ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠದ ಮಣ್ಣಲ್ಲಿ ಭಕುತಿಯ ಕೃಷಿ

ಅಮೃತ ಭೂಮಿ 26
Last Updated 20 ಮೇ 2013, 19:59 IST
ಅಕ್ಷರ ಗಾತ್ರ

ಮಠಾಧೀಶರೆಂದರೆ ಧರ್ಮ ಬೋಧನೆ ಮಾಡುವವರು, ಭಕ್ತರ ಮನೆ ಮನೆಗೆ ತೆರಳಿ ಪಾದಪೂಜೆ ಮಾಡಿಸಿಕೊಂಡು ಆಶೀರ್ವಾದ ನೀಡುವವರು ಎಂಬುದು ಸಾಮಾನ್ಯ ಕಲ್ಪನೆ. ಆದರೆ `ಕಾಯಕವೇ ಕೈಲಾಸ' ಎಂಬ ಬಸವಣ್ಣನವರ ಮಾತನ್ನು ನಂಬಿದ ಅನೇಕ ಮಠಾಧೀಶರೂ ನಮ್ಮಳಗಿದ್ದಾರೆ. ಅಂಥವರಲ್ಲಿ ಒಬ್ಬರು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಅರಳೆಲೆಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ.

ಕೃಷಿಯನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ಅದರಲ್ಲಿಯೇ ಸಾಧನೆ ಮಾಡುತ್ತಿದ್ದಾರೆ ಇವರು. ಬಾಳೇಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಅರಳೆಲೆಹಿರೇಮಠದ ಪಟ್ಟಾಧ್ಯಕ್ಷರಾಗಿರುವ ಇವರು ದೇವರ ಪೂಜೆ ಮಾಡುವಂತೆ ನಿತ್ಯವೂ ಹೊಲದಲ್ಲಿ ನಿಷ್ಠೆಯಿಂದ ಕಾಯಕ ಪೂಜೆ ನಡೆಸುತ್ತಾರೆ.

ಬೆಳಗಾದೊಡನೆ ಮಠದ ಪೂಜಾ ಕಾರ್ಯಗಳನ್ನು ಪೂರೈಸಿ ಹೊಲಕ್ಕೆ ತೆರಳುವ ಸ್ವಾಮೀಜಿ ಭೂ ತಾಯಿಯ ಸೇವೆಯನ್ನು ಭಕ್ತಿಯಿಂದ ಮಾಡುತ್ತಾರೆ. ಪೂಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸವೂರ ರಸ್ತೆಯಲ್ಲಿ ಒಟ್ಟು 48 ಎಕರೆ ಹೊಲವನ್ನು ಹೊಂದಿರುವ ಮಠಾಧೀಶರು ಕೊಳವೆ ಬಾವಿ ಕೊರೆಸಿ ಹನಿ ನೀರಾವರಿ ಪದ್ಧತಿಯಲ್ಲಿ ಈವರೆಗೆ ಕಬ್ಬು, ತೆಂಗು, ಬಾಳೆ, ಪಪ್ಪಾಯಿ ಕೃಷಿ ಕೈಗೊಂಡು ಉತ್ತಮ ಲಾಭ ಮಾಡಿಕೊಂಡಿದ್ದಾರೆ. ಸ್ವಂತ ಪರಿಶ್ರಮದಿಂದ ಭೂಮಿಯನ್ನು ಹದಗೊಳಿಸುತ್ತಾರೆ. ಹೊಲ ರಂಟೆ ಹೊಡೆಯುತ್ತಾರೆ, ಹರಗುತ್ತಾರೆ, ಗಿಡಗಳಿಗೆ ಮಡಿಗಳನ್ನೂ ಮಾಡುತ್ತಾರೆ.

ವಿವಿಧ ಬೆಳೆಗಳ ತಾಣ
ಎರಡು ವರ್ಷಗಳಿಂದ ಚಿಕ್ಕು ಬೆಳೆಯುತ್ತಿರುವ ರೇವಣಸಿದ್ಧೇಶ್ವರ ಸ್ವಾಮಿಗಳು 8 ಎಕರೆ ಪ್ರದೇಶದಲ್ಲಿ 30/30 ಅಡಿ ಅಳತೆಯಲ್ಲಿ ಕೊಲ್ಕತ್ತಾದಿಂದ ತರಿಸಿದ ಕ್ರಿಕೆಟ್ ಬಾಲ್ ತಳಿಯ 800 ಚಿಕ್ಕು ಸಸಿಗಳನ್ನು ನಾಟಿ ಮಾಡಿದ್ದಾರೆ. ಅಲ್ಲದೆ ಇದರ ಜೊತೆಗೆ ಎರಡು ಚಿಕ್ಕು ಗಿಡಗಳ ಮಧ್ಯೆ ಅಂತರ ಬೆಳೆಯಾಗಿ ಕೊಲ್ಲತ್ತಾದಿಂದಲೇ ತರಿಸಿದ ಸೀಡ್‌ಲೆಸ್ ಪೇರಲ ಹಣ್ಣುಗಳನ್ನೂ ಬೆಳೆಯುತ್ತಿದ್ದಾರೆ. ಇದಕ್ಕಾಗಿ ಈವರೆಗೆ ಸ್ವಾಮೀಜಿ ಒಂದು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.

ರಾಸಾಯನಿಕ ಗೊಬ್ಬರವನ್ನು ಇವರು ಬಳಸುತ್ತಿಲ್ಲ. ನೈಸರ್ಗಿಕ ಪದ್ಧತಿಯಲ್ಲಿ ಬೆಳೆದಿರುವ ಇವರ ತೋಟದ ಹಣ್ಣುಗಳು ಆಕಾರದಲ್ಲಿ ಬಹಳ ದೊಡ್ಡದಿದ್ದು ತಿನ್ನಲು ಕೂಡ ಬಹಳ ರುಚಿಯಾಗಿವೆ. ಪ್ರತಿ ಟನ್‌ಗೆ 14 ಸಾವಿರ ದರದಂತೆ ಕಳೆದ ವರ್ಷ 5-6 ಟನ್ ಚಿಕ್ಕು ಹಾಗೂ 80 ಸಾವಿರ ರೂಪಾಯಿ ಕಿಮ್ಮತಿನ ಪೇರಲಹಣ್ಣು ಮಾರಾಟ ಮಾಡಿ ಸ್ವಾಮೀಜಿ ಲಾಭ ಗಳಿಸಿದ್ದಾರೆ. ಈ ವರ್ಷವೂ 8-10 ಟನ್ ಚಿಕ್ಕು ಫಸಲು ಬರುವ ನಿರೀಕ್ಷೆ ಇದೆ. `ಚಿಕ್ಕು ಬೆಳೆಸಲು ಒಂದು ಬಾರಿ ಬಂಡವಾಳ ಹಾಕಿದರೆ ಸಾಕು. ಮುಂದಿನ 35 ವರ್ಷಗಳವರೆಗೆ ಅದು ಫಲ ನೀಡುತ್ತಲೇ ಇರುತ್ತದೆ. ಹೀಗಾಗಿ ಚಿಕ್ಕು ಲಾಭದಾಯಕ ಕೃಷಿಯಾಗಿದೆ' ಎಂದು ಅವರು ಖುಷಿಯಿಂದ ಹೇಳುತ್ತಾರೆ. `ಭೂ ತಾಯಿಯನ್ನು ನಂಬಿ ದುಡಿದರೆ ಅವಳು ಎಂದೂ ರೈತರ ಕೈ ಬಿಡುವುದಿಲ್ಲ' ಎಂದು ಹೇಳುತ್ತಾರೆ. ಈಚಿನ ದಿನಗಳಲ್ಲಿ ರೈತರು ಕಷ್ಟಪಟ್ಟು ದುಡಿಯುವುದನ್ನೇ ಮರೆತಿದ್ದಾರೆ. ಹೀಗಾಗಿ ಅಂಥವರಿಗೆ ಒಕ್ಕಲುತನ ಲಾಭವಾಗಿ ಕಾಣುತ್ತಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ.

ಬಳಕೆ ಮಾಡದ ರಾಸಾಯನಿಕ
ಶ್ರೀಗಳು ಮಠದಲ್ಲಿನ ಜಾನುವಾರುಗಳಿಂದ ಪ್ರತಿ ವರ್ಷ 8-10 ಟ್ರ್ಯಾಕ್ಟರ್ ತಿಪ್ಪೆ ಗೊಬ್ಬರ ದೊರೆಯುತ್ತದೆ. ಇನ್ನು ಬೆಳೆಗಳಿಗೆ ಬರುವ ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ರಾಸಾಯನಿಕ ಕ್ರಿಮಿನಾಶಗಳನ್ನು ಬಳಸದೆ ತಾವೇ ಅತೀ ಕಡಿಮೆ ಖರ್ಚಿನಲ್ಲಿ ತಯಾರಿಸಿದ ಔಷಧಗಳನ್ನು ಬಳಸಿ ಪರಿಣಾಮಕಾರಿಯಾಗಿ ರೋಗ ನಿಯಂತ್ರಣ ಮಾಡುತ್ತಾರೆ.

ರೇವಣಸಿದ್ಧೇಶ್ವರ ಸ್ವಾಮೀಜಿ ಎರಡು ವಿಧಾನದಲ್ಲಿ ಕ್ರಿಮಿನಾಶಕ ಔಷಧಗಳನ್ನು ತಯಾರಿಸುತ್ತಾರೆ:
ಮೊದಲ ವಿಧಾನ: ಒಂದು ತಿಂಗಳವರೆಗೆ ದೇಶೀ ಆಕಳ ಮಜ್ಜಿಗೆಯನ್ನು ಸಂಗ್ರಹಿಸಿ ಇಡಬೇಕು. ಒಂದು ತಿಂಗಳ ನಂತರ ಮಜ್ಜಿಗೆ ಚೆನ್ನಾಗಿ ಹುಳಿ ಬರುತ್ತದೆ. ಆಮೇಲೆ 18 ಲೀಟರ್‌ಗೆ ನೀರಿಗೆ ಎರಡು ಲೀಟರ್ ಹುಳಿ ಮಜ್ಜಿಗೆ ಸೇರಿಸಿ ರೋಗ ಪೀಡಿತ ಬೆಳೆಗಳಿಗೆ ಸಿಂಪರಣೆ ಮಾಡಬೇಕು.

ಎರಡನೇ ವಿಧಾನ: ಹಸಿಮೆಣಸಿನಕಾಯಿ ಹಾಗೂ ಬೇವಿನಸೊಪ್ಪನ್ನು ಚೆನ್ನಾಗಿ ಅರೆದು 18 ಲೀಟರ್ ನೀರಿಗೆ 1ಲೀಟರ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಕಿ ಸಿಂಪರಣೆ ಮಾಡಬೇಕು. ಹೀಗೆ ಮಾಡುವುದರಿಂದ ಬೆಳೆಗಳಿಗೆ ಯಾವುದೇ ಕೀಟಬಾಧೆ ಬರುವುದಿಲ್ಲ. ಅಲ್ಲದೆ ರೈತರು ಇದಕ್ಕಾಗಿ ಹೆಚ್ಚು ದುಡ್ಡು ಖರ್ಚು ಮಾಡುವ ಅಗತ್ಯವೂ ಇಲ್ಲ. `ಎಲ್ಲರಂತೆ ಮೊದಲು ನಾವೂ ಕ್ರಿಮಿನಾಶಕಗಳನ್ನೇ ಬಳಸುತ್ತಿದ್ದೆವು. ಒಂದೊಂದು ಸಲ 40-50 ಸಾವಿರ ರೂಪಾಯಿಗಳನ್ನು ಕೇವಲ ಕೀಟಗಳ ಬಾಧೆ ತಡೆಗಟ್ಟಲು ಖರ್ಚು ಮಾಡಬೇಕಾಗುತ್ತಿತ್ತು.

ಆದರೂ ರೋಗ ಹತೋಟಿ ಸರಿಯಾಗಿ ಆಗುತ್ತಿರಲಿಲ್ಲ. ಹೀಗಾಗಿ ಸಾವಯವ ಪದ್ಧತಿಯಲ್ಲಿ ಕ್ರಿಮಿನಾಶಕ ಔಷಧ ತಯಾರಿಸುವ ವಿಧಾನವನ್ನು ತಿಳಿದುಕೊಂಡು ಅದೇ ಮಾದರಿಯಲ್ಲಿ ಔಷಧ ತಯಾರಿಸಿ ಬಳಸುತ್ತಿದ್ದೇವೆ. ಇದರಿಂದಾಗಿ ನಮಗೆ ಸಾಕಷ್ಟು ಹಣದ ಉಳಿತಾಯವಾಗಿದೆ. ಅಲ್ಲದೆ ಇದು ಪರಿಸರಸ್ನೇಹಿ ಔಷಧವಾಗಿದ್ದು ಯಾವುದೇ ಪ್ರಾಣಿ ಪಕ್ಷಿಗಳಿಗೆ ಪ್ರಾಣಾಪಾಯ ಉಂಟು ಮಾಡುವುದಿಲ್ಲ' ಎಂದು ರೇವಣಸಿದ್ಧೇಶ್ವರ ಸ್ವಾಮಿಗಳು ತಿಳಿಸುತ್ತಾರೆ. ಇವರಂತೆಯೇ ಉಳಿದ ಮಠಾಧೀಶರು ಕೃಷಿ ಕಾಯಕದಲ್ಲಿ ತೊಡಗಿದರೆ ಅವರು ಇತರೇ ರೈತರಿಗೆ ಮಾದರಿಯಾಗಬಲ್ಲರು. ಸಂಪರ್ಕಕ್ಕೆ- 94480 27458.
-ನಾಗರಾಜ ಎಸ್.ಎಚ್.

ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ
ಕೃಷಿಕರಿಗಾಗಿ `ಕರ್ನಾಟಕ ದರ್ಶನ' ಮುಂದಿನ ವಾರದಿಂದ ಪುನಃ `ಕೃಷಿ ಮಂಥನ' ಅಂಕಣ ಆರಂಭಿಸಲಿದೆ. ಕೃಷಿಗೆ ಸಂಬಂಧಿಸಿದಂತೆ ರೈತರ ಪ್ರಶ್ನೆಗಳಿಗೆ ಪ್ರಸಿದ್ಧ ಸಾವಯವ ಕೃಷಿಕ ಎಲ್. ನಾರಾಯಣ ರೆಡ್ಡಿ ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು ಸಂಪಾದಕರು, ಕೃಷಿ ಮಂಥನ, ಕರ್ನಾಟಕ ದರ್ಶನ ವಿಭಾಗ, ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ, ಬೆಂಗಳೂರು-01 ಈ ವಿಳಾಸಕ್ಕೆ ಅಥವಾ darshana@prajavani.co.in ಇ-ಮೇಲ್‌ಗೆ ಕಳುಹಿಸಬಹುದು. ಇ-ಮೇಲ್ ಮೂಲಕ ಪ್ರಶ್ನೆಗಳನ್ನು ನುಡಿ ಅಥವಾ ಬರಹದಲ್ಲಿ ಮಾತ್ರ ಕಳುಹಿಸಬೇಕು. 

ಹೆಚ್ಚಿನ ಮಾಹಿತಿಗೆ ದೂರವಾಣಿ 080 25880616.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT