬಂದಾಗ ತಾಯಿ ಪರ ಆದೇಶಗಳು ಹೊರಬೀಳುತ್ತವೆ.

ಹಿಂದೂ ಅಪ್ರಾಪ್ತ ಮತ್ತು ರಕ್ಷಕರ ಅಧಿನಿಯಮ (ಹಿಂದೂ ಮೈನಾರಿಟಿ ಅಂಡ್ ಗಾರ್ಡಿಯನ್‌ಶಿಪ್) ಕಾಯ್ದೆ– 1956 ಅಡಿ ತಂದೆಯೇ ನೈಸರ್ಗಿಕ ಪೋಷಕ (ನ್ಯಾಚುರಲ್‌ ಗಾರ್ಡಿಯನ್‌). ಆತನ ನಂತರ ಮಗುವಿನ ಮೇಲೆ ಹಕ್ಕು ಇರುವುದು ತಾಯಿಗೆ. ಆದರೆ ಮಗುವಿನ ಹಿತದೃಷ್ಟಿಯಿಂದ  ಕೋರ್ಟ್‌ಗಳು ಮಗುವನ್ನು ಅಮ್ಮನ ಸುಪರ್ದಿಗೇ ವಹಿಸುತ್ತವೆ. ‘ಪತ್ನಿಯ ನಡವಳಿಕೆ ಸರಿಯಿಲ್ಲ, ಆಕೆಯ ಕುಟುಂಬದ ಹಿನ್ನೆಲೆ ಚೆನ್ನಾಗಿಲ್ಲ, ಮಗುವನ್ನು ಸಾಕುವಷ್ಟು ಆದಾಯ ಇಲ್ಲ’ ಇತ್ಯಾದಿಯಾಗಿ ಮಗುವಿನ ಅಪ್ಪ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಅಪ್ಪಂದಿರ ಅರ್ಜಿಗಳು ವಜಾಗೊಳ್ಳುವುದೇ ಹೆಚ್ಚು.

ಪ್ರಕರಣದ ಹಿನ್ನೆಲೆ: ರೇಖಾ, ಹರೀಶ್‌ (ಹೆಸರು ಬದಲಾಯಿಸಲಾಗಿದೆ) ದಂಪತಿ ಪ್ರಕರಣ ಇದು. 1999ರಲ್ಲಿ ಇವರ ವಿವಾಹ ನಡೆದಿತ್ತು. ಮದುವೆಯಾದ ಒಂದು ತಿಂಗಳಿನಲ್ಲಿಯೇ ದಂಪತಿ ನಡುವೆ ವೈಮನಸ್ಸು ಶುರುವಾಯಿತು. ಪೋಷಕರು ಪ್ರತ್ಯೇಕ ಮನೆ ಮಾಡಿಕೊಟ್ಟರೂ ದಂಪತಿ ನಡುವೆ ಜಗಳ ಮುಂದುವರಿಯಿತು.

ಇಬ್ಬರಲ್ಲಿ ಸಾಮರಸ್ಯ ಮೂಡಿಸಲು ಕುಟುಂಬದವರು, ಸ್ನೇಹಿತರು  ಪಟ್ಟ ಪ್ರಯತ್ನಗಳೆಲ್ಲ ವ್ಯರ್ಥವಾದವು. ಜಗಳ ತಾರಕಕ್ಕೆ ಹೋದಾಗ ಪತ್ನಿ ತವರಿಗೆ ಹೋದಳು. ಅಲ್ಲಿಯೇ ಮಗು ಜನಿಸಿದರೂ ಗಂಡ ಹಾಗೂ ಆತನ ಮನೆಯವರನ್ನು ಆಕೆ ಸೇರಿಸಿಕೊಳ್ಳಲಿಲ್ಲ. ಮಗುನೋಡಲು ಗಂಡನಿಗೂ ಬಿಡಲಿಲ್ಲ.

ಕೆಲ ವರ್ಷ ಕಾದ ಸುರೇಶ್‌, 2004ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದರು. ‘ಪತ್ನಿಗೆ ತಾಯಿ ಇಲ್ಲ. ಆಕೆಗೆ ಉದ್ಯೋಗವೂ ಇಲ್ಲ. ಒಬ್ಬ ಸಹೋದರ ಬುದ್ಧಿಮಾಂದ್ಯ. ಇವೆಲ್ಲ ಕಾರಣಗಳಿಂದ ಮಗನನ್ನು ನನ್ನ ಸುಪರ್ದಿಗೆ ವಹಿಸಿಕೊಡಿ’ ಎಂದು ಕೋರಿ ಇನ್ನೊಂದು ಅರ್ಜಿ ಸಲ್ಲಿಸಿದರು.  ಸುರೇಶ್‌ ಅವರ ವಾದದಲ್ಲಿ ಸತ್ಯಾಂಶ ಇದೆ ಎಂದು ಅರಿತ ಕೌಟುಂಬಿಕ ಕೋರ್ಟ್‌ 2011ರಲ್ಲಿ ವಿಚ್ಛೇದನ ನೀಡಿತ್ತು ಹಾಗೂ ಮಗುವಿನ ಸುಪರ್ದಿಯನ್ನು ಸುರೇಶ್‌ ಅವರಿಗೆ ವಹಿಸಿಕೊಟ್ಟಿತ್ತು.  ಮಗನನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದ ರೇಖಾ, ಈ  ಎರಡೂ ಆದೇಶಗಳ ರದ್ದತಿಗೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ತಮ್ಮ ಪತಿ ತಮ್ಮ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳೂ ನಿರಾಧಾರ ಎನ್ನುವುದು ಅವರ ವಾದವಾಗಿತ್ತು.

ಆದರೆ ರೇಖಾರವರ ವಾದವನ್ನು ಪೀಠ ಒಪ್ಪಲಿಲ್ಲ. ಜೀವನಾಂಶ ಹಾಗೂ ಮಗುವಿನ ಓದು ಇತ್ಯಾದಿಗಾಗಿ ಸುರೇಶ್‌ ತಿಂಗಳಿಗೆ  ಎರಡು ಸಾವಿರ ರೂಪಾಯಿ ಕಳಿಸುತ್ತಿದ್ದರು. ಇವೆಲ್ಲವನ್ನೂ ಪರಿಶೀಲಿಸಿದ ಪೀಠ, ವಿಚ್ಛೇದನ ಆದೇಶ ಊರ್ಜಿತಗೊಳಿಸಿತು. ಮಗನನ್ನು ಅಪ್ಪನ ಸುಪರ್ದಿಗೆ ನೀಡುವಂತೆ ರೇಖಾ ಅವರಿಗೆ ಆದೇಶಿಸಿ ಅವರಿಗೆ 15 ದಿನಕ್ಕೊಮ್ಮೆ ಭೇಟಿ ಮಾಡುವ ಹಕ್ಕನ್ನು ನೀಡಿತು.

***
ಕಾನೂನು ಆಯೋಗದ ಶಿಫಾರಸು
ಮಗುವಿನ ಸುಪರ್ದಿ ಪ್ರಕರಣವೊಂದು 2013ರಲ್ಲಿ ಹೈಕೋರ್ಟ್‌ಗೆ ಬಂದಿದ್ದಾಗ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ್ ನೇತೃತ್ವದ ಪೀಠವು ಮಗುವನ್ನು ಆರು ತಿಂಗಳು ಅಪ್ಪ ಹಾಗೂ ಆರು ತಿಂಗಳು ಅಮ್ಮನ ಸುಪರ್ದಿಗೆ ವಹಿಸಿಕೊಟ್ಟು ಮಹತ್ವದ ತೀರ್ಪು ನೀಡಿತ್ತು. (MFA.NO.1729/ 2011 (G & W). ಹೈಕೋರ್ಟ್‌ ಇತಿಹಾಸದಲ್ಲಿ ಇಂಥದ್ದೊಂದು ತೀರ್ಪು ಬಂದಿದ್ದು ಇದೇ ಮೊದಲು.

ಈ ತೀರ್ಪಿನ ನಂತರ  ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಇಂಥದ್ದೇ ಕಾನೂನು ರೂಪಿಸುವಂತೆ ಕೋರಿದೆ. ‘ಮಕ್ಕಳು ಕೇವಲ ಒಬ್ಬರ ಸ್ವತ್ತಲ್ಲ, ವಿಚ್ಛೇದಿತ ಅಪ್ಪ–ಅಮ್ಮ ಇಬ್ಬರಿಗೂ ಮಕ್ಕಳನ್ನು ಪೋಷಣೆ ಮಾಡುವ ಅಧಿಕಾರ ಇದೆ’ ಎನ್ನುವ ಕಾನೂನು ಅಮೆರಿಕ, ಆಸ್ಟ್ರೇಲಿಯ, ಥಾಯ್ಲೆಂಡ್‌, ಕೀನ್ಯಾ, ಸಿಂಗಪುರ, ದಕ್ಷಿಣ ಆಫ್ರಿಕಾ, ಬ್ರಿಟನ್‌, ಕೆನಡಾ ಮುಂತಾದ ದೇಶಗಳಲ್ಲಿ  ಇದ್ದು  ನಮ್ಮಲ್ಲೂ ಅದೇ ರೀತಿ  ತಿದ್ದುಪಡಿಯ ಅವಶ್ಯಕತೆ ಇದೆ ಎಂದು ತಿಳಿಸಿದೆ.

‘ಮಗು ಯಾರ ಬಳಿ, ಎಷ್ಟು ಸಮಯ ಇರಬೇಕು ಎನ್ನುವುದು ಪ್ರಕರಣ ದಾಖಲಾದ ಒಂದು ವಾರದಲ್ಲಿಯೇ ನಿರ್ಧಾರವಾಗಬೇಕು, ಪ್ರಕರಣದ ಅಂತಿಮ ಆದೇಶ ಹೊರಬರುವವರೆಗೂ ಮಗು ಅಪ್ಪ–ಅಮ್ಮ ಇಬ್ಬರ ಬಳಿಯೂ ಸರಿಯಾಗಿ ಇರುವ ವ್ಯವಸ್ಥೆ ಆಗಬೇಕು, ಹಬ್ಬಗಳ ವೇಳೆ ಅಥವಾ ಇನ್ನಿತರ ದಿನಗಳಲ್ಲಿ ಶಾಲೆಗೆ ರಜೆ ಇದ್ದ ಸಂದರ್ಭದಲ್ಲಿ ಮಗು ತಾಯಿಯ ಬಳಿ ಇದ್ದರೆ ತಂದೆಗೆ ಕನಿಷ್ಠ ಮೂರು ಗಂಟೆ ಭೇಟಿಯ ಅವಕಾಶ ನೀಡಬೇಕು, ಮಗು ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆಯ ವೆಚ್ಚವನ್ನು ಇಬ್ಬರೂ ಭರಿಸಬೇಕು’ ಇತ್ಯಾದಿಯಾಗಿ ಕಾನೂನು ಆಯೋಗ ಶಿಫಾರಸಿನಲ್ಲಿ ತಿಳಿಸಿದೆ. ಈ ಶಿಫಾರಸು ಇನ್ನೂ ಪರಿಶೀಲನಾ ಹಂತದಲ್ಲಿದೆ.  ಈ ನಡುವೆ, ಅಪ್ಪಂದಿರಿಗೆ ತುಸು ನಿರಾಳವೆನಿಸುವ ಇಂಥದ್ದೊಂದು ತೀರ್ಪು ಈಗ ಹೈಕೋರ್ಟ್‌ನಿಂದ ಹೊರಬಿದ್ದಿದೆ.

ಮಕ್ಕಳ ಸುಪರ್ದಿ ಕೋರಿದ ಪ್ರಕರಣಗಳು (ಬೆಂಗಳೂರು ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲು)
* 308  - 2014ರಲ್ಲಿ ದಾಖಲಾಗಿವೆ
* 240  - 2015 ಸೆಪ್ಟೆಂಬರ್‌ವರೆಗೆ ದಾಖಲಾದ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT