ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ‘ಸಿಪಾಯಿ’

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರವಿಚಂದ್ರನ್‌ ನಿರ್ದೇಶಿಸಿ ನಟಿಸಿದ್ದ ‘ಸಿಪಾಯಿ’ ತೆರೆಕಂಡು ಸುಮಾರು 18 ವರ್ಷಗಳಾಗಿವೆ. ಈಗ ಮತ್ತೊಂದು ‘ಸಿಪಾಯಿ’ ಸಿದ್ಧವಾಗುತ್ತಿದೆ. ಇದು ‘ಲೂಸಿಯಾ’ ಗುಂಗಿನಲ್ಲಿ ಸಿದ್ಧವಾಗುತ್ತಿರುವ ಸಿಪಾಯಿ. ‘ಲೂಸಿಯಾ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ರಜತ್‌ ಮಯೀ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ‘ಲೂಸಿಯಾ’ ಚಿತ್ರತಂಡದಲ್ಲಿದ್ದ ಬಹುತೇಕ ಸದಸ್ಯರೇ ಇಲ್ಲಿನ ಸಿಪಾಯಿಗಳು.

‘ಹಳೆಯ ಸಿಪಾಯಿ ಚಿತ್ರಕ್ಕೂ ಈ ಸಿಪಾಯಿಗೂ ಯಾವುದೇ ಸಂಬಂಧವಿಲ್ಲ’ ಎನ್ನುವುದು ರಜತ್‌ ಮಯೀ ನೀಡುವ ವಿವರಣೆ. ಲೂಸಿಯಾದ ದೊಡ್ಡ ನಿರ್ಮಾಪಕರ ಬಳಗದಲ್ಲಿ ಒಬ್ಬರಾಗಿದ್ದ ಸಿದ್ಧಾರ್ಥ್‌ ಮಹೇಶ್ ಈ ಚಿತ್ರದ ನಾಯಕ. ಮಾತ್ರವಲ್ಲ, ಇಬ್ಬರು ಗೆಳೆಯರೊಂದಿಗೆ ಸೇರಿ ಅವರೂ ಬಂಡವಾಳ ಹೂಡುತ್ತಿದ್ದಾರೆ. ಇನ್ನುಳಿದಂತೆ ನಾಯಕಿ ಶ್ರುತಿ ಹರಿಹರನ್, ನಟ ಅಚ್ಯುತ್‌ ಕುಮಾರ್‌ ಮುಂತಾದ ಕಲಾವಿದರು, ಜೊತೆಗೆ ತಂತ್ರಜ್ಞರು ‘ಲೂಸಿಯಾ’ ಚಿತ್ರದಲ್ಲಿ ಕೆಲಸ ಮಾಡಿದವರೇ. ಹೀಗಾಗಿ ಚಿತ್ರೀಕರಣ ಸರಾಗವಾಗಿ ನಡೆಯಲಿದೆ ಎನ್ನುವ ಭರವಸೆ ನಿರ್ದೇಶಕರದು.

ಮಾಫಿಯಾ ಗ್ಯಾಂಗ್‌ನೊಳಗಿದ್ದು, ಅವರ ವಿರುದ್ಧ ಹೋರಾಡುವ ನಾಯಕನ ಕಥೆ ‘ಸಿಪಾಯಿ’ಯದ್ದು. ಆ್ಯಕ್ಷನ್‌, ಸಸ್ಪೆನ್ಸ್‌ನ ಜೊತೆಗೆ ನವಿರು ಪ್ರೇಮಕಥನವೂ ಇರಲಿದೆ ಎನ್ನುತ್ತಾರೆ ರಜತ್‌. ಎಂಬಿಎ ಮುಗಿಸಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರಜತ್‌ಗೆ ಸಿನಿಮಾ ಜಗತ್ತನ್ನು ಪರಿಚಯ ಮಾಡಿದ್ದು ಸಂಕಲನಕಾರ ಶ್ರೀ. ರಜತ್‌ ಪಾಲಿಗೆ ಸಿನಿಮಾ ಗುರು ಶ್ರೀ. ಮುಂಚಿನಿಂದಲೂ ಸಿನಿಮಾ ಕುರಿತು ಅತೀವ ಆಸಕ್ತಿ ಹೊಂದಿದ್ದ ಅವರಿಗೆ ಚಿತ್ರರಂಗ ಮೊದಲು ನೀಡಿದ್ದು ನಿರ್ಮಾಣ ಮೇಲ್ವಿಚಾರಣೆಯ ಹೊಣೆಯನ್ನು. ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡೇ ಅವರು ‘ಗಾಳಿಪಟ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾದರು. ‘ಮನಸಾರೆ’ಯಲ್ಲಿ ಪುಟ್ಟದೊಂದು ಪಾತ್ರಕ್ಕೂ ಬಣ್ಣಹಚ್ಚಿದರು. ನಿರ್ದೇಶಕನಿಗೆ ಸಂಕಲನದ ಜ್ಞಾನವೂ ಅಗತ್ಯ ಎಂದು ಗುರುವಿನ ಬಳಿ ಸಂಕಲನದ ರೀತಿ ರಿವಾಜುಗಳನ್ನು ಕಲಿತರು.

‘ಲೂಸಿಯಾ’ದಲ್ಲಿ ಸಹ ನಿರ್ದೇಶಕರಾಗಿದ್ದಾಗಲೇ ಸಿದ್ಧಾರ್ಥ್‌ ಸಿನಿಮಾ ಮಾಡುವ ಬಯಕೆ ವ್ಯಕ್ತಪಡಿಸಿದ್ದರು. ಸಿದ್ಧಾರ್ಥ್‌ ಅವರ ವ್ಯಕ್ತಿತ್ವಕ್ಕೆ ಹೊಂದುವಂಥ ಕಥೆಯನ್ನು ರಜತ್ ಹೆಣೆದಿದ್ದಾರೆ. ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಹೋರಾಡುವ ನಾಯಕನ ಕಥೆ ಸಾಮಾನ್ಯ ವಸ್ತುವಿನಂತೆ ಕಂಡರೂ ಚಿತ್ರಕಥೆಯಲ್ಲಿ ತೀವ್ರತೆ ಇದೆ. ಪ್ರೇಕ್ಷಕನಿಗೆ ಚಿತ್ರ ಹೊಸ ಅನುಭವ ನೀಡುವುದಂತೂ ನಿಜ ಎನ್ನುತ್ತಾರೆ ರಜತ್‌. ಕರಾಟೆಯಲ್ಲಿ ಬ್ಲಾಕ್‌ ಬೆಲ್ಟ್‌ ಆಗಿರುವ ಸಿದ್ಧಾರ್ಥ್‌, ಎಂಜಿನಿಯರಿಂಗ್‌ ಪದವೀಧರ. ‘ಅಭಿನಯ ತರಂಗ’ದಲ್ಲಿ ನಟನೆಯ ಪಟ್ಟುಗಳನ್ನೂ ಕಲಿತಿದ್ದಾರೆ.

ಅಂದಹಾಗೆ, ರಜತ್‌ ಅವರ ಮೂಲ ಹೆಸರು ಮಹೇಶ್‌. ಚಿತ್ರರಂಗದಲ್ಲಿ ಮಹೇಶ್‌ ಹೆಸರಿನವರು ಹಲವರಿದ್ದಾರೆ ಎಂಬ ಕಾರಣಕ್ಕೆ ಅವರು ರಜತ್‌ ಎಂದು ನಾಮ ಬದಲಿಸಿಕೊಂಡರು. ಗೆಳೆಯರು ಪ್ರೀತಿಯಿಂದ ಕರೆಯುತ್ತಿದ್ದ ‘ಮಯೀ’ ಪದವನ್ನು ಜೊತೆಯಲ್ಲಿ ಉಳಿಸಿಕೊಂಡರು. ರಜತ ಪರದೆ ಮೇಲೆ ಹೆಸರು ಸದಾ ಕಂಗೊಳಿಸಬೇಕು ಎಂದು ರಜತ್‌ ಎಂಬುದಾಗಿ ಹೆಸರು ಬದಲಿಸಿಕೊಂಡೆ ಎನ್ನುತ್ತಾರೆ ಅವರು.

ಮೇ 15ರಿಂದ ಚಿತ್ರೀಕರಣ ಪ್ರಾರಂಭಿಸುವ ಉತ್ಸಾಹದಲ್ಲಿದ್ದಾರೆ ರಜತ್. ಬೆಂಗಳೂರು ಮತ್ತು ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಿದ್ದಾರೆ. ಹಸಿರಿನ ವಿಶಾಲ ಮೈದಾನವನ್ನು ಹುಡುಕುತ್ತಾ ಹೊರಟ ಅವರಿಗೆ ಕಾಕತಾಳೀಯವೆಂಬಂತೆ ಹಳೆಯ ‘ಸಿಪಾಯಿ’ ಚಿತ್ರೀಕರಣ ನಡೆದ ಸ್ಥಳವೂ ಸಿಕ್ಕಿದೆ. ಅಲ್ಲಿಯೇ ಹಾಡೊಂದನ್ನು ಚಿತ್ರೀಕರಿಸುವ ಇರಾದೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT