ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತದೇ ಬೇಸರ, ಅದೇ ಏಕಾಂತ’

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆ ದಿನ ಶಿವಮೊಗ್ಗ­ದ­ಲ್ಲಿದ್ದೆ. ಏಕೋ ತುಂಬಾ ಬೇಸರ­ವಾ­ಗಿತ್ತು. ಸಂಗಾತಿಯೂ ಇರಲಿಲ್ಲ. ಒಬ್ಬಂ­ಟಿ­ಯಾಗಿ ಕೋಣೆಯಲ್ಲಿ ಸುಮ್ಮನೇ ಕುಳಿ­ತಿದ್ದೆ. ಏನು ಮಾಡ­ಬೇಕೆಂದು ತೋಚ­ದಾಗಿತ್ತು. ಮೇಲೆದ್ದು ಸುಮ್ಮನೇ ವಾಯುವಿಹಾರಕ್ಕೆ ಹೊರಟೆ. ಆ ಕ್ಷಣದಲ್ಲಿ ಹುಟ್ಟಿದ್ದು ಈ ಗೀತೆ’

–‘ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ; ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ’ ಎಂಬ ಕವಿತೆಯನ್ನು ರಚಿಸಲು ಸ್ಫೂರ್ತಿ­ಯಾದ ಸನ್ನಿವೇಶವನ್ನು ಹೀಗೆ ಬಿಡಿಸಿಟ್ಟಿದ್ದು ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌.

ಭಾನುವಾರ ಕರ್ನಾಟಕ ಸುಗಮ ಸಂಗೀತ ಪರಿ­ಷತ್‌ ಆಯೋಜಿಸಿದ್ದ ‘ಕವಿಯ ನೋಡಿ ಕವಿತೆ ಕೇಳಿ’ ಸರಣಿ­ಯಲ್ಲಿ ‘ಮೇಸ್ಟ್ರು’ ಹಲವು ನೆನಪು­ಗಳನ್ನು ಮೆಲುಕು ಹಾಕಿ­ದರು. ‘ಮತ್ತದೇ ಬೇಸರ...’ ಗೀತೆಯನ್ನು ಶಮಿತಾ ಮಲ್ನಾಡ್‌ ಸುಶ್ರಾವ್ಯ­ವಾಗಿ ಹಾಡಿದರು.

ಈ ಕಾರ್ಯಕ್ರಮಕ್ಕೆ ವೇದಿಕೆ­ಯಾ­ಗಿದ್ದು ಜಯನಗರ ಏಳನೇ ಹಂತದಲ್ಲಿ­ರುವ ಬೆಂಗಳೂರು ಇಂಟರ್‌ನ್ಯಾಷನಲ್‌ ಅಕಾಡೆಮಿಯ ಸಭಾಂಗಣ. ತಾವು ಬರೆದ ಕವಿತೆಗಳ ಹುಟ್ಟಿಗೆ ಕಾರಣ­ವೇನು? ಯಾವ ಸನ್ನಿವೇಶದಲ್ಲಿ ಹೊರ­ಹೊಮ್ಮಿ­ದವು? ಅದರ ಹಿಂದಿನ ಸ್ಫೂರ್ತಿ­ಯೇನು ಎಂಬುದನ್ನು ಹಾಸ್ಯ­­ಭರಿತ ಮಾತುಗಳೊಂದಿಗೆ ಸೊಗಸಾಗಿ ನಿಸಾರ್‌ ಬಿಚ್ಚಿಟ್ಟರು.

ನಿಸಾರ್‌ ಕವಿಯ ಮಾತುಗಳ ಜತೆಗೆ ಅವರು ರಚಿ­ಸಿ­ರುವ 12 ಕವಿತೆಗಳನ್ನು ಕಿಕ್ಕಿರಿದು ತುಂಬಿದ್ದ ಸಭಾಂಗಣ­ದಲ್ಲಿ ಹೆಸರಾಂತ ಗಾಯಕರು ಪ್ರಸ್ತುತ­ಪಡಿ­ಸಿದರು. ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ, ಕವಿ ಬಿ.ಆರ್‌.ಲಕ್ಷ್ಮಣ ರಾವ್‌ ಸೇರಿದಂತೆ ಅಪಾರ ಸಾಹಿತ್ಯಾಭಿ­ಮಾನಿಗಳು ಈ ವಿನೂತನ ಕಾರ್ಯಕ್ರ­ಮಕ್ಕೆ ಸಾಕ್ಷಿಯಾದರು.

‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ’ ಕವಿತೆ ಹುಟ್ಟಲು ಕಾರಣವಾದ ಸನ್ನಿವೇ­ಶ­ವನ್ನು ಮನೋಜ್ಞವಾಗಿ ವಿವರಿಸಿದರು. ‘1968ರಲ್ಲಿ ನಾನು ಶಿವಮೊಗ್ಗದಲ್ಲಿ ಅಧ್ಯಾಪಕ­ನಾಗಿದ್ದೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಸಂಬಂ­ಧಿ­ಸಿ ಒಂದು ಕವಿತೆ ಬರೆದುಕೊಡು­ವಂತೆ ಆಕಾಶ­ವಾಣಿಯಿಂದ ಪತ್ರ ಬಂದಿತ್ತು. ಬರೆದು­ಕೊಡುತ್ತೇನೆ ಎಂದು ಹೇಳಿ ಸುಮ್ಮನಾಗಿದ್ದೆ. ರಜೆ ಇದ್ದ ಕಾರಣ ಬೆಂಗಳೂರಿಗೆ ಬಂದೆ. ಜಯನಗರದಲ್ಲಿ ಉಳಿದು­ಕೊಂಡಿದ್ದೆ. ಆಕಾಶವಾಣಿ ಕೇಂದ್ರ­ದ­ವರು ಹೇಗೋ ಮತ್ತೆ ನನ್ನ ಬೆನ್ನು ಹತ್ತಿದರು. ಈ ರೀತಿ ಅನ್ಯಾಯ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿ­ಸಿ­ದರು. ಮಾರನೇ ದಿನವೇ ಕೊಡ­ಬೇಕು ಎಂದು ತಾಕೀತು ಮಾಡಿದರು’

‘ಬೇಸರದಿಂದ ತಕ್ಷಣವೇ ಸಿಗರೇಟು ಸೇದುತ್ತಾ ಯೋಚಿಸಲಾರಂಭಿಸಿದೆ. ಮನೆಯ ಮಹಡಿಯಲ್ಲಿ ಓಡಾಡಿದೆ. ಆಗ ಮಲೆನಾಡಿನ ಸೊಬಗು ಕಣ್ಮುಂದೆ ಹಾದುಹೋಯಿತು. ಕಾಲೇಜಿಗೆ ಹೋಗು­ವಾಗ ತುಂಗಾ ನದಿಯನ್ನು ದಾಟಿಕೊಂಡು ಹೋಗ-­ಬೇಕಿತ್ತು. ಆ ಪರಿಸರ ನನ್ನನ್ನು ತುಂಬಾ ಆಕರ್ಷಿ­ಸಿತ್ತು. ಪ್ರಕೃತಿಯೇ ನನ್ನ ಗುರು. ನನ್ನ ಸ್ಫೂರ್ತಿ. ಅಂದು ರಾತ್ರಿಯೇ ನಾನು ಆ ಕವಿತೆ ಬರೆದು ಕಳುಹಿಸಿ­ಕೊಟ್ಟೆ. ಅದನ್ನು ಮೊದಲು ಕೇಳಿದಾಗ ಖುಷಿಯಾ­ಗ­ಲಿಲ್ಲ. ಆದರೆ, ಇಷ್ಟು ಖ್ಯಾತಿ ತಂದುಕೊಡ­ಬಹುದು ಎಂಬ ಊಹೆಯೂ ಇರಲಿಲ್ಲ’ ಎಂದರು.

‘ಒಂದು ದಿನ ತಮಿಳು ಕುಟುಂಬ­ವೊಂದರ ಮನೆ­ಯಿಂದ ‘ನಿತ್ಯೋತ್ಸವ ಅಯ್ಯಪ್ಪ ನಿತ್ಯೋತ್ಸವ’ ಎಂಬ ಹಾಡು ಕೇಳಿಬರುತಿತ್ತು. ಅಲ್ಲಿಗೆ ಹೋಗಿ ವಿಚಾರಿ­ಸಿ­ದಾಗ ನನ್ನ ಗೀತೆಯನ್ನು ಅವರ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿದ್ದರು. ಅಲ್ಲಿದ್ದ ಒಬ್ಬ ಹುಡುಗ, ಶಬರಿ­ಮಲೆ­ಯಲ್ಲೂ ಈ ಹಾಡನ್ನು ಹೇಳುತ್ತಾರೆ ಸರ್‌. ಮೂಲ ಹಾಡನ್ನು ಯಾರೊ ತುಂಬಾ ಚೆನ್ನಾಗಿ ಬರೆ­ದಿ­­ದ್ದಾನೆ ಎಂದ. ಬರ್ತೀನಪ್ಪಾ ಎಂದು ಅಲ್ಲಿಂದ ಹೊರಟೆ’ ಎಂದಾಗ ಸಭೆಯಲ್ಲಿ ನಗು­ವಿನ ಅಲೆ. ‘ಕುರಿಗಳು ಸಾರ್‌ ಕುರಿಗಳು’ ಗೀತೆ­ಯನ್ನು ಪಂಚಮ್‌ ಹಳಿಬಂಡಿ ಸೊಗ­­ಸಾಗಿ ಪ್ರಸ್ತುತಪಡಿ­ಸಿ­ದರು.

‘ಚೀನಿಯರ ಆಕ್ರಮಣದ ಸಂದರ್ಭ­ದಲ್ಲಿ ನಮ್ಮನ್ನು ಆಳುವ ಪ್ರಭುಗಳ ನಿಲುವನ್ನು ಖಂಡಿಸಿ ಬರೆದ ಕವಿತೆ­ಯಿದು. ಅವರ ವರ್ತನೆ­ಯಿಂದ ತುಂಬಾ ಬೇಸರ­ವಾಗಿತ್ತು. ಅದೇ ಯೋಚನೆ­ಯಲ್ಲಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಕುರಿ ಹಿಂಡೊಂದು ದಾರಿ­ಯಲ್ಲಿ ಹಾದು­ಹೋಯಿತು. ಆಗ ಹುಟ್ಟಿದ್ದೇ ಈ ಗೀತೆ’ ಎಂದು ನೆನಪಿಸಿಕೊಂಡರು. ಪರಿಷತ್‌ ಅಧ್ಯಕ್ಷ ವೈ.ಕೆ.ಮುದ್ದು­ಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ಸಂಗೀತಾ ಕಟ್ಟಿ, ನಗರ ಶ್ರೀನಿವಾಸ ಉಡುಪ, ಅರ್ಚನಾ ಉಡುಪ, ಪಿ.ಮಂಗಳಾ ರವಿ, ಎಂ.ಕೆ.­ಜಯಶ್ರೀ, ಸೀಮಾ ರಾಯ್ಕರ್‌ ಹಾಗೂ ಸ್ಪರ್ಶ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT