ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ವಿಜ್ಞಾನ ಅಧಿವೇಶನ

Last Updated 19 ಮೇ 2015, 19:30 IST
ಅಕ್ಷರ ಗಾತ್ರ

1990ರ ಮಾರ್ಚ್‌ನಲ್ಲಿ ಬೆಂಗಳೂರಿನ ಸ್ಕೌಟ್ ಕ್ಯಾಂಪ್‌ನಲ್ಲಿ ಸಮಾವೇಶವೊಂದು ನಡೆದಿತ್ತು. ಶಿಕ್ಷಣ ತಜ್ಞ ಡಾ. ವಿನೋದ್‌ ರೈನಾ, ಮಧ್ಯಪ್ರದೇಶದಲ್ಲಿ ಸರ್ಕಾರ ಕೈಗೆತ್ತಿಕೊಂಡಿರುವ ಸರ್ದಾರ್‌ ಸರೋವರ ಯೋಜನೆಯಿಂದ ಎಷ್ಟು ಗ್ರಾಮಗಳು ಮುಳುಗಡೆಯಾಗಲಿವೆ, ಎಷ್ಟು ಜೀವವೈವಿಧ್ಯ ನಾಶವಾಗಲಿದೆ, ಆ ಯೋಜನೆಯ ಹಣಕಾಸಿನ ಅಗಾಧತೆ ಎಷ್ಟು ಎಂಬೆಲ್ಲ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಡುತ್ತಿದ್ದರು.

ನಡುವೆ ಪ್ರವೇಶಿಸಿದ ಎನ್.ಸಿ.ಒ.ಎ. (ನ್ಯಾಷನಲ್ ಕಾನ್ಫೆಡರೇಷನ್ ಆಫ್ ಆಫೀಸರ್ಸ್ ಅಸೋಸಿಯೇಷನ್) ಅಧ್ಯಕ್ಷ ಅಶೋಕ್‌ ರಾವ್‌ ಆ ಯೋಜನೆಯ ಉಪಯೋಗಗಳ ಬಗ್ಗೆ ಹೇಳುತ್ತಾ, ರೈನಾ ಅವರ ವಾದವನ್ನು ತಳ್ಳಿಹಾಕಿದರು. ಮಧ್ಯ ಪ್ರವೇಶಿಸಿದ ದೆಹಲಿ ಸೈನ್ಸ್ ಫೋರಮ್‌ನ ಡಾ. ಉಪೇಂದ್ರ ತ್ರಿವೇದಿ ತಮ್ಮ ವಾದವನ್ನು ಮಂಡಿಸಿದರು.

ಇದೆಲ್ಲ ನಡೆದದ್ದು 3ನೇ ಅಖಿಲ ಭಾರತ ಜನ ವಿಜ್ಞಾನ ಅಧಿವೇಶನದಲ್ಲಿ. ಅದಕ್ಕೂ ಮುನ್ನ ಮೊದಲ ಅಧಿವೇಶನ ಕೇರಳದ ಕಣ್ಣ್ಣೂರಿನಲ್ಲಿ, 2ನೇ ಅಧಿವೇಶನ ಕೋಲ್ಕತ್ತದಲ್ಲಿ ನಡೆದಿದ್ದವು. ಬಳಿಕ ಈ ಅಧಿವೇಶನ ದೇಶದ ವಿವಿಧ ರಾಜ್ಯಗಳಲ್ಲಿ ನಡೆದು, 15ನೇ ಅಧಿವೇಶನ ಮತ್ತೆ ಬೆಂಗಳೂರಿನಲ್ಲಿ ಇದೇ 22ರಿಂದ 25ರ ವರೆಗೆ ನಡೆಯಲಿದೆ. ದೇಶದಾದ್ಯಂತ 38 ಸಂಸ್ಥೆಗಳ 650 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ವಿಜ್ಞಾನವನ್ನು ಮಾತೃಭಾಷೆಯ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಹುಟ್ಟಿಕೊಂಡ ಕೆಲವು ವಿಜ್ಞಾನಿಗಳ ಗುಂಪು, ಮುಂದೆ ಕೇರಳದಲ್ಲಿ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತಿನ (ಕೆ.ಎಸ್.ಎಸ್.ಪಿ.) ಹುಟ್ಟಿಗೆ ಕಾರಣವಾಯಿತು. ಆ ನಂತರ ಕೆ.ಎಸ್.ಎಸ್.ಪಿ. ಮುಖಂಡರ ಪ್ರಯತ್ನದಿಂದಾಗಿ ವಿಜ್ಞಾನ ಚಳವಳಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ವಿಸ್ತರಿಸಿತು.

ಮಾತೃಭಾಷೆಯಲ್ಲಿ ವಿಜ್ಞಾನ ಸಂವಹನದ ಜೊತೆಗೆ ಜನಪ್ರಿಯ ವಿಜ್ಞಾನ, ಜನಪರ ವಿಜ್ಞಾನ– ತಂತ್ರಜ್ಞಾನ, ವೈಜ್ಞಾನಿಕ ಚಿಂತನೆ, ಸುಸ್ಥಿರ ಅಭಿವೃದ್ಧಿ, ವಿಕೇಂದ್ರೀಕೃತ ಯೋಜನೆಯ ಅಂಶಗಳೂ ಸೇರಿಕೊಂಡು ಚಳವಳಿ ದೊಡ್ಡದಾಗಿ ಬೆಳೆಯಿತು. ಇದರ ಭಾಗವಾಗಿಯೇ ಕೇರಳ ಕೈಗೆತ್ತಿಕೊಂಡಿದ್ದ ಮೌನ ಕಣಿವೆ ಯೋಜನೆ ಕೆ.ಎಸ್.ಎಸ್‌.ಪಿ.ಯ ಹೋರಾಟದಿಂದಾಗಿ ನಿಂತದ್ದು ಐತಿಹಾಸಿಕ.

1984ರಲ್ಲ್ಲಿ ನಡೆದ ಭೋಪಾಲ್ ಕರಾಳ ಅನಿಲ ದುರಂತದ ನಂತರ ವಿಜ್ಞಾನ–ತಂತ್ರಜ್ಞಾನ ಜನರ ಒಳಿತಿಗಾಗಿ ಉಪಯೋಗವಾಗಬೇಕೆಂಬ ಘೋಷಣೆಯನ್ನು ಸೇರಿಸಿಕೊಂಡು, ಅನಿಲ ದುರಂತ ಸಂತ್ರಸ್ತರ ನೆರವಿಗೆ ವಿಜ್ಞಾನ ಚಳವಳಿ ಧಾವಿಸಿತು. ವಿವಿಧ ವಿಜ್ಞಾನ ಸಂಘಟನೆಗಳು 1987ರಲ್ಲಿ ಭಾರತ ಜನ ವಿಜ್ಞಾನ ಜಾಥಾವನ್ನು ಸಂಘಟಿಸಿದವು.

ದೇಶದ ಐದು ಕಡೆಗಳಿಂದ ಹೊರಟ ಕಲಾಜಾಥಾಗಳು ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ನೀಡಿ, ಭೋಪಾಲ್‌ನಲ್ಲಿ ಸಮ್ಮಿಲನಗೊಂಡವು.  ವಿಜ್ಞಾನ ಸಂಘಟನೆಗಳ ಈ ಒಗ್ಗೂಡುವಿಕೆ ಅಖಿಲ ಭಾರತ ಜನ ವಿಜ್ಞಾನ ಸಂಘಟನೆಯ ಹುಟ್ಟಿಗೆ ಕಾರಣವಾಯಿತು. ಪ್ರಾರಂಭದಲ್ಲಿ ಕೆಲವೇ ಸಂಘಟನೆಗಳಿದ್ದ ಜಾಲ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತು.

ವಿಜ್ಞಾನ ಚಳವಳಿಯ ಬಹುತೇಕ ಪ್ರಯೋಗಗಳು ಪ್ರಾರಂಭಗೊಂಡಿರುವುದು ಕೇರಳದಲ್ಲಿ. ಎರ್ನಾಕುಲಂನ ಸಂಪೂರ್ಣ ಸಾಕ್ಷರತಾ ಆಂದೋಲನದ ಅನುಭವವನ್ನು ಇಡೀ ರಾಷ್ಟ್ರಕ್ಕೆ ವಿಸ್ತರಿಸುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ವಿಜ್ಞಾನ ಸಂಘಟನೆಗಳ ಜಾಲದ ನೆರವು ಕೋರಿತು.

ಸಾಕ್ಷರತಾ ಚಳವಳಿಗಳಿಗೆ ಜನಬೆಂಬಲವನ್ನು ಒದಗಿಸಲು 1990ರ ಅಕ್ಟೋಬರ್‌ನಲ್ಲಿ ಭಾರತ ಜ್ಞಾನ ವಿಜ್ಞಾನ ಜಾಥಾವನ್ನು ದೇಶದಾದ್ಯಂತ ನಡೆಸಲಾಯಿತು. ಮುಂದೆ ಪ್ರಾರಂಭಗೊಂಡ ಸಾಕ್ಷರತಾ ಆಂದೋಲನದಲ್ಲಿ ಜನ ವಿಜ್ಞಾನ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡರು. ಉಳಿದ ರಾಜ್ಯಗಳಲ್ಲಿ ಜನವಿಜ್ಞಾನ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು.

1995ರಲ್ಲಿ ‘ಹಮಾರಾ ದೇಶ್’ ಕಾರ್ಯಕ್ರಮ ಕೈಗೊಂಡು, ದೇಶದ ವಿಜ್ಞಾನ– ತಂತ್ರಜ್ಞಾನದ ಇತಿಹಾಸವನ್ನು ಜನರಿಗೆ ಸರಳವಾಗಿ ತಿಳಿಸುವ ಪ್ರಯತ್ನ ನಡೆಸಲಾಯಿತು. ಸಾಕ್ಷರತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಮಹಿಳೆಯರೇ ಇರುವ ರಾಷ್ಟ್ರ ಮಟ್ಟದ ಕಲಾಜಾಥಾವನ್ನು ಸಂಘಟಿಸಲಾಯಿತು. ವೈಜ್ಞಾನಿಕ ಚಿಂತನೆಗೆ ಒತ್ತು ನೀಡಿದ ಕಾರ್ಯಕ್ರಮ ‘ಕಾಸ್ಮಿಕ್ ವಾಯೇಜ್’.

1995ರಲ್ಲಿ ಸಂಭವಿಸಿದ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು, ಗ್ರಹಣಗಳು ಹಾಗೂ ಸೌರವ್ಯೂಹದ ಬಗ್ಗೆ ವಿವರಿಸಲು ಸಾಕಷ್ಟು ಸಾಮಗ್ರಿಗಳನ್ನು ತಯಾರಿಸಿ ಸಾವಿರಾರು ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಂಪೂರ್ಣ ಸೂರ್ಯಗ್ರಹಣ ಸಂಭವಿಸುವ ಸ್ಥಳಕ್ಕೆ ಎಲ್ಲ ರಾಜ್ಯಗಳಿಂದ ವಿಜ್ಞಾನಿಗಳು ಮತ್ತು ವಿಜ್ಞಾನ ಕಾರ್ಯಕರ್ತರನ್ನು ಕಳುಹಿಸಿಕೊಡಲಾಯಿತು.

ಬಳಿಕ ವಿಜ್ಞಾನ ಚಳವಳಿಯ ಗೆಳೆಯರು ತಮ್ಮ ಮೂಲ ಉದ್ದೇಶದತ್ತ ಗಮನ ಹರಿಸಿ ‘ಜನಾರೋಗ್ಯ ಆಂದೋಲನ’ ಪ್ರಾರಂಭಿಸಿದರು. ಅಭಿವೃದ್ಧಿ ಯೋಜನೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸುವ, ಗ್ರಾಮೀಣ ಪ್ರದೇಶಗಳಿಗೆ ತಂತ್ರಜ್ಞಾನವನ್ನು ವಿಸ್ತರಿಸುವ ಕೆಲಸದಲ್ಲಿ ತೊಡಗಿಕೊಂಡರೂ ಈ ಕ್ಷೇತ್ರವು ಅರಿವು ಮೂಡಿಸುವ ಕಾರ್ಯಕ್ರಮಗಳಷ್ಟು ಸುಲಭವಾಗಿರಲಿಲ್ಲ.

ಹೀಗಾಗಿ ಕೇವಲ ಮಧ್ಯಪ್ರದೇಶ ವಿಜ್ಞಾನ ಸಭಾ, ದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ, ಹಿಮಾಚಲದ ಎಸ್.ಟಿ.ಡಿ, ಪಾಂಡಿಚೇರಿ ಸೈನ್ಸ್ ಫೋರಂ, ಕೆ.ಎಸ್.ಎಸ್.ಪಿ. ಮಾತ್ರ ಇಲ್ಲಿ ಯಶಸ್ಸು ಕಂಡವು. ಎಲ್ಲ ಜನ ವಿಜ್ಞಾನ ಸಂಘಟನೆಗಳು ಪ್ರಮುಖವಾಗಿ ಪುಸ್ತಕ ಪ್ರಕಟಣೆ, ಮಕ್ಕಳು, ಜನಸಾಮಾನ್ಯರಿಗಾಗಿ ಪತ್ರಿಕೆಗಳನ್ನು ನಡೆಸುತ್ತಿವೆ. ಈ ಸಂಪರ್ಕ, ಸಂಪನ್ಮೂಲಗಳನ್ನು ಚಟುವಟಿಕೆಗಳಿಗಾಗಿ ಬಳಸಿಕೊಳ್ಳುತ್ತಿವೆ.

ಎರಡು ವರ್ಷಗಳಿಗೊಮ್ಮೆ ನಡೆಯುವ ಜನ ವಿಜ್ಞಾನ ಅಧಿವೇಶನದಲ್ಲಿ ತಾವು ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರಗಳ ಪರಸ್ಪರ ಕಲಿಕೆ, ವಿಮರ್ಶೆ, ಆ ಕ್ಷೇತ್ರದಲ್ಲಿ ಸರ್ಕಾರದ ಮಧ್ಯಪ್ರವೇಶ ಮುಂತಾದವುಗಳ ಬಗ್ಗೆ ವಿಷಯ ಮಂಡನೆ ಮತ್ತು ಚರ್ಚೆಗಳು ನಡೆಯುತ್ತವೆ. ಕಾರ್ಯಕರ್ತರ ನಡುವಿನ ಅನುಭವ ವಿನಿಮಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿಯ ಪ್ರಮುಖ ಆಕರ್ಷಣೆ.

ವಿಜ್ಞಾನ ಚಳವಳಿ ಸರ್ಕಾರದ ನೆರವನ್ನೂ ಪಡೆದಿದೆ, ಅದರ  ಕೆಂಗಣ್ಣಿಗೂ ಗುರಿಯಾಗಿದೆ. ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ವಾಸ್ತವಕ್ಕೆ ದೂರವಾದ ಶೇ100ರಷ್ಟು ಸಾಧನೆ ಪ್ರಕಟಿಸಲು ಮುಂದಾದಾಗ, ಅದರಲ್ಲಿ ತೊಡಗಿದ್ದ ವಿಜ್ಞಾನ ಕಾರ್ಯಕರ್ತರಿಗೂ ಸರ್ಕಾರಕ್ಕೂ  ವಾಗ್ವಾದಗಳು ನಡೆದಿರುವುದುಂಟು. ಮಧ್ಯಪ್ರದೇಶದಲ್ಲಿ ಏಕಲವ್ಯ ಸಂಸ್ಥೆ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಹಂತದಲ್ಲಿ ಸಾಕಷ್ಟು ಕೆಲಸ ಮಾಡಿತು.

ಆದರೆ ಅಲ್ಲಿನ ಸರ್ಕಾರ ಆ ಚಟುವಟಿಕೆಗಳಿಗೆಲ್ಲ ಒಂದೇ ಬಾರಿಗೆ ತಡೆಯೊಡ್ಡಿತು. ಕೇರಳದಲ್ಲೂ ಈ ಅನುಭವವಾಗಿದೆ. ಈ ಎಲ್ಲ ಏರುಪೇರುಗಳನ್ನೂ ಮೀರಿ ಇಂದು ಚಳವಳಿ ಮುಂದೆ ಸಾಗುತ್ತಿದೆ. ಕರ್ನಾಟಕದಲ್ಲಿ ಜನ ವಿಜ್ಞಾನ ಚಳವಳಿಯ ಸಂಸ್ಥಾಪಕ ಸಂಘಟನೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು. ಇದರ ಸಂಸ್ಥಾಪಕ ಅಧ್ಯಕ್ಷರು ಡಾ. ಎಚ್.ನರಸಿಂಹಯ್ಯ.
ಲೇಖಕ ಕರ್ನಾಟಕ ಜ್ಞಾನ ವಿಜ್ಞಾನ
ಸಮಿತಿಯ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT