ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಪಂದ್ಯ ‘ಸಮ’: ಮಿಂಚಿದ ಮಂಜೀತ್

Last Updated 13 ಫೆಬ್ರುವರಿ 2016, 5:34 IST
ಅಕ್ಷರ ಗಾತ್ರ

ಪುಣೆ: ಮಂಜಿತ್ ಚಿಲ್ಲಾರ ತೋರಿದ ಮತ್ತೊಂದು ಛಲದ ಹೋರಾಟಕ್ಕೆ ಜಯ ದಕ್ಕಲಿಲ್ಲ. ಆದರೆ, ಸೋಲು ತಪ್ಪಿತು. ಕಿಕ್ಕಿರಿದು ಸೇರಿದ್ದ ಕಬಡ್ಡಿಪ್ರೇಮಿಗಳಿಗೆ ರಸದೌತಣ ಬಡಿಸಿತು.

ಬಾಲೇವಾಡಿಯ ಛತ್ರಪತಿ ಶಿವಾಜಿ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್‌ನ ಮೂರನೇ ಆವೃತ್ತಿಯ ಪಂದ್ಯದಲ್ಲಿ  ಆತಿಥೇಯ ಪುಣೇರಿ ಪಲ್ಟನ್ ತಂಡವು ಶುಕ್ರವಾರ ಜೈಪುರ ಪಿಂಕ್  ಪ್ಯಾಂಥರ್ಸ್ ತಂಡದ ಎದುರಿನ ಪಂದ್ಯವನ್ನು 32–32 ರಿಂದ ಸಮ ಮಾಡಿಕೊಂಡಿತು.

ಗುರುವಾರ ಪಟ್ನಾ ಪೈರೇಟ್ಸ್ ತಂಡದ ಎದುರು ಛಲದ ಹೋರಾಟದಿಂದ ಪಂದ್ಯದ ಸಮ ಮಾಡಿಕೊಂಡಿದ್ದ ಪುಣೇರಿ ತಂಡವು ಸತತ ಎರಡನೇ ಪಂದ್ಯದಲ್ಲಿಯೂ ಡ್ರಾ ಪಡೆಯಿತು. 

ಆತಿಥೇಯ ಪುಣೇರಿ ತಂಡದ ನಾಯಕ ಮಂಜೀತ್ ಚಿಲ್ಲಾರ ಅವರ ಛಲದ ಹೋರಾಟವು ಶುಕ್ರವಾರದ ರಾತ್ರಿಗೆ ರಂಗು ತುಂಬಿತು. ಪುಣೆಯ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತ್ತು. ಪಂದ್ಯದ ಅರ್ಧ ವಿರಾಮಕ್ಕೂ ಮುನ್ನ ಅವರು ಮತ್ತು ಅಜಯ್ ಠಾಕೂರ್ ಸೇರಿ ತೋರಿದ ಆಟವು ಪುಣೇರಿ ತಂಡವು ಗೆಲುವಿಗೆ ಹೋರಾಟ ನಡೆಸುವ ಬಲ ತುಂಬಿತು.  ಏಕೆಂದರೆ, ಪುಣೇರಿ ತಂಡದ ಆರಂಭವು ಉತ್ತಮವಾಗಿರಲಿಲ್ಲ. ಆರನೇ ನಿಮಿಷದಲ್ಲಿ ಪುಣೇರಿ ತಂಡವು ಆಲೌಟ್ ಆಗಿತ್ತು. ಜೈಪುರ ಬಳಗವು 9–3ರಿಂದ ಮುನ್ನಡೆ ಸಾಧಿಸಿತು.  ಸೋನು ನರ್ವಾಲ್ ಅವರ ಆಟದಿಂದ ತಂಡ ಮುನ್ನಡೆ ಪಡೆಯಿತು.

ಆದರೆ, ನಂತರ ಮಂಜೀತ್ ಮತ್ತು ಅಜಯ್ ಠಾಕೂರ್ ಆಟ ರಂಗೇರಿತು. ವಿರಾಮದ ವೇಳೆಗೆ ಪುಣೇರಿ ಪಲ್ಟನ್  (18–21)ಕೇವಲ ಮೂರು ಪಾಯಿಂಟ್‌ಗಳಿಂದ ಹಿಂದಿತ್ತು. ನಂತರದ ಅವಧಿಯಲ್ಲಿ ಜಿದ್ದಾಜಿದ್ದಿನ ಆಟ ನಡೆಯಿತು. ಮಂಜೀತ್ ಒಟ್ಟು 13 ಮತ್ತು ಅಜಯ್ 11 ಪಾಯಿಂಟ್ ಗಳಿಸಿ ಮೆರೆದರು. ಜೈಪುರದ ರಾಜೇಶ್ ನರವಾಲ್ 9 ಮತ್ತು ರಣ್ ಸಿಂಗ್ 5 ಅಂಕ ಗಳಿಸಿದರು. ಕೊನೆಯ ಎರಡು ನಿಮಿಷದಲ್ಲಿ ಎರಡೂ ತಂಡಗಳು ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಪಂದ್ಯ ಸಮವಾಯಿತು. 

ಆರನೇ ಜಯ ದಾಖಲಿಸಿದ ಪಟ್ನಾ ಸತತ ಸೋಲಿನಿಂದ ಕಂಗೆಟ್ಟಿರುವ ದಬಾಂಗ್ ಡೆಲ್ಲಿ ತಂಡದ ಗಾಯದ ಮೇಲೆ  ಪಟ್ನಾ ಪೈರೇಟ್ಸ್‌ ತಂಡವು  ಬರೆ ಎಳೆಯಿತು. ಪ್ರದೀಪ್ ನರ್ವಾಲ್ ಮತ್ತು ದೀಪಕ್ ನರ್ವಾಲ್ ಅವರ ಅಮೋಘ ಆಟದಿಂದ ಪಟ್ನಾ  47–34 ಪಾಯಿಂಟ್‌ಗಳಿಂದ  ಡೆಲ್ಲಿ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಪಂದ್ಯದ ಆರಂಭದಲ್ಲಿ ಸ್ವಲ್ಪಮಟ್ಟಿನ ವೀರಾವೇಷ ಪ್ರದರ್ಶಿಸಿದ  ಡೆಲ್ಲಿ ನಂತರ ಸೋಲಿನತ್ತ ಹೆಜ್ಜೆ ಹಾಕಿತು. ಸತತ ಏಳನೇ ಬಾರಿ ಪರಾಭವಗೊಂಡಿತು. 

ಗುರುವಾರ ಆತಿಥೇಯ ಪುಣೇರಿ ಪಲ್ಟನ್ಸ್ ಎದುರಿನ ಪಂದ್ಯವನ್ನು 30–30 ರಿಂದ ಪಟ್ನಾ ಸಮ ಮಾಡಿಕೊಂಡಿತ್ತು. ಆರಂಭದಲ್ಲಿ ಉತ್ತಮ ಆಟ ತೋರಿದ ಡೆಲ್ಲಿಯ ನಾಯಕ ಸುರ್ಜೀತ್ ಸಿಂಗ್ ಮತ್ತು ಸೆಲ್ವಮಣಿ  ಅವರು ರೈಡಿಂಗ್ ಪಾಯಿಂಟ್‌ಗಳನ್ನು ಗಳಿಸಿ  ಭರವಸೆ ಮೂಡಿಸಿದರು. ಡೆಲ್ಲಿ ತಂಡವು 5–1ರ ಮುನ್ನಡೆಯನ್ನೂ ಪಡೆದಿತ್ತು. ಆದರೆ, ನಂತರ ಸತತ ನಾಲ್ಕು ಪಾಯಿಂಟ್ ಗಳಿಸಿದ ಪ್ರದೀಪ್ ಮತ್ತು ದೀಪಕ್ 5–5ರ ಸಮಬಲಕ್ಕೆ ಕಾರಣರಾದರು. ಡೆಲ್ಲಿಯ ಜ್ಞಾನಶೇಖರ್ ಅವರ ದಾಳಿಯಲ್ಲಿ ಬಂದ ಎರಡು ಅಂಕಗಳ ನೆರವಿನಿಂದ ಹತ್ತು ಪಾಯಿಂಟ್‌ವರೆಗೂ ಡೆಲ್ಲಿ ಸಮಬಲ ಪಡೆದಿತ್ತು.

ಆದರೆ ಪ್ರದೀಪ್ ರೈಡಿಂಗ್‌ನಲ್ಲಿ ಮತ್ತು ವಿದೇಶಿ ಆಟಗಾರ ಹಾಡಿ ಒಶ್‌ತೋರಕ್ ಅವರ ಟ್ಯಾಕ್ಸಿಂಗ್‌ನಲ್ಲಿ 15ನೇ ನಿಮಿಷದಲ್ಲಿ ಡೆಲ್ಲಿ ತಂಡವನ್ನು ಆಲೌಟ್ ಮಾಡಿತು. ಆಗ ಲಭಿಸಿದ 15–11ರ ಮುನ್ನಡೆಯ ನಂತರ ಯಾವುದೇ ಹಂತದಲ್ಲಿಯೂ ಡೆಲ್ಲಿ ತಂಡವು ಪಟ್ನಾದ ಸಮೀಪಕ್ಕೆ ಬರಲೇ ಇಲ್ಲ. ತಂಡದ ನಾಯಕ ರವೀಂದರ್ ಪಹಾಲ್ ಮತ್ತು ಪ್ರಮುಖ ರೈಡರ್ ಕಾಶಿಲಿಂಗ್ ಅಡಕೆ ರಾಷ್ಟ್ರೀಯ ತಂಡದ ಸೇವೆಗೆ ತೆರಳಿದ್ದು ಡೆಲ್ಲಿ ತಂಡದ ದುರ್ಬಲ ಪ್ರದರ್ಶನಕ್ಕೆ ಮತ್ತೊಂದು ಕಾರಣವಾಯಿತು.  ಇದರಿಂದ ಮೊದಲರ್ಧದ ಪಟ್ನಾ ತಂಡವು ವಿರಾಮದ ವೇಳೆಗೆ 20–14 ಅಂಕಗಳ ಮುನ್ನಡೆ ಗಳಿಸಿತು. 

ಆದರೆ, ನಂತರದ ಅವಧಿಯಲ್ಲಿ ಪಟ್ನಾದ ಮೆರೆದಾಟ ಮುಗಿಲು ಮುಟ್ಟಿತು.  ರೈಡಿಂಗ್‌ನಲ್ಲಿ ಒಟ್ಟು 11 ಪಾಯಿಂಟ್ ಗಳಿಸಿದ ಪ್ರದೀಪ್ ಮತ್ತು  ದೀಪಕ್ ನರ್ವಾಲ್ ಗಳಿಸಿದ 15 (ರೈಡಿಂಗ್‌ನಲ್ಲಿ 13, ಸೂಪರ್ ಟ್ಯಾಕಲ್ 2) ಪಾಯಿಂಟ್‌ಗಳು ತಂಡದ ಗೆಲುವಿಗೆ ಕಾರಣವಾದವು.  ಆಟ ನಡೆಯುವಾಗಲೇ ತಮ್ಮ ತಂಡದ ಆಟಗಾರರೊಂದಿಗೆ ಸಲಹೆ ಕೊಟ್ಟ ಕಾರಣಕ್ಕೆ ಡೆಲ್ಲಿ ತಂಡದ ಕೋಚ್ ಬಲವಂತ್‌ ಸಿಂಗ್ ಎರಡು ನಿಮಿಷಗಳ ಅಮಾನು ಶಿಕ್ಷೆ ಅನುಭವಿಸಿದರು.

ತಂಡವು  ಎರಡನೇ ಅವಧಿಯಲ್ಲಿ  ಒಟ್ಟು 27 ಅಂಕಗಳನ್ನು ಕೊಳ್ಳೆ ಹೊಡೆಯಿತು. ಡೆಲ್ಲಿ ತಂಡವು ಎರಡು ಬಾರಿ ಆಲ್‌ಔಟ್ ಆಯಿತು. ಪಂದ್ಯ ಮುಕ್ತಾಯಕ್ಕೆ ನಾಲ್ಕು ನಿಮಿಷ ಬಾಕಿಯಿದ್ದಾಗ ಪಟ್ನಾ ತಂಡವೂ ಒಮ್ಮೆ ಅಲೌಟ್ ಆಯಿತು. ಆದರೆ ಆ ಹೊತ್ತಿಗೆ ಅದು 46–29ರ ಮುನ್ನಡೆ ಸಾಧಿಸಿತ್ತು.  ಕೊನೆಯ ಹಂತದಲ್ಲಿ ದೆಹಲಿ ತಂಡವು ಐದು ಪಾಯಿಂಟ್ ಗಳಿಸಿಕೊಂಡಿತು.

ಪ್ರದೀಪ್ ನರ್ವಾಲ್ ಅರ್ಧಶತಕ: ಪಟ್ನಾ ಪೈರೇಟ್ಸ್ ತಂಡದ ಪ್ರದೀಪ್ ನರ್ವಾಲ್ ಶುಕ್ರವಾರ  ‘ಅರ್ಧಶತಕ’ದ ಗಡಿ ಮುಟ್ಟಿ ದರು. ಅವರು ಒಟ್ಟು ಏಳು ಪಂದ್ಯಗಳಲ್ಲಿ 50 ರೈಡ್ ಪಾಯಿಂಟ್‌ಗಳನ್ನು ಗಳಿಸಿದ ಸಾಧನೆಯನ್ನು ಮಾಡಿದರು.

ದಬಾಂಗ್ ಡೆಲ್ಲಿ ತಂಡದ ಎದುರಿನ ಪಂದ್ಯದ 13ನೇ ನಿಮಿಷದಲ್ಲಿ ಕುಲದೀಪ್ ಸಿಂಗ್ ಅವರನ್ನು ಮುಟ್ಟಿ ಪಾಯಿಂಟ್ ಪಡೆದ ಪ್ರದೀಪ್ ಈ  ಸಾಧನೆ ಮಾಡಿದರು.  ಗುರುವಾರ ಪುಣೇರಿ ಪಲ್ಟನ್ಸ್‌ ಎದುರು ಸಮವಾದ ಪಂದ್ಯದಲ್ಲಿ ಮಿಂಚಿದ್ದ ಅವರು ಒಟ್ಟು 14 ಪಾಯಿಂಟ್‌ಗಳನ್ನು ಕಲೆ ಹಾಕಿದ್ದರು. ಅದರಲ್ಲಿ 11 ರೈಡ್ ಪಾಯಿಂಟ್‌ಗಳಾಗಿ ದ್ದವು. ದಬಂಗ್ ಡೆಲ್ಲಿ ವಿರುದ್ಧ  ಅವರು 11 ಪಾಯಿಂಟ್‌ಗಳನ್ನು ಗಳಿಸಿದರು. 

ಶನಿವಾರದ ಪಂದ್ಯಗಳು
ಜೈಪುರ– ತೆಲುಗು ಟೈಟಾನ್ಸ್
ರಾತ್ರಿ 8ರಿಂದ

ಪುಣೇರಿ ಪಲ್ಟನ್ ವಿರುದ್ಧ ಯೂ ಮುಂಬಾ
ರಾತ್ರಿ 9ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT