ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಮಿತ್ರಪಕ್ಷ: ಬಿಜೆಪಿ ಕಸರತ್ತು

Last Updated 19 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಈಗಾಗಲೇ ಎನ್‌ಡಿಎನಲ್ಲಿ ಇರುವ 25 ಅಂಗಪಕ್ಷಗಳ ಜತೆ ಮತ್ತಷ್ಟು ಮಿತ್ರರನ್ನು ಸಂಪಾದಿಸಲು ಹೊರಟಿರುವ ಬಿಜೆಪಿ ತಂತ್ರ ಫಲಪ್ರದವಾಗುವಂತೆ ಕಾಣುತ್ತಿದೆ.

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕ ಜಗನ್‌ಮೋಹನ್‌ ರೆಡ್ಡಿ ಸೋಮವಾರ ಮೋದಿ ಅವರನ್ನು ಭೇಟಿಯಾಗಿ  ಎನ್‌ಡಿಎ ಸರ್ಕಾರಕ್ಕೆ ತಾವು ವಿಷಯಾ­ಧಾರಿತ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಸೀಮಾಂಧ್ರದಲ್ಲಿ ತಮ್ಮ ಬದ್ಧವೈರಿಯಾಗಿರುವ ಟಿಡಿಪಿಯು ಬಿಜೆಪಿಯ ಮಿತ್ರಪಕ್ಷವಾಗಿರುವುದರಿಂದ ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ತಮಗೆ ಕಿರಿಕಿರಿ ನೀಡಬಹುದೆಂಬ ಭಯದಿಂದಾಗಿ ಜಗನ್‌  ಮೋದಿ­ಯವರತ್ತ ಸ್ನೇಹಹಸ್ತ ಚಾಚಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಗೆ ಯಾವುದೇ ಮಿತ್ರರ ಅಗತ್ಯವಿಲ್ಲ. ಆದರೆ, ಆಂಧ್ರಪ್ರದೇಶಕ್ಕೆ ಅವರ ಅಗತ್ಯವಿದೆ ಎಂದು ಜಗನ್‌ ಹೇಳಿದ್ದಾರೆ. ಈ ನಡುವೆ  ಭಾನುವಾರ ಮೋದಿ ಅವರೇ ಖುದ್ದಾಗಿ ಟಿಆರ್‌ಎಸ್‌ ನಾಯಕ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರಿಗೆ ಕರೆ ಮಾಡಿ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.

ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ತೆಲಂಗಾಣ ರಾಜ್ಯಕ್ಕೆ  ಚಂದ್ರಶೇಖರ್‌ ರಾವ್‌ ಮುಖ್ಯಮಂತ್ರಿಯಾಗ­ಲಿದ್ದು, ಮೋದಿ ಜತೆ ಉತ್ತಮ ಸಂಬಂಧ ಹೊಂದುವ ಆಶಯ ವ್ಯಕ್ತಪಡಿಸಿದ್ದಾರೆ. ಹೊಸ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಟಿಆರ್‌ಎಸ್‌ಗೆ ಕೇಂದ್ರದ ಬೆಂಬಲ ಅಗತ್ಯ ಇದೆ ಎನ್ನುವುದೂ ಇಲ್ಲಿ ಗಮರ್ನಾಹ.

ತಮಿಳುನಾಡಿನಲ್ಲಿ ಆಡಳಿತ ಪಕ್ಷವಾಗಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ ಈಗಾಗಲೇ ಮೋದಿಯವರತ್ತ ಸ್ನೇಹದ ನಗೆ ಬೀರಿದ್ದಾರೆ. ನವೀನ್‌ ಪಟ್ನಾಯಕ್‌ ಸಹ ತಾವು ಮೋದಿ ಜತೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಎಐಎಡಿಎಂಕೆ 10 ಸದಸ್ಯರನ್ನು ಬಿಜೆಡಿ ಆರು ಸದಸ್ಯರನ್ನು ಹೊಂದಿವೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಮೋದಿ ಪರೋಕ್ಷ ಸಂದೇಶ ಕಳುಹಿಸಿದ್ದಾರೆ. ಬಂಗಾಳಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು, ಕೇಂದ್ರ ಮತ್ತು ರಾಜ್ಯಗಳ ನಡುವೆ ಸೌಹಾರ್ದ ಸಂಬಂಧ ಇರಬೇಕು ಎಂದು ಹೇಳಿದ್ದಾರೆ.

‘ಮಸೂದೆಗಳನ್ನು ಅಂಗೀಕರಿಸಲು  ರಾಜ್ಯಸಭೆಯಲ್ಲಿ ಸಂಖ್ಯೆಗಳ ಕೊರತೆ ಎದುರಾಗುತ್ತದೆ ಎಂಬ ಏಕೈಕ ಕಾರಣಕ್ಕೆ ಮೋದಿ ಹೀಗೆ ಮಾಡುತ್ತಿಲ್ಲ. ರಾಜ್ಯಗಳಲ್ಲಿ ಆಡಳಿತ ಮಾಡುತ್ತಿರುವ ಪಕ್ಷಗಳ ಆಧಾರದಲ್ಲಿ ಆ ರಾಜ್ಯ­ಗಳಿಗೆ ತಾರತಮ್ಯ ಮಾಡಬಾರದು ಎಂಬ ಆಶಯವನ್ನು ಅವರು ಹೊಂದಿದ್ದಾರೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಎನ್‌ಡಿಎ 336 ಸಂಸದರನ್ನು ಹೊಂದಿದ್ದರೆ, 240 ಸದಸ್ಯರ ರಾಜ್ಯಸಭೆಯಲ್ಲಿ ಆ ಮೈತ್ರಿಕೂಟದ ಬಲ ಕೇವಲ 64.
ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆಯಲು ಎನ್‌ಡಿಎ ಸರ್ಕಾರ, ಮೇಲಿಂದ ಮೇಲೆ ಸಂಸತ್ತಿನ ಜಂಟಿ ಅಧಿವೇಶನ ಕರೆಯುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಅಮ್ಮ, ದೀದಿ ಜೋಡಿ?
ಕಾಂಗ್ರೆಸ್‌ ಪಕ್ಷಕ್ಕೆ ವಿರೋಧ ಪಕ್ಷದಲ್ಲಿ ಕೂರು­ವುದಕ್ಕೂ ಸಂಖ್ಯಾ­ಬಲದ ಕೊರತೆ ಇರುವ ಕಾರಣ ಇದೀಗ ತೃಣಮೂಲ ಕಾಂಗ್ರೆಸ್‌್ ಹಾಗೂ ಎಐಎಡಿಎಂಕೆ ಒಟ್ಟಾಗಿ ವಿರೋಧ ಪಕ್ಷ ರಚಿಸು­ವುದಕ್ಕೆ ಪ್ರಯತ್ನಿಸುತ್ತಿವೆಯೇ? ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ನಿಟ್ಟಿನಲ್ಲಿ ತಮಿಳುನಾಡು ಮುಖ್ಯ­ಮಂತ್ರಿ ಜೆ.ಜಯಲಲಿತಾ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

‘ಲೋಕಸಭೆಯಲ್ಲಿ ರಾಜ್ಯಗಳ ಹಿತಾಸಕ್ತಿಯನ್ನು ರಕ್ಷಿಸುವುದು ಮಮತಾ ಉದ್ದೇಶವಾಗಿದೆ’ ಎಂದು ತೃಣಮೂಲ ಕಾಂಗ್ರೆಸ್‌್ ಮುಖಂಡರು ಹೇಳಿದ್ದಾರೆ. ‘ಬಿಹಾರ ಹಾಗೂ ಉತ್ತರಪ್ರದೇಶ ಹೊರತು­ಪಡಿಸಿ ನಾವು ಎಐಡಿಎಂಕೆಯಂಥ ಪ್ರಾದೇಶಿಕ ಪಕ್ಷ­ಗಳೊಂದಿಗೆ ಮಾತನಾಡಬೇಕಿದೆ’ ಎಂದು ಮಮತಾ ಶುಕ್ರವಾರ ಸಂಜೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT