ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸು ವಿಕಸನಗೊಳಿಸುವ ಮನೋವಿಕಾಸ

Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಅದು ಎರಡು ತಿಂಗಳ ಹಸುಗೂಸು. ರಚ್ಚೆ ಹಿಡಿದ ಮಗುವನ್ನು ನಮ್ಮಿಂದ ಪಾಲನೆ, ಪೋಷಣೆ ಮಾಡಲು ಆಗುವುದಿಲ್ಲ ಎಂದು ಹೆತ್ತವರೇ ವೈದ್ಯರ ಮಡಿಲಿಗೆ ಹಾಕಿಹೋಗುತ್ತಾರೆ. ಅವರು ಮತ್ತೆಂದೂ ಅತ್ತ ಸುಳಿಯುವುದಿಲ್ಲ. ಅದನ್ನು ವೈದ್ಯರು ಜತನದಿಂದ ಬೆಳೆಸುತ್ತಾರೆ. ಅವರ ಕುಟುಂಬದಲ್ಲಿ ಎಲ್ಲರೊಳಗೆ ಒಂದಾಗಿ ಆಡಿ ನಲಿದು, ಬೆಳೆದ ಆ ‘ಮಗು’ ಈಚೆಗಷ್ಟೆ ತೀರಿಕೊಂಡಾಗ 13 ವರ್ಷವಷ್ಟೇ ತುಂಬಿತ್ತು.

ಬುದ್ಧಿಮಾಂದ್ಯ ಮಗುವಾಗಿದ್ದ ಇದಕ್ಕೆ ಭವಿಷ್ಯವಿಲ್ಲ. ಇರುವಷ್ಟು ದಿನ ತಮಗೂ ನೆಮ್ಮದಿ ಇಲ್ಲ ಎಂದು ಪಾಲಕರೇ ಕೈ ಚೆಲ್ಲಿ ಹೋದರೂ ಆ ವೈದ್ಯರು ಆ ಮಗುವನ್ನು ಎದೆಗೊತ್ತಿಕೊಂಡೇ ಸಲುಹಿದ್ದರು. ಜಗತ್ತನ್ನೇ ಮರೆವಂತೆ ನಗಿಸಿದ್ದರು, ಇನ್ನು ಆ ಪುಟಾಣಿ ಇಲ್ಲ ಎಂದು ಆದಾಗ ನೆನಪುಗಳ ದೀಪದ ಸಾಲಿನ ಎದುರು ಕುಳಿತು ಅಳು ನುಂಗಿ, ಬಿಕ್ಕಿದರು.
*****
35 ವರ್ಷದ ಶ್ರೀಧರ್ ಈಗ ಬದಲಾಗಿದ್ದಾನೆ. ಅತಿ ಆಕ್ರಮಣಕಾರಿ ಮನೋಭಾವ ಹೊಂದಿದ್ದ ಅವನಿಗೆ ಇನ್ನೊಬ್ಬರ ಬಗ್ಗೆ ಮಾನವೀಯತೆ ತೋರುವ ಗುಣ ಬೆಳೆದಿದೆ. ಸಿಟ್ಟಿನಲ್ಲಿ ತನ್ನನ್ನು ತಾನು ಹಿಂಸಿಸಿಕೊಳ್ಳುತ್ತಿದ್ದ, ಇನ್ನೊಬ್ಬರಿಗೆ ತೊಂದರೆ ಕೊಡುತ್ತಿದ್ದ ಅವನಲ್ಲಿ ಅಗಾಧ ಬದಲಾವಣೆಯಾಗಿದೆ.  ಈಗ ಮನೋವಿಕಾಸ ಮಂದಿರಕ್ಕೆ ಯಾರೇ ಹೋದರೂ, ‘ನಿಮಗೆ ಏನಾಗಬೇಕು, ಯಾರ್‌ ಬೇಕ್ರಿ’ ಎಂದು ಥೇಟ್‌ ಭದ್ರತಾ ಸಿಬ್ಬಂದಿ ಥರ ವಿಚಾರಿಸುತ್ತಾನೆ.

ಇಂಥ ಹಲವರ ಬದುಕಿಗೆ ಆಶ್ರಯ ನೀಡುವ ಜತೆಗೆ ಎಲ್ಲರಂತೆ ಬದುಕುವ ಆಶಯವನ್ನು ಕೂಡಾ ನೀಡಿದೆ ಹುಬ್ಬಳ್ಳಿಯ ದೇವಾಂಗಪೇಟೆಯ ‘ಮನೋವಿಕಾಸ ಪುನರ್ವಸತಿ ಸೇವಾ ಸಂಸ್ಥೆ’. ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಗೆ ಈಗ ರಾಜ್ಯದಿಂದ ಅಷ್ಟೇ ಅಲ್ಲ, ಇತರ ರಾಜ್ಯದ ಗಡಿಭಾಗದ ಜನರೂ ಹಿಡಿಯಷ್ಟು ಭರವಸೆಯೊಂದಿಗೆ ಬರುತ್ತಿದ್ದಾರೆ.

ಈ ಸಂಸ್ಥೆಯನ್ನು ಆರಂಭಿಸಿದ್ದು ವೈದ್ಯ ಜಗದೀಶ್‌ ಹಿರೇಮಠ. ಇವರ ಮಗಳು ವೀಣಾ ನರರೋಗದಿಂದ ಮೃತಪಟ್ಟಾಗ ಕೇವಲ 12 ವರ್ಷ. ತಾವು ಪಟ್ಟ ಸಂಕಟದ ಅನುಭೂತಿಯಲ್ಲಿಯೇ ಇಂಥ ನೋವು ಅನುಭವಿಸುವ ಜೀವಗಳಿಗಾಗಿ ಅವರು ಹುಟ್ಟುಹಾಕಿದ ಸಂಸ್ಥೆ ‘ಮನೋವಿಕಾಸ’. ಇಲ್ಲಿ ಈಗ 80 ಮಕ್ಕಳಿಗೆ ವಿಶೇಷ ಶಿಕ್ಷಣ ದೊರೆಯುತ್ತಿದೆ.

ದುಬಾರಿ ಚಿಕಿತ್ಸೆಯಿಂದ ಬೇಸತ್ತ ಹೆತ್ತವರ ಬದುಕಿಗೆ ಭರವಸೆ ನೀಡಿದೆ. ಬುದ್ಧಿಮಾಂದ್ಯ ಹಾಗೂ ನರಗಳ ಸ್ವಾಧೀನ ಕಳೆದುಕೊಂಡ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.  ತೊದಲುವ ಮಕ್ಕಳಿಗೆ ಸ್ಟಿಮಿಲೇಷನ್‌ ಥೆರಪಿ, ಫಿಸಿಯೊ ಥೆರಪಿ,

ಹೈಡ್ರೋ ಥೆರಪಿ, ವೈಟಾ ಚಿಕಿತ್ಸೆಗೆ ಇತರ ಕಡೆಗಿಂತ ಇಲ್ಲಿ ಕಡಿಮೆ ವೆಚ್ಚ ತಗಲುತ್ತದೆ. ಇನ್ನು ಸಂಸ್ಥೆಗೆ ವಿಶೇಷ ಶಿಕ್ಷಣ ನೀಡಲು ಭಾರತೀಯ ಪುನರ್ವಸತಿ ಮಂಡಳಿಯಿಂದ ಮಾನ್ಯತೆ ದೊರೆತಿದೆ. ಇನ್ನು ಭಾರತೀಯ ಟ್ರಸ್ಟ್‌ ಆಫ್‌ ಇಂಡಿಯಾ ಸಹ ಈ ಸಂಸ್ಥೆಯನ್ನು ಮನೋವೈಕಲ್ಯ ಹೊಂದಿದವರಾಗಿ ನೀಡುವ ಶಿಕ್ಷಣ ಕ್ಷೇತ್ರದಲ್ಲಿ ನೋಡಲ್‌ ಕೇಂದ್ರವಾಗಿ ಗುರುತಿಸಿದೆ. ಪ್ರತಿ ಚಿಕಿತ್ಸೆಗೆ ₹50 ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಇಡೀ ದಿನ ರೋಗಿ ಜತೆ ಉಳಿದುಕೊಂಡು ಚಿಕಿತ್ಸೆ ಕೊಡಿಸಲು ಬಯಸುವವರು ₹150 ಪಾವತಿಸಬೇಕು.

ಉದ್ಯಮ ಆರಂಭ
ಇಷ್ಟು ಕಡಿಮೆ ದುಡ್ಡಿನಲ್ಲಿ ಇಂಥ ದೊಡ್ಡ ಸಂಸ್ಥೆ ನಡೆಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಜಗದೀಶ್‌ ಅವರು ಮೊದಲಿಗೆ ಮಾಡಿದ್ದು ಅಂಗವಿಕಲರು ಬಳಸುವ ಸಾಧನಗಳನ್ನು ತಯಾರಿಸುವ ಸಣ್ಣ ಉದ್ಯಮ. ಅದು ಅಷ್ಟಾಗಿ ಲಾಭ ತಂದು ಕೊಡದಿದ್ದರೂ ಹೊರೆ ಅನಿಸಲಿಲ್ಲ. ಸಂಸ್ಥೆಯು ಈಗ ವಿಶೇಷ ಮಕ್ಕಳಿಗಾಗಿಯೇ ಸೈಕಲ್‌, ಶ್ರವಣ ಸಾಧನಗಳು, ನೀ ಕೇಜ್‌, ಹೃದ್ರೋಗ ಸಂಬಂಧಿ ಸಾಧನ, ಕನ್ನಡಕಗಳನ್ನು ಸಿದ್ಧಪಡಿಸಿ ಮಾರುತ್ತಿದೆ.

ಇದರಿಂದ ಬರುವ ಲಾಭವನ್ನು ಸಂಸ್ಥೆಗೆ ಬಳಸುತ್ತಾರೆ. ಇನ್ನು ಆಗಾಗ ವಿಶೇಷ ಮಕ್ಕಳ ಕಲಿಕೆ ಕುರಿತು ಬೋಧನೆ, ತರಬೇತಿ, ಕಾರ್ಯಾಗಾರವನ್ನು ಸರ್ಕಾರ ಆಯೋಜಿಸಿದಾಗ ಬರುವ ಹಣವು ಸಹ ಸ್ವಲ್ಪ ಮಟ್ಟಿಗೆ ಕೈಹಿಡಿದಿದೆ. ಇಲ್ಲಿನ ಸೇವೆ ಮೆಚ್ಚಿ ಸಂಸ್ಥೆಗೆ ಬಂದವರೊಬ್ಬರು ಆಕಳವನ್ನು ದಾನವಾಗಿ ನೀಡಿದ್ದಾರೆ. ಇಂಥವರ ಪ್ರೀತಿಯೇ ಸಂಸ್ಥೆ ಹೆಸರುವಾಸಿಯಾಗಲು ಕಾರಣವಾಯಿತು ಎನ್ನುತ್ತಾರೆ ಸಂಸ್ಥೆಯ ಸಿಬ್ಬಂದಿ.

ತರಗತಿ ಮತ್ತು ತರಬೇತಿ
ಬುದ್ಧಿಮಟ್ಟ ಆಧಾರದ ಅನುಗುಣವಾಗಿ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸೇರಿಸಲಾಗುತ್ತದೆ. ಕಲಿಕೆಯಲ್ಲಿ ಸುಧಾರಣೆ ತೋರುವ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಈಗಾಗಲೇ ಸಂಸ್ಥೆಯಲ್ಲಿ ಮೋಂಬತ್ತಿ ತಯಾರಿಕೆ, ದಿನಸಿ ಅಂಗಡಿಯಲ್ಲಿ ದುಡಿಯಲು ಬೇಕಾಗುವಷ್ಟರ ತಿಳಿವಳಿಕೆ ನೀಡಲಾಗುತ್ತದೆ. ಇನ್ನು ವಿಶೇಷ ಸಂದರ್ಭದಲ್ಲಿ ಕಾರ್ಯಾಗಾರ, ಶಿಬಿರಗಳನ್ನು ಸಂಸ್ಥೆಯಲ್ಲಿ ನಡೆಯುತ್ತವೆ. ಇದಕ್ಕಾಗಿ ಶ್ರುತಿ, ಸಂಪಿಗೆ, ಮಲ್ಲಿಗೆ, ಕೇದಿಗೆ, ಗುಲಾಬಿ ಎಂಬ ಕೋಣೆಗಳನ್ನು ಮೀಸಲಿಡಲಾಗಿದೆ. ವಿದ್ಯಾರ್ಥಿಗಳು ಕಲಿಯುವ ತರಗತಿ ಕೋಣೆಗಳಿಗೆ ಬ್ರಹ್ಮಪುತ್ರ, ಸರಸ್ವತಿ, ಮಲಪ್ರಭ, ತುಂಗಭದ್ರಾ, ಗಂಗಾ, ಕೃಷ್ಣೆ, ಕಾವೇರಿ ಎಂಬ ಹೆಸರಿಡಲಾಗಿದೆ.

ಕೆಲಸಕ್ಕೆ ಸಾಥ್‌
ಇಲ್ಲಿ ಮನೋರೋಗಿಗಳಾಗಿ ಬಂದವರಲ್ಲಿ ಸುಧಾರಿಸಿದವರನ್ನು ಸಂಸ್ಥೆಯಲ್ಲಿನ ಕೆಲಸಗಳ ನಿರ್ವಹಣೆಯನ್ನು ನೀಡಲಾಗುತ್ತದೆ. ಈಗಾಗಲೇ ಇವರಲ್ಲಿ ಕೆಲವರು ಹಿಟ್ಟನ್ನು ಕಲಸುವುದು, ನಾದುವುದನ್ನು ಕಲಿತಿದ್ದಾರೆ. ಇದಲ್ಲದೆ ಸ್ವಚ್ಛತೆ ಕೆಲಸದಲ್ಲಿಯೂ ಸಾಥ್‌ ನೀಡುತ್ತಾರೆ. ಇಲ್ಲಿನ ಆಹ್ಲಾದಕರ ವಾತಾವರಣವೇ ಪುಟ್ಟ ಮನಗಳಿಗೆ ಮನೆಯಂಥ ಅನುಭವ ನೀಡಿದೆ. ಪ್ರಾಣಿಪ್ರಿಯರಾಗಿರುವ ಜಗದೀಶ್‌ ಹಾಗೂ ಅವರ ಮಗ ವಿಜಯಕುಮಾರ್‌ ಸಂಸ್ಥೆಯಲ್ಲಿ ಮೊಲ, ಗಿಳಿ, ಲವ್‌ ಬರ್ಡ್ಸ್‌, ಬೆಕ್ಕು, ಇಲಿ ಹಾಗೂ ನಾಯಿಗಳನ್ನು ಸಲಹುತ್ತಿದ್ದಾರೆ.

‘ಜೀವನದಲ್ಲಿ ಅತಿ ಹೆಚ್ಚು ನೋವು ತಿಂದ ಜೀವವೇ ಇನ್ನೊಂದು ಜೀವಕ್ಕೆ ಆಶ್ರಯ ನೀಡುತ್ತದೆ’ ಎಂಬ ಮಾತಿಗೆ ನಿದರ್ಶನದಂತೆ ಈ ಸಂಸ್ಥೆ ಅಧ್ಯಕ್ಷರಿದ್ದಾರೆ ಎನ್ನುವಾಗ ಸಾಯಿಯವರ ತಾಯಿಯ ಮೊಗದಲ್ಲಿ ಕೃತಜ್ಞತಾ ಭಾವ ತುಳುಕುತ್ತಿತ್ತು. ಇಲ್ಲಿಗೆ ಬಂದ ಮೇಲೆ ಮನದಲ್ಲಿ ಅಶಾಂತಿ ದೂರವಾಗಿದೆ. ಯಾರನ್ನೋ ಬೈಯುತ್ತಾ, ಗೊಣಗುತ್ತ ಹಿಂತಿರುಗುವ ಪ್ರಸಂಗಗಳು ಆ ಪೋಷಕರಲ್ಲಿ ಮರೆಯಾಗಿವೆ. ಬದುಕಿಗೆ ನೆಮ್ಮದಿ ಮರಳಿದೆ. ದೇವಾಂಗಪೇಟೆಯಲ್ಲಿರುವ ಈ ಸಂಸ್ಥೆಯ ಸಂಪರ್ಕ ಸಂಖ್ಯೆ:  9243281756. ಇ-ಮೇಲ್‌ manovikasa@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT