ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠ ವ್ಯವಸ್ಥೆಯೂ... ಸುಧಾರಣೆಯೂ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಒಂದು ಸಮಾರಂಭದಲ್ಲಿ ಮಠಗಳ ಕುರಿತು ಚರ್ಚೆ ನಡೆದಿ­ರುವುದು ಸ್ವಾಗತಾರ್ಹ. ಕೆಲವರು ಅಭಿಪ್ರಾಯ­ಪಟ್ಟಂತೆ ಜಾತ್ರೆಗಳನ್ನು ಮಾಡುವ ಮಠಗಳು ಇವೆ, ಜಾತಿ ಸಂಘಟನೆಯಲ್ಲಿ ತೊಡಗಿರುವ ಮಠ­ಗಳು ಕಾಣಸಿಗುತ್ತವೆ. ರಾಜಕಾರಣ ಕೇಂದ್ರಿ­ತ­ವಾ­ದವುಗಳೂ ಗೋಚರಿಸುತ್ತಿವೆ. ಮೌಢ್ಯತೆ ಬಿತ್ತುವ ಕೇಂದ್ರಗಳು ಎಲ್ಲೆಡೆ ಇವೆ. ಅವುಗಳ ನಡುವೆ ಸಮ­ಕಾಲೀನ ಸಮಸ್ಯೆಗಳನ್ನು ಎತ್ತಿ­ಕೊಂಡು, ಅವು­ಗಳ ಪರಿಹಾರಕ್ಕೆ ಪ್ರಯತ್ನ ಮಾಡುವ ಮಠಗಳು ಕಾಣಬರುತ್ತಿವೆ.  ಮಠಗಳು ಪ್ರಾಚೀನ; ಅವುಗಳಿಗೆ ಸಂಬಂಧಿಸಿದ ಚರ್ಚೆಗಳು ನಿರಂತರ. ಮಠ ವ್ಯವ­ಸ್ಥೆಯನ್ನು ಸುಧಾರಿಸಲು ಹಾರ್ದಿಕವಾದ ಸಮಾ­ಲೋಚನೆಗಳು ನಡೆಯ­ಬೇಕಾ­ಗುತ್ತದೆ. ಉತ್ತಮ­ವಾದ ಸಲಹೆ­ಗಳು ಯಾವೊ­ತ್ತಿಗೂ ಸ್ವಾಗತಾರ್ಹ. ಮಠಗಳು ವ್ಯಾಪಾ­ರೀಕರಣಕ್ಕೆ ಒಳಗಾಗುತ್ತಿವೆ ಎಂಬ ಗಂಭೀರ­ವಾದ ಆರೋಪ ಕೇಳಿಬರುತ್ತಿದೆ. ವ್ಯಾಪಾರೀಕರಣ ಎಂಬುದನ್ನು ಯಾವ ನೆಲೆಯಲ್ಲಿ ಅರ್ಥೈಸಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ಬೇಕಾಗುತ್ತದೆ.

ಮಠಗಳ ದೈನಂದಿನ ನಿರ್ವಹಣೆಗೆ ಸರ್ಕಾರದಿಂದಾಗಲಿ, ಇತರ ಸಂಘ-ಸಂಸ್ಥೆಯಿಂದಾಗಲಿ ಸಹಕಾರ ಸಿಗುವುದಿಲ್ಲ. ಕಾರಣ ಸಾವಿರಾರು ನೌಕರರಿಗೆ ವೇತನ, ಇತ್ಯಾದಿ­ಗಳ ವ್ಯವಸ್ಥೆಯನ್ನು ರೂಪಿಸುವಲ್ಲಿ ತಮ್ಮದೇ ಆದ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಬೇ­ಕಾಗುತ್ತದೆ. ವಿವಿಧ ಶುಲ್ಕಗಳಿಂದ ವಸೂಲಾದ ಹಣವನ್ನು ಅದೇ ಸಂಸ್ಥೆಯ ನಿರ್ವಹಣೆಗೆ ಬಳಸಲಾಗುತ್ತದೆ. ಹಾಗೆ ನೋಡಿದರೆ ದೊಡ್ಡ­ಪ್ರಮಾಣದಲ್ಲಿ ಸಂಸ್ಥೆಗಳನ್ನು ನಡೆಸುತ್ತಿರುವ ಎಲ್ಲ ಸಂಸ್ಥೆಗಳು ಸಾಲದಲ್ಲಿವೆ. ಬಡ್ಡಿಯನ್ನು ತುಂಬ­ದಿದ್ದರೆ, ಸಂಸ್ಥೆಯು ತೊಂದರೆಯನ್ನು ತಂದು­ಕೊಳ್ಳುತ್ತದೆ. ಈ ಸಂಬಂಧ ಯಾರೂ ಬಂದು, ಮಠಗಳು ಎದುರಿಸುತ್ತಿರುವ ಸಮಸ್ಯೆ­ಗಳನ್ನು ನಿವಾರಿಸುವಲ್ಲಿ ಸಹಕಾರ ನೀಡುವುದಿಲ್ಲ.

ಕೆಲವರು ಮಠಗಳನ್ನು ಟೀಕಿಸುವಲ್ಲಿ ಹೆಚ್ಚಿನ ಆಕ್ರೋಶ ವ್ಯಕ್ತಪಡಿಸಬಹುದಷ್ಟೇ. ಮಠ ವ್ಯವಸ್ಥೆ­ಯನ್ನು ಟೀಕಿಸುವವರು ವ್ಯಾಪಾರೀಕರಣ ಇಲ್ಲದ ಸಂಸ್ಥೆಯನ್ನು ನಡೆಸಿ, ತೋರಿಸಲಿ. ಯಾವುದಾ­ದ­ರೊಂದು ಸಮಸ್ಯೆಯನ್ನು ಎತ್ತಿ­ಕೊಂಡು ಪರಿ­ಹಾರಕ್ಕೆ ಮುಂದಾಗಲಿ. ಒಂದು ಅಂಶ­ವನ್ನು ಇಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ. ಮಠಗಳು ನಡೆಸುವ ಸಂಸ್ಥೆ­ಗಳಲ್ಲಿನ ಶಿಸ್ತು, ಪ್ರಾಮಾಣಿಕತೆ, ಗುಣ­ಮಟ್ಟ, ಪಾರದರ್ಶಕತೆ ಇತ್ಯಾದಿಗಳನ್ನು ಕುರಿತು ಪರಾಮರ್ಶೆ ನಡೆಯಲಿ. ಅದರಂತೆ ಸರ್ಕಾರ ನಡೆಸುತ್ತಿರುವ ಸಂಸ್ಥೆಗಳಲ್ಲಿನ ವ್ಯವಸ್ಥೆ ಮತ್ತು ಪಾರದರ್ಶಕತೆಯನ್ನು ಕುರಿತು ಚರ್ಚೆ ನಡೆ­ಯಲಿ. ಹಾಗೆಂದು ನಾನು ಖಾಸಗೀಕ­ರಣಕ್ಕೆ ಒತ್ತಾಸೆ ನೀಡುತ್ತೇನೆಂದು ಭಾವಿಸ­ಬಾರದು. ಈ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ­ವನ್ನು ನೀಡಬಹುದಾಗಿದೆ. ಎಲ್ಲಿ ಒಳ್ಳೆಯ­ದಿದ್ದರೂ ಅದನ್ನು ಸ್ವೀಕರಿಸೋಣ.

ಮಠಗಳು ನಡೆಸುವ ಸಂಸ್ಥೆಗಳಲ್ಲಿ ಖುದ್ದು ಪರಿಶೀಲನೆ ಮತ್ತು ನಿರ್ವಹಣೆ ಮಾಡುವ ವ್ಯವಸ್ಥೆ ಇರುತ್ತದೆ. ನಮ್ಮ ಸಂಸ್ಥೆಯು ಇತ್ತೀಚೆಗೆ ಎಸ್‌ಎಸ್‌­ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿ­ಗಳಲ್ಲಿ ಕಡಿಮೆ ಸ್ಮರಣಶಕ್ತಿಯ ವಿದ್ಯಾರ್ಥಿಗಳನ್ನು ಶ್ರೀಮಠಕ್ಕೆ ಕರೆಸಿಕೊಂಡು, ಅವರಿಗೆಲ್ಲ ಹತ್ತು ದಿನಗಳ ಕಾಲ ವಿಶೇಷವಾದ ಬೋಧನೆ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು. ಭಾಗವಹಿಸಿ­ದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ರಾಜ್ಯದಾದ್ಯಂತ ವಿಸ್ತರಿಸುವ ಆಲೋಚನೆಯಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿ ಆಂದೋಲನ ನಡೆಸಲಾಯಿತು. ಪರಿಸರ ಪ್ರೀತಿಯನ್ನು ತೋರಿಸಲು, ಪ್ರತಿ ಸಮಾರಂಭ­ದಲ್ಲೂ ಗಿಡಗಳಿಗೆ ನೀರೆರೆಯುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ವಚನ ಕಮ್ಮಟ ಮೂಲಕ ಪ್ರತಿವರ್ಷ ಸುಮಾರು ಐವತ್ತು ಸಾವಿರ ವಿದ್ಯಾ­ರ್ಥಿಗಳಿಗೆ ಅರಿವನ್ನು ನೀಡಲಾಗುತ್ತಿದೆ. ಸಾಮೂ­ಹಿಕ ವಿವಾಹ, ಅಂತರ್ಜಾತಿ ವಿವಾಹ, ಅನಾಥಾ­ಶ್ರಮ, ನಿತ್ಯದಾಸೋಹ, ವೃದ್ಧಾಶ್ರಮ, ಆಸ್ಪತ್ರೆ­ಗಳು, ಶೈಕ್ಷಣಿಕ ಸಂಸ್ಥೆಗಳು, ನಾಟಕ, ಸಂಗೀತ, ನೃತ್ಯ ಶಾಲೆಗಳನ್ನು ನಡೆಸುತ್ತ ಸಮಾಜಸೇವೆಗೆ ಒತ್ತಾಸೆಯನ್ನು ನೀಡಲಾಗುತ್ತಿದೆ.

ಕೆಲವೊಂದು ನ್ಯೂನತೆಗಳು ಇರಬಹುದು. ಅವನ್ನು ಹಂತಹಂತವಾಗಿ ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ಆದರೆ ಇಡೀ ವ್ಯವಸ್ಥೆಯು ಕೆಟ್ಟಿದೆಯೆಂದು ದೋಷಾರೋಪಣೆ ಮಾಡುವುದು ಕುಹಕತನವಲ್ಲದೆ ಮತ್ತೇನು? ಶಿಕ್ಷಣ ಮತ್ತು ಆಧ್ಯಾತ್ಮಿಕ ಸಮಾನತೆ ಸಾಧಿಸ­ಬೇಕಾದ ಮಠಗಳು ರಾಜಕಾರಣ ಹಾಗೂ ಸಂಪತ್ತಿನ ಕ್ರೋಡೀಕರಣದೊಂದಿಗೆ ಜನವಿರೋಧಿ­ಯಾದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸ­ಬೇಕಾಗುತ್ತದೆ. ನಾನು ಮೊದಲಿನಿಂದಲೂ ಈ ಬಗ್ಗೆ ಪ್ರತಿಪಾದಿಸುತ್ತ ಬಂದಿದ್ದೇನೆ. ಇಂಥ ಸಮ­ಸ್ಯೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ, ಮಠ ಪರಂಪ­ರೆಯು ಅನಾಹುತಕ್ಕೆ ಆಹ್ವಾನ ಕೊಟ್ಟಂತಾ­ಗುತ್ತದೆ. ಮಠಗಳು ಜಾತಿಗೆ ಸಂಬಂಧಿಸಿದ­ವು­ಗಳಾಗಿದ್ದು, ಅವು ಜಾತಿಯನ್ನು ಮೀರಿ ಬೆಳೆಯ­ಬೇಕಾಗಿದೆ ಎಂಬ ಸಲಹೆಯನ್ನು ಒಪ್ಪಿಕೊಳ್ಳ­ಬೇಕಾಗುತ್ತದೆ. ಕುಲಕ್ಕೊಬ್ಬ ಕಾವಿಧಾರಿ ವಿಚಾರ­ವನ್ನು ಕುರಿತು ಕಳೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಬಹಿ­ರಂಗ ಸಭೆಯನ್ನು ನಡೆಸಲಾಯಿತು. ಯಾರು ಟೀಕಿಸುತ್ತಿದ್ದರೋ, ಅವರನ್ನೇ ಆಮಂತ್ರಿಸಿ­ದಾಗ, ಅವರು ಭಾಗವಹಿಸಲು ಒಪ್ಪಲಿಲ್ಲ.

ಜಾತಿ ವ್ಯವಸ್ಥೆ ವಿರೋಧಿಸುವ ಮತ್ತು ವಿನಾಶ­ಗೊಳಿಸುವ ಆಶಯದ ಮೀರಸಾಬಿಹಳ್ಳಿ ಶಿವಣ್ಣ­ನಂ­ಥವರು ಸ್ವವಿಮರ್ಶೆ ಮಾಡಿ­ಕೊಳ್ಳುವುದು ಒಳ್ಳೆಯದು. ಜಾತಿ ವ್ಯವಸ್ಥೆ ಕುರಿತು ಮಾತನಾ­ಡುವವರು, ಜಾತಿ ವ್ಯವಸ್ಥೆಯಿಂದ ಹೊರಗೆ ಬಂದಿದ್ದಾರೆಯೆ?

ಸರ್ಕಾರಿ ಅನುದಾನ ಬಿಡುಗಡೆ ಆಗುವು­ದ­ಕ್ಕಿಂತ ಮುನ್ನ ಜಾತಿ ಸಂಘಟನೆ ಮತ್ತು ಜನಾಂಗ ಜಾಗೃತಿಯಲ್ಲಿ ಸಾಧಕರು ತೊಡಗಿದ್ದರು. ಆಮಿಷ­ಗಳಿಗೆ ಅವಲಂಬಿಸುತ್ತ ಹೋದಂತೆ ಕೆಲವು ಸಾಧ­ಕರ ವಿಚಾರ ಮತ್ತು ವರ್ತನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾದವು. ತಮಗೆ ಸರ್ಕಾರವನ್ನು ನಿಯಂ­ತ್ರಿಸುವ ಶಕ್ತಿ ಇದೆ ಎಂದು  ಭ್ರಮಿಸ­ಲಾ­ಯಿತು. ೫-೬ ಜನ ಸ್ವಾಮಿ­ಗ­ಳನ್ನು ಸೇರಿಸಿ­ಕೊಂಡು ಸರ್ಕಾರಕ್ಕೆ ಬ್ಲ್ಯಾಕ್‌-­ಮೇಲ್ ಮಾಡುವ ತಂತ್ರ­ಗಳನ್ನು ರೂಪಿಸ­ಲಾ­ಯಿತು. ಇವರು ಸರ್ಕಾರ­­­ವನ್ನು ನಿಯಂತ್ರಿ­ಸುವ ಮಟ್ಟಕ್ಕೆ ಹೋದದ್ದು ದುರದೃಷ್ಟಕರ. 

ಈ ನಿಟ್ಟಿನಲ್ಲಿ ಕಪ್ಪು­ಹಣ ಮತ್ತು ರಾಜಕಾರಣ ಎರಡೂ ಅಪಾಯ­ವೆಂದು ಅರಿಯ­ಬೇಕಾಗಿದೆ. ವಿವೇಕ ಮತ್ತು ವಿವೇಚನೆ­ ಕಳೆದು­­ಕೊಂ­ಡಾಗ ಹಣ ಆಧಾರಿತ ಮತ್ತು ಅಧಿಕಾರ­­ಕೇಂದ್ರಿತ ವ್ಯವಸ್ಥೆ­ಯೊಂದಿಗೆ ಹೋಗುವ ಸ್ಥಿತಿ­ಯನ್ನು ತಂದು­ಕೊಳ್ಳಲಾಗುತ್ತದೆ. ತಮಗೆ ತಾವೇ ಅಸಹಾಯ­ಕತೆಯನ್ನು ತಂದು­ಕೊಳ್ಳುವ ದುಃಸ್ಥಿತಿ. ಸರ್ಕಾರ ಕೂಡ ಇಂಥವರಿಗೆ ನಿವೇಶನ ಮತ್ತು ಅನುದಾನ ನೀಡುತ್ತ ಸಮಾ­ಧಾನಪಡಿಸುವ ವಿಧಾನವನ್ನು ಅನುಸರಿ­ಸುತ್ತದೆ. ಅನುದಾನದಿಂದ ಮಠ ವ್ಯವಸ್ಥೆಯು ಮತ್ತಷ್ಟು ಚಲನಶೀಲತೆಗೆ ಒಳಗಾಗ­ಬೇಕಿತ್ತು. ಸರ್ಕಾರ ಅನುದಾನವನ್ನು ಕೊಟ್ಟು, ಮಠ­ಗಳನ್ನು ರಾಜ­ಕಾರಣಕ್ಕೆ ಬಳಸಿ­ಕೊಳ್ಳುವ ಅನಪೇಕ್ಷಿತ ವಿದ್ಯ­ಮಾನ, ರಾಜಕಾರ­ಣಿ­ಗಳ ಕೈಗೊಂಬೆಯಾಗಿ ಕುಣಿ­ಯುವ ಧಾರ್ಮಿಕರು ಈ ಎರಡೂ ಅನಾ­ರೋಗ್ಯಕರವೇ.

ಡಾ.ಎಲ್. ಹನುಮಂತಯ್ಯನವರ ಟೀಕೆ­ಯಲ್ಲಿ ಸತ್ಯವಿದೆ. ಅವರ ಟೀಕೆಯನ್ನು ಮಠ ವ್ಯವಸ್ಥೆಯು ಒಪ್ಪಿಕೊಂಡು, ಸಂಘಟನೆ, ಆಧ್ಯಾ­ತ್ಮಿಕ ಸಮಾನತೆ, ಶಿಕ್ಷಣದ ಕಡೆಗೆ ಒತ್ತು ನೀಡಬೇಕಾಗಿದೆ. ಸರ್ಕಾರವು ತಳಮೂಲದ ಮಠಗಳಿಗೆ ಅನುದಾನವನ್ನು ನೀಡಲಿ; ರಾಜಕಾರ­ಣದ ದಾಳಗಳಿಂದ ದೂರವಿದ್ದು,  ಆ ಮಠಗಳು ತಮ್ಮ ಬದ್ಧತೆಯನ್ನು ಕಾಪಾಡಿಕೊಳ್ಳಲಿ. ತಮ್ಮ ಎಂದಿನ ಹಾಸ್ಯದ ಜಾಡಿನಲ್ಲಿ ವಿಚಾರ ಸರಣಿ­ಯನ್ನು ಹರಿಯಬಿಟ್ಟಿರುವ ಚಂಪಾ ಅವರು, ಮಠಗಳು ಹೇಗೆ ಪರಿವರ್ತನೆ ಆಗಬೇಕೆಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಪರಿಗಣಿಸಬಹುದಾದಲ್ಲಿ ಯಾವ ಸಾಹಿತಿಗಳನ್ನು ಯಾವ ಪಕ್ಷದ ವತಿಯಿಂದ ಚುನಾವಣೆಗೆ ನಿಲ್ಲಿಸಿ, ಅವರನ್ನು ಗೆಲ್ಲಿಸಿ, ಅವರಿಗೆ ಯಾವ ಸಚಿವ ಸ್ಥಾನ ಸಿಗಬೇಕೆಂಬುದರ ಬಗ್ಗೆಯೂ ಯೋಚಿಸಬೇಕಾ­ಗುತ್ತದೆ. ಏಕಪಕ್ಷೀಯ ಟೀಕೆಗಳು ಸಮತೋಲನ ಕಾಯ್ದುಕೊಳ್ಳುವುದಿಲ್ಲ.

ಸಾಹಿತಿಗಳು ಮತ್ತು ಸ್ವಾಮಿಗಳನ್ನು ಕೂಡಿಸಿಕೊಂಡು ಸಂವಾದ ಮಾಡಿದ್ದರೆ ಒಳ್ಳೆಯದಿತ್ತು. ವಿಚಾರವಂತರು ಎತ್ತುವ ಪ್ರಶ್ನೆಗಳಿಗೆ ಸ್ವಾಮಿಗಳಿಂದ ಉತ್ತರವನ್ನು ನಿರೀಕ್ಷಿಸ­ಬಹುದು. ಮೊನ್ನೆ ನಡೆದ ವಿಚಾರ­ಸಂಕಿರಣ ಯಾವ ವಿಚಾರವನ್ನು ಆಧರಿಸಿ ನಡೆ­ಯಿತೋ ತಿಳಿಯದು. ಆಸಕ್ತ ಮಠಾಧೀಶರನ್ನು ಆಮಂತ್ರಿಸಿದ್ದರೆ ಚರ್ಚೆಗೆ ಮಹತ್ವ ಬರುತ್ತಿತ್ತು. ಉತ್ತಮ ಕಾರ್ಯಗಳಿಗೆ ಮತ್ತೆ ಮತ್ತೆ ಟೀಕೆಗಳು ಕೇಳಿಬರುವುದರಿಂದ ಅವು ಮತ್ತಷ್ಟು ಭದ್ರ ಆಗುತ್ತವೆ. ಜನವಿರೋಧಿ ಹಾಗೂ ಜೀವ­ವಿರೋಧಿ ಆಗಿರುವ ಮಠಗಳು ಬೇಡ. ಜೀವ­ಪರವಾದ ಮತ್ತು ಜನಪರವಾದ ಮಠಗಳು ಬೇಕು. ಈ ಬಗ್ಗೆ ಚಿಂತನೆ ನಡೆಯಲಿ; ಚರ್ಚೆ ಮುಂದುವರಿಯಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT