ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಪಾನದ ಮಾಯಾಲೋಕದಲ್ಲಿ...

Last Updated 29 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

“ಹೊಸ ವರ್ಷಕ್ಕೆ ಏನು ಮಾಡಿದ್ರಿ?”
“ಇನ್ನೇನು? ಗುಂಡು ಪಾರ್ಟಿ, ರಾತ್ರಿ 12ರವರೆಗೆ, ಆಮೇಲೆ ನ್ಯೂ ಇಯರ್!”

“ನಾನು ಕಾಲೇಜಿನಲ್ಲಿದ್ದಾಗ ನಮ್ಮ ಗೆಳೆಯರ ಗುಂಪಿನಲ್ಲಿ ಕುಡಿಯದಿದ್ದವರು ಅಂದರೆ ನಾನು ಮತ್ತು ಇನ್ನೊಬ್ಬ.  ನಮ್ಮಿಬ್ಬರನ್ನು ಇತರರು ನೋಡುತ್ತಿದ್ದ ರೀತಿ ‘ವಿಚಿತ್ರ ಪ್ರಾಣಿ’ಗಳು ಅನ್ನೋ ಥರಾ.  ಲೈಫ್‌ನಲ್ಲಿ ಮಜಾ ಮಾಡೋದೇ ಗೊತ್ತಿಲ್ಲ ನಮಗೆ ಅನ್ನೋದು ಅವರ ಅನಿಸಿಕೆ.  ‘ಅಮ್ಮನ ಕಂಡ್ರೆ ಹೆದರಿಕೆನಾ?’  ಅನ್ನೋ ಪ್ರಶ್ನೆ ಈಗ ‘ಹೆಂಡ್ತೀನ ಕಂಡ್ರೆ ಯಾಕೆ ಇಷ್ಟು ಹೆದರ್ತಿಯೋ’ ಅನ್ನೋ ಪ್ರಶ್ನೆಯಾಗಿ ಬದಲಾಗಿದೆ! ”

“ಡಾಕ್ಟ್ರೇ, ನಮ್ಮನೆಯವರು ಮೊದಲಿನಿಂದ ಕುಡೀತಿದ್ರು.  ಆದರೆ, ಮೊದಲೆಲ್ಲಾ ಪಾರ್ಟಿ-ಫ್ರೆಂಡ್ಸು ಇದ್ದಾಗ.  ಕ್ರಮೇಣ ಬರ್ತಾ, ಬರ್ತಾ ವಾರಕ್ಕೊಂದು ಸಲ, ಆಮೇಲೆ ವಾರಕ್ಕೆ 2-3 ಸಲ, ಈಗ ಪ್ರತಿನಿತ್ಯ ಕುಡಿದೇ ಇದ್ರೆ ಅವರು ಮನುಷ್ಯರೇ ಅಲ್ಲ.  ಬೆಳಿಗ್ಗೆ ಎದ್ದ ತಕ್ಷಣ ಬಾಟಲ್ ಬೇಕೇ ಬೇಕು.  ಕುಡಿದ ಮೇಲೆ ಅವರ ಬಾಯಿಗೆ ಲಗಾಮೇ ಇಲ್ಲ, ಅವಾಚ್ಯ ಶಬ್ದಗಳು, ತೂರಾಡೋದು.  ಈಗ 4 ದಿನದಿಂದ ಅವರಿಗೆ ಒಂಥರಾ ಭ್ರಮೆ.  ಕುಡಿಯೋದು ‘ಸಡನ್’ ಆಗಿ ನಿಲ್ಸಿದ್ದಕ್ಕಿರ್ಬೇಕು.  ಯಾರೋ ಮಾತಾಡ್ತಾರೆ ಅಂತಾರೆ, ಹೆದರ್ತಾರೆ, ಯಾರೋ ಬರ್ತಾರೆ, ಹೊಡೀತಾರೆ ಅಂತಾರೆ.  ಅದಕ್ಕೇ ಈಗ ಕರ್ಕೊಂಡು ಬಂದ್ವಿ ನಿಮ್ಮ ಹತ್ರ”.

ಇವೆಲ್ಲ ಮದ್ಯಪಾನದ ಮಾಯಾಲೋಕದ ವಿವಿಧ ಅನುಭವಗಳು.  ಮದ್ಯಪಾನ ಹಿಂದಿನ ಕಾಲದಿಂದಲೂ ಮಾನವ ತನ್ನ ಸಂತೋಷಕ್ಕಾಗಿ, ಔಷಧಿಗಾಗಿ, ಕೆಲವು ತಿನಿಸುಗಳಿಗಾಗಿ ಉಪಯೋಗಿಸುತ್ತಾ ಬಂದಿರುವಂಥದ್ದೇ.  ಮದ್ಯಪಾನ ಒಂದು ‘ಸಾಮಾಜಿಕ’ ನಡವಳಿಕೆಯಾಗಿ ಸಮಾಜದಲ್ಲಿ ಪರಿಗಣಿಲ್ಪಡುತ್ತದೆ.  ಆದರೆ, ಮದ್ಯಪಾನ ಇಂಥ ‘ಸಾಮಾಜಿಕ’ ನಡವಳಿಕೆಯ ಹಂತದಲ್ಲಿಯೂ ವ್ಯಕ್ತಿಯನ್ನು ಮದ್ಯವ್ಯಸನಕ್ಕೆ ತಳ್ಳುವ ಅಪಾಯವನ್ನು ಹೊಂದಿರುತ್ತದೆ ಎಂಬುದನ್ನು ಗಮನಿಸಲೇಬೇಕು. 

ಇವರಲ್ಲಿ ಕೆಲವರು ಮಾತ್ರ ಮದ್ಯವ್ಯಸನಕ್ಕೆ ತುತ್ತಾಗಲು ಕಾರಣ ಏನು?  ನಮ್ಮ ಮಿದುಳು ನಮ್ಮ ಯೋಚನೆ - ನಡವಳಿಕೆಗಳನ್ನು ನಿಯಂತ್ರಿಸುತ್ತದಷ್ಟೆ.  ನಾವು ಯಾರೇ ಮದ್ಯ ಸೇವಿಸಲಿ, ಅದು ನೇರವಾಗಿ ರಕ್ತದ ಮೂಲಕ ಹೆಚ್ಚು ಪರಿಣಾಮ ಬೀರುವುದು ನಮ್ಮ ಮಿದುಳಿನ ಮೇಲೆ.  ಈ ಮಿದುಳಿನಲ್ಲಿ ಕೆಲವು ಮುಖ್ಯ ಕೇಂದ್ರಗಳು ಈ ಪರಿಣಾಮದ ಗುರಿ.  ಅಂಥ ಒಂದು ಕೇಂದ್ರ ‘ಮೀಸೋಲಿಂಬಿಕ್ ವ್ಯೂಹ’, ಇಲ್ಲಿ ಡೋಪಮೀನ್ ಎಂಬ ನರವಾಹಕ ಪ್ರಮುಖವಾಗಿ ಕೆಲಸ ಮಾಡುತ್ತದೆ. 

ಇದು ಮಿದುಳಿನ ಸಂತೋಷಾತ್ಮಕ ಪ್ರಚೋದನೆ’ಗೆ ಸಂಬಂಧಿಸಿದ್ದು. ಅಂದರೆ ಮದ್ಯ ಸೇವನೆಯ ನಂತರ ಉಂಟಾಗುವ ‘ತೇಲಿದಂಥ’, ‘ಧಿಂ’ ಎನ್ನುವ ಅನುಭವ ಈ ಪ್ರಚೋದನೆಯ ಪರಿಣಾಮ. ಮದ್ಯದಿಂದ ಆಗಬಹುದಾದ ಎಲ್ಲ ದುಷ್ಪರಿಣಾಮಗಳ ಅರಿವಿದ್ದೂ ‘ಸುಖದ’ ‘ಉನ್ಮಾದ’ದ ಹಿಂದೆ ವ್ಯಕ್ತಿ ಓಡುವಷ್ಟು ಪ್ರಬಲವಾದದ್ದು. 

ಆದರೆ ಅನುವಂಶಿಕತೆ, ಕೆಲವು ರೀತಿಯ ವ್ಯಕ್ತಿತ್ವ ದೋಷಗಳು, ಖಿನ್ನತೆ, ವಾತಾವರಣದಲ್ಲಿ ವ್ಯಸನಕ್ಕೆ ಅನುಕೂಲವಾದ ಸಂಗತಿಗಳು ಈ ಪ್ರಚೋದನೆಯ ಪ್ರಬಲತೆಯನ್ನು ಹೆಚ್ಚಿಸುತ್ತದೆ. ಅಂದರೆ ಅಪ್ಪ ಕುಡಿಯುತ್ತಿದ್ದರೆ, ಮಕ್ಕಳು ತಮ್ಮ ಜೀವನದಲ್ಲಿ ಮದ್ಯವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಕೆಲವು ವಂಶವಾಹಿನಿಗಳಿಂದ (ಜೀನ್ಸ್) ಹೆಚ್ಚುತ್ತದೆ.  ಹಾಗೆಯೇ ಆತಂಕದ ವ್ಯಕ್ತಿತ್ವ ದೋಷವಿದೆ ಎಂದರೆ, ಆತಂಕದಿಂದ ಹೊರಬರಲು ‘ಕುಡಿತ’ವನ್ನೇ ಔಷಧಿಯಾಗಿ ಬಳಸುವ ಸಾಧ್ಯತೆಗಳಿವೆ.

‘ಏಕೆ ಕುಡಿಯುತ್ತೀರಿ?’ ಎಂಬ ಪ್ರಶ್ನೆ .......
ಮದ್ಯವ್ಯಸನಿಗಳನ್ನು ‘ಏಕೆ ಕುಡಿಯುತ್ತೀರಿ?’ ಎಂಬ ಪ್ರಶ್ನೆ ಕೇಳಿದಾಗ ಬರುವ ಉತ್ತರಗಳು ವಿಭಿನ್ನ.  ಬಡತನ - ಸಾಲದ ಹೊರೆ - ವಿಫಲ ಪ್ರೇಮ -ಸಂಸಾರದಲ್ಲಿ ಕಲಹ, ಸ್ನೇಹಿತರ ವೃಂದ ಹಿಗೆ ವಿವಿಧ ಕಾರಣಗಳಿಂದ ತಾವು ಕುಡಿತದ ದಾಸರಾಗಿರುವುದಾಗಿ ವಿವರಿಸುತ್ತಾರೆ.  ಆದರೆ ಮದ್ಯವ್ಯಸನದಿಂದ ಹೊರಬರುವ ಮೊಟ್ಟಮೊದಲ ಹೆಜ್ಜೆ “ಈ ಯಾವುದೇ ಕಾರಣವಿದ್ದೂ ಕುಡಿಯದೇ ಸಮಸ್ಯೆಗೆ ಬೇರೆ ಪರಿಹಾರ ಕಂಡುಕೊಳ್ಳುವ ಇತರರು ಇದ್ದಾರೆ.  ನಾನು ಕುಡಿಯಲು ‘ನಾನೇ’ ಕಾರಣ” ಎಂಬ ಅರಿವು ಮದ್ಯವ್ಯಸನಕ್ಕೆ ಗುರಿಯಾದ ವ್ಯಕ್ತಿಗೆ ಮೂಡುವುದು.

ವೈದ್ಯರು, ‘ಲಿವರ್ ಕೆಡುತ್ತದೆ, ಕುಡಿಯಬೇಡಿ’ ಎಂದಾಗ ಮದ್ಯವ್ಯಸನಿ  ಚಟ ಬಿಡುವುದಾಗಿ ಘೋಷಿಸುತ್ತಾನೆ, ಆಣೆ-ಪ್ರಮಾಣ ಹಾಕುತ್ತಾನೆ, ಗಟ್ಟಿ ನಿರ್ಧಾರ ಮಾಡುತ್ತಾನೆ.  ಆದರೆ, ಒಂದು ದಿನ ಕುಡಿಯದಿದ್ದರೆ ಕೈಕಾಲು ನಡುಗಲಾರಂಭಿಸುತ್ತವೆ, ಭ್ರಮೆಗಳು ತಲೆದೋರುತ್ತವೆ, ನಿದ್ರೆ ಬರುವುದಿಲ್ಲ, ಮೂರ್ಛೆರೋಗದ ರೀತಿಯ ‘ಫಿಟ್ಸ್’ ಕಾಡುತ್ತದೆ.  ಹಾಗಾಗಿ ‘ಅಯ್ಯೋ ಹಠಾತ್ತನೇ ಕುಡಿಯುವುದು ನಿಲ್ಲಿಸಿದರೆ ಕಷ್ಟ.  ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಆಗಿ ಕಡಿಮೆ ಮಾಡೋಣ” ಎಂದು ಮದ್ಯ ಸೇವನೆ ಮುಂದುವರಿಯುತ್ತದೆ.  ಆದರೆ ನಿಯಂತ್ರಿಸುವ ಸಾಮರ್ಥ್ಯ ಈ ಹಂತದಲ್ಲಿ ಇರುವುದಿಲ್ಲ.

ನಿರಂತರವಾಗಿ ಮದ್ಯ ಸೇವಿಸುವ ವ್ಯಕ್ತಿ ಹಠಾತ್ತನೆ ನಿಲ್ಲಿಸಿದಾಗ ಉಂಟಾಗುವ ಪ್ರಕ್ರಿಯೆಗೆ ವೈದ್ಯಕೀಯ ವಿಜ್ಞಾನ ‘withdrawal’ ಲಕ್ಷಣಗಳು ಎಂದು ಕರೆಯುತ್ತದೆ.  ಹೆಚ್ಚಿನ ಜನ ಇಂಥಹ ಸಂದರ್ಭದಲ್ಲಿ ವೈದ್ಯರ ಬಳಿ ಧಾವಿಸುತ್ತಾರೆ. “ಕುಡಿಯುವಾಗ ಎಲ್ಲ ಸರಿಯಾಗಿತ್ತು.  ಕುಡಿಯೋದು ಬಿಟ್ಟ ಮೇಲೇ ಈ ಥರ ಆಗಿದ್ದು” ಎಂಬುದು ಅವರ ಗ್ರಹಿಕೆ! (ಆದರೆ ವಾಸ್ತವಿಕವಾಗಿ ಕಾಯಿಲೆಯ ಆರಂಭ ವ್ಯಕ್ತಿಯ ಕುಡಿತ ಪ್ರಾರಂಭವಾದ ಹಂತದಲ್ಲಿ!)

ಇಂದಿನ ವೈದ್ಯಕೀಯ ಸಂಶೋಧನೆಗಳು ನಿಸ್ಸಂದೇಹವಾಗಿ ಮದ್ಯಪಾನ-ಮದ್ಯವ್ಯಸನದ ಕಾರಣ-ಪರಿಣಾಮ-ಅದರಿಂದ ಉಂಟಾಗಬಹುದಾದ ಕಾಯಿಲೆಗಳ ಸ್ವರೂಪವನ್ನು ನಿರೂಪಿಸಿದೆ.  ಚಿಕಿತ್ಸೆಯೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಿದೆ.  ಆದರೆ ನರಳುವವರ ಸಂಖ್ಯೆಗೆ ಹೋಲಿಸಿದರೆ ಚಿಕಿತ್ಸೆ ಪಡೆಯುವವರ, ಸಮಸ್ಯೆ ಉಲ್ಬಣವಾಗುವ ಮುನ್ನವೇ ಚಿಕಿತ್ಸೆ ಪಡೆದು ಗುಣಮುಖವಾಗುವವರ ಸಂಖ್ಯೆ ಕಡಿಮೆಯೇ.

‘ಮದ್ಯವ್ಯಸನ’ದಿಂದ ‘ವ್ಯಸನ ಮುಕ್ತತೆ’ಯೆಡೆಗೆ...
ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ದೊಡ್ಡ ಪಟ್ಟಿ ಹೆಚ್ಚಿನವರಿಗೆ ಗೊತ್ತೇ ಇರುತ್ತದೆ.  ಕೌಟುಂಬಿಕವಾಗಿ - ಸಾಮಾಜಿಕವಾಗಿ ಅದು ಉಂಟು ಮಾಡುವ ಸಮಸ್ಯೆಗಳನ್ನು ಹೆಚ್ಚಿನವರು ಗಮನಿಸುವುದಿಲ್ಲ.  ನೀವಾಗಲೀ, ನಿಮ್ಮ ಆತ್ಮೀಯರಾಗಲೀ ಮದ್ಯವ್ಯಸನಕ್ಕೆ ಒಳಗಾಗಿದ್ದರೆ ತತ್‌ಕ್ಷಣ ಸಹಾಯ ಪಡೆದುಕೊಳ್ಳಿ. ಹತ್ತಿರದ ಮನೋವೈದ್ಯರನ್ನು ಸಂಪರ್ಕಿಸಿ.  ಹಾಗೆಯೇ ಸಾಮಾಜಿಕ ಸಮಾರಂಭ-ಪಾರ್ಟಿಗಳಲ್ಲಿ ‘ಮದ್ಯಮುಕ್ತ’ ರಾಗಿರುವುದು ಹೆಮ್ಮೆ ಪಡುವ ಸಂಗತಿ ಎಂದು ಭಾವಿಸಿ. ‘ಕುಡಿಯುವವ’ರನ್ನು ಹಾಗೆ ಮಾಡದಿರುವಂತೆ ಪ್ರೇರೇಪಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT