ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹನ್‌ ಧಮಕಿ

2ಜಿ ಹಗರಣ: ಟ್ರಾಯ್ ಮಾಜಿ ಅಧ್ಯಕ್ಷ ಬೈಜಾಲ್‌ ಆರೋಪ
Last Updated 26 ಮೇ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿ ಇನ್ನೊಂದು ಸ್ಫೋಟಕ ಮಾಹಿತಿ ಈಗ ಬಹಿರಂಗವಾಗಿದೆ. ‘ತರಂಗಾಂತರ ಪರವಾನಗಿ ವಿಷಯದಲ್ಲಿ ಸಹಕರಿಸದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ತಮಗೆ ಬೆದರಿಕೆ ಹಾಕಿದ್ದಾಗಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಮಾಜಿ ಅಧ್ಯಕ್ಷ ಪ್ರದೀಪ್‌ ಬೈಜಾಲ್‌ ಆರೋಪಿಸಿದ್ದಾರೆ.

‘ದ ಕಂಪ್ಲೀಟ್‌ ಸ್ಟೋರಿ ಆಫ್‌ ಇಂಡಿಯನ್‌ ರಿಫಾರ್ಮ್ಸ್‌: 2ಜಿ, ಪವರ್‌ ಆಂಡ್‌ ಪ್ರೈವೆಟ್‌ ಎಂಟರ್‌ಪ್ರೈಸ್‌–ಎ ಪ್ರಾಕ್ಟಿಷನರ್ಸ್‌ ಡೈರಿ’ ಎನ್ನುವ  ತಮ್ಮ  ಪುಸ್ತಕದಲ್ಲಿ  ಬೈಜಾಲ್‌ ಈ ಮಾಹಿತಿಯನ್ನು ಹೊರಗೆಡವಿದ್ದಾರೆ.

2ಜಿ ಹಗರಣದ ಆರೋಪಿಯಾಗಿರುವ ಬೈಜಾಲ್‌,  ‘ನಾನು ಈ ಪ್ರಕರಣದಲ್ಲಿ  ಅರುಣ್‌ ಶೌ ರಿ ಹಾಗೂ ರತನ್‌ ಟಾಟಾ ಅವರ ಮೇಲೆ ಆರೋಪ ಹೊರಿಸಬೇಕು  ಎಂದು ಸಿಬಿಐ ಬಯಸಿತ್ತು’ ಎಂದೂ ಹೇಳಿದ್ದಾರೆ.

2003ರಲ್ಲಿ ಎನ್‌ಡಿಎ ಸರ್ಕಾರವು  ಬೈಜಾಲ್‌ ಅವರನ್ನು ಟ್ರಾಯ್‌ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು.

‘ಸಹಕರಿಸದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಪ್ರತಿ ಪ್ರಕರಣದಲ್ಲಿಯೂ ಸಿಬಿಐ ಅಧಿಕಾರಿಗಳು ನನಗೆ ಎಚ್ಚರಿಕೆ ನೀಡಿದ್ದರು.  ಮನಮೋಹನ್‌ ಸಿಂಗ್‌ ಕೂಡ ಇದೇ ರೀತಿ ಹೇಳಿದ್ದರು’ ಎಂದು ಬೈಜಾಲ್‌ ಈ ಪುಸ್ತಕದಲ್ಲಿ ಬರೆದಿದ್ದಾರೆ.

‘ಏಕರೂಪದ ದೂರಸಂಪರ್ಕ ಪರವಾನಗಿ ನೀತಿಗೆ ಶಿಫಾರಸು ಮಾಡಿದ ಬಳಿಕ ನನ್ನನ್ನು ಅನುಚಿತವಾಗಿ ನಡೆಸಿಕೊಳ್ಳಲಾಯಿತು. ಅನೇಕ ಸಮಸ್ಯೆಗಳು ಎದುರಾದವು. ಆಡಳಿತ ಪಕ್ಷದವರು (ಕಾಂಗ್ರೆಸ್‌) ನನ್ನನ್ನು ಅನುಮಾನದಿಂದ ನೋಡಿದರು’ ಎಂದೂ ಆರೋಪಿಸಿದ್ದಾರೆ.

ದಯಾನಿಧಿಯಿಂದಲೂ ಬೆದರಿಕೆ:  ‘ಯಾರು ಮೊದಲು ಬರುತ್ತಾರೋ ಅವರಿಗೆ ಪರವಾನಗಿ ಕೊಡಬೇಕು ಎನ್ನುವ  ನೀತಿಗೆ ಬದಲಾಗಿ ಏಕರೂಪದ ದೂರಸಂಪರ್ಕ ಪರವಾನಗಿ ನೀತಿ ಜಾರಿಗೆ  ಶಿಫಾರಸು ಮಾಡಿದರೆ  ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯುಪಿಎ ಮೊದಲ ಅವಧಿಯಲ್ಲಿ ದೂರ­ಸಂಪರ್ಕ ಸಚಿವರಾಗಿದ್ದ  ದಯಾನಿಧಿ ಮಾರನ್‌ ಬೆದರಿಕೆ ಹಾಕಿದ್ದರು. ನಾನು ಈ ವಿಷಯವನ್ನು ಪ್ರಧಾನಿ ಮುಂದೆಯೂ ಹೇಳಿದ್ದೆ. ದೂರಸಂಪರ್ಕ ಸಚಿವರು ಹೇಳುವುದನ್ನು ಕೇಳಿ. ಅವರ ಅಭಿಪ್ರಾಯವನ್ನು ಪರಿಗಣಿಸಿ ಎಂದು ಅವರು ಹೇಳಿದ್ದರು.

ಸಚಿವರ ಅಭಿಪ್ರಾಯವನ್ನು ಪರಿಗಣಿಸಿದರೆ ನಾನು ತೀವ್ರ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ಪ್ರಧಾನಿಗೆ  ತಿಳಿಸಿದ್ದೆ’ ಎಂದು ಬೈಜಾಲ್‌ ಅಂದು ನಡೆದ ವಿದ್ಯಮಾನಗಳನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ.

‘ದಯಾನಿಧಿ ಮಾರನ್‌ ಹಾಗೂ ಯುಪಿಎ ಎರಡನೇ ಅವಧಿಯಲ್ಲಿ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರು ನನ್ನ ಶಿಫಾರಸುಗಳನ್ನು ಕಡೆಗಣಿಸಿ,  ತರಂಗಾಂತರಗಳನ್ನು ಆಯ್ದ ಕೆಲವರಿಗೆ ನಿಯಮ ಬಾಹಿರವಾಗಿ ಮಾರಾಟ ಮಾಡಿದರು’ ಎಂದೂ ಅವರು ಆರೋಪಿಸಿದ್ದಾರೆ.

* ನಾನು ಎಲ್ಲವನ್ನೂ ಹೇಳಿದ್ದೇನೆ.  ನಾನು ಹೇಳಿರುವುದು ನೂರಕ್ಕೆ ನೂರು ಸತ್ಯ. ಇವುಗಳನ್ನು ಸಮರ್ಥಿಸಿಕೊಳ್ಳಲು ನನ್ನ ಬಳಿ ಪುರಾವೆಗಳು ಇವೆ.
-ಪ್ರದೀಪ್‌ ಬೈಜಾಲ್‌, ಟ್ರಾಯ್‌ ಮಾಜಿ ಅಧ್ಯಕ್ಷ


* ಹಿಂದೆ ಇದ್ದ ಯುಪಿಎ ಸರ್ಕಾರ ‘ಭ್ರಷ್ಟಾಚಾರದ   ಒಕ್ಕೂಟ’ವಾಗಿತ್ತು ಎನ್ನುವುದು ಬೈಜಾಲ್‌್  ಹೇಳಿಕೆಯಿಂದ ಸಾಬೀತಾಗಿದೆ.
-ಪ್ರಕಾಶ್‌ ಜಾವಡೇಕರ್‌, ಕೇಂದ್ರ ಪರಿಸರ ಸಚಿವ

ಬೈಜಾಲ್‌ ಹೇಳಿದ್ದೇನು?
* ನಿಯಮಬಾಹಿರವಾಗಿ ತರಂಗಾಂತರ ಹಂಚಿಕೆ
* ಏಕರೂಪದ ಪರವಾನಗಿ ನೀತಿಗೆ ಮಾಜಿ ಪ್ರಧಾನಿ ಕಿಮ್ಮತ್ತು ಕೊಡಲಿಲ್ಲ
* ಸಹಕರಿಸುವಂತೆ ಬೆದರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT