ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಕಲಕಿದ ಭಿಕ್ಷುಕ ಹುಡುಗರು

ಕ್ಯಾಂಪಸ್‌ ಕಲರವ
Last Updated 25 ಮೇ 2015, 19:30 IST
ಅಕ್ಷರ ಗಾತ್ರ

ನಾವು ಊಟಕ್ಕೆಂದು ಅಲ್ಲಿಗೆ  ಹೋದೆವೆಂದರೆ ಅಲ್ಲಿ ಕೆಲವಾರು ತಿಂಗಳುಗಳಿಂದ ಝಾಂಡ ಹೂಡಿದ್ದ ಕೆಲ ಭಿಕ್ಷುಕ ಹುಡುಗರು ನಾವಿರುವಲ್ಲಿಗೆ ಹಾಜರಾಗಿಬಿಡುತ್ತಿದ್ದರು. ನಾವೇನು ಮೃಷ್ಠಾನ್ನ ಭೋಜನವೇನೂ ತರುತ್ತಿರಲಿಲ್ಲವಾದರೂ  ಕೆಲವರು ಹೋಟೆಲ್‌ನಿಂದ ಬಿಸಿ ಬಿಸಿ ಅನ್ನ-ಸಾರನ್ನಾದರೂ ತರುತ್ತಿದ್ದೆವೆಂದು ಅವರಿಗೆ ತಿಳಿದಿತ್ತೋ ಏನೋ?  ನಮ್ಮನ್ನು  ಕಂಡೊಡನೆ ಅಲ್ಲೇ ಹತ್ತಿರದ  ಟೆಂಟುಗಳಲ್ಲಿ ಇರುತ್ತಿದ್ದ ಭಿಕ್ಷುಕ ಹುಡುಗರು  ಬಟ್ಟಲು, ಕವರುಗಳನ್ನು ಹಿಡಿದು ಬಂದುಬಿಡುತ್ತಿದ್ದರು.

ನಾವು ಡಿಇಡಿ ತರಬೇತಿ ಪಡೆಯುವ ಸಂದರ್ಭದಲ್ಲಿ ಪ್ರತಿನಿತ್ಯ ಮಧ್ಯಾಹ್ನ ಊಟ ಮಾಡಲು ಕಾಲೇಜಿನಿಂದ ಕೂಗಳತೆ ದೂರದಲ್ಲಿದ್ದ ರೈಲ್ವೆ ಸ್ಟೇಷನ್ನಿಗೆ ತೆರಳುತ್ತಿದ್ದೆವು .

ನಿತ್ಯ ಕಾಲೇಜಿನಲ್ಲೇ ಊಟ ಮಾಡಬಹುದಾಗಿತ್ತಾದರೂ ಸ್ವಲ್ಪ ಸಮಯವಾದರೂ ಕಾಲೇಜಿನ ಗೋಡೆಗಳಿಂದ ಮುಕ್ತಿ ಸಿಗಲೆಂದು  ಸ್ನೇಹಿತರೊಂದಿಗೆ ಹೊರಗೆ ಊಟಕ್ಕೆ ಹೋಗುತ್ತಿದ್ದೆವು.

ನಿಜ ಹೇಳಬೇಕೆಂದರೆ ನಮ್ಮ ಕಾಲೇಜಿನಲ್ಲಿ ಹುಡುಗರೇ ಅಲ್ಪ ಸಂಖ್ಯಾತರಾದ ಕಾರಣ ಕಾಲೇಜಿನಲ್ಲಿ ಅಷ್ಟೊಂದು ಹುಡುಗಿಯರ  ನಡುವೆ ಕೆಲವೇ ಮಂದಿ ಹುಡುಗರು  ಊಟ ಮಾಡಲು ಮುಜುಗರವೂ  ಆಗುತ್ತಿತ್ತು.

ಪ್ರತಿನಿತ್ಯ ನಾವು ಮನೆಯಿಂದಲೋ ಹಾಸ್ಟೆಲ್‌ನಿಂದಲೋ  ಅಥವಾ ಬ್ಯಾಚುಲರ್‌ ರೂಮಿನಿಂದಲೋ  ಒಣ ಚಿತ್ರಾನ್ನ, ಅನ್ನ ಸಾರು ಅಥವಾ ಮತ್ತೇನನ್ನಾದರೂ ಡಬ್ಬದಲ್ಲಿ  ತರುತ್ತಿದ್ದೆವು. ಗೆಳೆಯರೆಲ್ಲಾ ಸೇರಿ ಹಂಚಿಕೊಂಡು ಊಟ ಸವಿಯುತ್ತಿದ್ದೆವು. ಜೊತೆಗೆ ಭಿಕ್ಷುಕ ಹುಡುಗರೂ ನಮ್ಮೊಡನೆ ಬಂದು ಎಲ್ಲರಿಂದ ಒಂದೊಂದು ಹಿಡಿ ಬೇಡಿ ತೆಗೆದುಕೊಂಡು ಹೋಗುತ್ತಿದ್ದರು.

ಅದೊಂದು ದಿನ ಎಲ್ಲಾ ಗೆಳೆಯರೊಂದಿಗೆ ರೈಲ್ವೆ ಸ್ಟೇಷನ್ನಿಗೆ ಊಟಕ್ಕೆಂದು ತೆರಳಿದ್ದೆವು. ಗಂಗಪ್ಪ ಮತ್ತು ಜಮೀರ್‌ ಖಾನ್‌ ಹಾಗೂ ಸುದರ್ಶನ್‌, ‘ಈ ಭಿಕ್ಷುಕ ಹುಡುಗರು ಎಲ್ಲರಿಗಿಂತ ವೆರೈಟಿ ಊಟವನ್ನು ಮಾಡುತ್ತಾರೆ. ಅದಲ್ಲದೆ ನಾವು ಐದಾರು ಮಂದಿ ಕೊಡುವ ಅಷ್ಟೊಂದು ಊಟವನ್ನು ತೆಗೆದುಕೊಂಡು  ಏನು ಮಾಡುತ್ತಾರೆ’ ಎಂದು ಕುತೂಹಲಕ್ಕೆ  ಮಾತನಾಡಿಕೊಂಡರು.

ಅಷ್ಟರಲ್ಲೇ ಗಂಗಪ್ಪ ಅಲಿಯಾಸ್‌ ಗಂಗರಾಜು ಈ ಹುಡುಗರು ಊಟವನ್ನು ಎಲ್ಲಿ ಇಟ್ಟು ಬರುತ್ತಿದ್ದಾರೆ ಎಂಬುದನ್ನೂ ಗೂಢಾಚಾರ  ಮಾಡಿ  ಪತ್ತೆ ಹಚ್ಚಿದ್ದ. ಭಿಕ್ಷುಕ ಹುಡುಗರು ಬಂದೊಡನೆಯೇ    ಗಂಗರಾಜು ಆ ಹುಡುಗರು  ಇಟ್ಟು ಬರುತ್ತಿದ್ದ ದೊಡ್ಡ ಬೇಸನನ್ನು   ಓಡಿಹೋಗಿ  ತೆಗೆದುಕೊಂಡು ಬಂದ. ಅವರಿವರ ಬಳಿಯಲ್ಲಿ ಭಿಕ್ಷೆ ಬೇಡಿದ್ದ ಬಗೆ ಬಗೆಯ ವಿಭಿನ್ನ ಊಟವನ್ನು ತಾನೇ ತಿನ್ನುತ್ತೇನೆಂದು ಹೆದರಿಸಿದ.

ಈ ಸಮಯವನ್ನೇ ಕಾಯುತ್ತಿದ್ದ  ಸುದರ್ಶನ, ‘ಗಂಗಪ್ಪ ಕತ್ತೆ ಹಾಲು ಕುಡಿದವನು. ಅವನು ಇದೆಲ್ಲವನ್ನೂ ತಿಂದುಬಿಡಬಲ್ಲ’ ಎಂದು ಹುಡುಗರ ಮುಂದೆ ಹೇಳಿ  ಆ ಹುಡುಗರನ್ನು  ಮತ್ತಷ್ಟು ಹೆದರಿಸಿದ್ದ. ಇನ್ನು ಜಮೀರ್‌ ಖಾನ್‌  ಆ ಹುಡುಗರನ್ನು  ಕುರಿತು ‘ಇವರನ್ನು ಕೋಟೆ ಸ್ಕೂಲಿಗೆ ಸೇರಿಸೋಣ ಅಲ್ಲಿ  ಶಾಲೆ ಬಿಟ್ಟವರಿಗೆ ಉಚಿತ ಊಟ ಹಾಗೂ ವಸತಿ ನೀಡುತ್ತಾರೆ’ ಎಂದು ಹೇಳಿದ. ಇದನ್ನು ಕೇಳಿದ ಆ ಹುಡುಗರು ನಮ್ಮನ್ನು ಈ  ಮೇಷ್ಟ್ರುಗಳು ಎಲ್ಲಿ ಶಾಲೆಗೆ ಸೇರಿಸುತ್ತಾರೋ ಎಂದು ಹೆದರಿ ಅವರ ಊಟದ ಬೇಸಿನ್‌ ಅನ್ನೂ ಕೇಳದೆ ಓಡಿಹೋದರು.

ರೈಲ್ವೆ ಸ್ಟೇಷನ್ನಿಗೆ ಬರುವ ಪ್ರಯಾಣಿಕರು, ಅಲ್ಲಿ ತಂಗುವವರನ್ನೇ ನೆಚ್ಚಿಕೊಂಡು ಬದುಕುತ್ತಿರುವ ಆ  ಮಕ್ಕಳು ಹಾಗೂ ಅವರ ಕುಟುಂಬವನ್ನು  ಅಂದು  ನಾವು ಎದುರು ಹಾಕಿಕೊಂಡಿದ್ದೆವು.

ನಂತರದ ದಿನದಿಂದ ಆ  ಹುಡುಗರು ನಮ್ಮನ್ನು ಕಂಡೊಡನೆಯೇ ರೈಲ್ವೆ ಸ್ಟೇಷನ್ನಿಂದ ಕಾಲುಕೀಳುತ್ತಿದ್ದರು. ಆ ಹುಡುಗರನ್ನು ಶಾಲೆಗೆ ಸೇರಿಸಿದರೆ ಅವರಿಗೆ ಉಚಿತ ಊಟ ವಸತಿ ಸಿಗುತ್ತದೆ   ಎಂದು ಆ ದಿನ ನಾವು ಯೋಚಿಸಿದ ರೀತಿಯೇನೊ ಸರಿಯಾಗಿತ್ತು. ಆ ಹುಡುಗರನ್ನು ಬಳಸಿಕೊಂಡು ಅವರ ಕುಟುಂಬಗಳು ಅಂದಿನ ಜೀವನ ಸಾಗಿಸುತ್ತಿದ್ದರು ಎಂಬುದು ಕೆಲದಿನಗಳ ನಂತರ ನಮಗೆ ಅರಿವಿಗೆ ಬಂದು,  ನಾವು ನಡೆದುಕೊಂಡ ರೀತಿಯ ಬಗೆಗೆ ನಮಗೇ ಬೇಸರವಾಯಿತು.

ನಿಜಕ್ಕೂ ಆ ಹುಡುಗರು ನಾವು ನೀಡಿದ ಅನ್ನವನ್ನು ತೆಗೆದುಕೊಂಡು ಹೋಗಿ ಆ ಗುಡಿಸಲಿನಲ್ಲಿದ್ದ ಅವರ ವೃದ್ಧ ತಂದೆ, ಅಮ್ಮ ಹಾಗೂ ತಮ್ಮ–ತಂಗಿಯರಿಗೆ ನೀಡುತ್ತಿದ್ದುದನ್ನು ಒಂದು ದಿನ ಗಮನಿಸಿದಾಗ ನಮ್ಮ ಮನಕಲಕಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT