ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಾವು ಸೇತುವೆಗೆ ಮಂಜೂರಾಯ್ತು ಹಣ

ನಕ್ಸಲರ ಮತ್ತಾವು ಬಾಂಬ್ ದಾಳಿಗೆ ಎಂಟು ವರ್ಷ, ಅಭಿವೃದ್ಧಿಗೆ ನಾಂದಿ
Last Updated 29 ಜುಲೈ 2014, 9:50 IST
ಅಕ್ಷರ ಗಾತ್ರ

ಹೆಬ್ರಿ : ಮತ್ತಾವಿಗೆ ಬೆಳಕು ಬಂತು... ಎಲ್ಲಾ ಬಂತು, ಸೇತುವೆ ಮಾತ್ರ ಆಗಲೇ ಇಲ್ಲ.. ಇದು ನಕ್ಸಲ್ ಪೀಡಿತ ಕಬ್ಬಿನಾಲೆಯ ಮತ್ತಾವಿನ ಮನೆಮಂದಿಯ  ಮನದಾಳದ ಮಾತು. ಇದೀಗ ಆ ಬೇಡಿಕೆಯೂ ಈಡೇರುವ ಹಂತ ತಲುಪಿದೆ.

2005ರಲ್ಲಿ ನಕ್ಸಲರು ಪೊಲೀಸರ ಮೇಲೆ ನಡೆಸಿದ ಮತ್ತಾವು ಬಾಂಬ್ ದಾಳಿಗೆ ಜುಲೈ 28ಕ್ಕೆ ಸರಿಯಾಗಿ ಎಂಟು ವರ್ಷ ತುಂಬುತ್ತದೆ.
ಆ ಬಳಿಕ ಇಲ್ಲಿನ ಮುದ್ರಾಡಿ ಗ್ರಾಮ ಪಂಚಾ­ಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರು ನಕ್ಸಲ್ ಪೀಡಿತ ಇಲ್ಲಿನ ಮಲೆಕುಡಿಯ ಮನೆಮಂದಿಯ ಕಷ್ಟಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ.

10 ಮನೆಗಳಿರುವ ಮತ್ತಾವಿನ ಮಲೆ­ಕುಡಿಯ ಜನಾಂಗದ ಮೂಲ ಸೌಕರ್ಯದ ಹಲವು ಬೇಡಿಕೆಯನ್ನು ಈಗಾಗಲೇ ಈಡೇರಿಸ­ಲಾಗಿದೆ. ಮುದ್ರಾಡಿ ಗ್ರಾಮ ಪಂಚಾಯಿತಿ­ಯಿಂದ ಸೋಲಾರ್ ದೀಪಗಳನ್ನು ನೀಡಲಾ­ಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೊಗ ಖಾತ್ರಿ ಯೋಜನೆಯಡಿ ಅಗತ್ಯ ಕೆಲಸಗಳನ್ನು ನಿರ್ವಹಿಸಲಾಗಿದೆ. ರಸ್ತೆ ದುರಸ್ತಿ ಜೊತೆಗೆ ಹಲವರಿಗೆ ವೈಯಕ್ತಿಕ ಸೌಲಭ್ಯಗಳನ್ನೂ ನೀಡಲಾಗಿದೆ.
ಬೆಳಕಿನ ಕನಸು– ನನಸು: ಮತ್ತಾವಿನ ಜನರ ಬಹುವರ್ಷಗಳ ಕನಸಿಗೆ ಸ್ಪಂದಿಸಿದ ಜನ­ಪ್ರತಿನಿಧಿಗಳು ಮತ್ತು ವಿದ್ಯುತ್ ಇಲಾಖೆ 90 ಕಂಬಗಳನ್ನು ಅಳವಡಿಸಿ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದು ಅತ್ಯಂತ ಖುಷಿಯ ಜೊತೆಗೆ ಕೊನೆಗೂ ಬೆಳಕು ಕಂಡ ಸಂತಸ ಇಲ್ಲಿನ ಮಂದಿಗಿದೆ.

ನಕ್ಸಲ್ ಪೀಡಿತ ಕಬ್ಬಿನಾಲೆಯ ಮತ್ತಾವಿನ ಮನೆಗಳಿಗೆ ಹೋಗಲು ಮಳೆಗಾಲದಲ್ಲಿ ಹರ­ಸಾಹಸ ಪಡಬೇಕಾಗಿದೆ. ಮರದ ಪಾಪಿನ ಮೂಲಕ ಸರ್ಕಸ್ ಮಾಡಿ ಹೋಗಬೇಕಾಗಿದೆ. ಮೊದಲು ಮತ್ತಾವು ರಸ್ತೆಯ ಪಕ್ಕದಲ್ಲೇ ಪಾಪನ್ನು ಹಾಕಿದ್ದು, ಕಳೆದ ವರ್ಷ ಅಲ್ಲಿಂದ ಸ್ವಲ್ಪ ದೂರ ಬಂಡೆಗಳ ನಡುವೆ ಗ್ರಾಮಸ್ಥರು ಹಾಕಿದ್ದಾರೆ. ಈ ಬಾರಿ  ಮತ್ತೆ ಮೊದಲಿನ ಜಾಗ­ದಲ್ಲೇ ಹಾಕಲಾಗಿದೆ. ಇದರಲ್ಲಿ ನಡೆಯು­ವುದೆಂದರೆ ಜೀವವನ್ನು ಕೈಯಲ್ಲಿ ಹಿಡಿದು ಸಾಗುವ ಅನುಭವ. ಎಲ್ಲಾದರೂ ಆಯ  ತಪ್ಪಿದರೆ ಹೊಳೆಗೆ ಬಿದ್ದು ಕೊಚ್ಚಿ ಹೋಗುವ ಭೀತಿ ಇದೆ.
ನಕ್ಸಲ್ ಪ್ಯಾಕೇಜ್ ಸೇರಿದಂತೆ ಹಲವು ಯೋಜನೆಯಡಿ ಹಲವು ಬಾರಿ ಮನವಿ ಮಾಡಿದರೂ ಇಲ್ಲಿನ ಸೇತುವೆಯ ಕನಸು ಮಾತ್ರ ಕನಸಾಗಿಯೇ ಉಳಿದಿತ್ತು.

ಮೂಡಿದ ಭರವಸೆ: ಮತ್ತಾವು ಸೇತುವೆಗೆ ಈಚೆಗೆ ₨18 ಲಕ್ಷ ಮಂಜೂರಾಗಿದ್ದು, ಹೀಗಾಗಿ ಇದೂ ಈಡೇರುವ ಭರವಸೆ ಮೂಡಿದೆ. ದೂರ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಈ ಸೇತುವೆ ಮಂಜೂರಾಗಿದೆ. ಇದು ಆದಷ್ಟು ಬೇಗನೆ ಕಾರ್ಯಗತ ಆಗಲಿ ಎಂಬುದು ಈ ಪ್ರದೇಶದ ಜನರ ಆಶಯವಾಗಿದೆ.

ನಕ್ಸಲ್ ಪೀಡಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈಚೆಗೆ ಭೇಟಿ ನಿಡಿದ್ದು, ಕಬ್ಬಿನಾಲೆಯ ಮತ್ತಾವಿಗೂ ಬಂದು ಪರಿಶೀಲನೆ ನಡೆಸಿದ್ದರು. ಇಲ್ಲಿನ ಸೇತುವೆ ಮತ್ತು ಇತರ ಬೇಡಿಕೆಗಳನ್ನು ಆದ್ಯತೆಯ ನೆಲೆಯಲ್ಲಿ ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದರು.

ಮುದ್ರಾಡಿ ಪಂಚಾಯತಿ ಕೂಡ ಹೆಚ್ಚಿನ ಅಭಿವೃದ್ಧಿಗೆ ಪ್ರಯತ್ನ ಮಾಡಿ ಕೆಲಸ ನಿರ್ವ­ಹಿಸಿದೆ. ಆರೋಗ್ಯ ಉಪಕೇಂದ್ರ, ಮತ್ತಾವಿಗೆ ವಿದ್ಯುತ್ ಕಲ್ಪಿಸಲಾಗಿದೆ ಇನ್ನೂ ಹಲವು ಅಗತ್ಯದ ಕೆಲಸ ಬಾಕಿ ಇದೆ ಎಂದು ಇಲ್ಲಿನ ಹಿರಿಯ ಗ್ರಾಮಸ್ಥ ಪಂಚಾಯತಿ ಸದಸ್ಯ ಕಬ್ಬಿನಾಲೆ ಚಂದ್ರಶೇಖರ ಬಾಯರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT