ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಮಾಡಿಕೊಳ್ಳುವ ಮಾತು ಸಂಕೋಚ ಬೇಡ

ಅಂಕುರ 60
Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಬಹುತೇಕ ದಂಪತಿಗಳು ಮಗುವನ್ನು ಮಾಡಿಕೊಳ್ಳುವ ಬಗ್ಗೆ ಎಷ್ಟೇ ಸಂಶಯಗಳಿರಲಿ, ಆತಂಕಗಳಿರಲಿ ತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುತ್ತಾರೆ. ಮನ ಬಿಚ್ಚಿ ಮಾತನಾಡುವುದಿಲ್ಲ. ವೈದ್ಯರೊಂದಿಗೆ ಸಮಾಲೋಚಿಸುವುದಿಲ್ಲ. ಎಷ್ಟೋ ದಂಪತಿಗಳಿಗೆ ಸಮಾಲೋಚನೆಯಲ್ಲಿಯೇ ಪರಿಹಾರ ದೊರೆತಿರುತ್ತವೆ. ಆದರೂ ಕೆಲವೊಬ್ಬರು ಕಡ್ಡಿಯೊಂದು ಗುಡ್ಡ ಆಗುವವರೆಗೂ ಸುಮ್ಮನಿರುತ್ತಾರೆ. ಆಮೇಲಷ್ಟೇ ವೈದ್ಯರ ಬಳಿ ಧಾವಿಸುವುದು. ಅದರ ಬದಲು ದಂಪತಿ ಮೊದಲ ಹಂತದಲ್ಲಿಯೇ ಚರ್ಚೆಗೆ ಮುಂದಾದರೆ ಅರ್ಧ ಪರಿಹಾರ ದೊರೆತಂತೆಯೇ ಸರಿ. ಹಾಗಾಗಿ ಇಲ್ಲಿ ಕೆಲವು ಸಾಮಾನ್ಯ ಹಾಗೂ ಜನರಿಗೆ ಅತಿ ಹೆಚ್ಚು ಕಾಡುವ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸಲಾಗಿದೆ. ಇನ್ನೂ ಯಾವ ಪ್ರಶ್ನೆಗಳಿದ್ದರೂ ಓದುಗರು ಇ–ಮೇಲ್‌ ಮಾಡಬಹುದು.

ಒಂದು ವೇಳೆ ನನಗೆ ಗರ್ಭಪಾತವಾದರೆ ಭವಿಷ್ಯದಲ್ಲಿ ಗರ್ಭಧರಿಸಲು ತೊಂದರೆಯಾಗುವುದೇ?
ವೈದ್ಯಕೀಯವಾಗಿ ಸಂಕೀರ್ಣವಲ್ಲದ ಗರ್ಭಪಾತವಾದರೆ ಯಾವುದೇ ತೊಂದರೆ ಇರುವುದಿಲ್ಲ. ಸಂಕೀರ್ಣವೆಂದರೆ ಸೋಂಕಿ ನಿಂದಾಗಿ ಅಥವಾ ಟಿಶ್ಯುಗೆ ಹಾನಿಯಾಗಿ ಗರ್ಭಪಾತವಾಗಿದ್ದಲ್ಲಿ, ಗರ್ಭಧಾರಣೆ ಅಥವಾ ಭ್ರೂಣವು ಗರ್ಭಕ್ಕೆ ಅಂಟಿಕೊಳ್ಳುವಲ್ಲಿ ಕಷ್ಟವಾಗಬಹುದು. ಅಂಥ ಸಂದರ್ಭದಲ್ಲಿ ನಿಮ್ಮ ವೈದ್ಯರು ಫಲವಂತಿಕೆಯ ಪ್ರಮಾಣಕ್ಕಾಗಿ ಎಚ್‌ಎಸ್‌ಜಿ ಟೆಸ್ಟ್‌ಗೆ ಸೂಚಿಸಬಹುದು. ಇದೊಂದು ಗರ್ಭಕೋಶ ಹಾಗೂ ಅಂಡನಾಳಗಳ ಎಕ್ಸ್‌ರೇ ಆಗಿರುತ್ತದೆ. ಇದರ ಮೂಲಕ ಅಂಡನಾಳಗಳಲ್ಲಿ ಏನಾದರೂ ಅಡೆ ತಡೆ ಇದೆಯೇ? ಗರ್ಭಕೋಶಕ್ಕೆ ಏನಾದರೂ ಹಾನಿಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ. 

ಇದಲ್ಲದೆ ಸೋನೊಹಿಸ್ಟೊರೊಗ್ರಾಮ್‌ ಎಂಬ ಪರೀಕ್ಷೆಯನ್ನೂ ಸೂಚಿಸಬಹುದು. ಇದು ಗರ್ಭಕೋಶದ ಅಲ್ಟ್ರಾಸೌಂಡ್‌ ತಪಾಸಣೆಯನ್ನೇ ಹೋಲುತ್ತದೆ. ಬಹುತೇಕ ಪ್ರಕರಣಗಳಲ್ಲಿ ಹಾನಿಯಾಗಿರುವ ಟಿಶ್ಯುವನ್ನು ತೆಗೆಯಬಹುದಾಗಿದೆ. ಹಿಸ್ಟರೊಸ್ಕೋಪಿ ಎಂಬ ಚಿಕಿತ್ಸೆಯನ್ನು ಹೊರರೋಗಿ ವಿಭಾಗದಲ್ಲಿಯೇ ನೀಡಬಹುದಾಗಿದೆ. ಇಂಥ ಸರಳ ಉಪಾಯಗಳು ಹಾಗೂ ಅತ್ಯಾಧುನಿಕ ತಪಾಸಣೆಗಳು ಲಭ್ಯ ಇವೆ. ಮುಕ್ತವಾಗಿ ವೈದ್ಯರೊಂದಿಗೆ ಚರ್ಚಿಸಬೇಕಷ್ಟೆ.

ಮದ್ಯಪಾನದಿಂದ ವೀರ್ಯಾಣುವಿಗೆ ಹಾನಿ ಯಾಗುತ್ತದೆಯೇ? ಗರ್ಭಧಾರಣೆಗೆ ಪ್ರಯತ್ನಿಸುವಾಗ ಮದ್ಯಪಾನ ಮಾಡಬಾರದೇ?
ಮದ್ಯಪಾನವು ವೀರ್ಯಾಣುವನ್ನು ನಾಶಪಡಿಸುತ್ತದೆ ಎನ್ನುವುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ಇವೆ. ಏನಾಗಬಹುದು? ಒಂದು ವೇಳೆ ಗರ್ಭಧಾರಣೆಯಾದರೆ ಗಾತ್ರ ಮತ್ತು ತೂಕದಲ್ಲಿ ಕಡಿಮೆ ಇರುವ ಮಕ್ಕಳು ಹುಟ್ಟಬಹುದು. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಬಹುದು. ವರ್ತನಾ ಸಮಸ್ಯೆ ಇರುವ, ಹಾರ್ಮೋನಿನ ಸಮಸ್ಯೆಗಳಿರುವ ಮಕ್ಕಳು ಹುಟ್ಟಬಹುದು. ಅತಿಚಟುವಟಿಕೆಯಿಂದ ಕೂಡಿರುವಂಥ ಮಕ್ಕಳೂ ಹುಟ್ಟಬಹುದು. ಈ ಎಲ್ಲವೂ ಮದ್ಯಪಾನಿಯ ಮಕ್ಕಳಲ್ಲಿ ಕಾಣುತ್ತವೆ ಎಂದು ಹೇಳಲಿಕ್ಕಾಗದಿದ್ದರೂ ಇದು ಎಚ್ಚರಿಕೆಯ ಗಂಟೆಯಂತೂ ಹೌದು.

ಇಷ್ಟಕ್ಕೂ ನಾವೇನು ಪ್ರಯೋಗಪಶುಗಳಲ್ಲ ಅಥವಾ ಇಲಿಗಳಲ್ಲ ಎನ್ನುವ ವಾದವನ್ನು ಮುಂದಿರಿಸುತ್ತಾರೆ. ಆದರೆ ಮದ್ಯಪಾನ ಎಲ್ಲರ ಮೇಲೂ ಒಂದೇ ತೆರನಾದ ಪರಿಣಾಮ ಬೀರುವುದಿಲ್ಲ. ಯಾವಾಗಲಾದರೂ ಸಾಂದರ್ಭಿಕವಾಗಿ ಸೇವಿಸಿದರೆ ಪರವಾ ಇಲ್ಲ. ಆದರೆ ದಿನಕ್ಕೆ ಎರಡು ಡ್ರಿಂಕ್‌, ಐದು ಡ್ರಿಂಕ್‌ ಅಥವಾ ವಾರಕ್ಕೆ ಒಮ್ಮೆ ನಿರಂತರವಾಗಿ ಸೇವಿಸುತ್ತಿದ್ದಲ್ಲಿ ಖಂಡಿತವಾಗಿಯೂ ಫಲವಂತಿಕೆಯ ಮೇಲೆ, ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಮಹಿಳೆ ಮತ್ತು ಮದ್ಯಪಾನ
ಗರ್ಭಧಾರಣೆಗೆ ಮುಂಚೆಯೇ ಮದ್ಯಪಾನ ಸೇವಿಸುವುದನ್ನು ಬಿಡಬೇಕೆ?

ಮಹಿಳೆಯರಿಗೆ ತಾವು ಗರ್ಭಿಣಿಯರು ಎಂದು ತಿಳಿಯುವ ಮುನ್ನವೇ ಭ್ರೂಣದ ಮೇಲೆ ಮದ್ಯಪಾನದ ಪರಿಣಾಮ ಬೀರುವ ಸಾಧ್ಯತೆ ಇದ್ದೇ ಇರುತ್ತದೆ. ಇದಕ್ಕೆ ಫೇಟಲ್‌ ಅಲ್ಕೋಹಾಲ್‌ ಸಿಂಡ್ರೋಮ್‌ ಎಂದು ಕರೆಯುತ್ತಾರೆ. ಭ್ರೂಣದ ಸಹಜ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಎಷ್ಟು ಮದ್ಯಪಾನ ಮಾಡಿದರೆ ಸುರಕ್ಷಿತ ಎಂದು ಹೇಳಲಾಗದು. ಮದ್ಯಪಾನ ಬಿಡುವುದೇ ಸುಲಭ ಉಪಾಯವಾಗಿದೆ.

ಗರ್ಭನಿರೋಧಕಗಳ ಸೇವನೆಯನ್ನು ನಿಲ್ಲಿಸಿದ ನಂತರ ಗರ್ಭಧಾರಣೆಗೆ ಎಷ್ಟು ಕಾಲ ಬೇಕಾಗಬಹುದು?
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ನಿಲ್ಲಿಸಿದೊಡನೆಯೇ ಅಂಡಾಣು ಬಿಡುಗಡೆಯ ಪ್ರಕ್ರಿಯೆ ಸರಳವಾಗಿ ಆರಂಭವಾಗುತ್ತದೆ. ಕೆಲವೊಮ್ಮೆ 24 ದಿನಗಳಿಂದ 32 ದಿನಗಳ ಋತುಚಕ್ರ ಆರಂಭವಾಗುತ್ತದೆ. ಕೆಲವು ತಿಂಗಳುಗಳಲ್ಲಿ ಋತುಚಕ್ರವು ನಿಯಮಿತವಾಗುತ್ತದೆ.  ಋತುಚಕ್ರ ನಿಯಮಿತವಾದ ನಂತರ ಗರ್ಭಧಾರಣೆ ಯಾಗುವ ಸಾಧ್ಯತೆಗಳು ಶೇ 20ರಷ್ಟಿರುತ್ತದೆ. ಒಂದು ವೇಳೆ ಗರ್ಭನಿರೋಧಕಗಳನ್ನು ನಿಲ್ಲಿಸಿದ ಆರು ತಿಂಗಳಲ್ಲಿ ಋತುಚಕ್ರವು ನಿಯಮಿತ ವಾಗದಿದ್ದಲ್ಲಿ ತಮ್ಮ ವೈದ್ಯರನ್ನು ಭೇಟಿಯಾಗಿ ಒಮ್ಮೆ ಸಮಾಲೋಚಿಸುವುದು ಅತ್ಯಗತ್ಯ.

ಮಾಹಿತಿಗೆ: 1800 208 4444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT