ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಕಟ್ಟಿನ ಸ್ಪರ್ಶಮಣಿ ‘ಸ್ಮಾರ್ಟ್‌ವಾಚ್’

Last Updated 24 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಗ್ಯಾಜೆಟ್‌ ಲೋಕದಲ್ಲಿ ಇತ್ತೀಚೆಗೆ ಸ್ಮಾರ್ಟ್‌ವಾಚ್‌ಗಳು ಅವತರಿಸಿವೆ. ಐಫೋನ್‌ ಮೂಲಕ ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ಶಿಖರಕ್ಕೇರಿರುವ ಆ್ಯಪಲ್‌ ಕಂಪೆನಿಯೂ ತೀವ್ರ ಆಸಕ್ತಿ ತೋರಿದ್ದರ ಫಲವಾಗಿ ಆಕರ್ಷಕ ಸ್ಮಾರ್ಟ್‌ವಾಚ್‌ ಏಪ್ರಿಲ್‌ 10ರಂದು ವಿವಿಧ ದೇಶಗಳ ಮಾರುಕಟ್ಟೆ ಪ್ರವೇಶಿಸುತ್ತಿದೆ. ಆ್ಯಪಲ್‌ನ ಈ ಚತುರ ಗಡಿಯಾರದಲ್ಲಿ ಏನೇನೆಲ್ಲ ಇದೆ... ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಸಮಯದ ಜತೆಗೆ ದಿನಾಂಕವನ್ನು ತಿಳಿದುಕೊಳ್ಳಲು ನಾವೆಲ್ಲ ಮಣಿಕಟ್ಟಿಗೆ ಪುಟ್ಟ ಗಡಿಯಾರ  ಕಟ್ಟಿಕೊಳ್ಳುತ್ತೇವೆ.  ಆದರೆ, ಅದೇ ವಾಚ್‌ನಿಂದ ನಮ್ಮ ಮೊಬೈಲ್‌ಗೆ ಬರುವ ಕರೆಗಳನ್ನು ಸ್ವೀಕರಿಸಲು, ಕರೆ ಬಂದ ನಂಬರ್‌ಗೆ ಸಂದೇಶ ಕಳುಹಿಸಲು, ಆರೋಗ್ಯದ ಮೇಲೆ ನಿಗಾ ಇಡಲು ಹಾಗೂ ದೇಹದ ಫಿಟ್‌ನೆಸ್ ಕುರಿತು ಗಮನಹರಿಸಲು ಸಾಧ್ಯವಾಗುವಂತಿದ್ದರೆ?

ಇದೇನಿದು, ಸ್ಮಾರ್ಟ್‌ಫೋನ್‌ ಲಕ್ಷಣಗಳು ವಾಚ್‌ನಲ್ಲಿರಲು ಸಾಧ್ಯವೇ?
ಜೇಮ್ಸ್‌ ಬಾಂಡ್‌ ಹಾಗೂ ಇನ್ನಿತರ ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಸಿನಿಮಾಗಳಲ್ಲಿ ಮಾತ್ರವೇ ಅಂತಹ ಸ್ಮಾರ್ಟ್‌ವಾಚ್‌ಗಳನ್ನು ಕಣ್ತುಂಬಿಕೊಳ್ಳಬಹುದೇ ಹೊರತು, ಸ್ವತಃ ಧರಿಸಿ ಅಲ್ಲ ಎಂದು  ಮನಸ್ಸಿನಲ್ಲಿ ಅನ್ನಿಸಬಹುದು.
ಆದರೆ, ಇಂತಹದ್ದೊಂದು ಅಸಾಧ್ಯವೆನ್ನಬಹುದಾದ ದೂರದ ಆಲೋಚನೆ­ಯನ್ನು ಬದಲಿಸಿಕೊಳ್ಳಬೇಕಾದ ಸಮಯ ಬಂದಿದೆ. ಅಂತಹದ್ದೊಂದು ಸ್ಮಾರ್ಟ್‌ ತಂತ್ರಜ್ಞಾನದ ಸ್ಮಾರ್ಟ್‌ವಾಚನ್ನು ಆ್ಯಪಲ್ ಕಂಪೆನಿ ಅಭಿವೃದ್ಧಿಪಡಿಸಿದೆ.

ಜಾಗತಿಕ ಮಾರುಕಟ್ಟೆಗೆ ಸದ್ಯದಲ್ಲೇ ಈ ಸ್ಮಾರ್ಟ್‌ವಾಚ್  ಪರಿಚಯಿಸುವ ಕುರಿತು ಇತ್ತೀಚೆಗಷ್ಟೆ ಹೇಳಿಕೊಂಡಿದ್ದ ‘ಆ್ಯಪಲ್’, ಅದಕ್ಕಾಗಿ ಏಪ್ರಿಲ್‌ 24ರಂದು ಮುಹೂರ್ತ ನಿಗದಿಪಡಿಸಿದೆ. ಇದಕ್ಕೂ ಮುಂಚೆ ವಿಶ್ವದ ಪ್ರಮುಖ ಒಂಬತ್ತು ದೇಶಗಳಲ್ಲಿ ಏಪ್ರಿಲ್ 10ರಿಂದಲೇ ಮುಂಗಡ ಬುಕಿಂಗ್ ಆರಂಭಗೊಳ್ಳಲಿದೆ. 

ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ಸ್ಮಾರ್ಟ್‌ವಾಚ್‌ನ ಪ್ರಾತ್ಯಕ್ಷಿಕೆಯನ್ನು ಕಂಪೆನಿ ಇತ್ತೀಚೆಗೆ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆಸಿತ್ತು.

ಆಗ ಸ್ಮಾರ್ಟ್‌ವಾಚ್ ಕುರಿತು ಕೆಲ ವಿಷಯಗಳನ್ನು ಹಂಚಿಕೊಂಡ ಆ್ಯಪಲ್‌ ಕಂಪೆನಿ ‘ಸಿಇಒ’ ಟಿಮ್‌ಕುಕ್, ‘ನಿಮ್ಮ ಕೈಗಳ ಮಣಿಕಟ್ಟನ್ನು ಅಲಂಕರಿಸಲಿರುವ ಈ ಸ್ಮಾರ್ಟ್‌ವಾಚ್ ನಿಮ್ಮ ಅಗತ್ಯಗಳನ್ನೆಲ್ಲಾ ಕ್ಷಣ ಮಾತ್ರದಲ್ಲಿ ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ವರ್ತಿಸುವ ಒಬ್ಬ ಚತುರು ಮಿತ್ರನಿದ್ದಂತೆ. ಇದುವರೆಗೂ ನಾವು ತಯಾರಿಸಿದ ಸ್ಮಾರ್ಟ್‌ ಉತ್ಪನ್ನಗಳಲ್ಲೇ ಇದು ಗ್ರಾಹಕರಿಗೆ ಬಹಳ ಆಪ್ತ ಎನಿಸಬಲ್ಲ ಬಹುಪಯೋಗಿ ಸಾಧನ’ ಎಂದಿದ್ದಾರೆ.

ವಾಚ್‌ನಲ್ಲೇ ಕರೆ ಸ್ವೀಕಾರ, ಸಂದೇಶ ರವಾನೆ
‘ಇನ್ನು ಮುಂದೆ ಮೊಬೈಲ್‌ ನಿಮ್ಮ ಜೇಬಿನಲ್ಲಿರುವುದಿಲ್ಲ. ಮಣಿಕಟ್ಟಿನಲ್ಲಿರುವ ವಾಚ್‌ನಲ್ಲಿಯೇ ಅಡಗಿರುತ್ತದೆ’ ಎಂದು ಸ್ಮಾರ್ಟ್‌ ವಾಚ್‌ ಫೀಚರ್‌ಗಳನ್ನು ಒಳಗೊಂಡಿರುವ ಆ್ಯಪಲ್‌ ಸ್ಮಾರ್ಟ್‌ವಾಚ್‌ ಕುರಿತು ವಿವರಿಸುವ ಕುಕ್‌, ‘ಐಪೋನ್‌ಗೆ ಬರುವ ಕರೆಗಳನ್ನು ಸ್ಮಾರ್ಟ್‌ವಾಚ್‌ ಸ್ಪರ್ಶಿಸುವ ಮೂಲಕವೇ ಸ್ವೀಕರಿಸಬಹುದು. ಯಾವ ಸಂಖ್ಯೆಯಿಂದ ಕರೆ ಬರುತ್ತದೆಯೊ ಆ ಸಂಖ್ಯೆಗೆ ಸಂದೇಶ ಕಳುಹಿಸ ಬಹುದು. ದೇಹದ ಆರೋಗ್ಯಕ್ಕೆ ಒತ್ತು ಕೊಡಬಲ್ಲ ಅಪ್ಲಿಕೇಷನ್‌ಗಳೂ ಸಹ ಈ ಸ್ಮಾರ್ಟ್‌ವಾಚ್‌ನಲ್ಲಿವೆ’ ಎನ್ನುತ್ತಾರೆ.

‘ಕರೆ ಸ್ವೀಕಾರಕ್ಕೆ ಅನುಕೂಲವಾಗಬಲ್ಲ ಸ್ಪೀಕರ್‌ ಮತ್ತು ಮೈಕ್ರೊಪೋನ್‌  ಸ್ಮಾರ್ಟ್‌ವಾಚ್‌ನಲ್ಲಿದೆ. ಇಂಥದ್ದೊಂದು ಚತುರ ಸಂಪರ್ಕ ಸಾಧನ  ಅಭಿವೃದ್ಧಿಪಡಿಸಬೇಕು ಎಂದು ನಾನು ಐದು ವರ್ಷದವನಿದ್ದಾಗಿನಿಂದ ಅಂದುಕೊಂಡಿದ್ದೆ. ಈ ವಾಚ್‌ ನಿಮ್ಮ ಕೈ ಸೇರಿದಾಗ, ಅದನ್ನು ಅಭಿವೃದ್ಧಿಪಡಿಸಿದವರ ಕುರಿತು ನೀವು ನಿಜಕ್ಕೂ ಚಕಿತಗೊಳ್ಳುತ್ತೀರಿ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕುಕ್.

‘ಆ್ಯಪಲ್‌’ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಪೋನ್‌ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಲಿದೆ ಎಂಬ ನಿರೀಕ್ಷೆ ಇದೆ. ಏಕೆಂದರೆ, ಕಂಪೆನಿಯ  ಸಾಫ್ಟ್‌ವೇರ್‌ ವ್ಯವಸ್ಥೆ ಉಳಿದೆಲ್ಲ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳಿಗಿಂತ ಭಿನ್ನವಾಗಿರಲಿದೆ ಎಂಬುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಮಾರುಕಟ್ಟೆಯಲ್ಲಿ ಈಗಾಗಲೇ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಮತ್ತು ಎಲ್‌ಜಿ, ಜಪಾನ್‌ನ ಸೋನಿ, ಸ್ಟಾರ್ಟ್‌ಅಪ್ಸ್‌, ಪೆಬಲ್‌ನಂತಹ ಸ್ಪರ್ಧಿಗಳು ಮಾರುಕಟ್ಟೆಯಲ್ಲಿದ್ದರೂ, ‘ಆ್ಯಪಲ್‌’ನ ಉತ್ಪನ್ನಗಳು ಉಳಿದೆಲ್ಲವುಗಳಿಗಿಂತ ಭಿನ್ನ ಹಾಗೂ ವಿನೂತನ. ಹಾಗಾಗಿಯೇ ಆ್ಯಪಲ್‌ನ ಐಪೋನ್‌, ಐಪೋಡ್‌ ಹಾಗೂ ಐಪ್ಯಾಡ್‌  ಹೆಸರುವಾಸಿ. ಹಿಂದಿನ ಉತ್ಪನ್ನಗಳಂತೆ ‘ಸ್ಮಾರ್ಟ್‌ವಾಚ್‌’ ಕೂಡ ವಿಶೇಷವಾಗಿರಲಿದೆ ಎಂಬ ನಿರೀಕ್ಷೆಯಲ್ಲಿರುವ ‘ಆ್ಯಪಲ್‌’ ಉತ್ಪನ್ನಗಳ ಪ್ರಿಯರು, ಅದರ ನಿಜ ಅನುಭವ ಪಡೆಯಲು ಏಪ್ರಿಲ್‌ 24ರವರೆಗೆ ಕಾಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT