ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸ್ಯ ಸಸ್ಯ ಸಂಗಮ ಅಕ್ವಾಪೊನಿಕ್ಸ್‌

Last Updated 5 ಅಕ್ಟೋಬರ್ 2015, 19:34 IST
ಅಕ್ಷರ ಗಾತ್ರ

ಕಡಿಮೆ ನೀರು, ಅಧಿಕ ಇಳುವರಿ. ಏಕಕಾಲದಲ್ಲಿ  ಒಂದೇ ನೀರಿನಲ್ಲಿ ಬೆಳೆಗಳ ಜೊತೆ ಮೀನಿನ ಕೃಷಿಯನ್ನೂ ಮಾಡುವ ವಿಧಾನವೇ ಅಕ್ವಾಪೊನಿಕ್ಸ್‌. ಅಲ್ಪ ಅವಧಿಯಲ್ಲಿ ಮೀನುಗಳ ಸಾಕಣೆ ಮಾಡುವುದು ಹಾಗೂ ಮೀನು ಸಾಕಣೆಗೆ ಬಳಸಿದ ನೀರನ್ನೇ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಯಲು ಬಳಸಿಕೊಂಡು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯಬಹುದಾದ ಈ ಪದ್ಧತಿ ರಾಜ್ಯಕ್ಕೆ ಕಾಲಿಟ್ಟಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ಯಶಸ್ವಿ ಪ್ರಯೋಗ ಕಂಡಿರುವ ಈ ವಿಧಾನವನ್ನು ಕೇರಳದ ನಾಲ್ವರು ತಜ್ಞರ ತಂಡ ಬೆಂಗಳೂರಿನ ಹೊಸಕೋಟೆಯ ಬಳಿ ಪರಿಚಯಿಸಿದ್ದಾರೆ. ಈ ಪದ್ಥತಿಯಲ್ಲಿ ಮೀನು ಸಾಕಣೆಗೆ ಚಿಕ್ಕ ಚಿಕ್ಕ ಕೊಳಗಳು, ಕೊಳದ ನೀರನ್ನು ಶುದ್ಧೀಕರಿಸಲು ಒಂದು ಟ್ಯಾಂಕ್‌ ಹಾಗೂ ಶುದ್ಧೀಕರಿಸಿದ ನೀರನ್ನು ಸಾವಯವ ಕೃಷಿಗೆ ಬಳಸಿಕೊಳ್ಳಲು ‘ಸ್ಯಾಂಡ್‌ ಬೆಡ್‌’ ಹಾಗೂ ‘ಡೀಪ್‌ ವಾಟರ್‌ ಬೆಡ್‌’ ಪದ್ಧತಿಯಲ್ಲಿ ಬಳಸುವ ಟ್ಯಾಂಕ್‌ ಬೇಕಾಗುತ್ತವೆ. ಹಸಿರು ಮನೆಯ ಅಗತ್ಯವೂ ಇದೆ.

ಮೊದಲು ಮೀನು ಸಾಕಣೆಗೆ ಚಿಕ್ಕದಾದ ನೀರಿನ ಕೊಳ ನಿರ್ಮಿಸಿ, ಮೀನುಗಳ ಸಾಕಣೆ ಪ್ರಾರಂಭಿಸಲಾಗುವುದು. ನೈಲ್‌ತಿಲಿಪಿಯಾ ಮೀನು ಸಾಕಿದರೆ ಉತ್ತಮ. ಇದು ಹೆಚ್ಚು ಬಲಿಷ್ಠವಾಗಿದ್ದು, ಬೇಗನೆ ರೋಗ ರುಜಿನಗಳಿಗೆ ತುತ್ತಾಗುವುದಿಲ್ಲ. ಮೀನಿನ ಕೊಳಗಳ ಪಕ್ಕದಲ್ಲಿ ‘ಸ್ಯಾಂಡ್‌ ಬೆಡ್‌’ ಹಾಗೂ ‘ಡೀಪ್‌ ವಾಟರ್‌ ಬೆಡ್‌’ಗಳನ್ನು ನಿರ್ಮಿಸಬೇಕು. ಮೀನು ಇರುವ ಕೊಳದ ನೀರಿನಲ್ಲಿ ಮೀನಿನಿಂದ ಬರುವ ತ್ಯಾಜ್ಯ ಶೇಖರಣೆಯಾಗುತ್ತಿದ್ದಂತೆ ಅದನ್ನು ಪಂಪ್‌ ಮೂಲಕ ತ್ಯಾಜ್ಯ ಇರುವ ನೀರನ್ನು ಶುದ್ಧೀಕರಣದ ಟ್ಯಾಂಕ್‌ಗೆ ಹರಿಸಲಾಗುತ್ತದೆ.  ಸಾಮಾನ್ಯವಾಗಿ ಮೀನುಗಳು ಅಮೋನಿಯಂ ಬಿಡುಗಡೆ ಮಾಡುತ್ತವೆ. ಇದು ಹೆಚ್ಚು ಸಮಯ ನೀರಿನಲ್ಲೇ ಇದ್ದರೆ ಮೀನಿಗೆ ಅಪಾಯ. ಹೀಗಾಗಿ ಅಮೋನಿಯಂ ಇರುವ ನೀರನ್ನು ನೈಟ್ರೇಟ್‌ಆಗಿ ಪರಿವರ್ತಿಸಲು ಶುದ್ಧೀಕರಣದ ಟ್ಯಾಂಕ್‌ಗೆ ಬಿಡಬೇಕು.

ಇದರಲ್ಲಿರುವ ‘ನೈಟ್ರಿಫಿಕೇಷನ್‌ ಬ್ಯಾಕ್ಟೀರಿಯಾ’ಗಳು ಮೀನಿನ ತ್ಯಾಜ್ಯದಲ್ಲಿರುವ ಅಮೋನಿಯವನ್ನು ನೈಟ್ರೇಟ್‌ ಆಗಿಸುತ್ತವೆ. ಈ ನೀರನ್ನು ‘ಡೀಪ್‌ ವಾಟರ್‌ ಬೆಡ್‌’ನ ಟ್ಯಾಂಕ್‌ಗಳಿಗೆ ಬಿಡಲಾಗುತ್ತದೆ. ಈ ನೀರಿನಲ್ಲಿರುವ ನೈಟ್ರೇಟ್ ಅನ್ನು ಪೋಷಕಾಂಶವನ್ನಾಗಿ ಬಳಸಿಕೊಳ್ಳುವ ಗಿಡ ನೀರನ್ನು ಶುದ್ಧೀಕರಿಸುತ್ತವೆ. ನೀರು ಶುದ್ಧವಾದಾಗ ಅದನ್ನು ಮತ್ತೆ ಮೀನಿನ ಕೊಳಕ್ಕೆ ಹರಿಸಲಾಗುತ್ತದೆ. 

ಹೀಗೆ ಒಮ್ಮೆ ಬಳಸಿದ ನೀರನ್ನೇ ಶುದ್ಧೀಕರಿಸಿ ಪದೇ ಪದೇ ಬಳಸಲಾಗುತ್ತದೆ. ಹೀಗೆ ಪ್ರತಿ ಎರಡು ಗಂಟೆಗೊಮ್ಮೆ ಅದರ ನೀರನ್ನು ಕೊಳಕ್ಕೆ ಹಾಗೂ ಕೊಳದಿಂದ ಶುದ್ಧೀಕರಣ ಟ್ಯಾಂಕ್‌ಗೆ ಹಾಗೂ ಟ್ಯಾಂಕ್‌ನಿಂದ ‘ಡೀಪ್‌ ವಾಟರ್‌ ಬೆಡ್‌’ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಇದರಲ್ಲಿ ಆವಿಯಾಗುವ ಹಾಗೂ ಗಿಡಗಳು ಬಳಸಿಕೊಳ್ಳುವ ನೀರನ್ನು ಮಾತ್ರ ಸೇರಿಸಲಾಗುತ್ತದೆ. ಇದನ್ನು ಹೊರತುಪಡಿಸಿ ನಿತ್ಯ ಅಥವಾ ತಿಂಗಳಿಗೊಮ್ಮೆ ನೀರನ್ನು ಬದಲಾಯಿಸುವ ಅಗತ್ಯವಿರುವುದಿಲ್ಲ.

ಹಾಲೋಬ್ರಿಕ್ಸ್‌ನಿಂದ ನಿರ್ಮಿಸಿದ ನಾಲ್ಕರಿಂದ ಐದು ಅಡಿ ಆಳದ ಮೀನಿನ ಕೊಳದಲ್ಲಿ ಪ್ಲಾಸ್ಟಿಕ್‌ ಶೀಟ್‌ (ಹೈಡೆನ್‌ಸಿಟಿ ಪಾಲಿ ಥೈಲಿನ್ ಲೈನರ್‌) ಅಳವಡಿಸಲಾಗುತ್ತದೆ. ಇದರ ಮೇಲೆ ನೀರನ್ನು ತುಂಬಿಸಿ ಮೀನನ್ನು ಸಾಕಲಾಗುವುದು. ಮೀನಿನ ಟ್ಯಾಂಕ್‌ ಅನ್ನು ಸಿಲಿಂಡ್ರಿಕಲ್‌ ಆಕಾರದಲ್ಲಿ ಮಾಡಬೇಕು. ಇದರಿಂದ ಮೀನುಗಳಿಗೆ ವಿಶಾಲ ಸ್ಥಳ ಲಭಿಸುತ್ತದೆ. ಇದರಿಂದ ಮೀನಿನ ಬೆಳವಣಿಗೆಯೂ ಚೆನ್ನಾಗಿ ಆಗಿ, ಇಳುವರಿ ಹೆಚ್ಚುತ್ತದೆ.

ಡೀಪ್‌ ವಾಟರ್‌ ಬೆಡ್‌ ನಿರ್ಮಿಸುವಾಗ ಎತ್ತರ 14 ಇಂಚು, ಉದ್ದ 20 ರಿಂದ 25 ಅಡಿಯಷ್ಟು ಇರಬೇಕು. ಅಗಲ ಮೂರರಿಂದ ಐದು ಅಡಿಯಷ್ಟು ಇರಬಹುದು. ಬೆಡ್‌ ನಿರ್ಮಾಣವಾದ ನಂತರ ಅದರ ಮೇಲೆ ಮರಳನ್ನು ಹಾಕಿ ಅದರ ಮೇಲೆ ಪ್ಲಾಸ್ಟಿಕ್‌ ಶೀಟ್‌ (ಹೈಡೆನ್‌ಸಿಟಿ ಪಾಲಿಥಿನ್ ಲೈನರ್‌) ಗಳನ್ನು ಅಳವಡಿಸಬೇಕು. ನಂತರ ಅದನ್ನು ಮೇಲೆ ಬಾರದಂತೆ ಬೆಡ್‌ನ ಸುತ್ತಲೂ ಪ್ಯಾಕ್‌ ಮಾಡಬೇಕು. ಇದರಲ್ಲಿ 12 ಇಂಚಿನಷ್ಟು ನೀರು ತುಂಬಿ, ಗಿಡ ಇಡುವಷ್ಟು ರಂಧ್ರಗಳಿರುವ ಥರ್ಮಾಕೋಲ್‌ ಇಟ್ಟು, ಅದರಲ್ಲಿ ಸಸಿಗಳನ್ನು ಇಡಬೇಕು. ಸಸಿಗಳ ಬೇರುಗಳು ನೇರವಾಗಿ ನೀರಿನಲ್ಲಿ ಇರುತ್ತವೆ.

ಸ್ಯಾಂಡ್‌ ಬೆಡ್‌ ಪದ್ಧತಿಯಲ್ಲಿ ಟ್ಯಾಂಕ್‌ ಎತ್ತರ 1– 2 ಅಡಿ, ಉದ್ದ 20–25 ಅಡಿ, ಅಗಲ 3–5 ಅಡಿಯಷ್ಟು ಇರಬೇಕು. 100 (ಪಾಯಿಂಟ್‌ 1 ಒಂದು ಎಂ.ಎಂ.) ರಿಂದ 200 ಮೈಕ್ರಾನ್‌ ಗಾತ್ರದ ನದಿ ಮರಳನ್ನು ಬಳಸಲಾಗುತ್ತದೆ.  ಮರಳು ತಟಸ್ಥವಾಗಿರುವ ಕಾರಣ ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಹೀಗಾಗಿ ಇದರಿಂದ ಯಾವುದೇ ಹಾನಿಯಾಗುವುದಿಲ್ಲ.  ಇದಕ್ಕೆ ಮೀನಿನ ಕೊಳದ ನೀರನ್ನು ನೇರವಾಗಿ ಬಿಡಲಾಗುತ್ತದೆ. ಇದರಲ್ಲಿರುವ ಮರಳು ನೀರನ್ನು ಶುದ್ಧೀಕರಿಸುತ್ತದೆ. ಈ ಪದ್ಧತಿಯಲ್ಲಿ ಸಾಮಾನ್ಯವಾಗಿ ರೈತರು ಬಳಸುವ ನೀರಿನ ಪ್ರಮಾಣದಲ್ಲಿ ಶೇ 5ರಷ್ಟು ನೀರು ಮಾತ್ರ ಬಳಕೆಯಾಗುತ್ತದೆ.

ಅಲ್ಲದೆ ಸಾಮಾನ್ಯ ಕೃಷಿಯಲ್ಲಿ ಬೆಳೆ ಬೆಳೆಯಲು ಬೇಕಾಗುವ ಸಮಯಕ್ಕಿಂತ ನಾಲ್ಕುಪಟ್ಟು ಬೇಗ ಬೆಳೆ ಬೆಳೆಯಬಹುದು. ಅಕ್ವಾಪೊನಿಕ್ಸ್ನಲ್ಲಿ ಮೀನುಗಾರಿಕೆ ಪ್ರಾರಂಭಿಸಿದ ನೂರು ದಿನಗಳಲ್ಲಿ ಮೀನು ಮಾರಾಟಕ್ಕೆ ಲಭ್ಯ. ಇನ್ನು ಎರಡು ತಿಂಗಳಿನಲ್ಲಿ ತರಕಾರಿಗಳು ಸಿಗುತ್ತವೆ. ರೈತರು ಒಂದು ಎಕರೆ ಜಮೀನಿನಲ್ಲಿ ಒಂದು ವರ್ಷಕ್ಕೆ ಬೆಳೆಯುವ ಬೆಳೆಯನ್ನು ಈ ಪದ್ಧತಿಯಲ್ಲಿ ಒಂದು ವರ್ಷದಲ್ಲಿ ಕೇವಲ 500 ಚದರ ಮೀಟರ್‌ ಸ್ಥಳದಲ್ಲಿ ಬೆಳೆಯಬಹುದು.

ಸ್ಯಾಂಡ್‌ ಬೆಡ್‌ ಬಳಸಿ  ಚೆರ್ರಿ ಟೊಮೆಟೊ, ಚೈನೀಸ್‌ ಕ್ಯಾಬೇಜ್‌, ಸ್ಟ್ರಾಬೆರಿ ಸೇರಿದಂತೆ ಇತರೆ ವಿದೇಶಿ ತರಕಾರಿಗಳನ್ನು ಬೆಳೆಯಬಹುದು. ಉಳಿದಂತೆ ಡೀಪ್‌ ವಾಟರ್‌ ಬೆಡ್‌ನಲ್ಲಿ ಪುದೀನಾ, ಕೊತ್ತಂಬರಿ ಸೊಪ್ಪು, ಲೆಟ್ಯೂಸ್‌ ಸೇರಿದಂತೆ ಇತರೆ ಸೊಪ್ಪುಗಳನ್ನು ಬೆಳೆಯಬಹುದು ಎನ್ನುತ್ತಾರೆ ವಿಜಯಕುಮಾರ್‌ ನಾರಾಯಣ್. ಮೂಲತಃ ಕೇರಳದವರಾದ ವಿಜಯಕುಮಾರ್‌ ಹಾಗೂ ಶ್ರೀಜಿತ್‌ ರಾಮಕುಮಾರ್‌, ಸಜು ಥಾಮಸ್‌ ಹಾಗೂ ಮೊಹಮ್ಮದ್‌ ಆರಿಫ್ ಅವರು  ‘ಅಕ್ವಾಪೊನಿಕ್ಸ್‌’ ಪದ್ಧತಿಯಲ್ಲಿ ಕೃಷಿ ಕೈಗೊಂಡಿದ್ದಾರೆ.

ಇಲ್ಲಿದೆ ಅಕ್ವಾಪೊನಿಕ್ಸ್‌
ಹೊಸಕೋಟೆಯಿಂದ ಚಿಂತಾಮಣಿಗೆ ಹೋಗುವ ಮಾರ್ಗಮಧ್ಯೆ ಒಂದು ಎಕರೆ ಭೂಮಿಭೋಗ್ಯಕ್ಕೆ ಪಡೆದಿರುವ ಈ ನಾಲ್ಕು ಮಂದಿ, ಪ್ರಾಯೋಗಿಕವಾಗಿ 500 ಚದರ ಮೀಟರ್ ಪ್ರದೇಶದಲ್ಲಿ ನಾಲ್ಕು ಮೀನು ಕೊಳಗಳು, ಡೀಪ್‌ ವಾಟರ್‌ ಬೆಡ್‌ ಹಾಗೂ ಎರಡು ಸ್ಯಾಂಡ್‌ ಬೆಡ್‌, ಗ್ರೀನ್‌ ಹೌಸ್‌ ಹಾಗೂ ನೀರಿನ ಶುದ್ಧೀಕರಣ ಟ್ಯಾಂಕ್‌ ನಿರ್ಮಿಸುತ್ತಿದ್ದಾರೆ. ಇದಕ್ಕೆ ₹ 15 ಲಕ್ಷ ತಗಲಿದೆ.

ಇಲ್ಲಿ ಸದ್ಯಕ್ಕೆ ಬಹು ಬೇಡಿಕೆ ಇರುವ ಚೆರ್ರಿ ಟೊಮೆಟೊ, ಸ್ಟ್ರಾಬೆರಿ, ಪುದೀನಾ, ಕೊತ್ತಂಬರಿ ಹಾಗೂ ಲೆಟ್ಯೂಸ್‌ ಬೆಳೆಯು ಆಲೋಚನೆ ಇದೆ ಎನ್ನುತ್ತಾರೆ ಆರಿಫ್. ಈ ಯೋಜನೆಗೆ ಅಕ್ವಾಪೊನಿಕ್ಸ್‌ನಲ್ಲಿ ಸಂಶೋಧನೆ ನಡೆಸುತ್ತಿರುವ ಮಾರ್ಕ್‌ಮೆಕ್‌ಮೂರ್ತಿ ಅವರು ಸಹಾಯ ಮಾಡುತ್ತಿದ್ದಾರೆ. ಈ ಹಸಿರು ಮನೆ ನಿರ್ಮಾಣಕ್ಕೆ ₹ 4ರಿಂದ ₹ 5 ಲಕ್ಷ ವೆಚ್ಚವಾಗುತ್ತದೆ. ಉಳಿದಂತೆ ಶುದ್ಧೀಕರಣ ಟ್ಯಾಂಕ್‌, ಸ್ಯಾಂಡ್‌ ಬೆಡ್‌ ಹಾಗೂ ಡೀಪ್‌ ವಾಟರ್‌ ಬೆಡ್‌ ಪದ್ಧತಿಯಲ್ಲಿ ಕೃಷಿ ಮಾಡಲು ಅಗತ್ಯವಾದ ಟ್ಯಾಂಕ್‌ಗಳಿಗೆ 10 ಲಕ್ಷ ವೆಚ್ಚವಾಗುತ್ತದೆ.
ಸಂಪರ್ಕಕ್ಕೆ: 08129219282.
*

ಹಸಿರು ಮನೆ
ಹಸಿರು ಮನೆಯನ್ನು ಎರಡು ಉದ್ದೇಶಕ್ಕೆ ನಿರ್ಮಿಸಲಾಗುತ್ತದೆ. ಒಂದು, ಬೆಳೆ ಹಾಗೂ ಮೀನಿಗೆ ರೋಗ ಬಾರದಂತೆ ತಡೆಯಲು, ಅಕ್ಕಪಕ್ಕದ ತೋಟಗಳಲ್ಲಿ ಸಿಂಪಡಿಸುವ ಕ್ರಿಮಿನಾಶಕಗಳ ಪರಿಣಾಮ ಆಗದಂತಿರಲು. ಮತ್ತೊಂದು, ಉತ್ತರ ಭಾರತ ಹಾಗೂ ಬೆಂಗಳೂರಿನಲ್ಲಿ ಚಳಿಗಾಲದಲ್ಲಿ ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಯಾಗುತ್ತದೆ. ಇದು ಮೀನಿನ ಬೆಳವಣಿಗೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮೀನುಗಳಿಗೆ ಸಾಮಾನ್ಯವಾಗಿ 26 ರಿಂದ 28 ಡಿಗ್ರಿಯಷ್ಟು ಉಷ್ಣಾಂಶ ಇರಲೇಬೇಕು. ಹೀಗಾಗಿ ಉಷ್ಣಾಂಶಕಾಯ್ದುಕೊಳ್ಳಲು ಹಸಿರು ಮನೆಯ ಅಗತ್ಯ ಇದೆ. ಹಸಿರು ಮನೆ ಇಲ್ಲದೆ ಹೈಡ್ರೊಪೊನಿಕ್ಸ್‌ ಪದ್ಧತಿಯಲ್ಲಿ ಬೆಳೆ ಬೆಳೆಯಬಹುದು. ಆಗ ಯಾವುದೇ ರೋಗ ಬಂದರೆ ಬೇವು ಹಾಗೂ ಹೊಂಗೆಯ ಸಾವಯವ ಕ್ರಿಮಿನಾಶಕಗಳನ್ನು ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT