ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ವಯಸ್ಸಿನ ಪರ್ವಕಾಲದಲ್ಲಿ...

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮಧ್ಯವಯಸ್ಸೇ ಹಾಗೆ...  ಹೇಳಿಕೊಳ್ಳಲಾಗದ ಅನೇಕ ಒತ್ತಡಗಳ ಮಧ್ಯೆ ಮಕ್ಕಳ ಸಮಸ್ಯೆ, ಮದುವೆ ಸಮಸ್ಯೆ, ಇನ್ನಿತರ ಜಂಜಾಟಗಳ ನಡುವೆ ಆರೋಗ್ಯ ಸಮಸ್ಯೆಗಳೂ ಎದುರಾಗುವ ಪರ್ವಕಾಲ. ಗಂಡ-ಹೆಂಡಿರಿಬ್ಬರೂ ಕೈಜೋಡಿಸಿದರೂ ಬಿಡಿಸಲಾಗದ ಎಷ್ಟೋ ಜಟಿಲ ಸಮಸ್ಯೆಗಳು ಎದುರಾಗುವಾಗ, ಜೀವ ಒಂಟಿಯಾದರಂತೂ ಜಟಿಲ ಗಂಟು.

ಮಧ್ಯ ವಯಸ್ಸಿನಲ್ಲಿ ಮಹಿಳೆ ಅಥವಾ ಪುರುಷ ಒಂಟಿಯಾದಾಗ ಮಾನಸಿಕ, ಭಾವನಾತ್ಮಕ ತೊಳಲಾಟಗಳಿಗೆ ಕೊನೆ ಮೊದಲಿಲ್ಲ. ಪುನರ್ವಿವಾಹ ಮಾಡಿಕೊಂಡರೆ ತಪ್ಪೇನು? ತಪ್ಪಿಲ್ಲ. ಆದರೆ ನಾನಾ ತರದ ಸಾಮಾಜಿಕ, ಮಾನಸಿಕ ಕಾರಣಗಳಿಂದಾಗಿ ಪುನರ್ವಿವಾಹ ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಪೂರಕ ವಾತಾವರಣವಿದ್ದರೂ ಸರಿಯಾದ ಆಯ್ಕೆ ಸಿಗದಿದ್ದಾಗ ಮಹಿಳೆ ಒಂಟಿಯಾಗೇ ಇರುವ ಪ್ರಮೇಯ ಬಂದೊದಗುತ್ತದೆ.

ಹಲವಾರು ವರ್ಷಗಳಲ್ಲಿ ನನ್ನ ಸಂಪರ್ಕಕ್ಕೆ ಬಂದ ಮೂವರು ಮಹಿಳೆಯರ ಒಂಟಿತನದ ಪರಿಸ್ಥಿತಿ ಈ ರೀತಿ ಇದೆ (ಹೆಸರು, ನೌಕರಿ ಬದಲಾಯಿಸಲಾಗಿದೆ). ದಿವ್ಯ ಎಂ.ಎಸ್. ಪದವೀಧರೆ ತನಗಿಂತಲೂ ಹೆಚ್ಚಿನ ವ್ಯಾಸಂಗ ಮಾಡಿದ ವರನೊಟ್ಟಿಗೆ ಮದುವೆ ಮಾಡಿಕೊಂಡು, ಎರಡು ಮಕ್ಕಳನ್ನು ಪಡೆದಿದ್ದರೂ ಮಾನಸಿಕ ನೆಮ್ಮದಿಯ ಕೊರತೆಯಿಂದಾಗಿ ಇಪ್ಪತ್ತು ವರ್ಷಗಳ ವೈವಾಹಿಕ ಜೀವನಕ್ಕೆ ನಾಂದಿ ಹಾಡಿ ಹೊರಬಂದಾಯ್ತು. ಆರು ತಿಂಗಳೊಳಗೆ ಪತಿ ಮಹಾಶಯ ಮತ್ತೊಂದು ಮದುವೆ ಮಾಡಿಕೊಂಡ. ಇತ್ತ ಎರಡು ಮಕ್ಕಳ ವಿದ್ಯಾಭ್ಯಾಸ, ಕೆಲಸದ ಒತ್ತಡ, ಸಮಾಜದ ಕೊಂಕು ನುಡಿಗಳ ಮಧ್ಯೆ ನೌಕರಿಗೆ ತಿಲಾಂಜಲಿ. ಮಕ್ಕಳು ರೆಕ್ಕೆ ಪುಕ್ಕ ಬಲಿತು ಹಾರಿದಾಗ ಜೀವನದ ಒಂಟಿತನದ ನಿಜವಾದ ಘೋರ ಅನುಭವ. ಮತ್ತೊಂದು ಮದುವೆಗೆ ಮಕ್ಕಳೇ ವಿರೋಧಿಸುವ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರು ಅನುಭವಿಸುತ್ತಿರುವ ದೌರ್ಜನ್ಯ ಸಾಧುವೆ ?

ಸುಮನಾ ಬ್ಯಾಂಕ್‌ ಉದ್ಯೋಗಿ. ಚುರುಕು ಬುದ್ದಿಯ ಈ ಸುಂದರ ಯುವತಿಯನ್ನು ಸಣ್ಣ ವಯಸ್ಸಿನಲ್ಲೇ ಬಲೆ ಬೀಸಿದ ಯುವಕ ಅಂತರ್ಜಾತಿ ವಿವಾಹವನ್ನೇನೋ ಮಾಡಿಕೊಂಡ. ಹೆಂಡತಿ ಎರಡನೆಯ ಡೆಲಿವರಿಗೆ ಹೋದಾಗ ತನ್ನ ಹಳೆಯ ಪ್ರೇಯಸಿಯೊಡನೆ ಅನೈತಿಕ ಸಂಬಂಧವನ್ನಿಟ್ಟುಕೊಂಡಿದ್ದ.  ವಿಷಯ ಸುಮನಾಳಿಗೆ ನೆರೆಹೊರೆಯವರಿಂದ ಗೊತ್ತಾಯಿತು. ಆಘಾತಗೊಂಡ ಸುಮನಾ ಎಳೆ ಮಗುವಿನೊಟ್ಟಿಗೆ ಕಾಣದ ಊರಿಗೆ ವರ್ಗಾವಣೆ ಮಾಡಿಸಿಕೊಂಡು ಪಡಿಪಾಟಲು ಅನುಭವಿಸಿದಳು. ಸದವಕಾಶಕ್ಕಾಗಿ ಕಾದಿದ್ದ ಪತಿ ತನ್ನ ಹಳೆಯ ಗೆಳತಿಯೊಡನೆ ಮದುವೆ ಮಾಡಿಕೊಂಡು ಎರಡು ಮಕ್ಕಳನ್ನು ಹೆತ್ತು ಇತ್ತಕಡೆ ಮರೆತು ಜೀವನ ಸಾಗಿಸುತ್ತಿದ್ದಾನೆ. ನಮ್ಮ ದೇಶದಲ್ಲಿ ಇಂತಹ  ಉದಾಹರಣೆಗಳು ಎಷ್ಟಿಲ್ಲ ? ವಿವಾಹ ವಿಚ್ಛೇದಿತರ ಮಕ್ಕಳು ಎಂಬ ಹಣೆಪಟ್ಟಿ ಹೊತ್ತ ಇವರ ಮಕ್ಕಳಿಗೆ ವರ, ಕನ್ಯೆ ಸಿಗುವುದೂ ದುಸ್ತರವಾಗಿದೆ.

ವಾಸಂತಿಕಾ ಶ್ರೀಮಂತ ಕುಟುಂಬದ ಸುಂದರ ಯುವತಿ. ಪೋಷಕರು ಈಕೆಯ ರೂಪ, ಅಂತಸ್ತಿಗೆ ತಕ್ಕನಾದ ವರವನ್ನು ಹುಡುಕಿ ಭರ್ಜರಿ ಮದುವೆ ಮಾಡಿದರು. ಪರ ಊರುಗಳಲ್ಲಿ ನೌಕರಿ ಮಾಡಿ ತಂದೆ-ತಾಯಿಯರೊಟ್ಟಿಗೆ ಇರಲು ಪ್ರಾರಂಭಿಸಿದಾಗ ಸಮಸ್ಯೆಗಳು ಎದುರಾದವು. ವಾಸಂತಿಕಾಳಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕಾಗಿ ಶುರುವಾದ ಹಿಂಸೆ ಮಗುವಾದ ಮೇಲೂ ಮುಂದುವರಿಯಿತು.

ಒಂದು ದಿನ ಹುಟ್ಟಬಟ್ಟೆಯ ಮೇಲೆ ಹೊರಬಂದು ತವರು ಸೇರಿ ವಿಚ್ಛೇದನಕ್ಕೊಳಗಾದಳು. ಅತ್ತ ಪತಿ ತನ್ನ ಸಹೋದ್ಯೋಗಿಯೊಬ್ಬಳನ್ನು  ಮದುವೆಯಾಗಿ ಮಕ್ಕಳೊಂದಿಗೆ ಹಾಯಾಗಿದ್ದಾನೆ. ಇತ್ತ ಈಕೆ ತವರಿನ ಕೂಡು ಕುಟುಂಬದ ಎಲ್ಲ ಸದಸ್ಯರೊಟ್ಟಿಗೆ ಹೊಂದಿಕೊಂಡು ಮಗಳನ್ನು ಮೇಲ್ತರುವ ಸಾಹಸದಲ್ಲಿದ್ದಾಳೆ. ಸಣ್ಣ ಪ್ರಮಾಣದ ವ್ಯವಹಾರ ಹೊಂದಿರುವ ಈಕೆ ಪುರುಷ ಸಹೋದ್ಯೋಗಿಗಳೊಂದಿಗೆ ಸಲಿಗೆಯಿಂದಿರುವಂತಿಲ್ಲ.  ಈ ಅಸಮಾನತೆಗೆ ಕೊನೆ ಎಂದು? ಮಹಿಳಾ ಸಬಲೀಕರಣದ ಸಂಘಟಕರು ಭಾಷಣ ಎಷ್ಟೇ ಬಿಗಿದರೂ ಮತ್ತೊಬ್ಬ ಮಹಿಳೆ ಸಂಕಷ್ಟಕ್ಕೆ ಸಿಲುಕಿದಾಗ ತೋರುವುದು ಕ್ರೌರ್ಯವೇ ಅಲ್ಲವೇ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT