ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಿಂಚಿದ ಗ್ಲೆನ್‌ ಮ್ಯಾಕ್ಸ್‌ವೆಲ್‌

ಸತತ ಮೂರನೇ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಕಿಂಗ್ಸ್‌ ಇಲೆವೆನ್‌; ಸನ್‌ರೈಸರ್ಸ್‌ಗೆ ಸೋಲು
Last Updated 22 ಏಪ್ರಿಲ್ 2014, 20:15 IST
ಅಕ್ಷರ ಗಾತ್ರ

ಶಾರ್ಜಾ (ಪಿಟಿಐ): ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ (95) ಅಬ್ಬರ ಮುಂದುವರಿದಿದೆ. ಎದುರಾಳಿ ಬೌಲರ್‌ಗಳ ಚಳಿ ಬಿಡಿಸಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಐಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸತತ ಮೂರನೇ ಗೆಲುವು ಪಡೆದಿದೆ.
ಶಾರ್ಜಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಜಾರ್ಜ್‌ ಬೇಲಿ ಬಳಗ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 72 ರನ್‌ಗಳ ಜಯ ಸಾಧಿಸಿತು.

ಟಾಸ್‌ ಗೆದ್ದ ಶಿಖರ್ ಧವನ್ ಸಾರಥ್ಯದ ಸನ್‌ರೈಸರ್ಸ್‌ ತಂಡ ಕಿಂಗ್ಸ್‌ ಇಲೆವೆನ್‌ಗೆ ಮೊದಲು ಬ್ಯಾಟ್‌ ಮಾಡಲು ಆಹ್ವಾನ ನೀಡಿತು. ಹಿಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದ ಖುಷಿಯಲ್ಲಿದ್ದ ಕಿಂಗ್ಸ್ ಇಲೆವೆನ್‌ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 193 ರನ್‌ ಕಲೆ ಹಾಕಿತು. ಸನ್‌ರೈಸರ್ಸ್‌ 19.2 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟಾಯಿತು.

ಮ್ಯಾಕ್ಸ್‌ವೆಲ್‌ ಮಿಂಚು: ಆರಂಭಿಕ ಜೋಡಿ ಚೇತೇಶ್ವರ ಪೂಜಾರ (35) ಮತ್ತು ವೀರೇಂದ್ರ ಸೆಹ್ವಾಗ್‌ (30) ಮೊದಲ ವಿಕೆಟ್‌ಗೆ 51 ರನ್‌ ಕಲೆ ಹಾಕಿ ಕಿಂಗ್ಸ್‌ ಇಲೆವೆನ್‌ಗೆ ಉತ್ತಮ ಆರಂಭ ನೀಡಿದರು.

ಆರಂಭಿಕ ಬುನಾದಿಯ ಮೇಲೆ ಚೆಂದದ ಇನಿಂಗ್ಸ್‌ ಕಟ್ಟಿದ ಮ್ಯಾಕ್ಸ್‌ವೆಲ್‌  ಕೇವಲ 43 ಎಸೆತಗಳಲ್ಲಿ 95 ರನ್‌ ಸಿಡಿಸಿ ಮತ್ತೊಮ್ಮೆ ಶತಕದ ಅಂಚಿನಲ್ಲಿ ಎಡವಿದರು. ಹಿಂದಿನ ಪಂದ್ಯಗಳಲ್ಲಿ ಅವರು ಕ್ರಮವಾಗಿ 95 ಮತ್ತು 89 ರನ್‌ ಗಳಿಸಿದ್ದರು.

ರನ್‌ ಮಳೆ ಸುರಿಸಿದ ಮ್ಯಾಕ್ಸ್‌ವೆಲ್‌ ಬೌಂಡರಿ (5) ಮತ್ತು ಸಿಕ್ಸರ್‌ (9) ಮೂಲಕವೇ 74 ರನ್ ಕಲೆ ಹಾಕಿದರು. ಹತ್ತನೇ ಓವರ್‌ನಲ್ಲಿ ಎರಡು ಜೀವದಾನ ಪಡೆದ ಮ್ಯಾಕ್ಸ್‌ವೆಲ್‌ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಆ ಓವರ್‌ನ ನಾಲ್ಕು ಮತ್ತು ಆರನೇ ಎಸೆತದಲ್ಲಿ ಕ್ರಮವಾಗಿ ಡೇವಿಡ್‌ ವಾರ್ನರ್‌ ಮತ್ತು ಸಮಿ ಕ್ಯಾಚ್‌ ಕೈಚೆಲ್ಲಿದ್ದರು.  ಈ ಕಾರಣ ಸನ್‌ರೈಸರ್ಸ್‌ ಭಾರಿ ಬೆಲೆ ತೆರಬೇಕಾಯಿತು.
ಕಿಂಗ್ಸ್‌ ಇಲೆವೆನ್‌ ಮೊದಲ ಹತ್ತು ಓವರ್‌ಗಳಲ್ಲಿ 77 ರನ್‌ಗಳನ್ನಷ್ಟೇ ಕಲೆ ಹಾಕಿತ್ತು. ಕೊನೆಯ 60 ಎಸೆತಗಳಲ್ಲಿ 116 ರನ್‌ ಸೇರಿಸಿತು. ಮ್ಯಾಕ್ಸ್‌ವೆಲ್‌ ಅಬ್ಬರ ಹೇಗಿತ್ತು ಎನ್ನುವುದಕ್ಕೆ ಈ ಅಂಕಿಅಂಶವೇ ಸಾಕ್ಷಿ.

ಡೇವಿಡ್ ಮಿಲ್ಲರ್‌ (10) ಹೆಚ್ಚು ರನ್‌ ಗಳಿಸಲಿಲ್ಲವಾದರೂ  ಮ್ಯಾಕ್ಸ್‌ವೆಲ್‌ಗೆ ಉತ್ತಮ ಬೆಂಬಲ ನೀಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ ಕೇವಲ 27 ಎಸೆತಗಳಲ್ಲಿ 68 ರನ್‌ ಸಿಡಿಸಿತು. ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್‌ 13ನೇ ಓವರ್‌ನಲ್ಲಿ ಅಮಿತ್‌ ಮಿಶ್ರಾ ಅವರನ್ನು ಚೆನ್ನಾಗಿಯೇ ದಂಡಿಸಿದರು. ಆ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಸಿಡಿಸಿದರು.

ಬಾಲಾಜಿ ಪ್ರಭಾವಿ ಬೌಲಿಂಗ್‌: ಸವಾಲಿನ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ ತಂಡ ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು. ನಾಲ್ಕು ಓವರ್‌ಗಳಲ್ಲಿ ಕೇವಲ 13 ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದ ಲಕ್ಷ್ಮೀಪತಿ ಬಾಲಾಜಿ ಕಿಂಗ್ಸ್‌ ಇಲೆವೆನ್‌ ಗೆಲುವಿನ ಹಾದಿ ಸುಗಮಗೊಳಿಸಿದರು. ಮಿಷೆಲ್‌ ಜಾನ್ಸನ್‌ ಮತ್ತು ಅಕ್ಷರ್‌ ಪಟೇಲ್‌ ತಲಾ ಎರಡು ವಿಕೆಟ್‌ ಪಡೆದರು.

ನಾಯಕ ಧವನ್‌ (1) ಎರಡನೇ ಓವರ್‌ನಲ್ಲೇ ಔಟಾದರು. ಬಾಲಾಜಿ ಅವರು ಐದನೇ ಓವರ್‌ನಲ್ಲಿ ಆ್ಯರನ್‌ ಫಿಂಚ್‌ (19, 15 ಎಸೆತ) ಮತ್ತು ಡೇವಿಡ್‌ ವಾರ್ನರ್‌ (8) ವಿಕೆಟ್‌ ಪಡೆದು ಸನ್‌ರೈಸರ್ಸ್‌ಗೆ ಆಘಾತ ನೀಡಿದರು. ಇದರಿಂದ ಚೇತರಿಸಿಕೊಳ್ಳಲು ತಂಡ ವಿಫಲವಾಯಿತು.

ಕರ್ನಾಟಕದ ಕೆ.ಎಲ್‌. ರಾಹುಲ್‌ (27, 27 ಎಸೆತ, 1 ಬೌಂ, 1 ಸಿ) ಅವರನ್ನು ಹೊರತುಪಡಿಸಿ  ಇತರ ಯಾರಿಗೂ 20 ರನ್‌ಗಳ ಗಡಿ ದಾಟಲು ಆಗಲಿಲ್ಲ. ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಬೇಲಿ ಬಳಗ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಸ್ಕೋರ್‌ ವಿವರ

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 193
ಚೇತೇಶ್ವರ ಪೂಜಾರ ಸಿ ವೇಣುಗೋಪಾಲ್‌ ರಾವ್‌ ಬಿ ಡರೆನ್‌ ಸಮಿ  35
ವೀರೇಂದ್ರ ಸೆಹ್ವಾಗ್‌ ಸಿ ಡರೆನ್‌ ಸಮಿ ಬಿ ಅಮಿತ್‌ ಮಿಶ್ರಾ  30
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಡರೆನ್ ಸಮಿ ಬಿ ಅಮಿತ್‌ ಮಿಶ್ರಾ  95
ಡೇವಿಡ್‌ ಮಿಲ್ಲರ್‌ ಸಿ ಡೇವಿಡ್‌ ವಾರ್ನರ್‌ ಬಿ ಭುವನೇಶ್ವರ್‌ ಕುಮಾರ್   10
ಜಾರ್ಜ್‌ ಬೇಲಿ ಸಿ ವಾರ್ನರ್‌ ಬಿ ಭುವನೇಶ್ವರ್ ಕುಮಾರ್‌  10
ಮಿಷೆಲ್‌ ಜಾನ್ಸನ್‌ ಬಿ ಭುವನೇಶ್ವರ್‌ ಕುಮಾರ್‌  04
ಅಕ್ಷರ ಪಟೇಲ್‌ ಔಟಾಗದೆ  00
ಇತರೆ: (ಲೆಗ್‌ ಬೈ–5, ವೈಡ್‌–3, ನೋ ಬಾಲ್‌–1)  09
ವಿಕೆಟ್‌ ಪತನ: 1–51 (ಸೆಹ್ವಾಗ್; 6.4), 2–86 (ಪೂಜಾರ; 10.6),       3–154 (ಮಿಲ್ಲರ್‌; 15.3), 4–179 (ಮ್ಯಾಕ್ಸ್‌ವೆಲ್‌; 17.6), 5–189 (ಬೇಲಿ; 19.2), 6–193 (ಜಾನ್ಸನ್‌; 19.6).
ಬೌಲಿಂಗ್‌: ಡೇಲ್‌ ಸ್ಟೇನ್‌ 4–0–26–0, ಭುವನೇಶ್ವರ್‌ ಕುಮಾರ್‌ 4–0–19–3, ಇರ್ಫಾನ್‌ ಪಠಾಣ್‌ 2–0–28–0, ಕರಣ್‌ ಶರ್ಮ 4–0–37–0, ಅಮಿತ್‌ ಮಿಶ್ರಾ 4–0–56–2, ಡರೆನ್‌ ಸಮಿ 2–0–22–1.

ಸನ್‌ರೈಸರ್ಸ್‌ ಹೈದರಾಬಾದ್‌: 19.2 ಓವರ್‌ಗಳಲ್ಲಿ 121
ಆ್ಯರನ್‌ ಫಿಂಚ್‌ ಬಿ ಲಕ್ಷ್ಮೀಪತಿ ಬಾಲಾಜಿ  19
ಶಿಖರ್‌ ಧವನ್‌ ಸಿ ಸಹಾ ಬಿ ಮಿಷೆಲ್‌ ಜಾನ್ಸನ್‌  01
ಡೇವಿಡ್‌ ವಾರ್ನರ್‌  ಸಿ ಮ್ಯಾಕ್ಸ್‌ವೆಲ್‌ ಬಿ ಲಕ್ಷ್ಮೀಪತಿ ಬಾಲಾಜಿ
08
ಕೆ.ಎಲ್‌. ರಾಹುಲ್‌ ಸಿ ಮಿಲ್ಲರ್‌ ಬಿ ಅಕ್ಷರ್‌ ಪಟೇಲ್‌  27
ವೇಣುಗೋಪಾಲ ರಾವ್‌ ಬಿ ಸಂದೀಪ್‌ ಶರ್ಮ  11
ಇರ್ಫಾನ್‌ ಪಠಾಣ್‌ ಬಿ ಅಕ್ಷರ್‌ ಪಟೇಲ್‌  05
ಡರೆನ್‌ ಸಮಿ ಸಿ ಪಟೇಲ್‌ ಬಿ ಲಕ್ಷ್ಮೀಪತಿ ಬಾಲಾಜಿ  15
ಕರಣ್‌ ಶರ್ಮ ಸಿ ಮಿಲ್ಲರ್‌ ಬಿ ಮಿಷೆಲ್‌ ಜಾನ್ಸನ್‌  10
ಡೇಲ್‌ ಸ್ಟೇನ್‌ ಬಿ ಲಕ್ಷ್ಮೀಪತಿ ಬಾಲಾಜಿ  12
ಅಮಿತ್‌ ಮಿಶ್ರಾ ಔಟಾಗದೆ  04
ಭುವನೇಶ್ವರ್‌ ಕುಮಾರ್‌ ಸಿ ಜಾನ್ಸನ್‌ ಬಿ ಶಿಖರ್‌ ಧವನ್‌  01
ಇತರೆ: (ಲೆಗ್‌ಬೈ-3, ವೈಡ್‌-3, ನೋಬಾಲ್‌-2)  08
ವಿಕೆಟ್‌ ಪತನ: 1-11 (ಧವನ್‌; 1.2), 2-31 (ಫಿಂಚ್‌; 4.3), 3-33 (ವಾರ್ನರ್‌; 4.5), 4-49 (ವೇಣುಗೋಪಾಲ ರಾವ್‌; 6.6), 5-74 (ಪಠಾಣ್‌; 10.2), 6-93 (ಸಮಿ; 13.3), 7-95 (ರಾಹುಲ್‌; 14.1), 8-114 (ಕರಣ್‌; 17.3), 9-118 (ಸ್ಟೇನ್‌; 18.3), 10- 121 (ಭುವನೇಶ್ವರ್‌; 19.2)
ಬೌಲಿಂಗ್‌: ಸಂದೀಪ್‌ ಶರ್ಮ 4-0-26-1, ಮಿಷೆಲ್‌ ಜಾನ್ಸನ್‌ 4-0-26-2, ಲಕ್ಷ್ಮೀಪತಿ ಬಾಲಾಜಿ 4-0-13-4, ರಿಷಿ ಧವನ್‌ 2.2-0-23-1, ಅಕ್ಷರ್‌ ಪಟೇಲ್‌ 4-0-20-2, ಗ್ಲೆನ್‌ ಮ್ಯಾಕ್ಸ್‌ವೆಲ್‌ 1-0-10-0
ಫಲಿತಾಂಶ: ಕಿಂಗ್ಸ್‌ ಇಲೆವೆನ್‌ಗೆ 72 ರನ್‌ ಗೆಲುವು
ಪಂದ್ಯಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT