ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ವಿಮಾನಯಾನ ದರ ಸಮರ

ಸ್ಪೈಸ್‌ಜೆಟ್‌ ಹಿಂಬಾಲಿಸಿದ ಏರ್‌ ಇಂಡಿಯಾ, ಇಂಡಿಗೊ, ಗೋಏರ್‌
Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ನಾಗರಿಕ ವಿಮಾನಯಾನ ಕ್ಷೇತ್ರ­ದಲ್ಲಿ ಮತ್ತೊಂದು ಸುತ್ತಿನ ದರ ಸಮರ ಆರಂಭಗೊಂಡಿದೆ.  ಅತಿ ಕಡಿಮೆ ದರದಲ್ಲಿ ದೇಶದ ವಿವಿ­ಧೆಡೆಗೆ ವಿಮಾನದಲ್ಲಿ ಸಂಚರಿ­ಸುವ ಅವ­ಕಾಶ ಪ್ರಯಾಣಿಕರಿಗೆ ಮತ್ತೆ ದೊರಕಿದಂತಾಗಿದೆ.

ಏರ್‌ ಇಂಡಿಯಾ, ಇಂಡಿಗೊ ಮತ್ತು ಗೋಏರ್‌ ಕಂಪೆನಿಗಳು ಗುರುವಾರ ಕಡಿಮೆ ದರದ ವಿಮಾನಯಾನ ಕೊಡುಗೆ ಪ್ರಕಟಿಸಿವೆ. ಈ ಮೂಲಕ ಸ್ಪೈಸ್‌ಜೆಟ್‌ ಮಂಗಳವಾರ ಆರಂಭಿಸಿದ ‘ದರ ಸಮರ’ಕ್ಕೆ ತಮ್ಮ ಪಾಲನ್ನೂ ನೀಡಿವೆ.

ಏರ್‌ ಇಂಡಿಯಾ ‘ಅಲ್ಪಾವಧಿ’ಯ ಮುಂಗಾರು ಕೊಡುಗೆ ಘೋಷಿಸಿದೆ. ದೇಶ­ದೊಳಗಿನ 40 ಮಾರ್ಗಗಳಲ್ಲಿನ 108 ವಿಮಾ­ನಗಳಲ್ಲಿ ₨1,599 ದರ­ದಲ್ಲಿ (ತೆರಿಗೆ ಪ್ರತ್ಯೇಕ) ಪ್ರಯಾ­ಣಿ­ಸ­ಬಹು­ದಾಗಿದೆ. ಸೆ.30ರ ನಂತರ­ವಷ್ಟೇ ಪ್ರಯಾ­ಣಕ್ಕೆ ಅವಕಾಶ­ವಿದೆ. ಈ ಮುಂಗಾರು ಕೊಡುಗೆಯ ಟಿಕೆಟ್‌ ಖರೀ­ದಿಗೆ ಕೇವಲ ಮೂರು ದಿನಗಳ ಕಾಲಾವಕಾಶವನ್ನಷ್ಟೇ ನೀಡಲಾಗಿದೆ. ಏ. 3ರಿಂದಲೇ ಬುಕಿಂಗ್ ಆರಂಭ­ಗೊಂಡಿ­ದ್ದು, ಏ 5ರವರೆಗಷ್ಟೇ ಟಿಕೆಟ್‌ ಖರೀದಿಗೆ ಅವಕಾಶವಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಡಿಗೊ ಟಿಕೆಟ್‌ ದರವನ್ನು ₨ 1,389ಕ್ಕೆ ತಗ್ಗಿಸಿದೆ. ಸಂಸ್ಥೆಯ ನೇರ ವಿಮಾನ ಹಾರಾಟ ಮಾರ್ಗಗಳಲ್ಲಿ ಹಾಗೂ ಮಿತಸಂಖ್ಯೆಯ ಆಸನಗಳಿಗಷ್ಟೇ ಈ ಕೊಡುಗೆ ಲಭ್ಯ ಎಂದು ತಿಳಿಸಿದೆ. ಆದರೆ, ಟಿಕೆಟ್‌ ಖರೀದಿಗೆ ಇರುವ ಕಾಲಾ­ವಧಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಇಂಡಿಗೊ ವಿಮಾನದಲ್ಲಿ ದೆಹಲಿ ಮತ್ತು ಲಖನೌ ಮಾರ್ಗ­ದಲ್ಲಿ ಏಕಮುಖ ಸಂಚಾರಕ್ಕಷ್ಟೇ ₨ 1,389ರ ರಿಯಾಯ್ತಿ ಟಿಕೆಟ್‌ ಲಭ್ಯ. ದೆಹಲಿ, ಮುಂಬೈ ನಡು­ವಣ ಪ್ರಯಾಣಕ್ಕೆ ₨ 2,400 ನೀಡ­ಬೇಕಿದೆ ಎಂದು ಟ್ರಾವೆಲ್‌ ಏಜೆಂಟ­ರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಗೋಏರ್‌ ಸಂಸ್ಥೆ ಟಿಕೆಟ್‌ ದರದಲ್ಲಿ ಶೇ 30ರಿಂದ 40ರವರೆಗೆ ರಿಯಾಯ್ತಿ ಘೋಷಿಸಿದೆ. ಆದರೆ, ಟಿಕೆಟ್‌ ಖರೀದಿ ಅವಕಾಶ ಶುಕ್ರವಾರಕ್ಕೇ ಕೊನೆ­ಗೊಳ್ಳ-­ಲಿದೆ. ಜುಲೈ, ಸೆಪ್ಟೆಂಬರ್ ವೇಳೆ ಪ್ರಯಾಣಕ್ಕೆ (90 ದಿನ ಮುಂಚೆಯೇ ಕಾಯ್ದಿರಿಸುವುದು) ರಿಯಾಯ್ತಿ ಅನ್ವಯ­ವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ಸ್ಪೈಸ್‌ಜೆಟ್‌ ಟಿಕೆಟ್‌ಗೆ ₨ 1: ಇದಕ್ಕೂ ಮುನ್ನ ಸ್ಪೈಸ್‌ ಜೆಟ್‌ ಕಂಪೆನಿ, ₨1ಕ್ಕೆ ವಿಮಾನ ಪ್ರಯಾಣ ಕೊಡುಗೆ ಘೋಷಿಸಿ ದರ ಸಮರದ ಆಹ್ವಾನ ನೀಡಿತ್ತು.

ದೇಶಿಯ ವಿಮಾನ ಮಾರ್ಗಗಳಲ್ಲಿ ಕೇವಲ ₨1ಕ್ಕೆ ವಿಮಾನ ಪ್ರಯಾಣ ಮಾಡ­ಬಹುದು ಎಂದು  ಕಂಪೆನಿ ಮಂಗಳ­ವಾರ ಘೋಷಿಸಿದ ಬೆನ್ನಲ್ಲೇ ಸಾವಿರಾರು ಪ್ರಯಾಣಿಕರು ಆನ್‌ಲೈನ್‌­ನಲ್ಲಿ ಟಿಕೆಟ್‌ ಖರೀದಿಗೆ ಮುಗಿಬಿ­ದ್ದಿ­ದ್ದರಿಂದ ಸ್ಪೈಸ್‌ಜೆಟ್‌ ವೆಬ್‌ಸೈಟ್‌ ಒತ್ತಡಕ್ಕೆ ಸಿಲುಕಿ ಅದರ ಕಾರ್ಯ­ಚಟುವಟಿಕೆಯೇ ಕೆಲಸಮ­ಯದವರೆಗೆ ಸ್ಥಗಿತಗೊಂಡಿತ್ತು.

ಸ್ಪೈಸ್‌ಜೆಟ್‌ನ ಬಲು ಅಗ್ಗದ ಪ್ರಯಾ­ಣ­ದರ ಕೊಡುಗೆಗೆ ‘ನಾಗರಿಕ ವಿಮಾನ­ಯಾನ ಮಹಾ ನಿರ್ದೇಶನಾ­ಲಯ’ (ಡಿಜಿಸಿಎ) ವಿರೋಧ ವ್ಯಕ್ತಪಡಿಸಿತ್ತು. ಕೆಲವು ವರ್ಷಗಳ ಹಿಂದೆ ₨1ಕ್ಕೆ ಟಿಕೆಟ್‌ ನೀಡುವ ಕೊಡುಗೆಯನ್ನು ಮೊದಲ ಬಾರಿಗೆ ಏರ್‌ ಡೆಕ್ಕನ್‌ ಆರಂಭಿಸಿತ್ತು. ಇದೀಗ ಸ್ಪೈಸ್‌ಜೆಟ್‌ ಇದೇ ಮಾದರಿ ಕೊಡುಗೆ ಪ್ರಕಟಿಸಿ ದರ ಸಮರ ಆರಂಭಿಸಿದೆ. ಇತರೆ ಕಂಪೆನಿಗಳೂ ತನ್ನನ್ನು ಅನುಸರಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT