ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುಮಗಳ ವಸ್ತ್ರ ವಿನ್ಯಾಸಕ್ಕೆ ಲೀನಾ ರುಜು

Last Updated 25 ನವೆಂಬರ್ 2015, 19:46 IST
ಅಕ್ಷರ ಗಾತ್ರ

ದಕ್ಷಿಣ ಭಾರತ ಶಿಲ್ಪಕಲೆಯ ತವರೂರು. ಕಣ್ಮನ ಸೆಳೆಯುವ ದೇಗುಲಗಳು ಇಲ್ಲಿ ಸಾಕಷ್ಟಿವೆ. ದೇಗುಲಗಳು ಕೇವಲ ಪುಣ್ಯಕ್ಷೇತ್ರಗಳಷ್ಟೇ ಅಲ್ಲ; ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಪೋಷಿಸುವ ತಾಣಗಳೂ ಹೌದು. ಆದಿಕಾಲದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ದೇವಾಲಯಗಳು ಈಗ ವಿನ್ಯಾಸಕರಿಗೂ ಸ್ಫೂರ್ತಿ ತುಂಬುತ್ತಿವೆ.

ನಗರದಲ್ಲಿ ಈಚೆಗೆ ನಡೆದ ಬಿಎಂಡಬ್ಲ್ಯು ಬ್ರೈಡಲ್‌ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿದ್ದ ದೆಹಲಿ ಮೂಲದ ವಿನ್ಯಾಸಕರಾದ ಅಶೀಮಾ–ಲೀನಾ ಅವರುಗಳು ಪ್ರದರ್ಶಿಸಿದ ವಧು ವಸ್ತ್ರ ಸಂಗ್ರಹಕ್ಕೆ ಸ್ಫೂರ್ತಿ ನೀಡಿದ್ದು ಇದೇ ದಕ್ಷಿಣದ ದೇಗುಲಗಳು. ಅವರ ಸಂಗ್ರಹದ ಹೆಸರು ಕೂಡ ‘ದಕ್ಷಿಣ’ ಎಂದೇ ಇತ್ತು. ಅವರ ವಿನ್ಯಾಸದಲ್ಲಿ ಮೈದಳೆದಿದ್ದ ಬ್ರೈಡಲ್‌ ಸಂಗ್ರಹದಲ್ಲಿ ದಕ್ಷಿಣದವರು ಧರಿಸುವ ವಸ್ತ್ರಗಳ ಲಕ್ಷಣ ಮತ್ತು ಅಲಂಕಾರಗಳು ಢಾಳಾಗಿ ಕಾಣಿಸುತ್ತಿದ್ದವು.

ನಿಮ್ಮ ವಿನ್ಯಾಸಕ್ಕೆ ಸ್ಫೂರ್ತಿ ಏನು ಮತ್ತು ಅದಕ್ಕೆ ದಕ್ಷಿಣ ಎಂದು ಹೆಸನ್ನಿಡಲು ಕಾರಣವೇನು ಎಂದು ವಿನ್ಯಾಸಕಿ ಲೀನಾ ಅವರನ್ನು ಪ್ರಶ್ನಿಸಿದಾಗ, ಆಕೆ ದಕ್ಷಿಣದ ದೇಗುಲ ಪರಂಪರೆ ಮತ್ತು ಈ ಭಾಗದ ಬಟ್ಟೆಗಳಿಗಿರುವ ಮಾಂತ್ರಿಕತೆಯತ್ತ ತಮ್ಮ ಮಾತು ಹೊರಳಿಸಿದರು.

‘ದಕ್ಷಿಣ ಭಾರತದಲ್ಲಿ ದೇವಸ್ಥಾನಗಳಿಗೆ ಒಂದು ದೊಡ್ಡ ಪರಂಪರೆ ಇದೆ. ಅವುಗಳಲ್ಲಿ ವಿನ್ಯಾಸಕರಿಗೆ ಸ್ಫೂರ್ತಿ ತುಂಬುವ ಅನೇಕ ಸಂಗತಿಗಳೂ ಇವೆ. ದಕ್ಷಿಣದ ದೇಗುಲ ಪರಂಪರೆಯನ್ನು ವಧು ಸಂಗ್ರಹದ ಮೂಲಕ ಅರ್ಪಣೆ ಮಾಡುವುದು ನನ್ನ ಮೂಲ ಉದ್ದೇಶವಾಗಿತ್ತು.

ಹಾಗಾಗಿ, ನಾನು ಈ ವಸ್ತ್ರಗಳ ವಿನ್ಯಾಸಕ್ಕೆ  ತುಂಬ ಮುತುವರ್ಜಿ ವಹಿಸಿದ್ದೇನೆ. ವಿನ್ಯಾಸಕ್ಕೆ ಬೇಕಿದ್ದ  ಬಟ್ಟೆಗಳನ್ನು ಚೆನ್ನೈನಿಂದ ತಂದೆ. ಇಲ್ಲಿನ ಜನರು ವಸ್ತ್ರವಿನ್ಯಾಸ ಮಾಡುವಾಗ ಏನೆಲ್ಲಾ ಕ್ರಮ ಅನುಸರಿಸುತ್ತಾರೆ ಎಂಬುದನ್ನು ಸೂಕ್ಷವಾಗಿ ಗಮನಿಸಿದೆ. ಇಲ್ಲಿನ ವಿನ್ಯಾಸದ ಸಣ್ಣಸಣ್ಣ ಸಂಗತಿಯನ್ನು ನನ್ನ ವಿನ್ಯಾಸಕ್ಕೆ ದುಡಿಸಿಕೊಂಡೆ. ಆನಂತರ, ಅದಕ್ಕೆ ನನ್ನ ಸೃಜನಶೀಲತೆಯೆಂಬ ಹೂರಣ ತುಂಬಿದೆ. ಅಂದಹಾಗೆ, ಇಲ್ಲಿ ನೇಯುವ, ತಯಾರಿಸುವ ಬಟ್ಟೆಗಳಿಗೆ ಒಂದು ಅದ್ಭುತ ಸೆಳೆತವಿದೆ. ಎಲ್ಲರನ್ನು ಆಕರ್ಷಿಸುವ ಶಕ್ತಿ ಇದೆ. ದೇಗುಲಗಳು ಚೆಲುವು ಮತ್ತು ವಸ್ತ್ರಗಳ ಮಾಂತ್ರಿಕತೆ ಇವೆರಡು ಈ ಸಂಗ್ರಹದ ವಿಶೇಷ’ ಎನ್ನುತ್ತಾರೆ ಅವರು.

ಬ್ರೈಡಲ್‌ ಸಂಗ್ರಹ ವಿನ್ಯಾಸ ತುಂಬ ಇಂಟರೆಸ್ಟಿಂಗ್‌ ಅನಿಸುವಂತಹದ್ದು. ಇದರಲ್ಲೇ ನೂರಾರು ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಬ್ಬೊಬ್ಬ ವಿನ್ಯಾಸಕರೂ ಒಂದೊಂದು ಕಟ್‌/ಶೇಪ್‌ಗೆ ಪ್ರಸಿದ್ಧರಾಗಿರುತ್ತಾರೆ. ಆದರೆ, ಲೀನಾ ಯಾವುದೋ ಒಂದು ನಿರ್ದಿಷ್ಟ ಕಟ್‌ ಅಥವಾ ಶೇಪ್‌ಗೆ ಆತುಕೊಂಡವಲ್ಲ. ಇವರ ವಿನ್ಯಾಸ ಪರಂಪರೆ, ಆಧುನಿಕತೆ ಈ ಎರಡರ ಸಮ್ಮಿಶ್ರಣದಂತಿತ್ತು.

‘ನನ್ನ ಉದ್ದೇಶ ಈ ಷೋನಲ್ಲಿ ಸಾಂಪ್ರದಾಯಿಕ ವಸ್ತ್ರಪರಂಪರೆಯನ್ನು ಬಿಂಬಿಸುವುದಾಗಿತ್ತು. ಇದು ಈ ದಿನಮಾನದ ಬ್ರೈಡಲ್‌ ಕಲೆಕ್ಷನ್‌ ಆದ್ದರಿಂದ ಅದಕ್ಕೆ ಸ್ವಲ್ಪ ಮಟ್ಟಿನ ಆಧುನಿಕತೆಯ ಸ್‍ಪರ್ಶವನ್ನೂ ನೀಡಿದ್ದೇನೆ. ನನ್ನ ಸಂಗ್ರಹವನ್ನು ಕಣ್ತುಂಬಿಕೊಂಡವರಿಗೆ ಅದರಲ್ಲಿ ವಸ್ತ್ರ  ಮೀಮಾಂಸೆಯ ಜೊತೆಗೆ ಆಧುನಿಕತೆ, ಆಕರ್ಷಣೆ, ಸೊಗಸುಗಾರಿಕೆ ಎಲ್ಲವೂ ಕಾಣಿಸುತ್ತದೆ.

ಫ್ಯಾಷನ್‌ ಎಂಬುದಕ್ಕೆ ಯಾವುದೇ ಭಾಷೆಯಿಲ್ಲ, ಎಲ್ಲೆಯಿಲ್ಲ. ಇಂತಹದ್ದೇ ಸ್ವರೂಪದಲ್ಲಿರಬೇಕು ಎಂಬ ಮಿತಿಯೂ ಇಲ್ಲ. ಫ್ಯಾಷನ್‌ ಅಂದರೆ ಫ್ಯಾಷನ್‌ ಅಷ್ಟೇ! ನೀವು ನಿಘಂಟಿನಲ್ಲಿ ಈ ಪದಕ್ಕೆ ಅರ್ಥ ನೋಡಿದರೆ ಈ ದಿನದ ಟ್ರೆಂಡೇ ಫ್ಯಾಷನ್‌ ಎಂದಿದೆ. ಸಾಂಪ್ರದಾಯಿಕತೆ ಎಂಬುದು ನಮ್ಮ ದೇಶದ ಪರಂಪರೆಯ ಒಂದು ಭಾಗ.  ವಿನ್ಯಾಸದಲ್ಲಿ ನಾನು ಅದಕ್ಕೆ ಬದ್ಧಳಾಗಿದ್ದೇನೆ. ಫ್ಯಾಷನ್‌ನಂತೆ ಬಣ್ಣಕ್ಕೂ ಭಾಷೆಯಿಲ್ಲ. ಕಪ್ಪು–ಬಿಳುಪು ಯಾವುದಾದರೂ ಸರಿ, ಒಬ್ಬ ವಿನ್ಯಾಸಕಿಯಾಗಿ ನನಗೆ ಎಲ್ಲ ಬಣ್ಣಗಳೂ ಇಷ್ಟ. 

ಪ್ರತಿಯೊಬ್ಬ ಮದುಮಗಳು ಕೂಡ ತುಂಬ ಸುಂದರವಾಗಿ ಕಾಣುವ ಹಂಬಲ  ಹೊಂದಿರುತ್ತಾಳೆ. ಮದುವೆ ಸಮಾರಂಭದಲ್ಲಿ ವಧುವಿಗೆ ಸರಳವಾದ, ಸುಂದರವಾದ ವಸ್ತ್ರ ಧರಿಸುವ ಉತ್ಸಾಹ ಇರುತ್ತದೆ. ಅದು ಸಾಂಪ್ರದಾಯಿಕ ರೀತಿಯಲ್ಲಿ ವಿನ್ಯಾಸಗೊಂಡಿರಬೇಕು ಮತ್ತು ಹೆಚ್ಚಿನ ಆಧುನಿಕತೆ ಸ್ಪರ್ಶಕ್ಕೆ ತೆರೆದುಕೊಂಡಿರಬಾರದು ಎಂಬುದು ನನ್ನ ಭಾವನೆ. ಬ್ರೈಡಲ್‌ ಕಲೆಕ್ಷನ್‌ನಲ್ಲೇ ಈಗ ನೂರಾರು ವಿನ್ಯಾಸಗಳು ಲಭ್ಯ ಇವೆ. ಲೆಹಂಗಾಕ್ಕೆ ಹೊಂದಿಕೊಳ್ಳುವ ಬ್ಲೌಸ್‌, ಅದರ ವಿನ್ಯಾಸದಲ್ಲೂ ಸಾಕಷ್ಟು ಆಯ್ಕೆಗಳಿವೆ’ ಎಂದು ತಮ್ಮ ವಿನ್ಯಾಸದ ಬಗ್ಗೆ ಹೆಚ್ಚಿನ ಅಂಶಗಳನ್ನು ಹೇಳುತ್ತಾರೆ ಅವರು.

ಬೆಂಗಳೂರು ನನ್ನ ನೆಚ್ಚಿನ ನಗರಿಗಳಲ್ಲಿ ಒಂದು ಎನ್ನುವ ಲೀನಾ,  ಕೆಲವು ವರ್ಷಗಳ ಹಿಂದೆ ನಡೆದ ಬೆಂಗಳೂರು ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿದ್ದ ವಿನ್ಯಾಸಕಿ. ಹಲವು ವರ್ಷಗಳ ಬಳಿಕ ಬೆಂಗಳೂರಿಗೆ ಬಂದು ತಮ್ಮ ವಿನ್ಯಾಸ ಪ್ರದರ್ಶನ ಮಾಡಿದ ಕುರಿತಂತೆ ಅವರಿಗೆ ತುಂಬ ಖುಷಿ ಇದೆ.  

‘ಕಳೆದ 25 ವರ್ಷಗಳಿಂದ ಈ ಕ್ಷೇತ್ರದಲ್ಲಿ ಇದ್ದೇನೆ. ಆ ಜರ್ನಿ ನನಗೆ ತುಂಬ ಖುಷಿ ಕೊಟ್ಟಿದೆ. ದೆಹಲಿಯ ಲಕ್ಷುರಿ ಮಾಲ್‌ ಡಿಎಲ್ಎಫ್‌ ಎಂಪೋರಿಯೊದಲ್ಲಿ ನನ್ನದೊಂದು ಔಟ್‌ಲೆಟ್‌ ಇದೆ. ನನ್ನ ವಿನ್ಯಾಸವನ್ನು ಮೆಚ್ಚಿರುವ ವಿಶ್ವದ ಎಲ್ಲ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅವರಿಷ್ಟದ ವಸ್ತ್ರಗಳನ್ನು ಕೊಂಡುಕೊಳ್ಳುತ್ತಾರೆ.

ನಾನು ಮಹಿಳೆಯರನ್ನು ಅತ್ಯಂತ ಸುಂದರವಾಗಿ ಕಾಣಿಸುವಂತೆ ವಸ್ತ್ರವಿನ್ಯಾಸ ಮಾಡುವುದರಲ್ಲಿ ಪರಿಣತಿ ಸಾಧಿಸಿದ್ದೇನೆ. ಪರಂಪರೆಯ ಜೊತೆಗೆ ಸೊಗಸುಗಾರಿಕೆಯನ್ನು ಮೇಳೈಸಿ ವಸ್ತ್ರವಿನ್ಯಾಸ ಮಾಡುವುದರಿಂದ ಫ್ಯಾಷನ್‌ ಕ್ಷೇತ್ರದಲ್ಲಿ ನಾನಿನ್ನೂ ಗಟ್ಟಿಯಾಗಿ ಉಳಿದುಕೊಂಡಿದ್ದೇನೆ. ಇದೇ ನನ್ನ ಶಕ್ತಿ.  ಇದರ ಜೊತೆಗೆ ಲಕ್ಷುರಿ ಪ್ರಿಂಟ್ಸ್‌ ಸಂಗ್ರಹಕ್ಕೂ ನಾನು ಜನಪ್ರಿಯಳಾಗಿದ್ದೇನೆ’ ಎನ್ನುವಾಗ ಲೀನಾ ಅವರ ಕಣ್ಣುಗಳಲ್ಲಿ ಅನುಭವದ ಜೊತೆಗೆ ಹೊಸತನವನ್ನು ರೂಢಿಸಿಕೊಂಡ ಹೆಮ್ಮೆಯ ಭಾವ ತುಳುಕುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT