ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಸಂಕಟದಲ್ಲಿ ಸಿನ್ಹಾ

ಕಲ್ಲಿದ್ದಲು ಹಗರಣಗಳ ಆರೋಪಿಗಳ ಜತೆ ಸಂಪರ್ಕ ಆರೋಪ
Last Updated 9 ಸೆಪ್ಟೆಂಬರ್ 2014, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್ಎಸ್‌): ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ಅವರಿಗೆ ಸಂಕಷ್ಟ ಪರ್ವ ಎದುರಾಗಿದೆ. ‘೨ಜಿ’ ತರಂಗಾಂತರ   ಹಾಗೂ ಕಲ್ಲಿ­ದ್ದಲು ನಿಕ್ಷೇಪ ಹಂಚಿಕೆ ಹಗರಣ­ಗಳ ಆರೋಪಿ­ಗಳನ್ನು ಸಿನ್ಹಾ ಅವರು ರಕ್ಷಿಸುತ್ತಿದ್ದಾರೆ ಎನ್ನುವ ಆರೋಪವನ್ನು ಸುಪ್ರೀಂ­ಕೋರ್ಟ್‌ ಗಂಭೀರವಾಗಿ ಪರಿಗಣಿ­ಸಿದ್ದು, ಈ ಬಗ್ಗೆ  ಅವರಿಂದ ಸ್ಪಷ್ಟ ಪ್ರತಿಕ್ರಿಯೆಯನ್ನೂ ಕೇಳಿದೆ.

ಸಿಬಿಐ ನಿರ್ದೇಶಕರ ನಿವಾಸದ ಸಂದ­ರ್ಶಕರ ಪಟ್ಟಿಯಲ್ಲಿ ‘೨ಜಿ’ ತರಂಗಾಂತರ ಹಂಚಿಕೆ ಹಗರಣದ ಕಳಂಕಿತರ ಹೆಸರುಗಳು ಇವೆ  ಎನ್ನುವ ಆರೋಪಕ್ಕೆ ಸಂಬಂಧಿಸಿ ಸೋಮ­ವಾರ­ವಷ್ಟೇ ಸಿನ್ಹಾ ಅವರಿಂದ ಸುಪ್ರೀಂಕೋರ್ಟ್‌್ ಪ್ರತಿಕ್ರಿಯೆ ಕೇಳಿತ್ತು. ಇದೀಗ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿಯೂ ಕೋರ್ಟ್‌ ಪ್ರತಿಕ್ರಿಯೆ ಕೇಳಿದೆ.

ಸಿನ್ಹಾ ಅವರು ಕಲ್ಲಿದ್ದಲು ಹಗರಣದ ಆರೋಪಿಗಳನ್ನು ಭೇಟಿಯಾಗಿದ್ದರು ಎಂದು ಸರ್ಕಾರೇತರ ಸಂಸ್ಥೆ ‘ಕಾಮನ್‌ ಕಾಸ್‌’ ಆರೋಪಿಸಿತ್ತು.  ಈ ವಿಷಯ­ವನ್ನು ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವಂತೆಯೂ ಅದು ಕೋರ್ಟ್‌ಗೆ ಮನವಿ ಮಾಡಿ­ಕೊಂಡಿತ್ತು.

ಈ ಸಂಬಂಧ  ಹತ್ತು ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯನ್ಯಾಯ­ಮೂರ್ತಿ ಆರ್‌.ಎಂ. ಲೋಧಾ ಅವರಿದ್ದ ಪೀಠವು ಸಿನ್ಹಾ ಅವರಿಗೆ ಮಂಗಳವಾರ ಸೂಚಿಸಿತು. ಈ ಪ್ರಕರಣದಿಂದ  ಸಿನ್ಹಾ ಅವರನ್ನು ದೂರ ಇಡುವಂತೆ ಮಾಡಿ­ಕೊಂಡ ಮನವಿಗೆ ಆದೇಶ ನೀಡಲು ಪೀಠ ನಿರಾಕರಿಸಿತು.

ಅಲ್ಲದೇ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್‌ ೧೯ಕ್ಕೆ ನಿಗದಿ ಮಾಡಿತು ಸರ್ಕಾರೇತರ ಸಂಸ್ಥೆ ಪರ ಹಾಜರಿದ್ದ ವಕೀಲ ಪ್ರಶಾಂತ್‌ ಭೂಷಣ್‌, ‘ಸೋಮ­ವಾರ ಕೊಟ್ಟಿದ್ದು ‘೨ಜಿ’ಗೆ ಸಂಬಂಧಪಟ್ಟ ಆದೇಶ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಕೂಡ ಸಿನ್ಹಾ ವಿರುದ್ಧ ಆದೇಶ ನೀಡಬಹುದು ಎಂದು ವಾದಿಸಿದರು. ಬಳಿಕ ಪೀಠವು ಸಿನ್ಹಾ ಅವರಿಗೆ ನೋಟಿಸ್‌ ನೀಡಲು ಒಪ್ಪಿಕೊಂಡಿತು.  ಸೆಪ್ಟೆಂಬರ್‌ ೧೫ರಂದು  ೨ಜಿ ವಿಚಾರಣೆ ನಡೆಯ­ಲಿದೆ. ಈ ವಿವಾದದ ಕಾರಣ ರಂಜಿತ್‌ ಸಿನ್ಹಾ ಅವರು ಸಿಬಿಐ ನಿರ್ದೇಶಕರಾಗಿ ಮುಂದುವರಿಯುವ ಬಗ್ಗೆ ಈಗ ಅನುಮಾನ ಎದ್ದಿದೆ.

ನೇಮಕದಲ್ಲೂ ವಿವಾದ..
ಸಿಬಿಐ ನಿರ್ದೇಶಕರಾಗಿ ರಂಜಿತ್‌ ಸಿನ್ಹಾ ಅವರನ್ನು ನೇಮಿಸುವಾಗ ಬಿಜೆಪಿ ಅಪಸ್ವರ ಎತ್ತಿತ್ತು. ಈ ಸ್ಥಾನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ ನಿರ್ದೇ ಶಕ ಶರದ್‌ ಸಿನ್ಹಾ, ಉತ್ತರಪ್ರದೇಶದ ಪೊಲೀಸ್‌ ಮಹಾನಿರ್ದೇಶಕ ಅತುಲ್‌ ಅವರ ಹೆಸರನ್ನು ಕೇಂದ್ರ ಜಾಗೃತ ಆಯೋಗ ಶಿಫಾರಸು ಮಾಡಿತ್ತು. ಸೇವಾ  ಹಿರಿತನದ ಆಧಾರದಲ್ಲಿ ರಂಜಿತ್‌ ಸಿನ್ಹಾ ಅವ­ರನ್ನು ನೇಮಕ ಮಾಡಲಾಯಿತು. ಈ ನೇಮಕಾತಿಯಲ್ಲಿ ಸರ್ಕಾ­ರವು ಜಾಗೃತ ಆಯೋಗದ ಶಿಫಾರಸುಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ಮಾಡಿತ್ತು.

ಸಿನ್ಹಾ ಮೇಲಿನ ಆರೋಪಗಳು: ೧೯೯೬ರಲ್ಲಿ ಸಿಬಿಐನಲ್ಲಿ ಡಿಐಜಿ ಆಗಿದ್ದ ಸಂದರ್ಭದಲ್ಲಿ ಸಿನ್ಹಾ ಅವರು ಮೇವು ಹಗರಣದ ಆರೋಪಿ ಲಾಲು ಪ್ರಸಾದ್‌ ಅವರನ್ನು ರಕ್ಷಿಸಲು ಯತ್ನಿಸಿದ್ದರು ಎನ್ನುವ ಆರೋಪ ಕೂಡ ಇದೆ.

ಸಿಬಿಐ ನಿರ್ದೇಶಕರಾದ ಕೂಡಲೇ ಸಿನ್ಹಾ ಅವರು ಮೇವು ಹಗರಣದ ನಾಲ್ವರು ಪ್ರಮುಖ ತನಿಖಾಧಿಕಾರಿ­ಗಳನ್ನು ವರ್ಗಾವಣೆ ಮಾಡಿದ್ದರು. ಆದರೆ ಸುಪ್ರೀಂಕೋರ್ಟ್‌ ಇದಕ್ಕೆ ತಡೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT