ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ರಾಮ ಮಂದಿರ ಜಪ

ಬಿಜೆಪಿ ಪ್ರಣಾಳಿಕೆ : ಆರ್ಥಿಕ ಪುನಶ್ಚೇತನಕ್ಕೆ ಆದ್ಯತೆ
Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಬಿಜೆಪಿಯ  ಮೂಲ ಮಂತ್ರವಾದ  ರಾಮ ಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 370ನೇ ವಿಧಿ ರದ್ದತಿಯ ವಿವಾ ದಾತ್ಮಕ ವಿಷಯಗಳು ಸೋಮವಾರ ಬಿಡು ಗಡೆಯಾದ ಪಕ್ಷದ ಈ ಸಾರಿಯ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿವೆ.

ಯೋಜನೆಗಳ ನಿಷ್ಕ್ರಿಯತೆ ತಡೆಗೆ ಕ್ರಮ, ಭ್ರಷ್ಟಾಚಾರ ನಿರ್ಮೂಲನೆ, ಯುಪಿಎ ಸರ್ಕಾರದ ‘ತೆರಿಗೆ ರೂಪದ ಭಯೋತ್ಪಾದನೆ’ಗೆ ಅಂತ್ಯ, ಬಹುಬ್ರ್ಯಾಂಡ್‌ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ನಿಷೇಧ- – ಇವು ಪ್ರಣಾಳಿಕೆಯಲ್ಲಿನ ಇತರ ಮುಖ್ಯಾಂಶಗಳು. 

ದಕ್ಷ ಆಡಳಿತದ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ಮುಂದಾಗುವುದಾಗಿ ಘೋಷಿಸಿರುವ ಬಿಜೆಪಿ, ಉದ್ಯೋಗ ಸೃಷ್ಟಿಗೆ  ಹೆಚ್ಚಿನ ಅವಕಾಶ ಇರುವ ಉತ್ಪಾದನಾ ವಲಯ ಮತ್ತು ಪ್ರವಾಸೋ­ದ್ಯಮಕ್ಕೆ ಉತ್ತೇಜನ ನೀಡುವ ಮಾತುಗಳನ್ನೂ ಆಡಿದೆ.
ಮೊದಲ ಹಂತದ ಮತದಾನ ಆರಂಭದ ದಿನದಂದೇ 16ನೇ ಲೋಕಸಭಾ ಚುನಾವಣೆಯ *2 ಪುಟಗಳ ಪ್ರಣಾಳಿಕೆಯನ್ನು ಪಕ್ಷದ ಕೇಂದ್ರ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌, ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿ, ಹಿರಿಯ ಮುಖಂಡರಾದ ಎಲ್‌.ಕೆ. ಅಡ್ವಾಣಿ, ಸುಷ್ಮ ಸ್ವರಾಜ್‌, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷರೂ ಆದ ಮುರಳಿ ಮನೋಹರ ಜೋಷಿ ಭಾಗವಹಿಸಿದ್ದರು. ಪ್ರಣಾಳಿಕೆ ಬಿಡುಗಡೆ ಸಮಾರಂಭ­ದಲ್ಲಿ ಸುದ್ದಿಗಾರರ ಯಾವುದೇ ಪ್ರಶ್ನೆಗೆ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಲಿಲ್ಲ.

ಮೋದಿ ಅವರ ಆಪ್ತ ಅಮಿತ್‌ ಷಾ ಅವರು ಉತ್ತರ ಪ್ರದೇಶದ ಮುಜಫ್ಫರ್‌ ನಗರ ಕೋಮುಗಲಭೆ ಕುರಿತು ನೀಡಿದ ‘ಈ ಚುನಾ­ವಣೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಿ’ ಎಂಬ ವಿವಾ­ದಾತ್ಮಕ ಹೇಳಿಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಮೋದಿ ಏನೂ ಹೇಳಲಿಲ್ಲ. ಆದರೆ ಮನೋಹರ ಜೋಷಿ ಅವರು, ‘ಇದು ಪಕ್ಷದ ಪ್ರಣಾಳಿಕೆಗೆ ಸಂಬಂಧಿಸಿದ್ದಲ್ಲ’ ಎಂದಷ್ಟೆ ಹೇಳಿದರು.

ಹಿಂದುತ್ವ– ಮೋದಿ ವಿಮುಖ?: ಮೋದಿ ಅವರು ಪ್ರತಿಪಾದಿಸುತ್ತಿರುವ ಅಭಿವೃದ್ಧಿ ಮತ್ತು ಅವರು ಈಗಿನ ಪ್ರಚಾರದ ವಿಷಯಗಳನ್ನು ಗಮನಿಸಿದರೆ ಅವರು ಹಿಂದುತ್ವ ವಿಷಯವನ್ನು ಈ ಸಾರಿ ಪ್ರಣಾಳಿಕೆಯಲ್ಲಿ ದೂರವಿರಿಸಲು ಬಯಸಿದ್ದರು ಎಂಬ ಊಹಾಪೋಹಗಳು ಕೇಳಿ ಬಂದಿತ್ತು. ಈ ಕುರಿತು ಉಂಟಾದ ಅಭಿಪ್ರಾಯ ಭೇದದಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ತಡವಾಯಿತು ಎಂದು ಹೇಳಲಾಗಿದೆ.

ಆದರೆ, ಬಿಜೆಪಿಯ ಬೆನ್ನಿಗೆ ನಿಂತಿರುವ ‘ಸಂಘ ಪರಿವಾರ’ದ ಜೊತೆ  ಹೊಂದಾಣಿಕೆ­ಯಿಂದ ಸಾಗಲು ರಾಮ ಮಂದಿರ ನಿರ್ಮಾಣದ ವಿಷಯ­ವನ್ನು ಪ್ರಣಾಳಿಕೆಯ ‘ಸಾಂಸ್ಕೃತಿಕ ಪರಂಪರೆ’ ಪರಿವಿಡಿಯಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ.

ಪ್ರಣಾಳಿಕೆಯ ಧ್ಯೇಯ ವಾಕ್ಯ: ‘ಒಂದು ದಶಕದಿಂದ ದೇಶ ದುರಾಡಳಿತ ಮತ್ತು ಹಗರಣಗಳಿಂದ ನಲುಗಿಹೋಗಿದೆ. ಯುಪಿಎ ಸರ್ಕಾರದ ನಿರ್ಧಾರಗಳು ಮತ್ತು ಯೋಜನೆಗಳಿಗೆ ಪಾರ್ಶ್ಚವಾಯು ತಗುಲಿ ನಿಷ್ಕ್ರಿಯ­ವಾಗಿವೆ. ಇಂತಹ ಸನ್ನಿವೇಶ ಬದಲಾಗಲಿದೆ. ಪ್ರಬಲ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಹಿತರಕ್ಷಣೆಯ ಬದ್ಧತೆಗೆ ಅನುಗುಣವಾಗಿ ಆಡಳಿತಯಂತ್ರಕ್ಕೆ ಹೊಸ ಹುರುಪಿನಿಂದ ಚುರುಕು ನೀಡಲಾಗುವುದು’ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ.

‘ಪಾರದರ್ಶಕ, ಪರಿಣಾಮಕಾರಿ, ದಕ್ಷ ಆಡಳಿತದ ಮೂಲಕ ಸುಧಾರಣೆ ತರಲಾಗುವುದು. ಇದರಲ್ಲಿ ನ್ಯಾಯಾಂಗ, ಪೊಲೀಸ್‌ ಮತ್ತು ಚುನಾ­ವಣಾ ಸುಧಾರಣೆಗಳೂ ಸೇರಿವೆ’ ಎಂದು ‘ವ್ಯವ­ಸ್ಥೆಯ ಸುಧಾರಣೆ’ ಎಂಬ ಪರಿವಿಡಿಯಲ್ಲಿ ವಿವರಿಸ­ಲಾಗಿದೆ. ‘ಯುಪಿಎ ಸರ್ಕಾರ ಜಾರಿಗೆ ತಂದಿರುವ ‘ತೆರಿಗೆ ರೂಪದ ಭಯೋತ್ಪಾದನೆ ಮತ್ತು ಅಸ್ಥಿ­ರತೆ’ಗೆ ಮಂಗಳ ಹಾಡಲಾಗುವುದು. ನ್ಯಾಯೋ­ಚಿ­ತವಾದ ತೆರಿಗೆ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಎಲ್ಲಾ ವಿಧದ ತೆರಿಗೆಯಲ್ಲೂ ಸುಧಾ­ರಣೆ ಮತ್ತು ಸರಳೀಕರಣ ಮಾಡಲಾಗು­ವುದು. ರಾಜ್ಯ ಸರ್ಕಾರ­ಗಳನ್ನು ವಿಶ್ವಾಸಕ್ಕೆ ತೆಗೆದು­ಕೊಂಡು ಸರಕು ಮತ್ತು ಸೇವಾ ತೆರಿಗೆ ಪದ್ಧತಿ ಜಾರಿ (ಪರೋಕ್ಷ ತೆರಿಗೆ ಮಾದರಿಯಂತೆ)’ ಎಂದು ಬಿಜೆಪಿ ತಿಳಿಸಿದೆ.

ರಕ್ಷಣಾ ಕಾರ್ಯತಂತ್ರ: ‘ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಪರಮಾಣು ಕಾರ್ಯಕ್ರ­ಮದ ಮೂಲಕ ಗಳಿಸಿದ್ದ ರಕ್ಷಣಾ ಕಾರ್ಯತಂತ್ರ­ವನ್ನು ಯುಪಿಎ ಸರ್ಕಾರ ಪೋಲು ಮಾಡಿದೆ. ಇದನ್ನು ಪುನರ್‌ ಪರಿಶೀಲಿಸ­ಲಾಗುವುದು, ಪ್ರಸ್ತುತ ಸನ್ನಿವೇಶದ ಸವಾಲು­ಗಳನ್ನು ಸಮರ್ಥ­ವಾಗಿ ಎದುರಿ­ಸಲು ಶಕ್ತವಾ­ಗುವಂತೆ ದೇಶದ ಪರಮಾಣು ನೀತಿ (ಅಣ್ವಸ್ತ್ರ ಮೊದಲು ಬಳಕೆ ಮಾಡುವುದಿಲ್ಲ) ಅನುಸಾರ ಅಧುನೀಕ­ರಿಸ­ಲಾಗುವುದು’ ಎಂದು  ಪ್ರಣಾಳಿಕೆ ತಿಳಿಸಿದೆ.

‘ಜಾಗತಿಕವಾಗಿ ಬದಲಾಗುತ್ತಿರುವ ಸನ್ನಿವೇಶ­ಗಳನ್ನು ಗಮನದಲ್ಲಿರಿ­ಸಿಕೊಂಡು ಅತ್ಯಂತ ವಿಶ್ವಾ­ಸಾರ್ಹವಾದ ಮತ್ತು ಸಂಭವನೀಯ ದಾಳಿ­ಗಳನ್ನು ತಡೆಯಲು ಅಗತ್ಯ­ವಾದ ಕನಿಷ್ಠ ಪ್ರಮಾ­ಣದ ಅಣ್ವಸ್ತ್ರ ಹೊಂದ­ಲಾಗು­ವುದು. ಈ ಮೂಲಕ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಯಾರಿಂದಲೂ ಬೆದರಿಕೆ ಉಂಟಾಗ­ದಂತೆ ನೋಡಿಕೊಳ್ಳಲಾಗುವುದು’ ಎಂದಿದೆ.

ಮುಖ್ಯಾಂಶಗಳು:
*ಮುಸ್ಲಿಮರಿಗೆ ಸುರಕ್ಷತೆ ಮತ್ತು ತಾರತಮ್ಯ ರಹಿತ ಉದ್ಯೋಗಾವಕಾಶ 
*ಮದರಸಾಗಳ ಶಿಕ್ಷಣ ಅಧುನೀಕರಣ ಮತ್ತು ಧಾರ್ಮಿಕ ಮುಖಂಡರ ಸಲಹೆಯಂತೆ ವಕ್ಫ್ ಮಂಡಳಿಗಳ ಸಬಲೀಕರಣ
*ಅತಿವೇಗದ ರೈಲು ಸಂಚಾರ
*ನೂರು ಪಟ್ಟಣಗಳ ಅಧುನೀಕರಣ
*ಕೌಶಲ್ಯ ಅಭಿವೃದ್ಧಿ, ಉದ್ಯೋಗಾವಕಾಶ ಸೃಷ್ಟಿಗೆ ಮೊದಲ ಆದ್ಯತೆ
*ಕಪ್ಪು ಹಣಕ್ಕೆ ಕಡಿವಾಣ ಮತ್ತು ಈ ಉದ್ದೇಶಕ್ಕೆ ಕಾರ್ಯಪಡೆ ರಚನೆ
*ಕಾಳಸಂತೆ ದಂಧೆ ತಡೆ, ಇಂತಹ ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ
*ಬೆಲೆ ಸ್ಥಿರತೆಗೆ ನಿಧಿ ಸ್ಥಾಪನೆ
*ರಾಷ್ಟ್ರ ಮಟ್ಟದಲ್ಲಿ ಏಕರೂಪ ಕೃಷಿ ಮಾರುಕಟ್ಟೆ ವ್ಯವಸ್ಥೆ
*ಆಯಾ ಪ್ರದೇಶದ ಬೆಳೆಗೆ ಉತ್ತೇಜನ ಮತ್ತು ಬೆಂಬಲ
*ಸಾಂಪ್ರದಾಯಿಕ ಉದ್ಯೋಗಾವ­ಕಾಶ ಕಲ್ಪಿಸುವ ಕೃಷಿ ಮತ್ತು ಪೂರಕ ಉದ್ದಿಮೆಗಳ ಅಭಿವೃದ್ಧಿ
*ಮೂಲ ಸೌಕರ್ಯ ಅಭಿವೃದ್ಧಿ, ವಸತಿ ನಿರ್ಮಾಣದಲ್ಲಿನ ಅವಕಾಶ ಬಲವರ್ಧನೆ
*ಸ್ವಯಂ ಉದ್ಯೋಗ ಕಲ್ಪಿಸಿ­ಕೊಳ್ಳಲು ಯುವ ಸಮುದಾಯಕ್ಕೆ ಉತ್ತೇಜನ ಮತ್ತು ಉದ್ಯೋಗ ವಿನಿಮಯ ಕೇಂದ್ರಗಳನ್ನು ವೃತ್ತಿ ತರಬೇತಿ ಕೇಂದ್ರಗಳಾಗಿ ಪರಿರ್ವತನೆ
*ಭ್ರಷ್ಟಾಚಾರ ನಿರ್ಮೂಲನೆ, ಇ–ಆಡಳಿತ, ಎಲ್ಲಾ ರೀತಿಯ ತೆರಿಗೆಗಳಲ್ಲೂ ಸುಧಾರಣೆ ಮತ್ತು ಸರಳೀಕರಣ
*ಕೇಂದ್ರ, ರಾಜ್ಯ ಸರ್ಕಾರಗಳ ಮಧ್ಯೆ ಸೌಹಾರ್ದ ಸಂಬಂಧ. ಈ ನಿಟ್ಟಿನಲ್ಲಿ ರಾಜ್ಯಗಳಿಗೆ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳ ನಿರ್ವಹಣೆ ಹೊಣೆ
*ಪ್ರಧಾನಿ, ಮುಖ್ಯ­ಮಂತ್ರಿಗಳನ್ನು ಸಮಾನ ಭಾಗೀದಾರರನ್ನಾಗಿ ಮಾಡುವ ‘ಟೀಮ್‌ ಇಂಡಿಯಾ’ ಪರಿಕಲ್ಪನೆಗೆ ಚಾಲನೆ
*ರಾಜ್ಯಗಳಿಗೆ ವಿತ್ತೀಯ ಸ್ವಾಯತ್ತತೆ, ರಾಜ್ಯಗಳು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳನ್ನು ದೂರಮಾಡಲು ಪ್ರಾದೇಶಿಕ ಮಂಡಳಿಗಳ ರಚನೆ
*ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಮತ್ತು ಅಂತರರಾಜ್ಯ ಮಂಡಳಿಗಳ ಪುನರ್‌ರಚನೆ ಮತ್ತು ಸಕ್ರಿಯಗೊಳಿಸಲು ಚಾಲನೆ
*ಅಕ್ರಮ ಒಳನುಸುಳುವಿಕೆ ತಡೆಯಲು ಕಠಿಣ ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT