ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳಿಗೆ ದೇವಸ್ಥಾನ ಬೇಡ: ಶಾಂತವೀರ ಸ್ವಾಮೀಜಿ

Last Updated 11 ಫೆಬ್ರುವರಿ 2016, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅಕ್ರಮವಾಗಿ ವಶಪಡೆದುಕೊಂಡಿರುವ ಗೋಕರ್ಣದ ಮಹಾಬಲೇಶ್ವರ  ದೇವಸ್ಥಾನವನ್ನು ತಕ್ಷಣವೇ ಮುಜರಾಯಿ ಇಲಾಖೆ ವಶಕ್ಕೆ ಪಡೆಯಬೇಕು’ ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ  ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಮಠ ಮತ್ತು ದೇವಸ್ಥಾನ ಒಂದೇ ಅಲ್ಲ. ಮಠಗಳು ದೇವಸ್ಥಾನಗಳನ್ನು ನಡೆಸುವುದು ಸರಿಯಲ್ಲ.  ಎಲ್ಲ ಮಠಗಳ ಅಡಿಯಲ್ಲಿರುವ ದೇವಸ್ಥಾನಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು ಅಥವಾ ಭಕ್ತರಿಗೆ ಬಿಟ್ಟುಕೊಡಬೇಕು’ ಎಂದು  ಅವರು ಒತ್ತಾಯಿಸಿದರು.

ಒಳಸಂಚು: ‘ಸಂತರ ಸಮಾವೇಶ ನಡೆಸುವ ಮೂಲಕ ರಾಘವೇಶ್ವರ ಭಾರತೀ ಸ್ವಾಮೀಜಿ ತನ್ನ ಮೇಲಿರುವ ಆರೋಪಗಳಿಂದ ಹೊರ ಬರುವ  ಒಳಸಂಚು ನಡೆಸಿದ್ದಾರೆ. ಹೈಕೋರ್ಟ್‌ನ ಮೇಲೂ ಪ್ರಭಾವ ಬೀರುವ  ಯತ್ನ ಮಾಡಿದ್ದಾರೆ. ಆ ಸಭೆಗೆ ಬಂದವರಿಗೆ ನಂತರ ಇದು ಅರಿವಿಗೆ ಬಂದಿದೆ’ ಎಂದರು.

‘ಆರೋಪ ಪಟ್ಟಿ ಸಲ್ಲಿಕೆಯಾದ ನಂತರವೂ ಬಿ–ರಿಪೋರ್ಟ್‌ ಹಾಕಿಸುವ   ಪ್ರಯತ್ನ ರಾಘವೇಶ್ವರರು ಮಾಡಿದ್ದಾರೆ.  ಕಾನೂನು ಎಲ್ಲರಿಗೂ ಒಂದೇ. ಕಂಚಿ ಕಾಮಕೋಟಿ ಮಠದ ಸ್ವಾಮೀಜಿಗೊಂದು ನ್ಯಾಯ, ರಾಘವೇಶ್ವರರಿಗೊಂದು ನ್ಯಾಯ ಸಲ್ಲದು.  ಸಾಮಾನ್ಯ ಜನರನ್ನು  ಎಫ್‌ಐಆರ್ ದಾಖಲಾದ ಕೂಡಲೇ  ಬಂಧಿಸಲಾಗುತ್ತದೆ. ಆದರೆ,  ಧಾರ್ಮಿಕ ಮುಖಂಡರ ಮೇಲೆ  ಅತ್ಯಾಚಾರದ ಆರೋಪ ಇದ್ದರೂ ಬಂಧಿಸದಿರುವುದು  ಅನುಮಾನಕ್ಕೆ ಕಾರಣವಾಗಿದೆ’ ಎಂದರು.

ಗೌರವಧನಕ್ಕೆ ಒತ್ತಾಯ: ‘ರಾಜ್ಯದಲ್ಲಿರುವ 35 ಸಾವಿರ ದೇವಸ್ಥಾಗಳ  ಎಲ್ಲ ಅರ್ಚಕರಿಗೆ ಮಾಸಿಕ ₹10 ಸಾವಿರ ಗೌರವ ಧನ ನೀಡಬೇಕು’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಮೀಜಿ ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಮಸೀದಿಯ ಮೌಲ್ವಿಗಳಿಗೆ ಮಾಸಿಕ ₹4ಸಾವಿರ ಗೌರವ ಧನ ನೀಡುತ್ತಿದೆ. ಆದರೆ, ಮುಜರಾಯಿ ಇಲಾಖೆಯಿಂದ ಹೊರಗಿರುವ 34 ಸಾವಿರ    ದೇವಸ್ಥಾನಗಳ ಅರ್ಚಕರಿಗೆ ಗೌರವಧನ ನೀಡುತ್ತಿಲ್ಲ. ದೀಪದ ಎಣ್ಣೆ ಹೊಂದಿಸುವುದೂ ಕಷ್ಟವಾಗಿದೆ’ ಎಂದರು.

ಸಕ್ಸಸ್‌ ಆಫ್‌ ಟೆಂಪಲ್ ಸ್ಥಾಪಕ ರಘುನಾಥ ಸ್ವಾಮೀಜಿ,  ಹೈಕೋರ್ಟ್‌ ವಕೀಲ ಎಂ.ಟಿ. ನಾಣಯ್ಯ, ಅಂಬೇಡ್ಕರ್‌  ವೇದಿಕೆ ಅಧ್ಯಕ್ಷ ಚಿ.ನಾ.ರಾಮು, ಸಾಹಿತಿ ಹಿ.ಚಿ.ಶಾಂತವೀರಯ್ಯ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT