ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಯವರ ಮನೆ ಹುಡುಕಿ...

Last Updated 23 ಮೇ 2015, 20:03 IST
ಅಕ್ಷರ ಗಾತ್ರ

ಪಾಲ್ಘಾಟ್‌ ಮಣಿ ಅಯ್ಯರ್‌ ಹೆಸರು ಕೇಳದವರು ಕಡಿಮೆ. ಕರ್ನಾಟಕ ಸಂಗೀತದಲ್ಲಿ ಮಣಿ ಅಯ್ಯರ್‌ ಹೆಸರು ಯಾವತ್ತೂ ಅಜರಾಮರ. ‘ಮೃದಂಗ ಚಕ್ರವರ್ತಿ’ ಎಂದೇ ಪ್ರಖ್ಯಾತಿ ಹೊಂದಿದವರು. ಶೆಮ್ಮಂಗುಡಿ, ಅರಿಯಕ್ಕುಡಿ ಮುಂತಾದ ಕರ್ನಾಟಕ ಸಂಗೀತದ ಖ್ಯಾತನಾಮ ಗಾಯಕರೂ ಕಚೇರಿಗೆಂದು ಯಾರಾದರೂ ಬಂದು ಕರೆದರೆ, ‘ಆ ಮಣಿ ಅಯ್ಯರ್‌ ಡೇಟ್‌ ಇರ್ಕ್‌ದಾ ಪಾರ್‌ಂಗೆ..’ ಎನ್ನುತ್ತಿದ್ದರಂತೆ- ಅಷ್ಟೊಂದು ಖ್ಯಾತಿ!

ಕರ್ನಾಟಕ ಸಂಗೀತ ಕಚೇರಿಗೆ ಮಣಿ ಅಯ್ಯರ್‌ ಮೃದಂಗ ಸಾಥ್‌ ಇದೆಯೆಂದರೆ ಅಲ್ಲಿ ಪ್ರೇಕ್ಷಕರಿಗೆ ಕಾಲಿಡಲೂ ಸ್ಥಳವಿಲ್ಲ! ಆರರ ಎಳವೆಯಲ್ಲೇ ವೇದಿಕೆ ಹತ್ತಿದ ಮೃದಂಗ ಪಟುವಾತ. ಬೆಳೆಯುತ್ತಾ ಹೋದಂತೆಲ್ಲ ಬೇಡಿಕೆ ಎಷ್ಟು ಬೆಳೆಯಿತೆಂದರೆ ಏಕಾಂಗಿಯಾಗಿ ಮೃದಂಗ ನುಡಿಸುವುದನ್ನು ಕೇಳಲೂ ನೂಕುನುಗ್ಗಲು. ವೇದಿಕೆಯ ಮೇಲೆ ಹೆಣ್ಣು ಮಕ್ಕಳು ಸಾಥ್‌ ನೀಡುವುದನ್ನು ಮಣಿ ಅಯ್ಯರ್‌ ಇಷ್ಟ ಪಡುತ್ತಿರಲಿಲ್ಲವಂತೆ. ಯಾರೋ ಈ ಬಗ್ಗೆ ವಿಚಾರಿಸಿದಾಗ, ‘ಪ್ರೇಕ್ಷಕರ ಗಮನ ಹಾಡುಗಾರಿಕೆ ಮತ್ತು ಪಕ್ಕವಾದ್ಯಗಳ ಧ್ವನಿಯ ಮೇಲಿರಬೇಕು, ಅದು ಡಿಸ್ಟರ್ಬ್‌ ಆಗಬಾರದು’ ಎಂದರಂತೆ.

ಸಂಗೀತ ಕಛೇರಿಯಲ್ಲಿ ಮೈಕ್‌ ಇಡುವ ಕಾಲ ಬಂದಾಗ ಕೆಲ ಕಾಲ ವೇದಿಕೆ ಹತ್ತುವುದನ್ನೇ ಮಣಿ ಅಯ್ಯರ್‌ ನಿಲ್ಲಿಸಿದ್ದರಂತೆ. ‘ಶಾರೀರ ಮುಖ್ಯ ಕಣ್ರೀ, ಮೈಕ್‌ ಅಲ್ಲ’ ಎನ್ನುವುದು ಅವರ ವಾದವಾಗಿತ್ತಂತೆ. ಅವರ ವಾದಕ್ಕೆ ತಕ್ಕಂತೆ ಮೈಕ್‌ ಇಲ್ಲದ ಕಾಲದಲ್ಲಿ ಶೆಮ್ಮಂಗುಡಿ, ಮಣಿ ಮುಂತಾದವರು ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ 4-5 ಗಂಟೆಗಳ ನಿರಂತರ ಕಾರ್ಯಕ್ರಮ ಕೊಟ್ಟದ್ದನ್ನು ಹಳಬರು ನೆನಪಿಸಿಕೊಳ್ಳುತ್ತಾರೆ.

ಓಲಶ್ಯೇರಿಯ ಕೈರಾಳಿ ಹೆಲ್ತ್‌ ವಿಲೇಜ್‌ಗೆಂದು ಕೆಲಸದ ಮೇಲೆ ಹೊರಟು ನಿಂತಾಗ, ಮನಸ್ಸಿನಲ್ಲಿ ಮಣಿ ಅಯ್ಯರ್ ಕುರಿತ ಈ ದಂತಕಥೆಗಳೆಲ್ಲ ಒಂದು ಸುತ್ತು ಹೊಡೆದದ್ದು ಸುಳ್ಳಲ್ಲ. ಏಕೆಂದರೆ, ಓಲಶ್ಯೇರಿಗೆ ಹೋಗಬೇಕೆಂದರೆ ಬೆಂಗಳೂರಿನಿಂದ ರೈಲು ಹತ್ತಿ ಸೇಲಂ, ಇರೋಡ್‌, ತಿರುಪುರ್‌, ಕೊಯಮತ್ತೂರು ದಾಟಿ ಪಾಲಕ್ಕಾಡಿನಲ್ಲೇ ಇಳಿಯಬೇಕು. ಅಲ್ಲಿಂದ ಕಾರಿನಲ್ಲಿ ಒಂದು ಗಂಟೆಯ ಪಯಣ. ಕೇರಳ ‘ದೇವರ ಸ್ವಂತ ನಾಡು’ ಎನ್ನುವುದು ಸುಳ್ಳೇ ಅಲ್ಲ ಎನ್ನುವಂತೆ ಪಾಲಕ್ಕಾಡ್‌ ಹಸಿರು ಹೊದ್ದು ಮೈಮುರಿಯುತ್ತಿತ್ತು. ನವೆಂಬರಿನ ಬಿಸಿಲು ಹಿತವಾಗಿತ್ತು. ತಮಿಳುನಾಡಿನ ಗಡಿಯಲ್ಲೇ ಪಾಲಕ್ಕಾಡ್‌ ಇರುವುದರಿಂದ ಎರಡೂ ರಾಜ್ಯಗಳ ನಡುವಣ ಭೂಮೇಲ್ಮೈ ವ್ಯತ್ಯಾಸ ದಟ್ಟವಾಗಿ ಗೊತ್ತಾಗುತ್ತಿತ್ತು.

ಓಲಶ್ಯೇರಿಯಲ್ಲಿ ಎರಡು ದಿನಗಳ ಕೆಲಸ ಮುಗಿಸಿಕೊಂಡು, ಅವತ್ತು ಪಾಲ್ಘಾಟ್‌ಗೆ ಬಂದವನು, ಟ್ಯಾಕ್ಸಿ ಚಾಲಕನಲ್ಲಿ ‘ಮಣಿ ಅಯ್ಯರ್‌ ಅವರು ವಾಸಿಸುತ್ತಿದ್ದ ಮನೆ ಎಲ್ಲಿದೆ ಗೊತ್ತೆ?’ ಎಂದು ವಿಚಾರಿಸಿದೆ. ಆತ ನೇರವಾಗಿ ತಂದು ನಿಲ್ಲಿಸಿದ್ದು ಹೊರವಲಯದ ಕಲ್ಪಾತಿಯಲ್ಲಿ. ‘ಇದು ಸಂಗೀತಗ್ರಾಮ ಸಾರ್‌. ಇಲ್ಲೇ ಎಲ್ಲೋ ಅವರ ಮನೆ ಇರಬೇಕು’ ಎಂದ. ಬೆಳಿಗ್ಗೆಯೇ ನೆತ್ತಿ ಸುಡುತ್ತಿದ್ದ ಬಿಸಿಲಿನಲ್ಲಿ ಕಲ್ಪಾತಿಗೆ ಒಂದು ಸುತ್ತು ಹಾಕಿದಾಗ, ‘ಅರೆ ಈ ಊರಿಗೆ ಇಷ್ಟೊಂದು ಮಹತ್ವ ಇದೆಯೆ!’ ಎಂದು ಆಶ್ಚರ್ಯ ಪಡುವ ಸರದಿ! ಸುಮ್ಮನೆ ಮಣಿ ಅಯ್ಯರ್‌ ವಾಸಿಸುತ್ತಿದ್ದ ಮನೆ ನೋಡೋಣವೆಂದುಕೊಂಡು ಹೋದರೆ ಅಲ್ಲಿ ಕಂಡದ್ದು ಬೇರೆಯೇ ಒಂದು ಲೋಕ.

ಕಲ್ಪಾತಿ ಕೇರಳದ ಮೊತ್ತಮೊದಲ ‘ಪರಂಪರೆಯ ಗ್ರಾಮ’. ಅದಕ್ಕಿಂತ ಮುಖ್ಯವಾಗಿ ಕರ್ನಾಟಕ ಸಂಗೀತವನ್ನು ಮೆಚ್ಚವವರೆಲ್ಲ ಕೈಮುಗಿದು ನೆನಪಿಸಿಕೊಳ್ಳುವ ಸಂಗೀತ ಗ್ರಾಮ. ಕೇರಳದ ಮೊತ್ತಮೊದಲ ತಮಿಳು ಅಗ್ರಹಾರವೂ ಇದೇ. ತಂಜಾವೂರಿನಿಂದ ವಲಸೆ ಬಂದ ಬ್ರಾಹ್ಮಣರ ಅಗ್ರಹಾರವಿದು. ಹೊಸ ಕಲ್ಪಾತಿಯಲ್ಲಿ ಆಧುನಿಕ ಕಟ್ಟಡಗಳು ತಲೆ ಎತ್ತಿವೆ. ಆದರೆ ಪಕ್ಕದಲ್ಲೇ ಇರುವ ಹಳೇ ಕಲ್ಪಾತಿ ಈಗಲೂ ಪುರಾತನ ಹಳ್ಳಿಯಂತೆಯೇ ಕಾಣಿಸುತ್ತಿದೆ. ಹಳೇ ಕಾಲದ ಮಾಳಿಗೆ ಮನೆಗಳ ಸಾಲು. ಮರದ, ಕಬ್ಬಿಣದ ಜಾಲರಿಗಳು, ಹಳೆಯ ಮರದ ಕಂಭಗಳು, ಬಾಗಿಲ ಮುಂದೆ ಕುಳಿತುಕೊಳ್ಳಲು ರೆಡ್‌ ಆಕ್ಸೈಡ್ ಹಾಕಿದ ಸಿಮೆಂಟಿನ ಅಡ್ಡಕಟ್ಟೆಗಳು. ಮೆಟ್ಟಿಲು ಇಳಿದ ತಕ್ಷಣ ಕಪ್ಪು ನೆಲಹಾಸು, ಅದರ ಮೇಲೆ ಆಕರ್ಷಕ ರಂಗೋಲಿಗಳು. ಎಲ್ಲ ಮನೆಯ ಮುಂದೆಯೂ ಕಾಣಿಸುವ ಈ ಕಲ್ಲುಹಾಸಿನಿಂದಲೇ ಈ ಊರಿಗೆ ಕಲ್ಪಾತಿ ಎಂಬ ಹೆಸರು ಬಂದಿದೆಯಂತೆ.

ಮಣಿ ಅಯ್ಯರ್‌ ಅವರ ಮನೆ ಹುಡುಕಲು ಕಷ್ಟವಾಗಲಿಲ್ಲ. ಆದರೆ ಆ ಮನೆಯನ್ನು ಅವರು ಮಾರಿ ಎಷ್ಟೋ ವರ್ಷಗಳಾಗಿವೆ. ಕೊನೆಗಾಲದಲ್ಲಿ ಅವರು ಕೊಚ್ಚಿಯಲ್ಲಿ ಮಗ ಟಿ.ಆರ್‌. ರಾಜಮಣಿ ಜತೆ ವಾಸಿಸುತ್ತಿದ್ದರಂತೆ. 1981ರಲ್ಲಿ ಅವರು ಅಲ್ಲೇ ನಿಧನರಾದಾಗ ಎರಡು ಗಂಟೆಗಳ ಕಾಲ ‘ಧೋ’ ಎಂದು ಭಾರೀ ಸಿಡಿಲು ಮಳೆ ಸುರಿಯಿತಂತೆ! ‘ದೇವರೇ ಅವತ್ತು ಆಕಾಶದಿಂದ ಕಣ್ಣೀರು ಸುರಿಸಿದ’ ಎಂದು ಈಗಲೂ ಅವರ ಅಭಿಮಾನಿಗಳು ಹೆಮ್ಮೆಯಿಂದ ನುಡಿಯುತ್ತಾರೆ.

ಮಣಿ ಅಯ್ಯರ್‌ ವಾಸವಿದ್ದ ಮನೆಯ ಎದುರು ಜನಿವಾರ ಧರಿಸಿ ಬರಿಮೈಯಲ್ಲಿ ಕುಳಿತಿದ್ದ ಹಿರಿಯರನ್ನು ವಿಚಾರಿಸಿದೆ. ‘ಅಯ್ಯೋ, ಆತ ಬಹಳ ದೊಡ್ಡ ಮನುಷ್ಯ. ಜಗತ್ಪ್ರಸಿದ್ಧ ಕಲಾವಿದ. ಇದೇ ಮನೆಯಲ್ಲಿ ಹುಟ್ಟಿ ಬೆಳೆದದ್ದು’ ಎಂದು ಹೆಮ್ಮೆಯಿಂದ ಹೇಳಿದರು. ಎದುರಿಗಿದ್ದ ಮನೆ ತೋರಿಸಿ, ‘ಅದು ಅವರ ಸಂಬಂಧಿಕರ ಮನೆ’ ಎಂದರು. ಆ ಮನೆಗೆ ಹೋಗಿ ಬಾಗಿಲು ತಟ್ಟಿದಾಗ ಸಿಕ್ಕ ದಂಪತಿ ಸಂತೋಷದಿಂದಲೇ ಮಣಿಯವರ ಬಗ್ಗೆ ಮಾತನಾಡಿದರು. ‘ಈಗ ಯಾರೂ ಇಲ್ಲ. ಬಹುತೇಕ ಎಲ್ಲ ಸಂಬಂಧಿಕರೂ ಚೆನ್ನೈಗೆ ಹೋಗಿ ನೆಲೆಸಿದ್ದೇವೆ’ ಎಂದರು. ಪರಸ್ಪರ ತಮಿಳಿನಲ್ಲಿ ಆ ದಂಪತಿ ಮಾತನಾಡುತ್ತಿದ್ದುದು ಮಲಯಾಳಿಯಂತೆಯೇ ಕೇಳಿಸಿತು. ನನ್ನ ಕುತೂಹಲ ಕಂಡು ಅವರೇ ಹೇಳಿದರು- ಈ ಅಗ್ರಹಾರದಲ್ಲಿ ನಾವೆಲ್ಲ ಮನೆಯಲ್ಲಿ ತಮಿಳು ಮಾತನಾಡುತ್ತೇವೆ; ಆದರೆ ರಸ್ತೆಗೆ ಇಳಿದಾಕ್ಷಣ ಮಲಯಾಳಂ ಬರುತ್ತದೆ!

2008ರಲ್ಲಿ ರಾಜ್ಯ ಸರ್ಕಾರ ಈ ಗ್ರಾಮವನ್ನು ‘ಹೆರಿಟೇಜ್‌ ವಿಲೇಜ್‌’ ಎಂದು ಘೋಷಿಸಿದ ಬಳಿಕ, ಇಲ್ಲಿ ಹಳೇ ಮನೆಗಳನ್ನು ಒಡೆದು ಹೊಸ ಮನೆಗಳನ್ನು ಕಟ್ಟಲು ಅವಕಾಶವಿಲ್ಲ. ರಿಪೇರಿ ಮಾಡಲೂ ಟೌನ್‌ ಪ್ಲಾನಿಂಗ್‌ ಕಚೇರಿಯಿಂದ ವಿಶೇಷ ಅನುಮತಿ ಪಡೆಯಬೇಕಂತೆ.

ಹಳೆಯ ಹೆಂಚಿನ ಮಾಳಿಗೆ ಮನೆಗಳನ್ನು ನೋಡುತ್ತಾ ನಡೆಯುತ್ತಿದ್ದಾಗ, ಎದುರಲ್ಲೇ ವಿಶ್ವನಾಥ ಸ್ವಾಮಿ ದೇವಾಲಯದ ಉತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ‘ಉಲ್ಸವಂ ಮುಂದಿನ ವಾರ ಆರಂಭವಾಗಲಿದೆ’ ಎಂದರು. ರಥ ಸಿದ್ಧವಾಗುತ್ತಿತ್ತು. ಹತ್ತು ದಿನಗಳ ಈ ಉತ್ಸವದ ಅವಧಿಯಲ್ಲೇ ಇಲ್ಲಿ ವಿಶ್ವಪ್ರಸಿದ್ಧ ಸಂಗೀತೋತ್ಸವವೂ ನಡೆಯುತ್ತದೆ.

ಈ ಶಿವ ದೇವಸ್ಥಾನದ ಬಗ್ಗೆಯೂ ಒಂದು ಐತಿಹ್ಯವಿದೆ. ಲಕ್ಷ್ಮಿ ಅಮ್ಮಾಳ್‌ ಎಂಬ ಬ್ರಾಹ್ಮಣ ವಿಧವೆ ಒಮ್ಮೆ ಬನಾರಸ್‌ಗೆ ಹೋದಾಗ ಅಲ್ಲಿಂದ ಶಿವಲಿಂಗವೊಂದನ್ನು ತಂದರಂತೆ. ನಿಲಾ ನದಿಯ ದಕ್ಷಿಣದಲ್ಲಿ ಈ ಲಿಂಗ ಪ್ರತಿಷ್ಠಾಪನೆ ಮಾಡಿದರಂತೆ. ಬಳಿಕ ಅಲ್ಲಿಯ ದೊರೆ ಇತಿಕೊಂಬಿ ಅಚ್ಚನ್‌ರನ್ನು ಕಂಡು, 1320 ಚಿನ್ನದ ನಾಣ್ಯಗಳನ್ನು ಕೊಟ್ಟು ಅಲ್ಲೊಂದು ದೇವಾಲಯವನ್ನು ಕಟ್ಟಲು ಕೋರಿದರಂತೆ. ಇವತ್ತಿಗೂ ಕಲ್ಪಾತಿಯನ್ನು ಸ್ಥಳೀಯರು ‘ಅರ್ಧ ಕಾಶಿ’ ಎಂದು ಕರೆಯುತ್ತಾರೆ.

ಹಾಗೆಯೇ ಅಂಗಡಿಯೊಂದರಲ್ಲಿ ಕುಳಿತಿದ್ದ ಒಬ್ಬರನ್ನು ಮಾತನಾಡಿಸಿದಾಗ ಅಲ್ಲೊಂದು ‘ಸಂಗೀತ ಉಪಕರಣಗಳ ಮ್ಯೂಸಿಯಂ’ ಇದೆ ಎನ್ನುವುದು ಗೊತ್ತಾಯಿತು. ಹುಡುಕುತ್ತಾ ಹೋದರೆ ಹೆಚ್ಚಿನವರಿಗೆ ಆ ಮ್ಯೂಸಿಯಂ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ. ಕೊನೆಗೂ ಒಬ್ಬರು ಸರಿಯಾದ ದಾರಿ ತೋರಿದರು. ಕೇರಳ ಮಾದರಿಯ ಕಟ್ಟಡದ ಬಳಿಗೆ ಹೋದರೆ ಬೀಗ ಹಾಕಿತ್ತು. ಕಿಟಕಿಗಳಿಗೆ ಸುತ್ತು ಹಾಕುತ್ತಾ ‘ಸಾರ್‌’ ಎಂದು ಕೂಗಿದೆ. ಐದು ನಿಮಿಷಗಳ ಬಳಿಕ ಒಬ್ಬರು ಬಂದರು. ‘ಇವತ್ತು ಸರ್ಕಾರಿ ರಜೆ’ ಎಂದರು. ನಾವು ದೂರದ ಬೆಂಗಳೂರಿನಿಂದ ಬಂದಿದ್ದೇವೆ ಎಂದು ಗೊತ್ತಾದಾಗ, ಬಾಗಿಲು ತೆರೆದು ಒಳ ಕರೆದೊಯ್ದರು.

ಕಲ್ಪಾತಿಯ ಸಂಗೀತ ಉತ್ಸವ ನಡೆಸಲೆಂದು ಕಟ್ಟಿದ ದೊಡ್ಡ ಸಭಾಂಗಣವದು. ಆದರೆ ಅಲ್ಲಿ ಪ್ರತಿಧ್ವನಿಯಿಂದಾಗಿ ಸಂಗೀತ ಕಚೇರಿ ಸಾಧ್ಯವೇ ಇಲ್ಲ ಎಂದು ಗೊತ್ತಾದ ಬಳಿಕ ಕಟ್ಟಡಕ್ಕೆ ಬೀಗ ಬಿದ್ದಿತ್ತು! ಕೆಲವು ವರ್ಷಗಳ ಬಳಿಕ ಅದನ್ನೇ ಸಂಗೀತ ಉಪಕರಣಗಳ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ಒಳಗೆ ಹೋಗಿ ನೋಡಿದ ನಮ್ಮ ಅಚ್ಚರಿಗೆ ಪಾರವೇ ಇಲ್ಲ. ಜಗತ್ತಿನ ಎಲ್ಲ ದೇಶಗಳ, ಎಲ್ಲ ಕಾಲಗಳ, ಎಲ್ಲ ಜನಾಂಗಗಳು ಬಳಸುತ್ತಿದ್ದ ಸಂಗೀತ ಉಪಕರಣಗಳ ದೊಡ್ಡ ಸಂಗ್ರಹವೇ ಅಲ್ಲಿದೆ. ಕೇರಳ ಜಾನಪದ ಅಕಾಡೆಮಿಯ ಆಶ್ರಯದಲ್ಲಿರುವ ಈ ಮ್ಯೂಸಿಯಂನಲ್ಲಿ 2000ಕ್ಕೂ ಹೆಚ್ಚು ಸಂಗೀತ ವಾದ್ಯಗಳಿದ್ದವು!

ಕೆಲವು 300 ವರ್ಷಗಳಷ್ಟು ಹಳೆಯವು! ಭಾರತದ ವಿವಿಧ ರಾಜ್ಯಗಳ ಆದಿವಾಸಿಗಳು ಬಳಸುತ್ತಿದ್ದ ಉಪಕರಣಗಳು ಒಂದೆಡೆ; ಇನ್ನೊಂದೆಡೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ಸಂಗ್ರಹಿಸಿ ತಂದವು. ಚುಮಕ್‌, ಡಿಂಬಿ, ಡಮರು, ಚೋಂಗಾ, ಚೀನೀ, ಬುಲ್‌ರೋಪರ್‌, ಚಿಂತ್‌, ಕಸ್ಟೋನಿಕ, ತಿರ್ಲಿ, ಫಿಪ್ಲಿ, ಸುಲಿಂಗ್‌, ಪುಲಿ ಅಮದಿ (ಹುಲಿ ಓಡಿಸುವ ವಾದ್ಯ!), ತೂತಾರಿ, 300 ವರ್ಷಗಳಿಗೂ ಹಳೆಯ ನಂಧುನಿ,  ಒಳಪ್ಪವೆನ್ನ ಕವಿಯ ಮನೆಯಿಂದ ತಂದ ಬಿಲ್ಲಡ್ಚನ್‌ ಪಾಟ್‌.. ಅಕಾಡೆಮಿಯ ಆ ನೌಕರ ಹೆಸರು ಹೇಳುತ್ತಾ ಹೋದಂತೆ ಅಚ್ಚರಿಯಲ್ಲಿ ಮುಳುಗಿದೆವು. ಸ್ಪೇನ್‌ನಿಂದ ತಂದ ಮಾಟ್ರಕಾ, ಜರ್ಮನಿಯಿಂದ ತಂದ ಕೊಕಿರಿಕೊ, 150 ವರ್ಷಗಳ ಹಿಂದಿನ ಸಬ್ರವೀಣಾ, ಕಾಲಲ್ಲಿ ನುಡಿಸುವ ಹಾರ್ಮೋನಿಯಂ, ಕೊಲಂಬಿಯ, ಚಿಲಿ, ಬ್ರೆಝಿಲ್, ಅಮೆರಿಕಾ, ಆಫ್ರಿಕಾ- ಹೀಗೆ ಎಲ್ಲೆಡೆಯಿಂದ ಬಂದಿದ್ದ ಸಂಗೀತ ವಾದ್ಯಗಳು ಅಲ್ಲಿದ್ದವು!

ಆದರೆ ದೊಡ್ಡ ಸಭಾಂಗಣದಲ್ಲಿ ಓಪನ್‌ ಆಗಿ ಇಟ್ಟಿದ್ದರಿಂದ ದೂಳು ತುಂಬಿತ್ತು. ದೂಳು ಹಿಡಿಯದಂತೆ ಪ್ರತಿದಿನವೂ ಅದನ್ನು ಒರೆಸಿ ಒರೆಸಿ ಇಡುವ ಶ್ರಮದ ಬಗ್ಗೆ ಆ ನೌಕರ ವಿಷಣ್ಣನಾಗಿ ವಿವರಿಸಿದ. ‘ಪ್ರತಿಯೊಂದು ಉಪಕರಣಗಳನ್ನೂ ಪ್ರತ್ಯೇಕವಾಗಿ ಗಾಜಿನ ಬಾಕ್ಸ್‌ನಲ್ಲಿ ಇಡುವ ವ್ಯವಸ್ಥೆ ಆಗಬೇಕು. ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದ. ಅಲ್ಲಿ ವೈವಿಧ್ಯಮಯ ಮೃದಂಗಗಳನ್ನು ನೋಡಿದಾಗ ಮತ್ತೆ ಮಣಿ ಅಯ್ಯರ್‌ ನೆನಪಾಯಿತು.

ಈ ಜೂನ್‌ 12ಕ್ಕೆ ಮಣಿ ಅಯ್ಯರ್‌ ಬದುಕಿದ್ದರೆ (ಜನನ 1912) 103 ವರ್ಷಗಳಾಗುತ್ತಿತ್ತು. ಕರ್ನಾಟಕ ಸಂಗೀತದ ಅಭಿಮಾನಿಗಳ ಮನಸ್ಸಿನಲ್ಲಂತೂ ಮಣಿ ಅಯ್ಯರ್‌ ಇನ್ನೂ ಬದುಕಿಯೇ ಇದ್ದಾರೆ. ಕಲ್ಪಾತಿ ಸಂಗೀತ ಗ್ರಾಮದಲ್ಲಿ ಪ್ರತಿ ವರ್ಷವೂ ನವೆಂಬರ್‌ ಎರಡನೇ ವಾರದಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಮಣಿಯವರ ಸ್ಮರಣೆ ನಡೆಯುತ್ತದೆ. ದೂರದೂರದಿಂದ ಖ್ಯಾತನಾಮ ಗಾಯಕರು, ಸಾಥಿಗಳು ಬಂದು ಸೇರುತ್ತಾರೆ. ಹತ್ತು ದಿನಗಳ ಗ್ರಾಮ ಉತ್ಸವದಲ್ಲಿ ಸಂಗೀತವೂ ವಿಜೃಂಭಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT