ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದರಸಾ ಶಾಲೆ ಅಲ್ಲ: ಮಹಾರಾಷ್ಟ್ರ ಸರ್ಕಾರದ ಆದೇಶ

ಔಪಚಾರಿಕ ಶಿಕ್ಷಣ ನೀಡದ ಮದರಸಾ ಮಾನ್ಯತೆ ರದ್ದು: ಎಚ್ಚರಿಕೆ
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನದಂಥ ಪ್ರಾಥಮಿಕ ವಿಷಯಗಳನ್ನು ಬೋಧಿಸದ ಮದರಸಾಗಳನ್ನು ಶಾಲೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಿಜೆಪಿ–ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಗುರುವಾರ  ಹೇಳಿದೆ.

ಧಾರ್ಮಿಕ ವಿಷಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಔಪಚಾರಿಕ ಶಿಕ್ಷಣವನ್ನೂ ನೀಡಬೇಕು. ಇಲ್ಲದಿದ್ದರೆ ಅಂಥ ಮದರಸಾಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿರುವುದು ಹೊಸ ವಿವಾದ ಹುಟ್ಟು ಹಾಕಿದೆ.

ಬಿಜೆಪಿ ನೇತೃತ್ವದ ಈ ವಿವಾದಾತ್ಮಕ ನಿರ್ಧಾರವನ್ನು ವಿವಿಧ ರಾಜಕೀಯ ಪಕ್ಷಗಳ ನಾಯಕರು  ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಕಟುವಾಗಿ  ಖಂಡಿಸಿದ್ದಾರೆ.

ಈ ವಿಷಯವನ್ನು ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದರೆ, ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಸರ್ಕಾರದ   ವಿವಾದಾತ್ಮಕ ನಿರ್ಧಾರದ ಹಿಂದಿರುವ ತರ್ಕವೇನು ಎಂದು  ಪ್ರಶ್ನಿಸಿದ್ದಾರೆ.

ಸಂವಿಧಾನ ಪ್ರತಿ ಮಗುವಿಗೂ ಪ್ರಾಥಮಿಕ ಶಿಕ್ಷಣದ ಹಕ್ಕು ನೀಡಿದೆ.  ಆದರೆ, ಕೇವಲ ಧಾರ್ಮಿಕ ವಿಷಯಗಳನ್ನು ಬೋಧಿಸುವ ಮದರಸಾಗಳು ಮಕ್ಕಳನ್ನು ಔಪಚಾರಿಕ ಶಿಕ್ಷಣದಿಂದ ವಂಚಿಸುತ್ತಿವೆ.  ಹೀಗಾಗಿ ಮದರಸಾಗಳನ್ನು ಶಾಲೆಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ  ಸಚಿವ ಏಕನಾಥ್‌ ಖಡ್ಸೆ  ಸರ್ಕಾರದ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದಲ್ಲಿ 1,890 ನೋಂದಾಯಿತ ಮದರಸಾಗಳ ಪೈಕಿ 550 ಮದರಸಾಗಳು ಮಕ್ಕಳಿಗೆ ಎಲ್ಲ ವಿಷಯ ಬೋಧಿಸಲು ಒಪ್ಪಿವೆ. ಅಂಥ ಮದರಸಾಗಳಿಗೆ ಸರ್ಕಾರ ಎಲ್ಲ ರೀತಿಯ ಆರ್ಥಿಕ ನೆರವು, ಸೌಲಭ್ಯ ಮತ್ತು ಬೋಧಕ ಸಿಬ್ಬಂದಿಯನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.

ಅಲ್ಪಸಂಖ್ಯಾತ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈ ಸಂಬಂಧ   ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.  ಶಿಕ್ಷಣ ಇಲಾಖೆ ಜುಲೈ 4ರಂದು ಔಪಚಾರಿಕ ಶಿಕ್ಷಣ ಪಡೆಯದ ಮಕ್ಕಳ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಮದರಸಾಗಳಲ್ಲಿ ಕಲಿಯುತ್ತಿರುವ ಮಕ್ಕಳನ್ನು ‘ಶಾಲೆ ಹೊರಗಿನ ಮಕ್ಕಳು’ ಎಂದು ಸಮೀಕ್ಷೆ ಯಲ್ಲಿ ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT