ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮನೆಯಲ್ಲಿ ಗದ್ದಲ

Last Updated 21 ಜನವರಿ 2015, 19:30 IST
ಅಕ್ಷರ ಗಾತ್ರ

ಸಂಕ್ರಾಂತಿ ಹಬ್ಬದ ಆ ಸಂಜೆ ಸಂಭ್ರಮ ಮೂಡಿಸಿತ್ತು. ಬಾಣ ಬಿರುಸುಗಳಿಂದ ಸಮಾರಂಭ ಕಳೆಗಟ್ಟಿತ್ತು. ಬೆಂಗಳೂರಿನ ವಿದ್ಯಾಪೀಠ ವೃತ್ತ ಸಮೀಪದ ಕೆಂಪೇಗೌಡ ಕ್ರೀಡಾಂಗಣದಲ್ಲಿ ಜನರ ಉತ್ಸಾಹ ಮೇರೆ ಮೀರಿತ್ತು. ಸಮಾರಂಭದ ಕೊನೆಯ ಹಂತದಲ್ಲಿ ಕೂಡ ಜನರು ಬರುತ್ತಲೇ ಇದ್ದುದು ವಿಶೇಷ! ಹೀಗಾಗಿ ಗದ್ದಲ, ಗಲಭೆಗೇನೂ ಅಲ್ಲಿ ಕೊರತೆ ಇರಲಿಲ್ಲ.

ತಾವೇ ನಿರ್ಮಿಸಿ ನಟಿಸುತ್ತಿರುವ ‘ಜಸ್ಟ್‌ ಮದ್ವೇಲಿ’ ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆಯನ್ನು ಹರೀಶ್ ಅದ್ಧೂರಿಯಾಗಿ ಆಯೋಜಿಸಿದ್ದರು. ರಾಜಕಾರಣಿಗಳು, ಪೊಲೀಸ್‌ ಅಧಿಕಾರಿಗಳು, ಉದ್ಯಮಿಗಳನ್ನು ಭರ್ಜರಿಯಾಗಿಯೇ ಸನ್ಮಾನಿಸಿದರು. ಸಮಾರಂಭಕ್ಕೆ ಬಂದಿದ್ದ ಜನರಿಗೆ ಸಿ.ಡಿ.ಗಳನ್ನು ಅಚ್ಚುಕಟ್ಟಾಗಿ ಉಚಿತವಾಗಿ ವಿತರಿಸಲಾಯಿತು.

ಸಿ.ಡಿ ಬಿಡುಗಡೆ ಮಾಡಿದ ನಟ ಸುದೀಪ್‌, ಮಾತನಾಡುವ ಬದಲಿಗೆ ಹಾಸ್ಯ ಪ್ರಸಂಗ ಸೃಷ್ಟಿಸಿ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಅದಕ್ಕೆ ಅವರು ಆಯ್ದುಕೊಂಡಿದ್ದು, ಚಿತ್ರತಂಡವನ್ನು! ಇಬ್ಬರು ನಾಯಕಿಯರ ಪೈಕಿ ನಿಮಗೆ ಯಾರು ಇಷ್ಟ ಎಂದು ನಾಯಕನನ್ನೂ, ನಿರ್ದೇಶಕರನ್ನೂ ಕೇಳಿ ಅವರ ಉತ್ತರಕ್ಕೆ ಮತ್ತೊಂದು ಅರ್ಥ ಕಲ್ಪಿಸಿ ಜನರಲ್ಲಿ ನಗೆಯುಕ್ಕಿಸಿದರು.

‘ಸಮಾರಂಭವನ್ನು ವಿಭಿನ್ನವಾಗಿ ಮಾಡುವ ಆಸೆಯಿತ್ತು. ಅದನ್ನೇ ಮಾಡಿದ್ದೇನೆ’ ಎಂದರು ನಟ ಹರೀಶ್. ಅವರ ಪ್ರಕಾರ ಸಿನಿಮಾ ತುಂಬ ‘ಈಜಿ ಗೋಯಿಂಗ್’. ಸರಳವಾದ ಕಥೆಯನ್ನು ಅಷ್ಟೇ ಸುಂದರವಾಗಿ ನಿರೂಪಿಸಿದ ನಿರ್ದೇಶಕ ಕೋಲಾರ ಸೀನ ಅವರನ್ನು ಬಾಯ್ತುಂಬ ಹೊಗಳಿದರು. ಚಿತ್ರದ ಐದು ಹಾಡುಗಳಿಗೆ ರವಿ ಬಸ್ರೂರ ಸಂಗೀತ ಹೊಸೆದಿದ್ದಾರೆ. ಯವಕರ ಮನಸ್ಸು ಕದಿಯುವ ಹಾಡುಗಳು ಇವು ಎಂದು ಅವರು ಬಣ್ಣಿಸಿದರು. ‘ಈ ಸಿನಿಮಾ ಜಸ್ಟ್ ಕಾಮಿಡಿಯೊಂದಿಗೆ ಸಂದೇಶ ನೀಡುತ್ತದೆ’ ಎಂದು ಕೋಲಾರ ಸೀನ ಹೇಳಿಕೊಂಡರು.

ಸುದೀಪ್‌ಗೆ ತೊಡಿಸಲು ಬೆಳ್ಳಿ ಕಿರೀಟವೊಂದನ್ನು ಚಿತ್ರತಂಡ ತುಂಬ ಉತ್ಸಾಹದಿಂದ ತಂದಿತು. ಆದರೆ ಅದನ್ನು ನಯವಾಗಿ ನಿರಾಕರಿಸಿದ ಸುದೀಪ್, ‘ನಾನು ರಾಜ ಅಲ್ಲ; ಹೀಗಾಗಿ ಈ ಕಿರೀಟ ಬೇಡ. ಇದರ ಹಣವನ್ನು ಯಾವುದಾದರೂ ಅನಾಥಾಶ್ರಮಕ್ಕೆ ದಾನ ಮಾಡಿ’ ಎಂದು ಸಲಹೆ ನೀಡುತ್ತಲೇ ಕ್ರೀಡಾಂಗಣವು ಶಿಳ್ಳೆ, ಚಪ್ಪಾಳೆಯಿಂದ ತುಂಬಿಹೋಯಿತು. ಆರ್‌.ಅಶೋಕ್, ಪೊಲೀಸ್‌ ಅಧಿಕಾರಿ ಲೋಕೇಶ್ ಸೇರಿದಂತೆ ಹಲವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ನಾಯಕಿ ದೀಪಾ, ಛಾಯಾಗ್ರಾಹಕ ಸಿನಿಟೆಕ್‌ ಸೂರಿ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT