ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ

ಹಿರೇನಂದಿ ಪಂಚಾಯ್ತಿ ಮರುಚುನಾವಣೆಗೆ ಒತ್ತಾಯ
Last Updated 4 ಜುಲೈ 2015, 7:47 IST
ಅಕ್ಷರ ಗಾತ್ರ

ಬೆಳಗಾವಿ: ‘ಗೋಕಾಕ ತಾಲ್ಲೂಕಿನ ಹಿರೇನಂದಿ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿರುವುದರಿಂದ ವಾರ್ಡ್ ನಂ. 3ರಲ್ಲಿ ಹೊಸದಾಗಿ ಚುನಾವಣೆ ನಡೆಸ ಬೇಕು’ ಎಂದು ಜೆಡಿಎಸ್‌ ಮುಖಂಡ ಅಶೋಕ ಪೂಜಾರಿ ಒತ್ತಾಯಿಸಿದರು.

‘ಮೇ 11ರಿಂದ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿತ್ತು. ದಾಸಪ್ಪ ಹಣಮಂತಪ್ಪ ಹಕ್ಕಿ ಅವರು ಮೇ 5ರಂದು ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನು ಪಡೆದುಕೊಂಡು ಚುನಾವ ಣೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಗೋಕಾಕ ತಹಶೀಲ್ದಾರ ಕಚೇರಿ ಸಿಬ್ಬಂದಿ ಚುನಾವಣಾ ಅಧಿಕಾರಿಗಳೊಂದಿಗೆ ಸೇರಿಕೊಂಡು ಹೆಸರು ಅದಲು– ಬದಲು ಮಾಡಿರುವ ಮತದಾರರ ಪಟ್ಟಿಯನ್ನು ಇತರ ಅಭ್ಯರ್ಥಿಗಳಿಗೆ ನೀಡಲಾಗಿದೆ.

ಮೊದಲು ನೀಡಿದ್ದ ಪಟ್ಟಿಯ ಪ್ರಕಾರ 761 ಮತದಾರರು ಇದ್ದರು. ಆದರೆ, ಚುನಾವಣೆಯ ಮತಪಟ್ಟಿಯಲ್ಲಿ ಕೇವಲ 675 ಮತದಾರರು ಮಾತ್ರ ಇದ್ದರು. ದಾಸಪ್ಪ ಅವರ ಮತದಾರರ ಪಟ್ಟಿಯ ಕ್ರಮಸಂಖ್ಯೆಯನ್ನೂ ಚುನಾವಣಾಧಿಕಾರಿ ಗಳು ನಾಮಪತ್ರದಲ್ಲಿ ತಿದ್ದಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಇದರಿಂದಾಗಿ ದಾಸಪ್ಪ ಅವರು ಯಲ್ಲಪ್ಪ ಯಮನಪ್ಪ ಗಸ್ತಿ ವಿರುದ್ಧ ಕೇವಲ 3 ಮತಗಳ ಅಂತರದಿಂದ ಸೋತಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.

‘ಅಧಿಕಾರ ದುರುಪಯೋಗ ಪಡಿಸಿ ಕೊಂಡು ಮತದಾರ ಪಟ್ಟಿಯಲ್ಲಿ 84 ಜನರ ಹೆಸರನ್ನು ಕೈಬಿಡಲಾಗಿದೆ. ಮನೆಯ ಸಂಖ್ಯೆಗಳಿಗೆ ಅನುಗುಣವಾಗಿ ಕ್ರಮವಾಗಿ ಹೆಸರನ್ನು ತೆಗೆದು ಹಾಕಿಲ್ಲ. ತಮಗೆ ಬೇಡವಾದ ಜನರ ಹೆಸರನ್ನು ಮಾತ್ರ ಕೈಬಿಡಲಾಗಿದೆ. 131ರಿಂದ 151ರವರೆಗೆ, 180ರಿಂದ 181, 336ರಿಂದ 340ರವರೆಗೆ ಸೇರಿದಂತೆ ನಡು ನಡುವೆ ಮಾತ್ರ ಹೆಸರನ್ನು ತೆಗೆದು ಹಾಕಲಾಗಿದೆ. ಚುನಾವಣೆ ನಡೆಯುವ ಮುನ್ನ ನಿಯಮಬಾಹಿರವಾಗಿ ಮತ ದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಸ್ಥಳೀಯ ಆಡಳಿತ ವ್ಯವಸ್ಥೆ ಒಬ್ಬರ ಕೈಯಲ್ಲಿದೆ.

ಹೀಗಾಗಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಾರ್ಡ್‌ಗೆ ಹೊಸದಾಗಿ ಚುನಾವಣೆ ನಡೆಸಬೇಕು’ ಎಂದು ಪೂಜಾರಿ ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಈರಣ್ಣ ಕಡಾಡಿ, ‘ಆರು ತಿಂಗಳ ಬಳಿಕ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ಬರಲಿದೆ. ಚುನಾವಣಾ ಅಕ್ರಮಕ್ಕೆ ಗೋಕಾಕ ಖ್ಯಾತಿ ಪಡೆದಿದೆ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಮುಂದಿನ ಚುನಾವಣೆಗಳಲ್ಲಿ ಈ ರೀತಿ ನಡೆಯದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ, ದಾಸಪ್ಪ ಹಣಮಂತಪ್ಪ ಹಕ್ಕಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT