ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಉದ್ಭವಿಸಿದ ಬನ್ನಿ ಮಹಾಂಕಾಳಿ!

Last Updated 15 ಸೆಪ್ಟೆಂಬರ್ 2014, 9:07 IST
ಅಕ್ಷರ ಗಾತ್ರ

ಬಳ್ಳಾರಿ: ದಸರಾ ಹಬ್ಬ ಬಂತೆಂದರೆ ಸಾಕು ಮಹಿಳೆಯರು ಗುಂಪು ಗುಂಪಾಗಿ ಬೆಳ್ಳಂಬೆಳಗ್ಗೆ ಬನ್ನಿ ಮಹಾಂಕಾಳಿ ದೇವಿಗೆ ಪೂಜೆ ಸಲ್ಲಿಸುವುದು ವಾಡಿಕೆ. ದೇವ­ಸ್ಥಾನ ಅಥವಾ ಬನ್ನಿ ಮರ ಕಂಡಲ್ಲೆಲ್ಲಾ ಕೈ ಮುಗಿದು ಹರಕೆ ತೀರಿಸುವ ಮಹಿಳೆ­ಯರು ಇರುವುದ­ರಿಂದಲೇ ಬೀದಿ ಬೀದಿಯಲ್ಲಿಯೂ ಇವು ಇರುತ್ತವೆ. 

ಅದೇ ರೀತಿ ನಗರದ ಡಾ.ರಾಜ­ಕುಮಾರ್ ರಸ್ತೆಯಲ್ಲಿ ರುವ ಜಿಲ್ಲಾಧಿ­ಕಾರಿಗಳ ನಿವಾಸದ ಎದುರು ತಾತ್ಕಾಲಿಕ ದೇವಸ್ಥಾನವೊಂದು ತಲೆ ಎತ್ತಿದೆ. ಕಲ್ಲಿನಿಂದ ಕೆತ್ತಿದ ನಾಗರ ಮೂರ್ತಿ, ದೇವಿಯ ಭಾವಚಿತ್ರ ಹಾಕಿರುವ ಇಲ್ಲಿನ ಬನ್ನಿ ಮರಕ್ಕೆ ಇಲ್ಲಿ ಸಂಚರಿಸುವ ಜನ­ರೆಲ್ಲಾ ಕೈ ಮುಗಿದು ಹೋಗುತ್ತಿದ್ದಾರೆ. ಈವರೆಗೂ ಇಲ್ಲದಿರುವ ದೇವರ ಆಸ್ಥಾನ ಈಗ ದಿಢೀರ್‌ ಪ್ರತ್ಯಕ್ಷ­ವಾಗಿರುವುದು ಸಾರ್ವ­ಜ­­­ನಿಕರ ಅಚ್ಚರಿಗೆ ಕಾರಣವಾಗಿದೆ.

ಈಗಾಗಲೇ ಒಂದು ಬಾರಿ ಇಲ್ಲಿ ಆರಂಭವಾಗಿದ್ದ ಧಾರ್ಮಿಕ ಕೇಂದ್ರವನ್ನು ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆ­ಯಲ್ಲಿ ಅಂದಿನ ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್‌ ಬಿಸ್ವಾಸ್‌ ಅವರು ತೆರವುಗೊಳಿಸಿದ್ದರು.

ಆಗಲೇ ಆ ಜಾಗೆಯಲ್ಲಿ ದೊಡ್ಡ ದೇವಸ್ಥಾನವೊಂದು ನಿರ್ಮಾಣ­ವಾ­ಗುವ ಹಂತದಲ್ಲಿತ್ತು. ಅಲ್ಲದೇ ಅರ್ಚಕರೂ ನೇಮಕ­ವಾಗಿದ್ದರು. ಇದರ ನಿರ್ವಹಣೆಯನ್ನು ಅಲ್ಲಿನ ಕೆಲವು ಸ್ಥಳಿಯರೇ ನಿರ್ವಹಿಸುತ್ತಿದ್ದರು.

ಆಗ ಈ ದೇವಸ್ಥಾನ ತೆರವು­ಗೊಳಿಸು­ವುದಕ್ಕೆ ಯಾರಿಂದಲೂ ವಿರೋಧ ವ್ಯಕ್ತವಾಗಿರಲಿಲ್ಲ. ಈಗ ಮತ್ತೆ ಅದೇ ಜಾಗೆಯಲ್ಲಿ ಆರಂಭವಾಗಿರುವ ಧಾರ್ಮಿಕ ಕೇಂದ್ರ ಈ ಹಿಂದಿನಷ್ಟೇ ದೊಡ್ಡದಾಗಿ ಬೆಳೆಯುವ ಸಾಧ್ಯತೆ ಇದೆ.

‘ನಿಜವಾದ ದೇವರ ಸ್ಥಾನವಾಗಿದ್ದರೆ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ನಡೆಸಲು ಯಾರ ಅಭ್ಯಂತರವೂ ಇಲ್ಲ. ಆದರೆ, ಜನರ ಧಾರ್ಮಿಕ ಭಾವನೆ­ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಹಣ ಸಂಪಾದಿಸುವ ದೇವಸ್ಥಾನಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವುದು ದುರದೃಷ್ಟಕರ’ ಎನ್ನುವುದು ಇಲ್ಲಿನ ಕೆಲವು ಪ್ರಜ್ಞಾ­ವಂತರ ಅಂಬೋಣ.

ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಕೇಂದ್ರ ತೆರೆಯದಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ರಾಷ್ಟ್ರೀಯ ಹೆದ್ದಾರಿ 63ರ ಬದಿಯಲ್ಲಿಯೇ ಮತ್ತೆ ಆರಂಭ­ವಾಗಿರುವ ಬನ್ನಿ ಮಹಾಂಕಾಳಿ ದೇವಸ್ಥಾನ­­ದಿಂದ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ.
ಈ ಪ್ರದೇಶದಲ್ಲಿ ಸರ್ಕಾರಿ ಅತಿಥಿ ಗೃಹ, ಲೋಕೋಪಯೋಗಿ ಇಲಾಖೆ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ, ಜಿಲ್ಲಾಧಿಕಾರಿಗಳ ನಿವಾಸ ಹೊರತುಪಡಿಸಿ, ಯಾವ ಬಡಾವಣೆ ಅಥವಾ ಮನೆಗಳೂ ಇಲ್ಲ. ಆದರೂ ಇಲ್ಲಿ ಏಕಾಏಕಿ ಬನ್ನಿ ಮಹಾಂಕಾಳಿ ಉದ್ಭವವಾಗಿದ್ದು, ರಸ್ತೆ ಮೇಲೆ ಸಂಚರಿಸುವ ಜನರು ಭಕ್ತಿಯಿಂದ ಕೈ ಮುಗಿದು ಹೋಗುತ್ತಿದ್ದಾರೆ.

‘ದೇವಸ್ಥಾನಕ್ಕೆ ತನ್ನದೆ ಆದ ವಾತಾವರಣ ಇರಬೇಕು. ಆದರೆ, ಈ ಜಾಗೆಯಲ್ಲಿ ಅದಾವುದೂ ಇಲ್ಲ. ಇದೊಂದು ಧಾರ್ಮಿಕ ಕೇಂದ್ರವಾಗಿರ­ಬೇಕೆ ಹೊರತು, ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕೇಂದ್ರವಾಗಬಾರದು. ಇಲ್ಲಿಗೆ ಬರುವ ಜನರು ಭಯ ಭಕ್ತಿಯಿಂದ ನಡೆದರೆ, ಅವರ ನಡೆಯನ್ನು ಆದಾಯದ ಮೂಲ ವನ್ನಾಗಿಸಿಕೊಳ್ಳಬಾರದು’ ಎಂಬುದು ವೀರೇಶ್‌ ಅಭಿಮತ.
ಒಟ್ಟಾರೆ, ಎಲ್ಲೆಂದರಲ್ಲಿ ತಲೆ ಎತ್ತು­ತ್ತಿರುವ ಬನ್ನಿ ಮಹಾಂಕಾಳಿ ದೇವಸ್ಥಾನ­ಗಳು ಜನರ ಭಾವನೆಗಳ ಜತೆಗೆ ಆಟ­ವಾಡದೇ, ಅವರ ಮನಸ್ಸಿಗೆ ನೆಮ್ಮದಿಯನ್ನು ಕೊಡುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT