ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದೊಳಗೆ ಕೋಣೆಗಳಿರಲಿ...

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಕೆಲವರಿಗೆ ದಿನಗಳು ಹುಟ್ಟುವುದೇ ಹಾಗೆ.ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ ಮೂಡು ಹಾಳಾಗಿರುತ್ತದೆ. ಯಾವ ಕೆಲಸವನ್ನು ಮಾಡಲಿಕ್ಕೂ ಮನಸ್ಸು ಬರುವುದಿಲ್ಲ. ಆಫೀಸಿಗೆ ಹೋಗಲಿಕ್ಕಂತೂ ಮೂಡು ಇರುವುದೇ ಇಲ್ಲ. ಮನಸ್ಸಿನ ತುಂಬಾ ಬೇಸರ, ಏಕತಾನತೆ ತುಂಬಿಕೊಂಡಿರುತ್ತದೆ. ಇನ್ನೂ ರಾತ್ರಿ ನಿದ್ರೆಯ ಅರೆ ಮಂಪರು ಹೋಗಿರುವುದಿಲ್ಲ.

ಬೆಳಗಿನ ಸೂರ್ಯೋದಯ ಉತ್ಸಾಹವನ್ನು ತಂದಿರುವುದಿಲ್ಲ. ಒಲ್ಲದ ಮನಸ್ಸಿನಿಂದ ಏನೋ ಒಂದು ತಿಂಡಿ ಮಾಡುವ ಹೆಂಡತಿ, ಒಲ್ಲದ ಮನಸ್ಸಿನಿಂದ ಕೆಲಸಕ್ಕೆ ಹೊರಡುವ ಗಂಡ, ಮನಸ್ಸಿನಲ್ಲಿ ಕಿರಿಕಿರಿಯನ್ನೇ ತುಂಬಿಕೊಂಡು, ಸರಿಯಾಗಿ ತಿಂಡಿಯನ್ನೂ ತಿನ್ನದೇ ಶಾಲೆ, ಕಾಲೇಜಿಗೆ ಹೊರಡುವ ಮಕ್ಕಳು.

ಹೀಗೆ ಸ್ಪಷ್ಟವಾದ ಕಾರಣವಿಲ್ಲದೇ ಎಲ್ಲರ ಮನಸ್ಸೂ ರಾಡಿಯಾಗಿರುತ್ತದೆ. ಪ್ರತಿ ಬೆಳಗು ತಂದು ಕೊಡುವ ಯಾವುದೇ ಉತ್ಸಾಹವೂ ಇವರ ಮನಸ್ಸಿನಲ್ಲಿ ಇರುವುದಿಲ್ಲ. ಇವರು ಕೀಲಿಕೊಟ್ಟ  ಯಂತ್ರಗಳಂತೆ ವರ್ತಿಸುತ್ತಾರೆ.

ಕೆಲವರು ಕಛೇರಿಗೆ ಬರುತ್ತಿರುವ ಹಾಗೆಯೇ, ತಮ್ಮ ಕೈ ಕೆಳಗಿನ ಉದ್ಯೋಗಿಗಳಿಗೆ ಗದರಿಸುತ್ತಿರುತ್ತಾರೆ. ನಂತರವೂ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಬೈಸಿ ಕೊಂಡಿರುತ್ತಾರೆ. ಮೇಲಧಿಕಾರಿಯ ಎದುರಿಗೆ ಕೈಕಟ್ಟಿಕೊಂಡು, ಬೆನ್ನು ಬಾಗಿಸಿ ಅತಿವಿನಯ  ಪ್ರದರ್ಶಿಸುತ್ತಿರುತ್ತಾರೆ.

ಆಗ ಅದುಮಿಟ್ಟುಕೊಂಡಿದ್ದ ಸಿಟ್ಟನ್ನು, ಬೇಸರವನ್ನು ಮನೆಗೆ ಬಂದು ಹೆಂಡತಿ-ಮಕ್ಕಳ ಮೇಲೆ ತೀರಿಸುತ್ತಾರೆ. ಅಂತಹವರು ಆಫೀಸಿನಲ್ಲಿ ಸಹಜವಾಗಿಯೇ ಅಸಂತೋಷದಿಂದ (ಹುಸಿ ಸಂತೋಷವನ್ನು ತೋರಿಸುತ್ತಾ) ಇರುತ್ತಾರೆ. ಮನೆಗೆ ಬಂದರೂ ಅಸಂತೋಷದಿಂದಲೇ ಇರುತ್ತಾರೆ.

ಇಂಥವರು ತಮ್ಮ ವರ್ತನೆಯಿಂದ ಆಫೀಸಿನಲ್ಲಿಯೂ ಹಾಗೂ ಮನೆಯಲ್ಲಿಯೂ ಅಶಾಂತ ವಾತಾವತರಣವನ್ನು ಸೃಷ್ಟಿಸುತ್ತಾರೆ. ರೇಗಿಸಿಕೊಳ್ಳುವ ಮತ್ತು ರೇಗಾಡುವ ಇವರು ನಿತ್ಯ ಸಂತೋಷದಿಂದ ನಿತ್ಯವೂ ವಂಚಿತರಾಗುತ್ತ ಇರುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ ಕೆಲವರಿರುತ್ತಾರೆ. ಅವರು ಆಫೀಸಿನ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಹಾಗೆಯೇ ಮನೆಯಲ್ಲಿಯೂ ತಮ್ಮ ಪಾಲಿನ ಕೆಲಸವನ್ನು ಮಾಡುತ್ತಾರೆ.

ಸಮಾಧಾನದಿಂದ ಇದ್ದುಕೊಂಡು ಆದಷ್ಟು ಮಟ್ಟಿಗೆ ಒಳ್ಳೆಯ ಗಂಡ, ಒಳ್ಳೆಯ ಅಪ್ಪ, ಒಳ್ಳೆಯ ಅಣ್ಣ/ತಮ್ಮ, ಅಕ್ಕ/ತಂಗಿ/ಅಮ್ಮ/ಹೆಂಡತಿ ಆಗಿರುತ್ತಾರೆ. ಅವರು ಮನಸ್ಸನ್ನು ಅಷ್ಟಿಷ್ಟು ಪಳಗಿಸಿಕೊಂಡಿರುತ್ತಾರೆ. ಅವರಿಗೆ ತಮ್ಮ ಪಾತ್ರದ ಪರಿಚಯವಿರುತ್ತದೆ.

ಅವರು ಮನೆಯಿಂದ ಹೊರಡುವಾಗ ಮನೆಯನ್ನು ಅಂದರೆ, ಮನೆಯ ಸಮಸ್ಯೆಗಳನ್ನು ಕಚೇರಿಗೆ ಕೊಂಡೊಯ್ಯು­ವುದಿಲ್ಲ. ಹಾಗೆಯೇ, ಕಛೇರಿಯ ಫೈಲುಗಳನ್ನು ಅಥವಾ ಸಮಸ್ಯೆಗಳನ್ನು ಮನೆಗೆ ಹೊತ್ತೊಯ್ಯುವುದಿಲ್ಲ. ಹಾಗಾಗಿ ಅವರು ಎರಡೂ ಕಡೆಗಳಲ್ಲಿ ಹೆಚ್ಚು ನಿರಾಳವಾಗಿರುತ್ತಾರೆ. ಅಲ್ಲಿಯ ಕೆಲಸವನ್ನು ಅಲ್ಲಿಯೇ ಮಾಡಿ ಮುಗಿಸಿಕೊಂಡಿರುತ್ತಾರೆ. ಇಂಥವರು ಮನೆಯಲ್ಲಾಗಲೀ, ಕಚೇರಿಯಲ್ಲಾಗಲೀ ಜಗಳಗಂಟರಾಗಿರುವುದಿಲ್ಲ.

ರೇಗಾಡುವವರಾಗಿರುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಅಂತಿರುತ್ತಾರೆ. ಹೆಚ್ಚು ಸಮಾಧಾನಿಗಳಾಗಿರುತ್ತಾರೆ. ಬಹುತೇಕವಾಗಿ ದುಶ್ಚಟಗಳಿಂದ ದೂರವಿರುತ್ತಾರೆ.  ಹೀಗಿರುವ ಕೆಲವರು ತಮಗೆ ಗೊತ್ತಿಲ್ಲದೆಯೇ ತಮ್ಮ ಮನಸ್ಸಿನಲ್ಲಿ ಸಾಕಷ್ಟು ಕೋಣೆಗಳನ್ನು ಮಾಡಿಕೊಂಡಿರುತ್ತಾರೆ. ಆಯಾ ಸಂದರ್ಭಗಳಿಗೆ ಅನುಗುಣವಾಗಿ ಅವರು ಆಯಾ ಕೋಣೆಗಳಿಗೆ ಶಿಫ್ಟ್ ಆಗುತ್ತಿರುತ್ತಾರೆ!

ಹೀಗೆ ನಾವೂ ನಮ್ಮ ಮನವೆಂಬ ಮಂದಿರದೊಳಗೆ ಕೋಣೆಗಳನ್ನು ಮಾಡಿಕೊಳ್ಳುವುದು ಹೇಗೆ?
ಮೊದಲಿಗೆ ನಿಮ್ಮ ಮನಸ್ಸನ್ನು ಒಂದಿಷ್ಟು ದಿನಗಳ ಕಾಲ ನೀವೇ ಗಮನಿಸಿಕೊಳ್ಳಿ. ಉದಾಹರಣೆಗೆ ಒಂದು ವಾರಗಳ ಕಾಲ ಪ್ರತಿದಿನ ಪದೇ ಪದೇ ನಿಮ್ಮ ಮನಸ್ಸನ್ನು ಗಮನಿಸಿ. ನಿಮಗೆ ಯಾವ ಯಾವ ಆಲೋಚನೆಗಳು ಪದೇ ಪದೇ ಬರುತ್ತವೆ ಎನ್ನುವುದನ್ನು ಗಮನಿಸಿಕೊಳ್ಳಿ. ಯಾವ ಯಾವ ಭಾವನೆಗಳು ನಿಮ್ಮ ನಿಯಂತ್ರಣವನ್ನು ಮೀರಿ ಹೋಗುತ್ತವೆ ಎನ್ನುವುದನ್ನು ಗುರುತಿಸಿಕೊಳ್ಳಿ.

ಅವುಗಳನ್ನು ಒಂದು ನೋಟ್ ಪುಸ್ತಕದಲ್ಲಿ ಬರೆದುಕೊಳ್ಳಿ. ನಿಮ್ಮ ದಿನಚರಿಯನ್ನು ಸಹ ಬರೆದಿಟ್ಟುಕೊಳ್ಳಿ. ಎಲ್ಲೆಲ್ಲಿ ಯಾವ್ಯಾವ ಸಂದರ್ಭಗಳಲ್ಲಿ ನಿಮಗೆ ಯಾವ್ಯಾವ ಭಾವನೆಗಳಿಂದ ಸಮಸ್ಯೆಯಾಗುತ್ತಿದೆ ಎನ್ನುವುದನ್ನು ಗುರುತಿಸಿಕೊಳ್ಳಿ. ದು:ಖ, ಕೋಪ, ಭಯ, ಅಸಹಾಯಕತೆ, ಅಸೂಯೆ, ಕಿರಿಕಿರಿ ಮುಂತಾದ ಭಾವನೆಗಳು ಯಾವ್ಯಾವ ಸಂದರ್ಭಗಳಲ್ಲಿ ಬರುತ್ತವೆ ಎನ್ನುವುದನ್ನು ಗಮನಿಸಿ ಬರೆದುಕೊಳ್ಳಿ.

ಕನಿಷ್ಟ ಒಂದು ವಾರ ಇವಿಷ್ಟು ಕೆಲಸವಾದ ನಂತರ ಒಂದು ದಿನ ಸಾಯಂಕಾಲ ಏಳೂವರೆಯಷ್ಟರಲ್ಲಿ ಮನೆಗೆ ಬನ್ನಿ. ಕೈಕಾಲು ಮುಖವನ್ನು ತೊಳೆದುಕೊಂಡು ಅಥವಾ ಸ್ನಾನವನ್ನು ಮಾಡಿಕೊಂಡು ಸ್ವಚ್ಛವಾಗಿ. ಒಂದು ಲೋಟ ಬಿಸಿನೀರನ್ನಾಗಲೀ, ಕಾಫಿ ಅಥವಾ ಟೀಯನ್ನಾಗಲೀ ಕುಡಿಯಿರಿ. ಬೆಚ್ಚಗಿನ ಹಾಲಾದರೂ ಆಗಬಹುದು.

ರಾತ್ರಿಯ ಊಟಕ್ಕಿಂತಲೂ ಕನಿಷ್ಟ ಒಂದುಗಂಟೆ ಮುಂಚಿತವಾಗಿ, ಸಾಧ್ಯವಿರುವಷ್ಟು ಪ್ರಶಾಂತವಾದ ವಾತಾವರಣವಿರುವ ಕೋಣೆಯಲ್ಲಿ ಸುಖಾಸನದಲ್ಲಿ ಕುಳಿತುಕೊಳ್ಳಿ. ಎರಡು ನಿಮಿಷಗಳಷ್ಟು ಕಾಲ ನಿಮ್ಮ ಉಸಿರಾಟವನ್ನು ಗಮನಿಸಿಕೊಳ್ಳಿ. ನೀವು ಕಳೆದ ವಾರದಲ್ಲಿ ಗುರುತಿಸಿಕೊಂಡಂತೆ ನಿಮಗೆ ಯಾವ್ಯಾವ ಭಾವನೆಗಳಿಂದ ಸಮಸ್ಯೆಯಾಗುತ್ತಿದೆ ಎನ್ನುವುದನ್ನು ನೆನಪಿಸಿಕೊಳ್ಳಿ. ನಂತರ ನಿಮ್ಮ ದಿನಚರಿ ಹೇಗಿದೆ ಎನ್ನುವುದನ್ನೂ ನೆನಪಿಸಿಕೊಳ್ಳಿ.

ನಂತರ ದೀರ್ಘವಾಗಿ ಮೂರು ಸಲ ಉಸಿರಾಡಿ. ಪವಿತ್ರವಾದ ಪ್ರಾಣವಾಯುವನ್ನು ಮೂಗಿನಿಂದ ಒಳಗೆ ಎಳೆದುಕೊಳ್ಳಿ. ಕೆಲವು ಕ್ಷಣಗಳ ಕಾಲ ಅದನ್ನು ನಿಮ್ಮ ಹೊಟ್ಟೆಯೊಳಗೆ ಇಟ್ಟುಕೊಳ್ಳಿ. ನಂತರ ನಿಧಾನವಾಗಿ ಬಾಯಿಯ ಮೂಲಕ ಉಸಿರನ್ನು ಹೊರಗೆ ಕಳಿಸಿ. ಹೀಗೇ ಮೂರು ಸಲ ಮಾಡಿ.

ಆ ಮೇಲೆ ನಿಮ್ಮ ಮನಸ್ಸಿನ ಮಂದಿರದೊಳಗೆ (ಮನೆಯೊಳಗೆ)ಕೃತಕವಾಗಿ ಕೆಲವು ಕೋಣೆಗಳನ್ನು ಮಾಡಿಕೊಳ್ಳಿ. ಒಂದೊಂದು ಕೋಣೆಗೂ ಒಂದೊಂದು ಬಣ್ಣವನ್ನು ಹಚ್ಚಿರಿ.

ನಂತರ ಅವುಗಳ ಬಾಗಿಲಿಗೆ ಒಂದೊಂದು ಬೋರ್ಡುನ್ನು ಹಾಕಿರಿ. ಪ್ರತಿಯೊಂದು ಕೋಣೆಗೂ ಒಂದೊಂದು ಹೆಸರು ಬರೆಯಿರಿ. ಉದಾಹರಣೆಗೆ: ಒಂದು ಕೋಣೆಗೆ ತೋಟ ಅಂತ ಬೋರ್ಡು ಹಾಕಿ. ನಂತರ ಕ್ರಮವಾಗಿ ಆಫೀಸು, ಕೆಲಸ, ಹೆಂಡತಿ, ವಿಶ್ರಾಂತಿ, ಕೋಪ, ಆರೋಗ್ಯ, ಸಂತೋಷ, ಅಸೂಯೆ ಹೀಗೆ ನಿಮಗೆ ಬೇಕೆನ್ನಿಸಿದಷ್ಟು ಕೋಣೆಗಳನ್ನು ಮಾಡಿಕೊಳ್ಳಿ. ಒಂದು ಸಲ ಕೋಣೆಗಳಿಗೆ ಹೆಸರಿಡುವುದು ಮುಗಿದ ನಂತರ ಎಲ್ಲ ಕೋಣೆಗಳನ್ನೂ ಹೊರಗಿನಿಂದ  ನೋಡಿಕೊಂಡು ಬನ್ನಿ.


ದೀರ್ಘವಾಗಿ ಉಸಿರಾಡಿ. ಒಮ್ಮೆ ಕಣ್ಣು ಬಿಡಿ. ದೀರ್ಘವಾಗಿ ಉಸಿರಾಡಿ. ಮತ್ತೆ ಕಣ್ಣು ಮುಚ್ಚಿಕೊಳ್ಳಿ. ಮೊದಲಿನಂತೆ ಎಲ್ಲಾ ಕೋಣೆಗಳನ್ನು ಇನ್ನೊಮ್ಮೆ ಹೊರಗಿನಿಂದ ಇಣುಕಿ ನೋಡಿ ಕೊಂಡು ಬನ್ನಿ. ನಿಮಗೆ ಯಾವ ಕೋಣೆಗೆ ಹೋಗಲಿಕ್ಕೆ ಇಷ್ಟವಾಗುತ್ತದೆಯೋ, ಆ ಕೋಣೆಯೊಳಗೆ ಹೋಗಿ.

ಉದಾಹರಣೆಗೆ: ನಿಮಗೆ ತೋಟದ ಕೋಣೆಯೊಳಗೆ ಹೋಗಬೇಕೂಂತ ಅನ್ನಿಸಿದರೆ, ಅದರೊಳಗೆ ಹೋಗಿ. ಅದನ್ನು ಪ್ರವೇಶಿಸುತ್ತರುವಂತೆಯೇ, ನಿಮಗೆ ತೋಟದಲ್ಲಿರುವ ಅನುಭವವಾಗುತ್ತದೆ. ನಿರಾಳವಾಗಿ ಉಸಿರಾಡಿ. ಮನಸ್ಸು ಮತ್ತು ಶರೀರದಲ್ಲಿ ಉತ್ಸಾಹ ಬರುತ್ತದೆ. ಅದನ್ನು ಅನುಭವಿಸಿ.

ಅಥವಾ ಕೋಪದ ಕೋಣೆಗೆ ಹೋಗಿ ನೋಡಿ. ಒಮ್ಮೆಲೇ ಹಿಂದಿನ ಕೋಪದ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಥವಾ ಬಹಳಷ್ಟು ಘಟನೆಗಳು ನೆನಪಾಗಬಹುದು. ಅದರಿಂದ ಮನಸ್ಸು ಉದ್ವಿಗ್ನಗೊಳ್ಳುತ್ತದೆ.

ಅದನ್ನು ಸಂಪೂರ್ಣವಾಗಿ ಅನುಭವಿಸಿ. ಕೋಪದ ಕೋಣೆಯಲ್ಲಿನ ಕಹಿಯನ್ನೆಲ್ಲ ಮನಸ್ಸಿನಲ್ಲಿ ತುಂಬಿಕೊಂಡ ನಂತರ ಅಲ್ಲಿಂದ ಶಾಂತಿ/ಸಮಾಧಾನದ ಕೋಣೆಯೊಳಗೆ ಹೋಗಿ.

ಅದೊಂದು ಥರಾ ಹವಾನಿಯಂತ್ರಿತ ಕೋಣೆಯಂತಿರುತ್ತದೆ. ಅಲ್ಲಿ ನಿಮಗೆ ಆಹ್ಲಾದಕರವಾದ ಭಾವನೆ ಬರುತ್ತದೆ. ಮನಸ್ಸು ಹಗುರಾಗುತ್ತದೆ. ಕೋಪದ ಕಹಿಯೆಲ್ಲವೂ ಕರಗಿ ಹೋಗುವುದನ್ನು ಕಲ್ಪಿಸಿಕೊಳ್ಳಿ. ನಿಮಗೆ ಬೇಕೆನ್ನಿಸುವಷ್ಟು ಹೊತ್ತು ಅಲ್ಲಿಯೇ ಇರಿ. ಮನಸ್ಸು ನಿರಾಳವಾದ ನಂತರ ಅಲ್ಲಿಂದ ಹೊರಗೆ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT