ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ದಾಖಲೆ

Last Updated 13 ಮೇ 2014, 19:30 IST
ಅಕ್ಷರ ಗಾತ್ರ

16ನೇ ಲೋಕಸಭೆಗೆ 543 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಶೇಕಡಾ 66.38ರಷ್ಟು ಮತದಾನವಾಗಿರುವುದು ಹೊಸ ದಾಖಲೆ.  ಇಂದಿರಾ ಗಾಂಧಿ ಹತ್ಯೆಯ ನಂತರ 8ನೇ ಲೋಕಸಭೆಗೆ 1984­ರಲ್ಲಿ ನಡೆದ ಚುನಾವಣೆಯಲ್ಲಿ ಆಗಿದ್ದ ಶೇಕಡಾ 64.01 ರಷ್ಟು ಮತದಾನ ಪ್ರಮಾಣ­ವನ್ನು ಇದು ಮೀರಿಸಿದೆ. 81.45 ಕೋಟಿ ಮತದಾರರು ಈ ಚುನಾವಣೆ­ಯಲ್ಲಿ ಮತದಾನ ಮಾಡಿದ್ದಾರೆ. 2009ರಲ್ಲಿ 15ನೇ ಲೋಕ­ಸಭೆ ಚುನಾವಣೆಯಲ್ಲಾಗಿದ್ದ ಮತದಾನ ಪ್ರಮಾಣ ಶೇಕಡಾ 58.19.

ಮತದಾನದ ಬಗ್ಗೆ ಜಾಗೃತಿಗಾಗಿ ಅನೇಕ ಸಂಘ ಸಂಸ್ಥೆಗಳು, ಮಾಧ್ಯಮ­ಗಳಲ್ಲದೆ ಚುನಾವಣಾ ಆಯೋಗವೂ ಈ ಬಾರಿ ದೊಡ್ಡ ಮಟ್ಟದಲ್ಲೇ ಪ್ರಚಾರಾಂ­ದೋಲನ ಹಮ್ಮಿಕೊಂಡಿತ್ತು. ಮತದಾನ ಕುರಿತಂತೆ ಜಾಗೃತಿ ಮೂಡಿ­ಸುವ ಆಯೋಗದ ಈ ಕ್ರಮ ನಿಜಕ್ಕೂ ಶ್ಲಾಘನೀಯ. ಆದರೆ ಎಂತಹ ವ್ಯಕ್ತಿಗಳನ್ನು ಆಯ್ಕೆ  ಮಾಡಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡು­ವಂತಹ ಕ್ರಮ ಮಾತ್ರ ಚುನಾವಣಾ ಆಯೋಗದ ವ್ಯಾಪ್ತಿಯನ್ನು ಮೀರಿದ್ದು ಎಂಬು­­ದನ್ನು ಗಮನಿಸಬೇಕು. ಅದರಲ್ಲೂ ಮತ ಹಾಕುವ ಮೊದಲು ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿ ಎಂಬಂತಹ ಸಂದೇಶ­ಗಳಿದ್ದ ಚುನಾವಣಾ ಆಯೋಗದ ಪ್ರಚಾರ ಸಾಮಗ್ರಿಗಳು ಪ್ರಜಾತಂತ್ರದ ಆಶಯಗಳನ್ನೇ ಅಣಕಿಸುವಂತಹದ್ದಾಗಿದ್ದವು.

ಒಂಬತ್ತು ಹಂತಗಳಲ್ಲಿ ಐದು ವಾರಗಳ ಕಾಲ ನಡೆದ ಈ ಚುನಾವಣೆ, ಈವರೆಗೆ ನಡೆದ ಎಲ್ಲಾ ಚುನಾ­ವ­ಣೆ­ಗಳಿಗಿಂತ ಸುದೀರ್ಘವಾದದ್ದು.  ಇದರ ಮುಖ್ಯ ಉದ್ದೇಶ ಭದ್ರತೆ. ಈ ಕಾಳ­ಜಿಯ ನಡುವೆಯೂ ಈ ಚುನಾವಣೆ ಪೂರ್ಣ ಹಿಂಸಾಚಾರ ಮುಕ್ತ­ವಾಗಿ­ರ­ಲಿಲ್ಲ. ಆದರೆ ಇವೆಲ್ಲಾ ಸಣ್ಣಪುಟ್ಟ ಹಿಂಸಾಚಾರದ ಘಟನೆಗಳು ಎಂಬುದು ಸಮಾಧಾನಕರ. ಮತದಾನದ ಅಂತಿಮ ದಿನ ಪಶ್ಚಿಮ ಬಂಗಾಳ­ದಲ್ಲಿ ಸಿಪಿಎಂ ಹಾಗೂ ಟಿಎಂಸಿ ಕಾರ್ಯಕರ್ತರ ಮಧ್ಯೆ ನಡೆದ ಮಾರಾ­ಮಾರಿ­ಯಲ್ಲಿ 13 ಮಂದಿ ಗಾಯಗೊಂಡಂತಹ ಘಟನೆ ನಡೆದಿದೆ. ಹಾಗೆಯೇ ಛತ್ತೀಸಗಡ, ಜಾರ್ಖಂಡ್ ಹಾಗೂ ಒಡಿಶಾದಂತಹ ರಾಜ್ಯಗಳಲ್ಲಿ ಮಾವೊ­ವಾದಿಗಳಿಂದ ಒಂದಿಷ್ಟು ವಿಧ್ವಂಸಕ ಕೃತ್ಯಗಳು ಹಾಗೂ ಬಿಹಾರ, ಆಂಧ್ರ ಪ್ರದೇಶಗಳಲ್ಲಿ ಸಣ್ಣಪುಟ್ಟ ಹಿಂಸಾಚಾರ ಘಟನೆಗಳು ನಡೆದಿವೆ. ಚುನಾವಣೆಯ ಅವಧಿ ಇಷ್ಟೊಂದು ಸುದೀರ್ಘ ಕಾಲದ್ದಾಗಿರುವುದು ಅವಶ್ಯವೆ ಎಂಬ ಬಗ್ಗೆ ಮರುಅವಲೋಕನಕ್ಕೆ ಅವಕಾಶವಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಅನೇಕ ಅಭ್ಯರ್ಥಿಗಳ ವಿರುದ್ಧ ಚುನಾವಣಾ ಆಯೋಗ ಕ್ರಮಗಳನ್ನು ಕೈಗೊಂಡಿದೆ. ಮತದಾನದ ಕಡೆಯ ದಿನವೂ ವಾರಾಣಸಿಯ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ಧ ಕ್ರಮ ಕೈಗೊಳ್ಳಬೇಕಾಯಿತು. ಹಾಗೆಯೇ ವಾರಾಣಸಿಯಲ್ಲಿ ನರೇಂದ್ರ ಮೋದಿ ರ‍್ಯಾಲಿಗೆ ಅನುಮತಿ ನೀಡುವ ವಿಚಾರದಲ್ಲಿ ಸಂವಹನ ಕೊರತೆ ಉಂಟಾ­­ಗಿತ್ತು ಎಂಬುದನ್ನು ಚುನಾವಣಾ ಆಯೋಗವೇ ಒಪ್ಪಿಕೊಳ್ಳುವಂತಹ ಮುಜು­ಗರದ ಸ್ಥಿತಿ ಎದುರಾದದ್ದು ಮತ್ತೊಂದು ವಿಪರ್ಯಾಸ. ಈ ಬೆಳವಣಿ­ಗೆಯ ನಂತರ ವಾರಾಣಸಿಯ ಚುನಾವಣಾ ಪ್ರಕ್ರಿಯೆ ಉಸ್ತುವಾರಿಗಾಗಿ ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಕುಮಾರ್ ಅವರನ್ನು ಕರೆಸಿಕೊಳ್ಳುವಂತಹ ವಿದ್ಯಮಾನ ನಡೆದಿದ್ದು ಇರಿಸುಮುರಿಸಿನ ಸಂಗತಿಯಾಗಿ ದಾಖಲಾಯಿತು.

‘ನೋಟಾ’ (ಮೇಲಿನವರು ಯಾರೂ ಅಲ್ಲ) ಚಲಾಯಿಸುವ ಹಕ್ಕನ್ನೂ ಒದಗಿಸಿದ್ದು ಈ ಚುನಾವಣೆಯ ಮತ್ತೊಂದು ವಿಶೇಷ. ಭೌಗೋಳಿಕವಾಗಿ ಬಹುದೊಡ್ಡದಾದ ಬಹು­ಸಂಸ್ಕೃತಿಯ ಭಾರತದಂತಹ  ನಾಡಿನಲ್ಲಿ  ನಿರ್ಭೀತವಾಗಿ ಮತ ಚಲಾಯಿ­ಸುವ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯವಾಗಿದೆ ಎಂಬುದೇ ಪ್ರಜಾ­ಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT