ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ: ಪೊಲೀಸರಿಗೆ ಆರೋಪಿ ಶರಣು

ರಾಜ್ಯಸಭೆಯಲ್ಲಿ ಮುಂದುವರಿದ ಗದ್ದಲ
Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಆಗ್ರಾ (ಉತ್ತರ ಪ್ರದೇಶ) (ಪಿಟಿಐ): ಆಗ್ರಾದಲ್ಲಿ ಇತ್ತೀಚೆಗೆ ನಡೆದ ಮತಾಂತರ ವಿವಾದದ ಪ್ರಮುಖ ಆರೋಪಿ ನಂದಕಿಶೋರ್‌ ವಾಲ್ಮೀಕಿ ಮಂಗಳವಾರ ಪೊಲೀಸರ ಎದುರು ಶರಣಾಗಿದ್ದಾನೆ.

ಬಲವಂತದ ಪ್ರಕರಣಕ್ಕೆ ಸಂಬಂಧಿಸಿ­ದಂತೆ ಆರ್‌ಎಸ್‌ಎಸ್‌ನ ಧರ್ಮ ಜಾಗ­ರಣ ಮಂಚ್‌ ಹಾಗೂ ಉತ್ತರ ಪ್ರದೇಶ ರಾಜ್ಯ ಸಂಚಾಲಕ ನಂದಕಿಶೋರ್‌ ವಾಲ್ಮೀಕಿ ವಿರುದ್ಧ ಹಿಂದೂ ಧರ್ಮಕ್ಕೆ ಮತಾಂತರ­ಗೊಂಡಿದ್ದ ಇಸ್ಮಾಯಿಲ್ ಎಂಬ ವ್ಯಕ್ತಿ ನೀಡಿದ್ದ ದೂರಿನ ಅನ್ವಯ ಹರಿ ಪರ್ವತ ಠಾಣೆಯಲ್ಲಿ  ಎಫ್‌ಐ­ಆರ್‌ ದಾಖಲಾಗಿತ್ತು. 

ಈ ನಡುವೆ ವಾಲ್ಮೀಕಿ ಪತ್ತೆಗೆ ನೆರ­ವಾದವರಿಗೆ ಪೊಲೀಸರು 12 ಸಾವಿರ ರೂಪಾಯಿ ಬಹುಮಾನ ಘೋಷಿ­ಸಿದ್ದರು. ಮತಾಂತರ ವಿವಾದವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ ಕಾರಣ ಪೊಲೀಸರು ಆರೋಪಿಗಾಗಿ ರಾಜ್ಯದಾ­ದ್ಯಂತ ಜಾಲಾಡುತ್ತಿದ್ದರು.
ಡಿಸೆಂಬರ್‌ 14ರಂದು ವಾಲ್ಮೀಕಿ ಕೂದಲೆಳೆಯ ಅಂತ­ರದಲ್ಲಿ ಪಾರಾಗಿದ್ದರಿಂದ ಪೊಲೀಸರ ಆತನ ಪುತ್ರ ಹಾಗೂ ಸಂಬಂಧಿಯನ್ನು ಬಂಧಿಸಿದ್ದರು. ಆರೋಪಿ ಬಂಧನ ವಿರೋಧಿಸಿ ವಾಲ್ಮೀಕಿ ಜನಾಂಗದವರು ವಿಭಾಗೀಯ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನವದೆಹಲಿ ವರದಿ: ಆಗ್ರಾ ಮತಾಂತರ ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ  ವಿರೋಧ ಪಕ್ಷಗಳು ಎರಡನೇ ದಿನವೂ ಪಟ್ಟು ಸಡಿಲಿಸದ ಕಾರಣ ರಾಜ್ಯಸಭಾ ಕಲಾಪ ಸುಗಮವಾಗಿ ನಡೆಯಲಿಲ್ಲ.  ವಿರೋಧ ಪಕ್ಷಗಳ ಪ್ರತಿಭಟನೆ ಹಾಗೂ ಗದ್ದಲದಿಂದಾಗಿ ಆರು ಬಾರಿ ಕಲಾಪವನ್ನು ಮುಂದೂಡ­­ಬೇಕಾಯಿತು. ಪ್ರಧಾನಿ ಖುದ್ದಾಗಿ ಮೇಲ್ಮನೆಯಲ್ಲಿ ಈ ವಿಷಯದ ಕುರಿತು ಹೇಳಿಕೆ ನೀಡದ ಹೊರತು ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ತಮ್ಮ ನಿಲುವು ತಿಳಿಸಿದರು.

ಆದರೆ, ಬೇಡಿಕೆಯನ್ನು ಸರ್ಕಾರ ಸ್ಪಷ್ಟವಾಗಿ ತಳ್ಳಿ ಹಾಕಿದ್ದರಿಂದ  ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಮತ್ತಷ್ಟು ಜೋರಾಯಿತು. ಮತಾಂತರ ವಿವಾದಕ್ಕೆ ಸತತ ಎರಡನೇ ದಿನದ  ಕಲಾಪ ಬಲಿಯಾಯಿತು. ಇದರ ಹೊರತಾಗಿ ಬೇರೆ ಯಾವ ಚರ್ಚೆಯೂ ಸದನದಲ್ಲಿ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT