ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ: ಸಿಡಿದೆದ್ದ ಪ್ರತಿಪಕ್ಷಗಳು

ಕಪ್ಪುಹಣ, ಉದ್ಯೋಗ ಸೃಷ್ಟಿ ಭರವಸೆ ಮರೆತ ಸರ್ಕಾರ ತೀವ್ರ ತರಾಟೆಗೆ
Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಕಪ್ಪುಹಣ ವಾಪಸ್‌ ಹಾಗೂ ಉದ್ಯೋಗ ಸೃಷ್ಟಿಯಂತಹ ಮಹತ್ವದ ಭರವಸೆ ಮರೆತಿರುವ ಕೇಂದ್ರ ಸರ್ಕಾರ ಧಾರ್ಮಿಕ ಮತಾಂ­ತ­ರ­ದಂತಹ ವಿವಾದಾತ್ಮಕ ವಿಷಯಗಳಿಗೆ ಆದ್ಯತೆ ನೀಡುತ್ತಿದೆ ಎಂದು ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಎನ್‌ಡಿಎ ಸರ್ಕಾರ­ವನ್ನು ತೀವ್ರ ತರಾಟೆಗೆ ತೆಗೆದುಕೊಂಡವು.

ನಿರೀಕ್ಷೆಯಂತೆ ಮರು ಮತಾಂತರ ವಿವಾದ ಉಭಯ ಸದನಗಳಲ್ಲಿ ಪ್ರತಿ­ಧ್ವನಿಸಿತಲ್ಲದೇ, ಪ್ರಧಾನಿ ಹೇಳಿಕೆಗಾಗಿ ವಿರೋಧ ಪಕ್ಷಗಳು ಹಿಡಿದಿರುವ ಪಟ್ಟು ಸೋಮವಾರವೂ ಮುಂದುವರೆ­ಯಿತು. ವಿರೋಧ ಪಕ್ಷಗಳು ಸುಗಮ ಕಲಾಪಗಳಿಗೆ ಅಡ್ಡಿ ಮಾಡುತ್ತಿವೆ ಎಂಬ ಆಡಳಿತ ಪಕ್ಷದ ಆರೋಪ­ದಿಂದ ರೊಚ್ಚಿ­ಗೆದ್ದ ವಿರೋಧ ಪಕ್ಷಗಳು ಸರ್ಕಾರಕ್ಕೆ ಉತ್ತರಿಸಲೂ ಅವಕಾಶ ನೀಡದೆ ಗದ್ದಲ ಎಬ್ಬಿಸಿ­ದ್ದರಿಂದ ಉಭಯ ಸದನಗಳ ಕಲಾಪವನ್ನು ಮೂರ್‍್ನಾಲ್ಕು  ಬಾರಿ ಮುಂದೂಡಲಾಯಿತು.

ಸರ್ಕಾರದ ವಿರುದ್ಧ ಆಕರ್ಷಕ ಘೋಷ­ಣೆ­ಯುಳ್ಳ ಭಿತ್ತಿಪತ್ರಗಳನ್ನು ಹಿಡಿದ ಸಮಾಜವಾದಿ, ಜೆಡಿಯು ಹಾಗೂ ತೃಣಮೂಲ  ಕಾಂಗ್ರೆಸ್ ಸಂಸದರು ರಾಜ್ಯಸಭೆಯ ಸಭಾ­ಧ್ಯಕ್ಷರ ಪೀಠದತ್ತ ಧಾವಿಸಿ ಘೋಷಣೆ ಕೂಗಿದರು. ಲೋಕಸಭೆ­ಯಲ್ಲೂ ಆರ್‌ಜೆಡಿ ಹಾಗೂ ಜೆಡಿಯು ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದರು.

ದೇಶದಲ್ಲಿ ಐದು ಕೋಟಿ ನಿರು­ದ್ಯೋಗಿ­ಗಳಿ­ದ್ದಾರೆ. ಕೇಂದ್ರ ಸರ್ಕಾರ ಇದುವ­ರೆಗೂ ಒಂದೇ ಒಂದು ಉದ್ಯೋಗ­ವನ್ನೂ ಸೃಷ್ಟಿಸಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ರಾಮಗೋಪಾಲ ಯಾದವ್‌ ತರಾಟೆಗೆ ತೆಗೆದು­ಕೊಂಡರು. ಸಿಪಿಎಂನ ಸೀತಾರಾಂ ಯೆಚೂರಿ, ಡಿಎಂಸಿಯ ಡೆರೆಕ್‌ ಓ’ಬ್ರಿಯೆನ್‌ ಎಸ್‌ಪಿ ಸಂಸದರ ಬೆಂಬಲಕ್ಕೆ ನಿಂತರು.

ಹಣಕಾಸು ಸಚಿವರಿಗೆ ವಿದೇಶಿ ಬ್ಯಾಂಕ್‌ಗಳಲ್ಲಿ­ರುವ ಕಪ್ಪುಹಣವನ್ನು ಮರಳಿ ತರಲು ಇದು­ವ­ರೆಗೂ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಟಿಎಂಸಿ ಸದಸ್ಯರು, ತನ್ನ ತಪ್ಪನ್ನು ಮುಚ್ಚಿಟ್ಟುಕೊ­ಳ್ಳಲು ಸರ್ಕಾರ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿ­ಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ರಾಜ್ಯಸಭೆಯಲ್ಲಿ ದೆಹಲಿಯ ಅಕ್ರಮ ಕೊಳೆ­ಗೇರಿ­ಗ­ಳನ್ನು ಸಕ್ರಮಗೊಳಿಸು­ವುದಕ್ಕೆ ಸಂಬಂಧಿಸಿದ ಮಹ­ತ್ವದ ತಿದ್ದು­ಪಡಿ ಮಸೂದೆ ಮಂಡನೆಗೆ ಮುಂದಾದ ವೆಂಕಯ್ಯ ನಾಯ್ಡು ಅವರಿಗೆ  ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ. ಲೋಕ­ಸಭೆಯ ಅಂಗೀಕಾರ ಪಡೆದಿರುವ ಈ ಮಸೂದೆ ಇದೇ ಡಿ.31ರೊಳಗೆ ರಾಜ್ಯಸಭೆಯ ಅನುಮೋದನೆ ಪಡೆಯಬೇಕಿದೆ.

ಮಾಂಸಖಂಡ ಹುರಿ
ಮತಾಂತರ, ಮರು ಮತಾಂತರದ ಹೆಸರಿನಲ್ಲಿ ಕೆಲವು ಸಂಘಟನೆಗಳು ಮಾಂಸಖಂಡಗಳನ್ನು ಹುರಿಗೊಳಿಸಿಕೊಳ್ಳುತ್ತಿವೆ.
– ಡಿ. ರಾಜಾ, ಸಿಪಿಐ ಸಂಸದ

ಗಮನ ಸೆಳೆದ ಫಲಕಗಳು
ಸಂಸತ್‌ ಉಭಯ ಸದನಗಳಲ್ಲಿ ಸೋಮವಾರ ಪ್ರತಿಭಟನೆಯಲ್ಲಿ ತೊಡಗಿದ್ದ ಸಮಾಜವಾದಿ ಪಕ್ಷದ ಸದಸ್ಯರ ಕೈಯಲ್ಲಿದ್ದ ಫಲಕಗಳಲ್ಲಿ ಕಂಡುಬಂದ ಆಕರ್ಷಕ ಘೋಷಣೆ­ಗಳು ಎಲ್ಲರ ಗಮನ ಸೆಳೆದವು.
* ಗಾಂಧಿ ಹಮ್‌ ಶರ್ಮಿಂದಾ ಹೈ, ತೇರಾ ಖಾತಿಲ್‌ ಅಭಿ ಜಿಂದಾ ಹೈ (ಗಾಂಧಿ, ನಮಗೆ ನಾಚಿಕೆ ಆಗುತ್ತಿದೆ, ನಿಮ್ಮ ಕೊಲೆ­ಗಡುಕರು ಇನ್ನೂ ಜೀವಂತ ಇದ್ದಾರೆ)
* ಘರ್‌ ವಾಪಸಿ ಬಂದ್‌ ಕರೋ, ಕಾಲಾಧನ್‌ ವಾಪಸ್‌ ಲಾವೋ
(ಮರು ಮತಾಂತರ ನಿಲ್ಲಿಸಿ, ಕಪ್ಪುಹಣ ಮರಳಿ ತನ್ನಿ)
* ವಾದಾ ಖಿಲಾಫಿ ಬಂದ್‌ ಕರೋ (ವಚನ ಭ್ರಷ್ಟರಾಗಬೇಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT