ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹ ನಿಯಂತ್ರಣ, ನಿರ್ವಹಣೆ

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹೃದಯಾಘಾತಕ್ಕೆ ಮಧುಮೇಹ ಪ್ರಮುಖ ಕಾರಣ. ಆದರೆ ಎಲ್ಲ ಮಧುಮೇಹಿಗಳಿಗೂ ಅಲ್ಲ, ಇದಕ್ಕೆ ಇನ್ನೂ ಹಲವು ಕಾರಣಗಳಿವೆ. ಅಧಿಕ ರಕ್ತದೊತ್ತಡ, ಅತಿಯಾದ ತಂಬಾಕು ಸೇವನೆ ಮತ್ತು ಮದ್ಯಪಾನ, ಸ್ಥೂಲಕಾಯ, ಅತಿಯಾದ ಕೊಬ್ಬಿನಾಂಶ, ಆನುವಂಶಿಕ ಕಾರಣಗಳು ಪ್ರಮುಖವಾಗಿವೆ.

ಮಧ್ಯರಾತ್ರಿ, 38 ವರ್ಷದವನೊಬ್ಬ ಎದೆ ಹಿಡಿತವೆಂದು ಎದ್ದು ಕುಳಿತ, ಉಸಿರಾಡಲು ಪ್ರಯಾಸ ಪಡುತ್ತಿದ್ದ. ಹಣೆ ಮೈ-ಕೈಗಳಲ್ಲಿ ವಿಪರೀತ ಬೆವರು. ಒಮ್ಮೆ ವಾಂತಿಯಾಯಿತು. ಮನೆಯವರು ಸಮೀಪ ಬರುವಷ್ಟರಲ್ಲಿ ಮಾತು ಹೊರಡುತ್ತಿರಲಿಲ್ಲ. ಧೀರ್ಘವಾಗಿ ಉಸಿರು ಎಳೆದುಕೊಳ್ಳುತ್ತಿದ್ದ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಇವನ ಪ್ರಾಣ-ಪಕ್ಷಿ ಹಾರಿ ಹೋಗಿತ್ತು.

ಹಾಗೆಯೇ ಇನ್ನೊಂದು ಘಟನೆ, 28ರ ಹರೆಯದ ಯುವಕನೊಬ್ಬ ರಾತ್ರಿಯ ಊಟ ಮುಗಿಸಿ, ಇನ್ನೇನು ಮಲಗಿಕೊಳ್ಳಬೇಕು ಎನ್ನುವಾಗಲೇ ಎದೆಯ ನೋವು ಕಾಣಿಸಿಕೊಂಡಿತು. ಬಹಿರ್ದೆಸೆಗೆಂದು ಶೌಚಾಲಯಕ್ಕೆ ಹೋಗುವಷ್ಟರಲ್ಲಿ ಆತನೂ ಕೂಡ ಇಹಲೋಕ ತ್ಯಜಿಸಿದ.

ಓದುಗರೇ, ಈ ಎರಡು ಘಟನೆಗಳನ್ನು ಓದಲು ಸ್ವಲ್ಪ ಕಸಿವಿಸಿಯಾದರೂ, ಇವು ಕಳೆದ ಎರಡು ತಿಂಗಳಲ್ಲಿ ನಡೆದ ನೈಜ ಘಟನೆ. ಈ ಎರಡು ಪ್ರಕರಣಗಳಲ್ಲಿ ಸಾವಿನ ಕಾರಣ ಹೃದಯಾಘಾತ. ಇಬ್ಬರಿಗೂ ಮಧುಮೇಹವಿತ್ತು. ನಿಯಂತ್ರಣದಲ್ಲಿರಲಿಲ್ಲವೆಂಬುದು ಗಮನಾರ್ಹ.
ನಿಜ, ಹೃದಯಾಘಾತವಾಗುವುದಕ್ಕೆ ಮಧುಮೇಹ ಪ್ರಮುಖ ಕಾರಣ. ಆದರೆ ಎಲ್ಲ ಮಧುಮೇಹಿಗಳಿಗೂ ಅಲ್ಲ, ಹೃದಯಾಘಾತಕ್ಕೆ ಇನ್ನೂ ಹಲವು ಕಾರಣಗಳಿವೆ. ಅಧಿಕ ರಕ್ತದೊತ್ತಡ, ಅತಿಯಾದ ತಂಬಾಕು ಸೇವನೆ ಮತ್ತು ಮದ್ಯಪಾನ, ಸ್ಥೂಲಕಾಯ, ಅತಿಯಾದ ಕೊಬ್ಬಿನಾಂಶ ಹಾಗೂ ಆನುವಂಶಿಕ ಕಾರಣಗಳೂ ಇರುತ್ತವೆ.

ಮಧುಮೇಹವನ್ನು ನಿಯಂತ್ರಿಸಿದರೆ ಹೃದಯಾಘಾತ ತಡೆಗಟ್ಟಬಹುದೇ? ಮಧುಮೇಹವನ್ನು ನಿಯಂತ್ರಿಸಿದರೆ ಶೇ 60ರಷ್ಟು ಹೃದಯಾಘಾತದ ಸಾಧ್ಯತೆ ಕಡಿಮೆಯಾಗಬಹುದು.

ಮಧುಮೇಹ ನಿಯಂತ್ರಿಸಲು ವ್ಯಾಯಾಮ ಮತ್ತು ಆಹಾರಶೈಲಿ ಎರಡೂ ರಾಮಬಾಣವಿದ್ದಂತೆ. ಜೊತೆಗೆ ನಿಗದಿತ, ನಿಯಮಿತ ಔಷಧಿ ಸೇವನೆ. ಈ ಮೂರರಲ್ಲಿ ಯಾವುದೇ ಒಂದನ್ನು ಪಾಲಿಸದಿದ್ದರೂ ಮಧುಮೇಹ ನಿಯಂತ್ರಣ ಕಷ್ಟ. ದಿನಕ್ಕೆ ಸುಮಾರು ನಲವತ್ತು ನಿಮಿಷ ನಡಿಗೆ ಅತ್ಯಗತ್ಯ. ಇದಕ್ಕೂ ಹೆಚ್ಚು ನಡೆದರೆ ಸ್ವಾಗತಾರ್ಹ. ಬೆಳಗಿನ ನಡಿಗೆ ಉತ್ತಮ. ದಿನದ ಯಾವುದೇ ಸಮಯದಲ್ಲಾದರೂ ವ್ಯಾಯಾಮ ಮಾಡಬಹುದು. 

ನಿಮ್ಮ ನಡಿಗೆಯ ಜೊತೆಯಲ್ಲಿ ಮತ್ತೊಬ್ಬರು ಇದ್ದರೆ, ಅವರೂ ಆಯಾಸವಿಲ್ಲದೆ ಮಾತನಾಡುವಷ್ಟು ವೇಗದಿಂದ ನಡೆದರೆ ಸಾಕು. ನಡಿಗೆ ಅಲ್ಲದೆ ಈಜು, ಟೆನಿಸ್, ಬ್ಯಾಡ್ಮಿಂಟನ್‌ ಮುಂತಾದವುಗಳನ್ನೂ ಆಡಬಹುದು. ಆಹಾರದಲ್ಲಿ ಪಥ್ಯ ಅನುಸರಿಸುವುದು ಮಧಮೇಹ  ನಿಯಂತ್ರಣದ ಉತ್ತಮ ಮಾರ್ಗ. ಆಹಾರ ಕ್ರಮದ ಬಗ್ಗೆ ಬಹಳ ಮಂದಿಯಲ್ಲಿ ಗೊಂದಲವಿದೆ. ಅನ್ನವನ್ನು ಸಂಪೂರ್ಣವಾಗಿ ವರ್ಜಿಸಬೇಕೆಂಬುದು ಕೆಲವರ ಅಭಿಪ್ರಾಯ. ಆದರೆ ಅದು ತಪ್ಪು ಕಲ್ಪನೆ. ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೆ ಇತಿ ಮಿತಿಯೊಂದಿಗೆ ಅನ್ನವನ್ನು ಬಳಸಬಹುದು. ಎರಡು ಅಥವಾ ಮೂರು ಚಪಾತಿ, ಸ್ವಲ್ಪ ಅನ್ನ ಸೇವಿಸಿದರೆ ಮಧುಮೇಹ ನಿಯಂತ್ರಿಸಲು ಅನುಕೂಲಕರ.
ಉತ್ತರ ಕರ್ನಾಟಕದವರು ಸೇವಿಸುವ ಜೋಳದ ರೊಟ್ಟಿ ಅಥವಾ ದಕ್ಷಿಣ ಕರ್ನಾಟಕದವರು ಸೇವಿಸುವ ರಾಗಿ ಮುದ್ದೆ ಮಧುಮೇಹ ಹತೋಟಿಯಲ್ಲಿಡಲು ಸಹಕರಿಸುತ್ತದೆ. ಬೆಳಗಿನ ತಿಂಡಿಯಲ್ಲಿ ಉಪ್ಪಿಟ್ಟು, ದೋಸೆ, ಇಡ್ಲಿ ಮುಂತಾದವು ಸೇವಿಸಬಹುದು ಆದರೆ ತಿಂಡಿಗೆ ಅನ್ನ ವರ್ಜಿಸುವುದು ಸೂಕ್ತ.

ತರಕಾರಿಗಳಲ್ಲಿ ಆಲೂಗಡ್ಡೆ, ಕ್ಯಾರೇಟ್, ಬೀಟ್‌ರೂಟ್ ಮತ್ತು ಸಿಹಿಗುಂಬಳಕಾಯಿ ಬಳಸಬಾರದು ಹಣ್ಣುಗಳಲ್ಲಿ ಮುಖ್ಯವಾಗಿ ಸಪೋಟ, ಹಲಸಿನಹಣ್ಣು, ಮಾವಿನಹಣ್ಣು ಮತ್ತು ಕಲ್ಲಂಗಡಿ ಹಣ್ಣುಗಳನ್ನು ಸಂಪೂರ್ಣವಾಗಿ ಮಧುಮೇಹಿಗಳು ಬಳಸುವುದನ್ನು ನಿಲ್ಲಿಸಬೇಕು. ಬಾಳೆ, ಸೇಬು, ಮೂಸಂಬಿ, ಕಿತ್ತಳೆಯಂತಹ ಹಣ್ಣುಗಳನ್ನು ತಕ್ಕ ಮಟ್ಟಿಗೆ ತಿನ್ನಬಹುದು. ಆದರೆ ಊಟವಾದ ಕೂಡಲೇ ಈ ಹಣ್ಣುಗಳನ್ನು ಸೇವಿಸಬಾರದು ಅಂದರೆ ಆಹಾರ ತೆಗೆದುಕೊಂಡ ಮೇಲೆ ಸುಮಾರು ಎರಡು ಗಂಟೆಯ ನಂತರ ಅಥವಾ ಆಹಾರ ಸೇವಿಸಿದ ಎರಡು ಗಂಟೆಯ ಮೊದಲು ಹಣ್ಣುಗಳನ್ನು ತೆಗೆದುಕೊಂಡರೆ ರಕ್ತದಲ್ಲಿ ಸಕ್ಕರೆ ಅಂಶ ಗಣನೀಯವಾಗಿ ಏರಿಕೆಯಾಗುವುದಿಲ್ಲ.

ಮಧುಮೇಹ ನಿಯಂತ್ರಣದಲ್ಲಿ ಔಷಧಿ ಅತ್ಯಗತ್ಯ ಮಧುಮೇಹ ಪ್ರಾರಂಭದ ಹಂತದಲ್ಲಿ ತಿಂಡಿಯ ಮೊದಲು ರಕ್ತದಲ್ಲಿ ಸಕ್ಕರೆ ಅಂಶ 125 Mg/dl, ಕ್ಕಿಂತಲೂ ಮೇಲಿದ್ದರೆ ಮತ್ತು ತಿಂಡಿಯ ನಂತರ 200 Mg/dl ಕ್ಕಿಂತಲೂ (ಒಂದೂವರೆ ಗಂಟೆಯ ನಂತರ) ಹೆಚ್ಚಾದರೆ ಮಾತ್ರೆಗಳು ಅಗತ್ಯ.

ಇದಕ್ಕಿಂತಲೂ ಸಕ್ಕರೆ ಅಂಶ ಕಡಿಮೆಯಾದ ಪಕ್ಷದಲ್ಲಿ ಅಂದರೆ ತಿಂಡಿಯ ಮೊದಲು 110–125 Mg/dl ಮತ್ತು ತಿಂಡಿಯ ನಂತರ 140–200 Mg/dl ನಷ್ಟಿದ್ದರೆ ವ್ಯಾಯಾಮ ಮತ್ತು ಆಹಾರ ಪಥ್ಯದೊದಿಗೆ ಮಧುಮೇಹವನ್ನು ನಿಯಂತ್ರಿಸಬಹುದು.

ಇತ್ತೀಚಿನ ವರ್ಷಗಳಲ್ಲಿ ಬಂದಿರುವ Hb A1C  ಪರೀಕ್ಷೆಯೂ ಕೂಡ ಮಧುಮೇಹಿಗಳಿಗೆ ಔಷಧ ಕೊಡುವುದರ ಬಗ್ಗೆ ಹೆಚ್ಚು ಸಹಾಯಕವಾಗುತ್ತದೆ. ಮೂರು ತಿಂಗಳ ಅವಧಿಯ ಸಕ್ಕರೆ ಅಂಶದ ದಿಕ್ಸೂಚಿಯಾಗಿರುವ ಈ ಪರೀಕ್ಷೆ 6.2% ಕ್ಕಿಂತಲೂ ಬಂದಿಲ್ಲ ಎಂದಾದರೆ ಮಧುಮೇಹ ಇಲ್ಲವೆಂದು 7% ಕ್ಕಿಂತಲೂ ಕಡಿಮೆ ಬಂದಲ್ಲಿ ಮಧುಮೇಹ ಉತ್ತಮ ಹಿಡಿತದಲ್ಲಿದೆ ಎಂದೂ ಮತ್ತು 7% ಕ್ಕಿಂತಲೂ ಹೆಚ್ಚಿದ್ದಲ್ಲಿ ಅವರಿಗೆ ಮಧುಮೇಹದ ಔಷಧಿಗಳ ಅವಶ್ಯಕತೆಯಿದೆ ಎಂದೂ ಹೇಳಬಹುದು. ಇದು ಹೊಸದಾಗಿ ಬಂದಿರುವ ಮಧುಮೇಹಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನಿತರ ಮಧುಮೇಹದವರಿಗೆ ಈ ಮೇಲಿನ Hb A1C  ಫಲಿತಾಂಶ ಬಂದಲ್ಲಿ ಅವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು ಯಾವ ಔಷಧಿ ಕೊಡಬೇಕೆಂದು ನಿರ್ಧರಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮಧುಮೇಹಕ್ಕಾಗಿ ಉತ್ತಮೊತ್ತಮವಾದ ಔಷಧಿಗಳು ಬರುತ್ತಿವೆ. ಹಲವರಲ್ಲಿ ಈ ಮಾತ್ರೆಗಳನ್ನು ತೆಗೆದುಕೊಂಡರೆ ದುಷ್ಪರಿಣಾಮ ಬೀರಬಹುದೆಂದು ನಂಬಿದ್ದಾರೆ. ಆದರೆ ವೈದ್ಯರು ಸರಿಯಾದ ಔಷಧವನ್ನು ಯಾವ ಮಧುಮೇಹದವರಿಗೆ ಸರಿ ಹೊಂದುತ್ತದೆಂದು ನಿರ್ಧರಿಸಿಕೊಟ್ಟರೆ ಅದರಿಂದ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ.

ಇನ್ನೊಂದು ಪ್ರಮುಖ ವಿಷಯ ಇಲ್ಲಿ ಚರ್ಚಿಸಲೇ ಬೇಕಾದುದೆಂದರೆ ಇನ್ಸೂಲಿನ್. ಬಹುತೇಕ ಜನರು ಪ್ರತಿನಿತ್ಯವೂ ಹೇಗಪ್ಪ ಇನ್ಸೂಲಿನ್ ಚುಚ್ಚಿಕೊಳ್ಳುವುದು ಎಂದು ಆತಂಕ ಪಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇನ್ಸೂಲಿನ್ ಪೆನ್ನಿನಂತಹ ಸಲಕರಣದಿಂದ ನೋವು ತೀರ ಸಣ್ಣದಾಗಿರುತ್ತದೆ. ಈ ವರ್ಷದೊಳಗೆ ವಾರಕ್ಕೊಮ್ಮೆ ಕೊಡಬಹುದಾದಂತಹ ನೂತನ ಅವಿಷ್ಕಾರವಾದ ಇನ್ಸೂಲಿನ್ ಬರುತ್ತಿದ್ದು ಮಧುಮೇಹದವರಿಗೆ ಇದು ಶುಭ ಸುದ್ದಿಯಾಗಲಿದೆ. ವೈದ್ಯರು ಎಷ್ಟೇ ಸಮಜಾಯಿಷಿ ನೀಡಿದರೂ ಮಧುಮೇಹದವರಿಗೆ ಇನ್ನೊಂದು ಆತಂಕವೆಂದರೆ ಇನ್ಸೂಲಿನ್ ಒಮ್ಮೆ ಪ್ರಾರಂಭಿಸಿದರೆ, ಅವರ ಜೀವನ ಪೂರ್ತಿ ತೆಗೆದುಕೊಳ್ಳಬೇಕೆಂದು. ಅದು ತಪ್ಪು ಕಲ್ಪನೆ. ಕೆಲ ಸಂದರ್ಭಗಳಲ್ಲಿ ಬಿಟ್ಟರೆ, ಒಮ್ಮೆ ಇನ್ಸೂಲಿನ್ ಪ್ರಾರಂಭಿಸಿ ಮತ್ತೆ ಅದನ್ನು ನಿಲ್ಲಿಸಬಹುದು. ಈ ಬಗ್ಗೆ ವೈದ್ಯರ ತೀರ್ಮಾನವೇ ಅಂತಿಮವಾಗಿರುತ್ತದೆ.

ಮಧುಮೇಹ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂರಬಾರದು. ಮನಸ್ಸಿದ್ದರೆ ಮಾರ್ಗ ಎಂಬಂತೆ ವೈದ್ಯರು ಹೇಳಿದ್ದಕ್ಕಿಂತ ಹೆಚ್ಚಿಗೆ ವ್ಯಾಯಾಮ, ಪಥ್ಯ ಮತ್ತು ನಿತ್ಯ ಔಷಧ ಸೇವನೆಯಿಂದ ಅವರು ಯಾವುದೇ ತೊಂದರೆಯಿಲ್ಲದೆ ದೀರ್ಘಾಯುಷಿಗಳಾಗಬಹುದು.
ಮಾಹಿತಿಗೆ: 080 - 26651818

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT