ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದರಸಾ ಮುಚ್ಚಲು ಆಗ್ರಹ

Last Updated 8 ಫೆಬ್ರುವರಿ 2016, 5:40 IST
ಅಕ್ಷರ ಗಾತ್ರ

ವಿಜಯಪುರ: ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗಿರುವ ಮದರಸಾಗಳನ್ನು ರಾಜ್ಯ ಸರ್ಕಾರ ಮುಚ್ಚಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಆಗ್ರಹಿಸಿದರು.

ಮದರಸಾಗಳಲ್ಲಿ ಇಸ್ಲಾಮಿಕ್‌ ಶಿಕ್ಷಣದ ಬದಲು ಭಯೋತ್ಪಾದನೆಗೆ ಕುಮ್ಮಕ್ಕು ದೊರಕುತ್ತಿದೆ. ಶಸ್ತ್ರಾಸ್ತ್ರ ಸಂಗ್ರ ಹಣೆ ನಡೆದಿದೆ. ಮೌಲ್ವಿಗಳೇ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ನಿದರ್ಶನಗಳು ಬೆಳಕಿಗೆ ಬಂದಿವೆ ಎಂದು ಭಾನುವಾರ ಇಲ್ಲಿ  ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಪಾಕಿಸ್ತಾನದಲ್ಲೇ 180ಕ್ಕೂ ಹೆಚ್ಚು ಮದರಸಾಗಳನ್ನು ನಿಷೇಧಿಸಲಾಗಿದೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗವೂ ದೊರಕುವುದಿಲ್ಲ. ಅಲ್ಲಿ ಕಲಿಯುವುದಕ್ಕಿಂತ ವಿದ್ಯಾರ್ಥಿಗಳು ಸರ್ಕಾರಿ ಉರ್ದು ಶಾಲೆಗಳಿಗೆ ಸೇರಲಿ ಎಂದರು. ಭಟ್ಕಳ ಉಗ್ರಗಾಮಿಗಳ ಕೇಂದ್ರಸ್ಥಾನವಾಗಿದೆ. ಆದರೆ ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ವಿರೋಧ ಪಕ್ಷಗಳು ಸಹ ಈ ವಿಷಯ ಕುರಿತು ಮಾತನಾಡದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿವೆ ಎಂದು ದೂರಿದರು.

ಶಬರಿಮಲೈ, ಶನಿ ಶಿಗಣಾಪುರ ದೇಗುಲಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ವಿನಾಕಾರಣ ವಿವಾದ ಸೃಷ್ಟಿಸಲಾಗುತ್ತಿದೆ. ಅಲ್ಪಸಂಖ್ಯಾತರ ಏಜೆಂಟರಂತೆ ವರ್ತಿಸುವ ಕೆಲ ವಿಚಾರವಾದಿಗಳು ಈ ರೀತಿಯ ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದಾರೆ.

ಶಬರಿಮಲೈಯಲ್ಲಿ 10 ವರ್ಷದೊಳ ಗಿನ, 50 ವರ್ಷ ಮೇಲ್ಪಟ್ಟ ಮಹಿಳೆ ಯರಿಗೆ ಪ್ರವೇಶ ಅವಕಾಶವಿದೆ. ಆದರೂ ವಿನಾಃ ಕಾರಣ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ಈ ದೇಗುಲಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಕೋರ್ಟ್‌ ಮೆಟ್ಟಿಲೇರಿರುವ ವ್ಯಕ್ತಿ ಮಸೀದಿ ಗಳಲ್ಲಿಯೂ ಮಹಿಳೆಯರಿಗೆ ಪ್ರವೇಶ ನೀಡುವ ವಿಷಯದಲ್ಲಿ ಧ್ವನಿ ಎತ್ತಲಿ ನೋಡೋಣ ಎಂದು ಪ್ರಮೋದ್‌ ಮುತಾಲಿಕ್‌ ಸವಾಲು ಹಾಕಿದರು.

ಪ್ರೇಮಿಗಳ ದಿನ ನಿಷೇಧಿಸಿ: ಭಾರತೀಯ ಸಂಸ್ಕೃತಿ ನಾಶಗೊಳಿಸುವ ವ್ಯವಸ್ಥಿತವಾದ ಹುನ್ನಾರವಾಗಿರುವ ‘ಪ್ರೇಮಿಗಳ ದಿನಾಚರಣೆ’ಯನ್ನು ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಬಹುರಾಷ್ಟ್ರೀಯ ಕಂಪೆನಿಗಳು, ಡ್ರಗ್ಸ್ ಮಾಫಿಯಾಗಳು ಪ್ರೇಮಿಗಳ ದಿನಾಚರಣೆಗೆ ಕುಮ್ಮಕ್ಕು ನೀಡುತ್ತಿವೆ. ‘ಕಿಸ್ ಆಫ್ ಲವ್’ ಪ್ರಚೋದಿಸಿದ ವ್ಯಕ್ತಿಗಳ ನಿಜ ಬಣ್ಣ ಬಯಲಾಗಿದೆ. ಇದರ ಹಿಂದೆ ಹೆಣ್ಣು ಮಕ್ಕಳ ಮಾರಾಟ ಜಾಲ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪ್ರೇಮಿಗಳ ದಿನಾಚರಣೆಯನ್ನು ಸಹ ಇದೇ ರೀತಿಯ ಸಮಾಜ ವಿರೋಧಿ, ಸಂಸ್ಕೃತಿ ವಿರೋಧಿ ಶಕ್ತಿಗಳು ಪ್ರೋತ್ಸಾಹಿಸುತ್ತಿವೆ ಎಂದರು.

ಪ್ರೇಮಿಗಳ ದಿನಾಚರಣೆ ದುಷ್ಪರಿಣಾಮಗಳ ಕುರಿತು ಶ್ರೀರಾಮಸೇನೆ ಜಾಗೃತಿ ಮೂಡಿಸಿದ ಫಲವಾಗಿ ರಾಜ್ಯದಲ್ಲಿ ಶೇ 40ರಷ್ಟು ಆಚರಣೆ ಕಡಿಮೆಯಾಗಿದೆ. ಈ ಬಾರಿಯೂ ಸಹ ಪ್ರೇಮಿ ಗಳ ದಿನಾಚರಣೆ ಬದಲಾಗಿ ‘ಮಾತಾ-–ಪಿತೃ ಪೂಜನ’ ಕಾರ್ಯಕ್ರಮ ಹಮ್ಮಿಕೊ ಳ್ಳ ಲಾಗಿದ್ದು, ರಾಜ್ಯದ 100 ಸ್ಥಳಗಳಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ ಎಂದು ತಿಳಿಸಿದರು.

ಸಿದ್ಧಲಿಂಗ ಸ್ವಾಮೀಜಿ, ಗಂಗಾಧರ ಕುಲಕರ್ಣಿ, ನೀಲಕಂಠ ಕಂದಗಲ್, ಬಸವರಾಜ ಬೂದಿಹಾಳ, ದುರ್ಗಾಸೇನೆ ಅಧ್ಯಕ್ಷೆ ಕಮಲಕ್ಕ, ಬಸವರಾಜ ಮಹಲಿಂಗಯ್ಯಮಠ ಇದ್ದರು.

***
ಆಡಳಿತದ ಚುಕ್ಕಾಣಿ ಹಿಡಿದವರು ಗಂಭೀರವಾಗಿ ಪರಿಗಣಿಸಬೇಕು. ಹೆಣ್ಣು ಮಕ್ಕಳ ರಕ್ಷಣೆ ದೃಷ್ಟಿಯಿಂದ ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಬಾರದು.
-ಪ್ರಮೋದ್‌ ಮುತಾಲಿಕ್,
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT