ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಗಳಲ್ಲಿ ಮೂಡಿದ ಸಾರ್ಥಕ ಭಾವ

Last Updated 1 ಅಕ್ಟೋಬರ್ 2014, 19:53 IST
ಅಕ್ಷರ ಗಾತ್ರ

ಬೆಂಗಳೂರು: ಸುಕ್ಕುಗಟ್ಟಿದ ಮುಖಗಳಲ್ಲಿ ಸಾರ್ಥಕ ಭಾವ.., ಜೀವನದ ಹಲವು ಅನುಭವಗಳನ್ನು ಮೆಲುಕು ಹಾಕುತ್ತ ನಸುನಕ್ಕ ಬೊಚ್ಚುಬಾಯಿ ಅಜ್ಜ, ಅಲ್ಲಿಯೇ ನೋವು ಮಿಡಿದಂತೆ ನಿಟ್ಟುಸಿರಿಟ್ಟ ಅಜ್ಜಿ..

ಇವೆಲ್ಲ ಭಾವಗಳು ಕಂಡುಬಂದಿದ್ದು ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರ­ಮವನ್ನು ಆಯೋಜಿಸಲಾಗಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರಿಂದಲೇ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಏಳು ಮಂದಿ ಹಿರಿಯ ಸಾಧಕರು ‘ಸಾಧಕ ಪ್ರಶಸ್ತಿ’ ಪಡೆದು ಹರ್ಷಿಸಿದರು. ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ 67 ಮಂದಿ ಅಜ್ಜ ಅಜ್ಜಿಯರಿಗೆ ನಾವು ಯಾರಿಗೂ ಕಡಿಮೆಯಿಲ್ಲ ಎಂಬ ಭಾವವಿತ್ತು.

‘ಸಾಧಕ ಪ್ರಶಸ್ತಿ ಬಂದಿರುವುದು ಸಂತಸವಾಗುತ್ತಿದೆ. ಜೀವನದ ಕೊನೆಗಾಲದಲ್ಲಿ ಸೇವೆಯನ್ನು ಗಮನಿಸಿ ನೀಡಿದ ಪ್ರಶಸ್ತಿಯಾಗಿದೆ. ಕೊನೆಯವರೆಗೂ ಸಮಾಜಕ್ಕೆ ನನ್ನ ಕೈಲಾದ ಸೇವೆ ಮಾಡುತ್ತೇನೆ’ ಎಂದು ಕಲಾ­ಕ್ಷೇತ್ರದಲ್ಲಿ ಸಾಧಕ ಪ್ರಶಸ್ತಿ ಪಡೆದ ಎಸ್‌.­ಶಂಕರ­ನಾರಾಯಣಾಚಾರ್ಯ ಅವರು ತಮ್ಮ ಹರ್ಷ ವ್ಯಕ್ತಪಡಿಸಿದರು.

‘ಇಂದಿನ ಬದಲಾದ ಕಾಲದಲ್ಲಿ ಮೌಲ್ಯಗಳು ಬದಲಾಗಿವೆ. ಆದರೆ, ಹಸಿರೆಲೆ ಎಂದಾದರೂ ಒಂದು ದಿನ ಹಣ್ಣಾಗಲೇಬೇಕು. ಹಾಗೆಯೇ, ಜೀವನಚಕ್ರ ಬದ­ಲಾ­ಗುತ್ತದೆ’ ಎಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧಕ ಪ್ರಶಸ್ತಿ ಪಡೆದ ತತ್ವಪದಕಾರ ಯಮನೂರೇಶ್‌ ಬಿರಾದಾರ್‌ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಉಮಾಶ್ರೀ, ‘2014–15 ನೇ ಸಾಲಿಗೆ ಇನ್ನೂ 12 ಜಿಲ್ಲೆಗಳಾದ ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ಬೀದರ್‌, ಬಳ್ಳಾರಿ, ಮಂಗಳೂರು, ಧಾರವಾಡ, ತುಮಕೂರು, ಚಿತ್ರದುರ್ಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚುವರಿ ಹಗಲು ಯೋಗಕ್ಷೇಮ ಕೇಂದ್ರಗಳನ್ನು ತೆರೆಯಲಾಗುವುದು’ ಎಂದರು.

‘ಈಗಾಗಲೇ ರಾಜ್ಯದ 4 ಮಹಾನಗರ ಪಾಲಿಕೆಗಳ ವ್ಯಾಪ್ತಿ­ಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಗುಲ್ಬರ್ಗದಲ್ಲಿ 4 ಹಗಲು ಯೋಗ­ಕ್ಷೇಮ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಸಾಧಕ ಪ್ರಶಸ್ತಿಯ ಹಣವನ್ನು ₨10 ಸಾವಿರದಿಂದ ₨1 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಸಹಾಯವಾಣಿ ಕೇಂದ್ರಗಳನ್ನು (1090) ಈಗಾಗಲೇ 16 ಜಿಲ್ಲೆ ಗಳಲ್ಲಿ ನಡೆಸಲಾಗುತ್ತಿದೆ. ಇನ್ನುಳಿದ ಜಿಲ್ಲೆ­ಗಳ­ಲ್ಲಿಯೂ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಸಚಿವ ದಿನೇಶ್ ಗುಂಡೂರಾವ್‌ ಮಾತನಾಡಿ, ‘ಹಿರಿ­ಯರ ರಕ್ಷಣೆಗಾಗಿಯೇ ಕೇಂದ್ರ ಸರ್ಕಾರವು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ–2007 ಜಾರಿಗೊಳಿಸಿದೆ. ಆದರೆ, ಹಲವರಿಗೆ ಈ ಕಾನೂನಿನ ಕುರಿತು ಅರಿವೇ ಇಲ್ಲ’ ಎಂದರು.

‘ಪೋಷಕರನ್ನು, ಹಿರಿಯರನ್ನು ಪೋಷಣೆ ಮಾಡು­ವುದು ಮಕ್ಕಳ ಕಾನೂನಾತ್ಮಕ ಜವಾಬ್ದಾರಿಯಾಗಿದೆ.  ಈ ಕಾನೂನಿನಡಿಯಲ್ಲಿ ಮಕ್ಕಳಿಗೆ ನೀಡಿರುವ ಆಸ್ತಿಯನ್ನು ವಾಪಸ್‌ ಪಡೆಯಬಹುದಾಗಿದೆ. ಹಿರಿಯರು ಈ ಕಾನೂನನ್ನು ಸದ್ಭಳಕೆ ಮಾಡಿ­ಕೊಳ್ಳಬೇಕು’ ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.­ದೊರೆಸ್ವಾಮಿ, ‘ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗುತ್ತಿರುವುದೇ ಹಿರಿಯರ ಶೋಷಣೆಗೆ ಮುಖ್ಯಕಾರಣವಾಗಿದೆ. ಪೋಷಿಸಿ, ಬೆಳೆಸಿದ ತಂದೆ–ತಾಯಿಯರನ್ನು ನೋಡಿಕೊಳ್ಳದೆ, ಅವರನ್ನು ಮನೆಯಿಂದ ಹೊರಹಾಕುವ ಮಕ್ಕಳಿಗೆ ನಾಚಿಕೆ­ಯಾಗಬೇಕು’ ಎಂದು ಹೇಳಿದರು.

‘60 ವರ್ಷದ ನಂತರದ ವೃದ್ಧರು ನನ್ನ ಕೈಲಾಗುವುದಿಲ್ಲ ಎಂದು ಮನೆಯಲ್ಲಿ ಕುಳಿತುಕೊಳ್ಳದೆ, ಸಮಾಜಮುಖಿಯಾಗಿ ತಮ್ಮಿಂದಾದ ಕಾರ್ಯಗಳನ್ನು ನಿರ್ವಹಿಸಬೇಕು. ಇರುವಷ್ಟು ದಿನ ಕೊರಗುವುದನ್ನು ಬಿಟ್ಟು ಸಮಾಜಕ್ಕೆ ಮಾರ್ಗದರ್ಶನ ನೀಡುವಂತಹ ಕೆಲಸವನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

ಸಚಿವ ಕೆ.ಜೆ.ಜಾರ್ಜ್‌, ‘2011 ರ ಜನಗಣತಿಯ ಪ್ರಕಾರ ಈಗ ರಾಜ್ಯದಲ್ಲಿ 42 ಲಕ್ಷ ವೃದ್ಧರಿದ್ದಾರೆ. 2020 ರ ವೇಳೆಯಲ್ಲಿ 1.90 ಕೋಟಿಯಷ್ಟು ವೃದ್ಧರ ಸಂಖ್ಯೆ ಹೆಚ್ಚಲಿದೆ’ ಎಂದರು. ‘ಹಿರಿಯ ಜೀವಗಳು ಇಂದು ಹೆಚ್ಚಿನ ಅಭದ್ರತೆಯನ್ನು ಎದುರಿಸುತ್ತಿವೆ. ಹಿರಿಯರಿಗೆ ಮಕ್ಕಳ ಪ್ರೀತಿ, ಅಕ್ಕರೆಯ ಅಗತ್ಯವಿದೆ. ಹಿರಿಯರ ಪೋಷಣೆ ಎಲ್ಲಾ ಮಕ್ಕಳ ನೈತಿಕ ಹೊಣೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT