ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಓಡಿ ಬಂದ ಕಾಡು ಕುದುರೆ...!

‘ಕವಿಯ ನೋಡಿ--–ಕವಿತೆ ಕೇಳಿ’ ಕಾರ್ಯಕ್ರಮದಲ್ಲಿ ಕಂಬಾರರ ಗೀತೆಗಳ ಮಾಧುರ್ಯ
Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಡು ಕುದುರೆ ಓಡಿ ಬಂದಿತ್ತಾ... ಗೀತೆ­ಯನ್ನು ಸುಬ್ಬಣ್ಣ­ನ­ವರು ರಾಷ್ಟ್ರಪತಿ ಭವನ­ದಲ್ಲಿ ನಡೆದ ಕಾರ್ಯ­ಕ್ರಮ­ವೊಂದರಲ್ಲಿ ತನ್ಮಯ­ರಾಗಿ ಹಾಡಿ­ದರು. ಆಗ ಅವರನ್ನು ಖ್ಯಾತ ನಿರ್ದೇ­ಶಕ ಕೆ.ಅಬ್ಬಾಸ್‌ ಸೇರಿದಂತೆ ಹಲವರು ಎದ್ದು­ಬಂದು ತಬ್ಬಿಕೊಂಡರು. ಕನ್ನಡ ಗೊತ್ತಿರದ ಅವರು ‘ಇಸ್‌ ಇಟ್‌ ಎ ಸಾಂಗ್‌ ಆನ್‌ ವೈಲ್ಡ್‌ ಹಾರ್ಸ್‌’ ಎಂದು ಕೇಳಿದರು. ಕೇವಲ ಹಾಡಿನ ನಾದ ಕೇಳಿ ಅರ್ಥ­ಮಾಡಿಕೊಂಡಿದ್ದರು’

‘ಮದ್ರಾಸ್‌ನ ಸ್ಟುಡಿಯೊದಲ್ಲಿ ಈ ಗೀತೆಯನ್ನು ಹಾಡಲು ಸುಬ್ಬಣ್ಣ 13 ಅವಕಾಶ ತೆಗೆದು­ಕೊಂಡಿದ್ದರು. ಆಗಲೇ ಗ್ಯಾಲರಿ ತುಂಬಿ ಹೋಗಿತ್ತು. ಈ ಹಾಡಿಗೆ ಈಗಲೂ ಜನರನ್ನು ಸೆಳೆಯುವ ಅದ್ಭುತ ಶಕ್ತಿ ಇದೆ. ಇದು ನನ್ನ ನೆಚ್ಚಿನ ಗೀತೆ. ಜಾನ­ಪದ­ದಲ್ಲಿ ನಾದವೇ ಒಂದು ಘಟಕ. ಈ ನಾದಕ್ಕೆ ಒಂದು ಅದ್ಭುತ ಭಾಷೆ ಇದೆ’

– ‘ಕಾಡು ಕುದುರೆ ಓಡಿ ಬಂದಿತ್ತಾ...’ ಗೀತೆಯ ಜನಪ್ರಿಯತೆಯನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರು ಬಿಚ್ಚಿಟ್ಟಿದ್ದು ಹೀಗೆ.
ನಗರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿ­ಷತ್‌ ಭಾನುವಾರ ಆಯೋಜಿಸಿದ್ದ ‘ಕವಿಯ ನೋಡಿ ಕವಿತೆ ಕೇಳಿ’ ಸರಣಿ ಕಾರ್ಯಕ್ರಮದಲ್ಲಿ ಅವರು ಹಲವು ನೆನಪುಗಳನ್ನು ಮೆಲುಕು ಹಾಕಿದರು. ಈ ಗೀತೆ ಹಾಡಿ ಕಿಕ್ಕಿರಿದ ಜನಸ್ತೋಮವನ್ನು ರಂಜಿಸಿದ್ದು ಗಾಯಕ ಶಿವಮೊಗ್ಗ ಸುಬ್ಬಣ್ಣ. ಆಗ ಮತ್ತೆ ಕಾಡು ಕುದುರೆ ಓಡಿಬಂದ ಅನುಭವ...!

ಕಂಬಾರರ ಮಾತುಗಳ ಜತೆಗೆ ಅವರು ರಚಿಸಿ­ರುವ 12 ಕವಿತೆಗಳನ್ನು ಹೆಸರಾಂತ ಗಾಯಕರು ಪ್ರಸ್ತುತ­ಪಡಿ­ಸಿದರು. ಪರಿಷತ್‌ ಅಧ್ಯಕ್ಷ ವೈ.ಕೆ.­ಮುದ್ದು­ಕೃಷ್ಣ, ಕವಿಗಳಾದ ಎಚ್‌.ಎಸ್‌.­ವೆಂಕಟೇಶ­ಮೂರ್ತಿ, ಬಿ.ಆರ್‌.ಲಕ್ಷ್ಮಣ ರಾವ್‌ ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳು ಈ ವಿನೂತನ ಕಾರ್ಯಕ್ರಮಕ್ಕೆ ಕಿವಿಯಾದರು.

ಕವಿತೆಗಳ ಸೃಷ್ಟಿಗೆ ಕಾರಣವಾದ ಸನ್ನಿವೇಶ, ಅದರ ಆಶಯವನ್ನು ಕಂಬಾರರು ಮನೋಜ್ಞವಾಗಿ ಕಟ್ಟಿಕೊಟ್ಟರು. ‘ಪಕ್ಕ ವಾದ್ಯದ ಅಬ್ಬರದಿಂದಾಗಿ ಇಂದು ಭಾವ­ಗೀತೆಯ ಭಾವವೇ ಕಳೆದು ಹೋಗುತ್ತಿದೆ. ಗೀತೆ ಹಾಗೂ ಅದರ ಅರ್ಥವನ್ನು ಜನರಿಗೆ ಸಮರ್ಪಕ­ವಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಗೀತೆ ಮುಖ್ಯ­ವಾಗ­ಬೇಕೇ ಹೊರತು  ಪಕ್ಕ ವಾದ್ಯದ ಅಬ್ಬರ ಅಲ್ಲ’ ಎಂದು ಅಭಿಪ್ರಾಯಪಟ್ಟರು.
ತಾವೇ ರಚಿಸಿರುವ ‘ಯಾಕೆ ತಂಗಿ ಹಿಂಗ್ಯಾಕೆ ಹಾರಾಡ್ತಿ ಪರಿ ಬಂದಾಗ ಆಡ್ತಿ’ ಹಾಗೂ ‘ಬಿಸಿಲು ಕುದುರೆ­­ಯನ್ನೇರಿ ಹೋದ...’ ಗೀತೆಯನ್ನು ಹಾಡಿ­ದರು. ಆದರೆ, ಇದಕ್ಕೆ ಅವರು ಪಕ್ಕ ವಾದ್ಯದ ನೆರವು ಪಡೆಯಲಿಲ್ಲ.

‘ಏನು ಹೇಳಲಿ ಜನರ...’ ಗೀತೆಯನ್ನು ಗಾಯಕಿ ಕಸ್ತೂರಿ ಶಂಕರ್‌ ಹಾಡಿದರು. ‘ಕಾಂತ­ನಿಲ್ಲದ ಮ್ಯಾಲೆ ಏಕಾಂತವೇತಕೆ? ಗಂಧ ಲೇಪನವೇತಕೆ ಈ ದೇಹಕೆ’ ಎಂಬ ಗೀತೆಯನ್ನು ಸಂಗೀತಾಕಟ್ಟಿ ಸುಶ್ರಾವ್ಯವಾಗಿ ಹಾಡಿ ಜೋರು ಚಪ್ಪಾಳೆ ಗಿಟ್ಟಿಸಿಕೊಂಡರು.
‘ಇವ ಯಾವ ಊರಿನ ಮಾವ ಈ ಚೆಲುವ’ ಗೀತೆಗೆ ಸುರೇಖಾ ಹೆಗ್ಡೆ ಧ್ವನಿಯಾದರು. ‘ಈ ಗೀತೆ ಎಷ್ಟು ಪ್ರಸಿದ್ಧಿ ಪಡೆದಿತ್ತು ಎಂದರೆ ಕ್ಲಬ್‌ಗಳಲ್ಲೂ ಹಾಡುತ್ತಿದ್ದರು’ ಎಂದು ಕಂಬಾರರು ನುಡಿದರು.

‘ಅವ ನೋಡ ಕೊಳಲೂದಿ ಕುಣಿಯುವ ಹುಡುಗ, ಹುಚ್ಚು ಕೆರಳಿಸತಾನ ಅಂಗಾಂಗದೊಳಗ’ ಎಂಬ ಗೀತೆಯನ್ನು ಹಾಡಿದ್ದು ಪೂರ್ಣಿಮಾ. ಈ ಹಾಡಿನ ತಾತ್ಪರ್ಯವನ್ನು ಕಂಬಾರರು ಸೊಗಸಾಗಿ ವಿವರಿಸಿದರು. ‘ಅಗಲಿ ಇರಲಾರೆನು, ಮರೆತು ಇರ­ಲಾರೆನು ನಿನ್ನನ್ನ’ ಗೀತೆಯನ್ನು ಡಾ.­ಜಯಶ್ರೀ ಕಂಬಾರ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT