ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆಗಳಲ್ಲಿ ತಂಗಿದ 40 ಸಾವಿರ ಸಿಬ್ಬಂದಿ

62.97 ಲಕ್ಷ ಮತದಾರರು * 7,712 ಮತಕೇಂದ್ರಗಳು
Last Updated 16 ಏಪ್ರಿಲ್ 2014, 19:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮೂರೂ ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಸಲು ನಿಯೋಜನೆಗೊಂಡ ಸಿಬ್ಬಂದಿ ಬುಧವಾರ ಮಸ್ಟರಿಂಗ್‌ ಕೇಂದ್ರಗಳಿಂದ ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ) ಹಾಗೂ ಇತರ ಸಲಕರಣೆಗಳನ್ನು ಪಡೆದುಕೊಂಡು ಮತಗಟ್ಟೆಗಳಿಗೆ ತೆರಳಿದರು.

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗ­ಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳು 24ರಲ್ಲಿ ಹರಡಿಕೊಂಡಿವೆ. ಈ ಎಲ್ಲ ಕ್ಷೇತ್ರಗಳ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ, ಇವಿಎಂ ಮತ್ತು ಇತರ ಸಲಕರಣೆಗಳನ್ನು ಪೂರೈಸಲು ಕ್ಷೇತ್ರಕ್ಕೆ ಒಂದರಂತೆ ಮಸ್ಟರಿಂಗ್‌ ಕೇಂದ್ರ ತೆರೆಯ­ಲಾಗಿತ್ತು.

ಚುನಾವಣಾ ಕಾರ್ಯಕ್ಕೆ 40 ಸಾವಿರ ಸಿಬ್ಬಂದಿ­ಯನ್ನು ನಿಯೋಜಿಸಲಾಗಿದ್ದು, ಬುಧವಾರ ಬೆಳಗಿನಿಂದ ಸಂಜೆವರೆಗೆ ಈ ಸಿಬ್ಬಂದಿ ತಮ್ಮ ಮಸ್ಟರಿಂಗ್‌ ಕೇಂದ್ರಗಳಿಗೆ ತೆರಳಿ, ಇವಿಎಂ ಹಾಗೂ ಇತರ ಸಲಕರಣೆಗಳಿದ್ದ ಕಿಟ್‌ ಪಡೆ­ಯುತ್ತಿದ್ದರು. ಮಸ್ಟರಿಂಗ್‌ ಕೇಂದ್ರಗಳಿಂದ ನಿಯೋ­ಜನೆ­ಗೊಂಡ ಮತಗಟ್ಟೆಗಳಿಗೆ ಸಿಬ್ಬಂದಿಯನ್ನು ಸಂಜೆ ಬಸ್‌ಗಳಲ್ಲಿ ಕಳುಹಿಸಲಾಯಿತು.

ಪ್ರತಿಯೊಂದು ಮತಗಟ್ಟೆಗೆ ಹೋಗುತ್ತಿದ್ದ ತಂಡಕ್ಕೂ ಇವಿಎಂ ಅಲ್ಲದೆ ವಿವಿಧ ಸ್ಟಿಕರ್‌ಗಳು (ಪ್ರವೇಶ, ನಿರ್ಗಮನ, ಮತಗಟ್ಟೆ ಅಧಿಕಾರಿ ಇತ್ಯಾದಿ), ಕೈಬೆರಳಿಗೆ ಹಾಕಲು ಶಾಯಿ, ಮತದಾರರ ಪಟ್ಟಿ, ಸಿಬ್ಬಂದಿ ದಾಖಲೆ ಪತ್ರ ಮೊದಲಾದ ಸಾಮಗ್ರಿಗಳಿದ್ದ ಕಿಟ್‌ ನೀಡಲಾಗುತ್ತಿತ್ತು. ಇವಿಎಂಗಳ ಕುರಿತು ಇನ್ನೂ ಗೊಂದಲದಲ್ಲಿದ್ದ ಕೆಲವು ಸಿಬ್ಬಂದಿ ಸ್ಥಳದಲ್ಲೇ ತಾಂತ್ರಿಕ ಸಹಾಯಕರಿಂದ ಮಾಹಿತಿ ಪಡೆಯುತ್ತಿದ್ದರು.

ಮಹಿಳಾ ಸಿಬ್ಬಂದಿಗೆ ಮತಗಟ್ಟೆಯಲ್ಲಿ ರಾತ್ರಿ ತಂಗುವ ನಿಯಮದಿಂದ ವಿನಾಯ್ತಿ ನೀಡಲಾಗಿದ್ದರೂ ಮುಖ್ಯ ಮತ­­ಗಟ್ಟೆ ಅಧಿಕಾರಿಯಾಗಿ ನಿಯೋಜನೆಗೊಂಡ ಮಹಿಳಾ ಅಧಿಕಾರಿಗಳಿಗೆ ಈ ವಿನಾಯ್ತಿ ಅನ್ವಯ ಆಗು­ವು­ದಿಲ್ಲ. ಹೀಗಾಗಿ ಹಲವು ಮಹಿಳಾ ಅಧಿಕಾರಿಗಳು ರಾತ್ರಿ ಮತಗಟ್ಟೆಗಳಲ್ಲೇ ತಂಗಲು ತೆರಳಿದರು. ವಿನಾಯ್ತಿ ಹೊಂದಿದ ಇತರ ಮಹಿಳಾ ಸಿಬ್ಬಂದಿ ಸಹ ಅವರನ್ನು ಹಿಂಬಾಲಿಸಿದರು.

62.97 ಲಕ್ಷ ಮತದಾರರು: ಹೊಸದಾಗಿ ಸುಮಾರು 6 ಲಕ್ಷ ಮತದಾರರು ಹೆಸರು ನೋಂದಾಯಿಸಿದ್ದು, ಇದ­ರೊಂದಿಗೆ ನಗರದ ಮತದಾರರ ಸಂಖ್ಯೆ 62,97,434ಕ್ಕೆ ಏರಿಕೆಯಾಗಿದೆ. ನಗರದಲ್ಲಿ 7,712 ಮತಗಟ್ಟೆಗಳಿವೆ. ಬಹುತೇಕ ಕಡೆ ಕಾಯಂ ಕಟ್ಟಡಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ತಲಾ 50 ಮತಗಟ್ಟೆಗಳಲ್ಲಿ ಮಾದರಿ ವ್ಯವಸ್ಥೆ ಮಾಡಲಾಗಿದೆ.  593 ಮತಗಟ್ಟೆಗಳಲ್ಲಿ ವೆಬ್‌­ಕಾಸ್ಟಿಂಗ್‌ ವಿಧಾನ­ದಿಂದ ಆನ್‌ಲೈನ್‌ ಮೂಲಕ ಮತ­ದಾನ ಪ್ರಕ್ರಿಯೆ ವೀಕ್ಷಿ­ಸುವ ವ್ಯವಸ್ಥೆ ಮಾಡಿ ಕೊ­ಳ್ಳಲಾಗಿದೆ. 900 ಬಿಎಂಟಿಸಿ ಬಸ್‌, 200 ಮಿನಿ ಬಸ್‌ ಮತ್ತಿತರ ವಾಹನಗಳನ್ನು ಬಳಸಿ­ಕೊಳ್ಳಲಾಗಿದೆ.

ಸರಾಸರಿ 17 ಮತಗಟ್ಟೆಗಳಿಗೆ ಒಂದರಂತೆ 399 ಸೆಕ್ಟರ್‌ ಗಸ್ತು ಪಡೆ ರಚಿಸಲಾಗಿದೆ. ಪ್ರಮುಖ 186 ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದ್ದು, ಆ ಜಾಗಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಮೂರೂ ಕ್ಷೇತ್ರಗಳ ಮತಯಂತ್ರಗಳನ್ನು ಸಂಗ್ರಹಿಸಿಡಲು ಸ್ಟ್ರಾಂಗ್‌ ರೂಮ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಮತ ಖಾತರಿ ವ್ಯವಸ್ಥೆ: ‘ನಗರದ ದಕ್ಷಿಣ ಲೋಕಸಭಾ ಕ್ಷೇತ್ರ ಸೇರಿದಂತೆ ದೇಶದ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಇದೇ ಮೊದಲ ಬಾರಿಗೆ ಮತ ಖಾತರಿ ವ್ಯವಸ್ಥೆಯನ್ನು (ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್‌– ವಿವಿಪಿಎಟಿ) ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಮತದಾನ ಮಾಡಿದ ನಂತರ ವಿವಿಪಿಎಟಿ ಉಪಕರಣದ ಪರದೆಯಲ್ಲಿ ಏಳು ಸೆಕೆಂಡ್‌ಗಳವರೆಗೆ ಮತದಾರ ಒತ್ತಿದ ಕ್ರಮಸಂಖ್ಯೆ, ಅಭ್ಯರ್ಥಿಯ ಹೆಸರು, ಚಿಹ್ನೆ, ಪಕ್ಷದ ವಿವರ ಪ್ರದರ್ಶನಗೊಳ್ಳುತ್ತದೆ. ಆದರೆ, ಆ ವಿವರವನ್ನು ಕ್ಯಾಮೆರಾ ಅಥವಾ ಮೊಬೈಲ್‌ನಿಂದ ಸೆರೆ ಹಿಡಿಯಲು, ಇತರೆ ಯಾವುದೇ ರೀತಿಯಲ್ಲಿ ದಾಖಲಿಸಿ­ಕೊಳ್ಳಲು ಅವಕಾಶವಿಲ್ಲ.

ಮತಗಟ್ಟೆ ಸಿಬ್ಬಂದಿಗೆ ಆಂಬುಲೆನ್ಸ್‌ ವ್ಯವಸ್ಥೆ: ಗಾಂಧಿನಗರ ಕ್ಷೇತ್ರದ ಮತಗಟ್ಟೆಗಳ ಮಸ್ಟರಿಂಗ್‌ ಕೇಂದ್ರವನ್ನು ಅರಮನೆ ರಸ್ತೆಯಲ್ಲಿರುವ ಗೃಹವಿಜ್ಞಾನ ಕಾಲೇಜಿನಲ್ಲಿ ತೆರೆಯಲಾಗಿತ್ತು. ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಎಂ.ಲಕ್ಷ್ಮಿನಾರಾಯಣ, ಸಿದ್ಧತಾ ಚಟುವಟಿಕೆ ಪರಿಶೀಲಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮತಗಟ್ಟೆಗಳಲ್ಲಿ ಎಲ್ಲ ವ್ಯವಸ್ಥೆ ಮಾಡ­ಲಾಗಿದೆ. ಚುನಾವಣಾ ಸಿಬ್ಬಂದಿಗೆ ಯಾವುದೇ ಅನನು­ಕೂಲ ಆಗದಂತೆ ಗರಿಷ್ಠ ಎಚ್ಚರಿಕೆ ವಹಿಸಲಾಗಿದೆ. ಆರೋ­ಗ್ಯಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆ ಎದುರಾದರೆ 15 ನಿಮಿಷದಲ್ಲಿ ಆಂಬುಲೆನ್ಸ್‌ ಮತಗಟ್ಟೆ ತಲುಪಲಿದೆ’ ಎಂದು ಹೇಳಿದರು.

‘ಬುಧವಾರ ಮಾತ್ರ­ವಲ್ಲದೆ ಗುರುವಾರವೂ ಎಲ್ಲ ಸಿಬ್ಬಂದಿಗೆ ಬೆಳಗಿನ ಉಪಾ­ಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಕುಡಿ­ಯುವ ನೀರನ್ನೂ ಒದಗಿ­ಸಲಾಗಿದೆ’ ಎಂದು ತಿಳಿಸಿದರು. ‘ಅಗತ್ಯವಾದ ಪ್ರಮಾಣ­ದಲ್ಲಿ ಮಾನವ ಸಂಪನ್ಮೂಲ ಲಭ್ಯವಿದೆ. ಯಾವುದೇ ಗೊಂದಲ ಇಲ್ಲದಂತೆ ಚಟುವ­ಟಿಕೆಗಳು ನಡೆದಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT