ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಾಧೀಶರಿಗೆ ಪೀಠದ ವ್ಯಾಮೋಹ ಸಲ್ಲದು

ತ್ರಿನೇತ್ರ ಶ್ರೀಗಳ 16ನೇ ಪಟ್ಟಾಧಿಕಾರ ಮಹೋತ್ಸವದಲ್ಲಿ ಸೋಮಶೇಖರ ಸ್ವಾಮೀಜಿ ಸಂದೇಶ
Last Updated 29 ಜನವರಿ 2015, 6:05 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮಠಾಧೀಶರು ಸಮಾಜಮುಖಿ ಕಾರ್ಯವನ್ನು ಬದಿಗೊತ್ತಿ ಪೀಠಕ್ಕೆ ಅಂಟಿ ಕೂರಬಾರದು ಎಂದು ಹಾಸನ ಜಿಲ್ಲೆ ಹಳೇಬೀಡು ಪುಷ್ಪಗಿರಿ ಸಂಸ್ಥಾನ ಮಠದ ಸೋಮಶೇಖರ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದಲ್ಲಿ ಬುಧವಾರ ನಡೆದ ಬೇಬಿ ಮಠದ ಪೀಠಾಧ್ಯಕ್ಷರಾದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರ 16ನೇ ಪಟ್ಟಾಧಿಕಾರ ಮಹೋತ್ಸವ ಹಾಗೂ ಮರಿದೇವರು ಶಿವಯೋಗಿ ಸ್ವಾಮೀಜಿ ಅವರ 121ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೆಲವು ಮಠಾಧೀಶರು ಪೀಠಕ್ಕಾಗಿ ಶೀತಲ ಸಮರದಲ್ಲಿ ತೊಡಗಿದ್ದಾರೆ. ನನ್ನದು ತನ್ನದೆಂದು ಬಹಿರಂಗವಗಾಗಿ ಗುದ್ದಾಡುತ್ತಿದ್ದಾರೆ. ಇದು ತಲೆ ತಗ್ಗಿಸುವ ವಿಚಾರ. ಸರ್ವಸಂಗ ಪರಿತ್ಯಾಗಿಗಳೆಂದು ಹೇಳಿಕೊಳ್ಳುವವರು ಹೀಗೆ ಅಧಿಕಾರಕ್ಕಾಗಿ ಹಪಹಪಿಸುವುದು ಸರಿಯಲ್ಲ.

ನನ್ನದು, ತನ್ನದೆಂಬ ಸ್ವಾರ್ಥ ಇರುವವರು ಮಠಾಧೀಶರ ಸ್ಥಾನಕ್ಕೆ ಯೋಗ್ಯರಲ್ಲ. ಸೇವೆಯೇ ಪರಮ ಗುರಿ ಎಂಬ ಭಾವನೆಯಿಂದ ಕೆಲಸ ಮಾಡಿದರೆ ಮಾತ್ರ ಮಠ ಮತ್ತು ಮಠಾಧೀಶರಿಗೆ ಶೋಭೆ ಬರುತ್ತದೆ. ಜಾತಿ, ವರ್ಗ ಮತ್ತು ಧರ್ಮದ ವಿಷಯದಲ್ಲಿ ವೈಷಮ್ಯ ಹರಡುವವರ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದರು.

ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮಠಗಳ ಮೇಲೆ ನಿಯಂತ್ರಣ ಸಾಧಿಸಲು ಯಾರೂ ಪ್ರಯತ್ನಿಸಬಾರದು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಠಗಳು ಉತ್ತಮ ಸೇವೆ ಸಲ್ಲಿಸುತ್ತಿವೆ. ಹಸಿದವರಿಗೆ ಅನ್ನ ಹಾಕುತ್ತಿವೆ. ಒಳಿತು, ಕೆಡಕುಗಳ ಬಗ್ಗೆ ಅರಿವು ಮೂಡಿಸುತ್ತಿವೆ. ಇಂತಹ ಮತ್ಕಾರ್ಯದಲ್ಲಿ ತೊಡಗಿರುವ ಮಠಗಳ ಬಗ್ಗೆ ಗೌರವ ತೋರಬೇಕು. ಮಠ ಸಂಸ್ಕೃತಿಯನ್ನು ನಾಶ ಮಾಡಲು ಹೊರಟರೆ ಅದರಲ್ಲಿ ಯಾರೂ ಯಶಸ್ವಿಯಾಗುವುದಿಲ್ಲ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕೊಂಡಾಡಿದರು. ಶಿವಮೊಗ್ಗದ ಆನಂದಪುರಂ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರಕಲಗೂಡು ಜಯದೇವ ಸ್ವಾಮೀಜಿ, ಕುಂಭಕೋಣಂ ಸ್ವಾಮೀಜಿ ಇತರರು ಮಾತನಾಡಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ತ್ರಿನೇತ್ರ ಸ್ವಾಮೀಜಿ ಅವರಿಗೆ ನಾಣ್ಯ ಮತ್ತು ನವಧಾನ್ಯಗಳಿಂದ ತುಲಾಭಾರ ನೆರವೇರಿಸಿದರು. ಆನೇಕಲ್‌ ತಾಲ್ಲೂಕು ಹಿನಕ್ಕಿಯ ಕೃಷ್ಣಾಚಾರ್‌ ಮತ್ತು ದಂಪತಿ ಸ್ವಾಮೀಜಿಗೆ ಬೆಳ್ಳಿ ಕಿರೀಟ ತೊಡಗಿಸಿ ಅಭಿನಂದಿಸಿದರು. ಶಾಸಕ ಜಿ.ಟಿ. ದೇವೇಗೌಡ ಮಂಡಲ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ. ಅಜಯ್‌ ನಾಗಭೂಷಣ ಅವರು ಡಿಎಂಎಸ್‌ ಲಲಿತಕಲಾ ಮಹಾ ವಿದ್ಯಾಲಯದ ಕಲಾ ಗ್ಯಾಲರಿಯನ್ನು ಉದ್ಘಾಟಿಸಿದರು. ಕೆಪಿಎಸ್‌ಸಿ ಸದಸ್ಯ ದಯಾಂಶಕರ್‌, ಮೈಸೂರು ನಗರಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್‌, ಐಎಫ್‌ಎಸ್‌ ಅಧಿಕಾರಿ ಪುಟ್ಟಬುದ್ದಿ, ರಾಜೀವ್‌ಗಾಂಧಿ ರೂರಲ್‌ ಹೌಸಿಂಗ್‌ ಕಾರ್ಪೊರೇಷನ್‌ ಜನರಲ್‌ ಮ್ಯಾನೇಜರ್‌ ಮಹದೇವ ಪ್ರಸಾದ್‌, ಚಂದ್ರವನ ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್‌ ಇದ್ದರು. ಗಣೇಶ್‌ರಾವ್‌ ಕುಲಕರ್ಣಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT