ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಥೀಮ್ ಫ್ಯಾಷನ್ ಹಂಗಾಮು!

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸರ್ವಧರ್ಮಗಳನ್ನು ಒಡಲಲ್ಲಿರಿಸಿಕೊಂಡು ಜೀಕುವ ಭಾರತಾಂಬೆಯ ಮಡಿಲಲ್ಲಿ ಎಣಿಕೆಗೆ ಸಿಗದಷ್ಟು ವೈವಿಧ್ಯಮಯ ಆಚರಣೆ, ಸಂಪ್ರದಾಯಗಳಿವೆ. ಪ್ರತಿಯೊಂದು ವರ್ಗ, ಪಂಗಡಕ್ಕೂ ಅವರದ್ದೇ ಆದ ಉಡುಗೆ–ತೊಡುಗೆಗಳು, ಸಂಪ್ರದಾಯಗಳು ಇರುತ್ತವೆ. ನಮ್ಮ ನೆಲದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಜನಾಂಗೀಯ ಗುಂಪುಗಳು ಏಕತೆಯೊಂದಿಗೆ ಜೀವಿಸುತ್ತಿದ್ದಾರೆ. ಈ ಎಲ್ಲ ಪಂಗಡಗಳ ಮದುವೆ ಆಚರಣೆಗಳಿಗೆ ಕನ್ನಡಿ ಹಿಡಿಯಲು ಬರುತ್ತಿದೆ ಜಾಗ್ವರ್‌ ಟ್ರೂಸೋ ವೀಕ್‌. (ಮದುವಣಗಿತ್ತಿಯ ವೇಷಭೂಷಣ ಪ್ರದರ್ಶನ) ‘ಟ್ರೂಸೋ ವೀಕ್‌’ನ ೫ನೇ ಆವೃತ್ತಿಯಲ್ಲಿ ಭಾರತದಲ್ಲಿ ನಡೆಯುವಂತಹ ವಿವಾಹಗಳ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯ ಮತ್ತು ಸಂಪ್ರದಾಯಗಳು ಅನಾವರಣಗೊಳ್ಳಲಿವೆ. 

ಯುಬಿ ಸಿಟಿಯ ದಿ ಕಲೆಕ್ಷನ್‌ನ ಸಹಯೋಗದಲ್ಲಿ ಸಬ್‌ಲೈಮ್ ಗ್ಯಾಲರಿಯಾ ಸಾದರಪಡಿಸುತ್ತಿರುವ ಈ ಕಾರ್ಯಕ್ರಮ ನವೆಂಬರ್ ೨೧ರಿಂದ ೩೦ರವರೆಗೆ ನಡೆಯಲಿದೆ. ಹತ್ತು ದಿನ ನಡೆಯುವ ವಿವಾಹಕ್ಕೆ ಸಂಬಂಧಿಸಿದ ಈ ಉತ್ಸವದಲ್ಲಿ, ಜಗತ್ತಿನಲ್ಲಿ ಈಗಿರುವಂತಹ ಅತ್ಯಂತ ಆಧುನಿಕ ಪ್ರವೃತ್ತಿಯ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಐಷಾರಾಮಿ ಬ್ರಾಂಡ್‌ಗಳು ಹಾಗೂ ಭಾರತೀಯ ಕರಕುಶಲಕರ್ಮಿಗಳು ಮತ್ತು ನೇಕಾರರಿಂದ ವಿವಾಹದ ಬಗೆಗಿನ ಯೋಜನೆ, ವಿನ್ಯಾಸ ಮತ್ತು ಇನ್ನಿತರೆ ಅಗತ್ಯತೆಗಳಿಗೆ ಸಲಹೆಗಳನ್ನು ಒಂದೇ ಸೂರಿನಡಿ ಪಡೆಯುವ ಅವಕಾಶ ಲಭ್ಯವಿರುತ್ತದೆ.

‘ಹೊಸತನ್ನು ಬಹುಬೇಗ ಅಪ್ಪಿಕೊಳ್ಳುವ ಗುಣ ನಮ್ಮ ಜನರಿಗಿದೆ. ಇಂದಿನ ಯುವಜನತೆ ಕೇವಲ ತಮ್ಮ ಸ್ವಂತ ಆಚರಣೆಗಳು ಮತ್ತು ಸಂಪ್ರದಾಯಗಳಿಗಷ್ಟೇ ಅಂಟಿಕೊಂಡಿರದೇ, ಎಲ್ಲ  ಸಮುದಾಯಗಳ ಸಂಪ್ರದಾಯ ಮತ್ತು ಹಬ್ಬಗಳನ್ನೂ ಒಂದೇ ಎಂಬ ಭಾವನೆಯಿಂದ ಆಚರಿಸುತ್ತಾರೆ. ಈಗೀಗ ಅಂತರ-ಧರ್ಮೀಯ ಮತ್ತು ಅಂತರ-ಸಮುದಾಯದ ವಿವಾಹಗಳು ಹೆಚ್ಚುತ್ತಿವೆ. ಈ ಕಾರಣದಿಂದಾಗಿ ಜನರು ದೇಶದ ಎಲ್ಲ ಸಂಸ್ಕೃತಿಗಳ ಅತ್ಯುತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಆರಂಭಿಸಿದ್ದಾರೆ. ಈ ಬಾರಿಯ ಟ್ರೂಸೋ ವೀಕ್, ಭಾರತೀಯ ವಿವಾಹವನ್ನು ವ್ಯಾಖ್ಯಾನಿಸುವಂತಹ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಕಡೆಗೆ ಗಮನ ನೀಡಲಿದೆ. ಹಲವು ಸಮುದಾಯಗಳ ಸಂಪ್ರದಾಯಗಳನ್ನು ಇಂದಿಗೂ ಜೀವಂತವಾಗಿರಿಸುವಲ್ಲಿ ನೆರವಾಗಿರುವ ಕರಕುಶಲಕರ್ಮಿಗಳ ವಿಶೇಷ ವಸ್ತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ’ ಎನ್ನುತ್ತಾರೆ  ಪ್ರೆಸ್ಟೀಜ್ ಗ್ರೂಪ್‌ನ ಸಹ ನಿರ್ದೇಶಕಿ ಮತ್ತು ಸಬ್‌ಲೈಮ್ ಗ್ಯಾಲರಿಯಾದ ಸ್ಥಾಪಕಿ ಉಜ್ಮಾ ಇರ್ಫಾನ್.

ಮೊದಲ ದಿನದ ರಾತ್ರಿಯ ಆಕರ್ಷಣೆ
ಟ್ರೂಸೋ ವೀಕ್‌ ೨೦೧೪ರ ಮೊದಲನೆಯ ದಿನ ರಾತ್ರಿ ವಿಶೇಷ ಆಕರ್ಷಣೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ನಡೆಯುತ್ತಿರುವಂತಹ ಅದ್ದೂರಿ ವಿವಾಹ ಮಹೋತ್ಸವವನ್ನು ಬಿಂಬಿಸುವ ಕಾರ್ಯಕ್ರಮ ಇಲ್ಲಿ ನಡೆಯಲಿವೆ. ಹಿಂದೂ ಧರ್ಮೀಯರು ನಂಬುವಂತಹ ಸಪ್ತಪದಿಯ (ಏಳು ಹೆಜ್ಜೆಗಳು) ಪರಿಕಲ್ಪನೆಯನ್ನು ಆಧರಿಸಿ ಏಳು ಚಟುವಟಿಕೆಗಳು ನಡೆಯಲಿವೆ. ಒಂದು ಅದ್ದೂರಿ ಪ್ರಸ್ತಾವನೆ, ಪಂಜಾಬಿ ರೊಕ, ವಧು/ವರ ಪಾರ್ಟಿ, ಮುಸ್ಲಿಂ ಮೆಹಂದಿ, ಬ್ಯಾಂಡ್, ಬಾಜಾ, ಬರಾತ್, ಕ್ರಿಶ್ಚಿಯನ್ನರು ಅನುಸರಿಸುವಂತಹ ವೈವಾಹಿಕ ಪದ್ಧತಿಗಳು, ರಿಸೆಪ್ಷನ್ ಪಾರ್ಟಿಗಳನ್ನು ಇದು ಒಳಗೊಂಡಿದೆ. ಜೊತೆಗೆ, ವಿವಿಧ ಭಾರತದ ವಿವಿಧ ವೈವಾಹಿಕ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವಂತಹ, ಸರಳ ಕಥೆಗಳನ್ನು ಒಳಗೊಂಡಂತಹ ಅನೇಕ ಮನೋರಂಜನಾ ಚಟುವಟಿಕೆಗಳು ನಡೆಯಲಿವೆ. ಈ ಮನೋರಂಜನೆಗೆ ಹೆಚ್ಚಿನ ಮೋಜು ಸೇರಿಸುವಂತೆ, ಖ್ಯಾತ ನೃತ್ಯಗಾರ ಟೆರೆನ್ಸ್ ಲೂಯಿಸ್ ತಂಡದವರಿಂದ ನೃತ್ಯ ಪ್ರದರ್ಶನವಿರುತ್ತದೆ. ಇದಕ್ಕಾಗಿಯೇ ಇವರ ತಂಡವನ್ನು ಮುಂಬೈನಿಂದ ವಿಶೇಷವಾಗಿ ಇಲ್ಲಿಗೆ ಕರೆತರಲಾಗುತ್ತಿದೆ. 

ಕಾರ್ಯಕ್ರಮಗಳ ವಿವರಗಳು
ನವೆಂಬರ್ 21ರಂದು ಯುಬಿ ಸಿಟಿಯಲ್ಲಿರುವ ಎಲ್ಲ ರೆಸ್ಟೋರೆಂಟ್‌ಗಳಲ್ಲಿ ಟಿಡಬ್ಲ್ಯೂ (ಟ್ರೂಸೋ ವೀಕ್‌) ಮೆನು ಪರಿಚಯಿಸಲಾಗುತ್ತದೆ. ಇದರನ್ವಯ ತಿನಿಸು ಮತ್ತು ಪಾನೀಯಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಇದರ ಜೊತೆಗೆ, ಒಬೆರಾಯ್ ಹೋಟೆಲ್‌ನ ಪೇಸ್ಟ್ರಿ ಬಾಣಸಿಗ ಭುವನ್ ರವಿಶಂಕರ್ -ಅವರು ವಿವಾಹ ಮಹೋತ್ಸವಗಳಲ್ಲಿ, ಸುಲಭವಾಗಿ ಮಾಡಬಹುದಾದಂತಹ ಎರಡು ಮಿನಿ ಡೆಸರ್ಟ್‌ಗಳನ್ನು ಪ್ರದರ್ಶಿಸಲಿದ್ದಾರೆ. ಈ ಡೆಸರ್ಟ್‌ಗಳನ್ನು ಸವಿಯುವ ಅವಕಾಶ ಪ್ರೇಕ್ಷಕರಿಗೆ ದೊರೆಯುತ್ತದೆ. ಒಬೆರಾಯ್ ಹೋಟೆಲ್‌ನಲ್ಲಿ ಲಭ್ಯವಿರುವ ವಿವಿಧ ಬಗೆಯ ವಿವಾಹ ಕೇಕ್‌ಗಳನ್ನು ಪ್ರದರ್ಶಿಸಲಾಗುತ್ತದೆ.

ನ.22ರಂದು ನಡೆಯುವ ಸ್ಪರ್ಧೆಯಲ್ಲಿ ನಾಲ್ಕು ಜೋಡಿಗೆ ತಮ್ಮ ಪಾಕಕೌಶಲ ಪ್ರದರ್ಶಿಸುವ ಅವಕಾಶ ಕಲ್ಪಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನವೂ ದೊರಕಲಿದೆ. ನ.23ರಂದು ಲಾರೆಲ್‌ ಇಂಡಿಯಾ ಸಹಯೋಗದಲ್ಲಿ ಮಿರರ್‌್ಸ ಅಂಡ್‌ ವಿಥಿನ್‌ ಮಳಿಗೆಯು ವಿವಾಹ ವಸ್ತ್ರಾಭರಣಗಳ ಫ್ಯಾಷನ್‌ ಷೋ ಆಯೋಜಿಸಿದೆ. ಈ ಸಂದರ್ಭದಲ್ಲಿ ರೂಪದರ್ಶಿಗಳು ಲತಾ ಪುಟ್ಟಣ್ಣ ವಿನ್ಯಾಸ ಮಾಡಿರುವ ಲೆಹೆಂಗಾಗಳನ್ನು ಪ್ರದರ್ಶಿಸಲಿದ್ದಾರೆ. ಅಪರಂಜಿ ಜ್ಯುವೆಲ್ಸ್‌ನ ಚಿನ್ನಾಭರಣಗಳು ನೋಡುಗರ ಕಣ್ಣುಕುಕ್ಕಲು ಸಜ್ಜಾಗುತ್ತಿವೆ.

ನವೆಂಬರ್‌ 21ರಿಂದ 30ರವರೆಗೆ ಹರ್ಟ್‌ಮನ್‌ ಸ್ಟೋರ್‌ ವಿವಿಧ ಥೀಮ್‌ಗಳನ್ನು ಪ್ರದರ್ಶಿಸಲಿದೆ. ಹತ್ತು ದಿನಗಳ ಈ ಅವಧಿಯಲ್ಲಿ ‘ಹ್ಯಾವ್‌ ಎ ಹರ್ಟ್‌ಮನ್‌ ಹನಿಮೂನ್‌’ ಎಂಬ ಥೀಮ್‌ನಲ್ಲಿ ವಿಶ್ವದ ಜನಪ್ರಿಯ ಹನಿಮೂನ್‌ ಹಾಟ್ಸ್ಪಾಟ್‌ಗಳನ್ನು ಪರಿಚಯಿಸಲಿದೆ.
ನವೆಂಬರ್ ೨೭-–೨೯ರವರೆಗೆ ಅಂತರರಾಷ್ಟ್ರೀಯ ಜಾಝ್ ಹಬ್ಬ ನಡೆಯಲಿದೆ. ಬೆಂಗಳೂರಿನಲ್ಲಿ ಈ ಬಗೆಯ ಜಾಝ್ ಹಬ್ಬ ನಡೆಯುತ್ತಿರುವುದು ಇದೇ ಮೊದಲು. ಇಲ್ಲಿ ಜೇಮ್ಸ್ ಕಾರ್ಟರ್, ಹೆಲೆನ್ ಸಂಗ್ ಮತ್ತು ಯೂರಿ ಹೊನಿಂಗ್ ಅವರಂತಹ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಅದೇ ರೀತಿ, ನ.30ರಂದು ಯುಬಿ ಸಿಟಿಗೆ ಬರುವವರು ಪಿಂಕ್ ಫ್ಲ್ಯಾಯ್ಡ್ ವಿಶೇಷ ಸಂಗೀತ ಪ್ರದರ್ಶನಕ್ಕೆ ಸಾಕ್ಷಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT