ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಜ್ಜಿಗೆ ಜೊತೆಗೆ ಬದುಕಿನ ಮಥನ

ನೆನಪಿನ ನವಿಲುಗರಿ
Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮದುವೆಯಾಗಿ ಗಂಡನ ಮನೆಗೆ ಬಂದ ಹೊಸತು. ಹದಿನೆಂಟೂ ತುಂಬಿರಲಿಲ್ಲ. ಚಿಕ್ಕ ಪ್ರಾಯದ ಸೊಸೆಗೆ ಈಗಲೇ ಅಡುಗೆ ಜವಾಬ್ದಾರಿ ಬೇಡವೆಂದು ಅತ್ತೆಯೇ ಹೆಚ್ಚಿನ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಎದ್ದಾಕ್ಷಣ ದೇವರಿಗೆ ಹೂ ಕೊಯ್ಯುವ ಮತ್ತು ಮೊಸರು ಕಡೆಯುವ ಕೆಲಸ ನನಗೆ ವಹಿಸಿದ್ದರು. ಹೂವನ್ನೇನೋ ಶ್ರದ್ಧೆಯಿಂದ ಕೊಯ್ಯತ್ತಿದ್ದೆ. ಮೊಸರು ಕಡೆಯುವ ಕೆಲಸ ಉಂಟಲ್ಲ, ಅದು ನನಗೆ ದೊಡ್ಡ ತಲೆನೋವಿನ ವಿಷಯವಾಗಿತ್ತು. ಆಗ ಹಟ್ಟಿ ತುಂಬಾ ದನಗಳು. ನಿತ್ಯ 4-5 ಹಾಲು ಕೊಡುವ ಹಸುಗಳು ಇರುತ್ತಿದ್ದವು. ಹಾಲನ್ನು ಉದಯಕಾಲದೊಳೆದ್ದು ಅತ್ತೆ ಕರೆಯುತ್ತಿದ್ದರು. ಹಾಲು ಮಾರದ ಕಾರಣ 5-6 ಲೀಟರ್ ಮೊಸರು ಕಡೆಯಲು ಇರುತ್ತಿತ್ತು. ಹಾಲನ್ನು ಕಾಯಿಸಿ ಆರಿದ ನಂತರ ರಾತ್ರಿ ದೊಡ್ಡ ಭರಣಿಗೆ ಹಾಕಿ ಹೆಪ್ಪು ಹಾಕಿ ಇಟ್ಟರೆ ಮಾರನೆ ದಿನ ಐಸ್‌ಕ್ರೀಂನಂತೆ ಗಟ್ಟಿಯಾದ ಮೊಸರು ಸಿದ್ಧವಾಗುತ್ತಿತ್ತು. ಆಗಿನ್ನೂ ಮನೆಗೆ ವಿದ್ಯುತ್ ಬರದೆ ಇದ್ದುದರಿಂದ ಕೈಯಲ್ಲಿ ಕಡೆಯುವುದು ಅನಿವಾರ್ಯವಾಗಿತ್ತು.

ಕಡೆಗೋಲು, ರಾಟೆ, ಬಳ್ಳಿ, ಕೋಲು ಇವು ಮೊಸರು ಕಡೆಯಲು ಬೇಕಾದ ಸಾಧನಗಳು. ಕಡೆಗೋಲನ್ನು ನಮ್ಮ ಮನೆಭಾಷೆ ಹವ್ಯಕ ಕನ್ನಡದಲ್ಲಿ ‘ಮಂಥು’ ಎಂದು ಕರೆಯುತ್ತಾರೆ. ‘ಕಡೆವ ಮೊದಲು ಮಂಥಿನ ಬೆಶಿನೀರಿಂಗೆ ಅದ್ದು. ಬೆಣ್ಣೆ ತೆಗೆವ ಮೊದಲು ಕೈಯ ಬೆಶಿನೀರಿಂಗೆ ಅದ್ದು. ಅಂಬಗ ಬೆಣ್ಣೆ ಮಂತಿಂಗೆ, ಕೈಗೆ ಅಂಟುತ್ತಿಲ್ಲೆ’ ಎಂದು ಆರಂಭದಲ್ಲಿ ಅತ್ತೆ ಪಾಠ ಮಾಡಿದ್ದರು. ಮೊಸರು ಕಡೆಯುವ ಮೊದಲು ಕಡೆಗೋಲನ್ನು ಬಿಸಿನೀರಿನಲ್ಲಿ ಒಮ್ಮೆ ಅದ್ದಬೇಕು. ಬೆಣ್ಣೆ ಅಂಟಿಕೊಳ್ಳದಿರಲಿ ಎಂಬ ಕಾರಣದಿಂದ. ನಂತರ ಕಡೆಗೋಲನ್ನು ಭರಣಿಯೊಳಗೆ ಇಟ್ಟು ಅದರ ತುದಿಗೆ ರಾಟೆ ತೂರಿಸಬೇಕು. ರಾಟೆಯ ಇನ್ನೊಂದು ಬದಿಯನ್ನು ಕೋಲಿಗೆ ತೂರಿಸಿ ಅದಕ್ಕೆಂದೇ ಕೊರೆದ ಗೋಡೆಯ ತೂತಿಗೆ ಸಿಕ್ಕಿಸಿ ಇಡಬೇಕು.

ಹಿಂದೆಯೆಲ್ಲ ಮಲೆನಾಡಿನ ಮನೆಗಳಲ್ಲಿ ಮೊಸರು ಕಡೆಯಲೆಂದು ಅಡುಗೆ ಕೋಣೆಯ ಗೋಡೆಗೆ ಒಂದು ನಿರ್ದಿಷ್ಟ ಜಾಗದಲ್ಲಿ ಮರದ ಚೌಕಟ್ಟು ಅಂಟಿಸಿ ಅದರ ಕೆಳ ಮತ್ತು ಮೇಲ್ಭಾಗದಲ್ಲಿ ತೂತು ಕೊರೆಯುತ್ತಿದ್ದರು. ಕಡೆಗೋಲಿಗೆ ಬಳ್ಳಿ ಸುತ್ತಿ ಕೈಯಿಂದ ಎಳೆದರೆ ಬೆಣ್ಣೆ ಬರುತ್ತಿತ್ತು. ಚಳಿಗಾಲದಲ್ಲಿ ಬೆಣ್ಣೆ ಬರಬೇಕಾದರೆ ತುಂಬ ಹೊತ್ತು ಕಡೆಯಬೇಕಿತ್ತು. ಬೇಸಿಗೆಯಲ್ಲಿ ಬೆಣ್ಣೆ ಬೇಗ ಬಂದರೂ ಮುದ್ದೆಯಾಗಿ ಸಿಗುತ್ತಿರಲಿಲ್ಲ. ನೀರು ನೀರಾಗುತ್ತಿತ್ತು. ತೆಗೆಯಲು ಹೊರಟಾಗ ಕೈಗೆಲ್ಲ ಮೆತ್ತಿಕೊಳ್ಳುತ್ತಿತ್ತು. ಆಗ ಸ್ವಲ್ಪ ತಣ್ಣೀರನ್ನು ಮಜ್ಜಿಗೆಗೆ ಸೇರಿಸಿದರೆ ಬೆಣ್ಣೆ ಗಟ್ಟಿಯಾಗಿ ತೆಗೆಯಲು ಸುಲಭವಾಗುತ್ತಿತ್ತು.

‘ದೇವರ ನಾಮ ದೊಡ್ಡದಾಗಿ ಹೇಳುತ್ತ ಕಡೆದರೆ ಬೆಣ್ಣೆ ಬೇಗ ಬರುತ್ತದೆ. ಒಂದು ಹಾಡು ಹೇಳು’ ಎಂದು ಅತ್ತೆ ಹೇಳುತ್ತಿದ್ದರು. ನನಗೆ ಹಾಡು ಬಿಡಿ, ದೇವರ ಹೆಸರುಗಳೇ ಸರಿಯಾಗಿ ಗೊತ್ತಿರಲಿಲ್ಲ. ಅತ್ತೆ ಬೈಯುತ್ತಿದ್ದರು. ‘ಸರಿಯಾಗಿ ದೇವರ ನಾಮ ಹೇಳಲು ಬಾರದ ನೀನು ಎಂಥ ಹೆಣ್ಣು! ನಿನ್ನ ಅಮ್ಮ ಕಲಿಸಿಲ್ಲವೇ?’ ಎನ್ನುತ್ತಿದ್ದರು. ಯಾವಾಗ ನಾನು ಕೃಷ್ಣನಂತಿರುವ ಮಗುವಿನ ತಾಯಿಯಾದೆನೋ ಆಗ ನನ್ನ ಬಾಯಿಯಿಂದ ಪುಂಖಾನುಪುಂಖವಾಗಿ ಹಾಡುಗಳು ತನ್ನಿಂದ ತಾನೇ ಬರಲಾರಂಭಿಸಿದವು. ಹೌದು, ಅತ್ತೆ ಹೇಳಿದಂತೆ ಕಡೆಗೋಲಿಗೆ ಬಳ್ಳಿ ಸುತ್ತಿ ದೇವರ ನಾಮ ಹೇಳುತ್ತ ನಾಲ್ಕು ಸಲ ಎಳೆದಾಗಲೇ ಬೆಣ್ಣೆ ತೇಲಲು ಶುರುವಾಗುತ್ತಿತ್ತು. ಪುಟು ಪುಟುನೆ ಅಂಬೆಗಾಲಿಕ್ಕುತ್ತ ಮಗ ಬಂದು ಭರಣಿಗೆ ಕೈಹಾಕಿ ಬೆಣ್ಣೆ ಮೆಲ್ಲುವಾಗ ‘ನಾನು ಯಶೋದೆ, ಅವನು ಬಾಲಕೃಷ್ಣ’ ಎಂದು ಹೆಮ್ಮೆಯಿಂದ ಬೀಗುತ್ತಿದ್ದೆ. ಆಗ ಅತ್ತೆ ಓಡಿ ಬಂದು ಅವನನ್ನು ಎಳೆದೊಯ್ಯುತ್ತಿದ್ದರು. ಬೆಣ್ಣೆ ಮೆತ್ತಿಕೊಂಡ ಬಾಯಲ್ಲಿ ಅವನು ಅಳುತ್ತಿದ್ದರೆ ನನಗೆ ಅತ್ತೆಯ ಮೇಲೆ ಇನ್ನಿಲ್ಲದ ಕೋಪ.

ಕಡೆಗೋಲಿನ ಹಿಡಿ ವರ್ಷವಷ್ಟೇ ಬಾಳಿಕೆ ಬರುತ್ತಿತ್ತು. ಆಮೇಲೆ ಬಳ್ಳಿ ನಿಲ್ಲುವ ಜಾಗ ಸವೆದು ಹೋಗುತ್ತಿತ್ತು. ಆಗ ಮಾವ ಆಪತ್‌ ಬಾಂಧವನಂತೆ ಒದಗುತ್ತಿದ್ದರು. ಅವರು ಅಡಿಕೆ ಮರದ ಸಲಾಕೆಯನ್ನು ತಂದು ನುಣ್ಣಗೆ ಗೀಸಿ ಹಳೆ ಹಿಡಿಯನ್ನು ತೆಗೆದು ಹೊಸದನ್ನು ಜೋಡಿಸುತ್ತಿದ್ದರು.

ದೇವರಿಗೆ ಹೂ ಕೊಯ್ಯುತ್ತ, ಮೊಸರು ಕಡೆಯುತ್ತ, ಬೆಣ್ಣೆ ತೆಗೆಯುತ್ತ ವರ್ಷಗಳು ಉರುಳಿದ್ದು ಗೊತ್ತೇ ಆಗಲಿಲ್ಲ. ಮಾವ ತೀರಿ ಹೋದರು. ಮಗನಿಗೆ ಮೀಸೆ ಮೂಡಿತು. ಅತ್ತೆ ತನಗೆ ವಯಸ್ಸಾಯಿತು ಎಂದು ಎಲ್ಲ ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿದರು.

ಇತ್ತೀಚೆಗೆ ಮನೆಗೆ ಕರೆಂಟ್ ಬಂತು. ಆನಂದತುಂದಿಲಳಾದ ನಾನು ಮಾಡಿದ ಮೊದಲ ಕೆಲಸ ಮೊಸರು ಕಡೆಯುವ ಸಾಮಾನನ್ನು ಅಟ್ಟಕ್ಕೆ ಎಸೆದದ್ದು. ಮನೆಗೆ ಕಡೆಯುವ ಯಂತ್ರವನ್ನು ತಂದದ್ದು. ‘ಇನ್ನು ನನಗೆ ಕಡೆಗೋಲಿಗೆ ಬಳ್ಳಿ ಹಾಕಿ ಎಳೆಯುವ ಕೆಲಸ ಇಲ್ಲ. ಅಷ್ಟು ಸಮಯ ಉಳಿತಾಯವಾಯಿತು. ಆ ಸಮಯವನ್ನು ನನ್ನ ಇಷ್ಟದ ಹವ್ಯಾಸ ಪುಸ್ತಕ ಓದಿಗೆ ವಿನಿಯೋಗಿಸಬಹುದು’ ಎಂಬ ಖುಷಿಯಲ್ಲಿ ಪ್ರಸನ್ನವದನಳಾಗಿ ಇದ್ದೆ. ಮೊನ್ನೆ ಜೋರು ಗಾಳಿ, ಮಳೆ ಬೀಸಿತು. ತಂತಿ ಮೇಲೆ ಮರ ಬಿದ್ದು ಕರೆಂಟ್ ಕೈಕೊಟ್ಟಿತು. ಎರಡು ದಿನವಾದರೂ ಪತ್ತೆಯಿಲ್ಲ. ಮೊಸರು ಹುಳಿ ಬರಲಾರಂಭಿಸಿತು. ಕಡೆಯಲೇ ಬೇಕು. ಅಟ್ಟ ಹತ್ತಿದೆ. ಫಕ್ಕನೆ ಸಿಗಲಿಲ್ಲ. ಹುಡುಕಿದೆ. ಭರಣಿ ಭಾಗವಾಗಿತ್ತು! ಬಳ್ಳಿಯನ್ನು ಇಲಿ ಚೂರು ಚೂರು ಮಾಡಿತ್ತು! ಕಡೆಗೋಲು, ರಾಟೆ ಗೆದ್ದಲಿಗೆ ಆಹುತಿಯಾಗಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT