ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ಸಾಂಸ್ಕೃತಿಕ ವೈಭವ

66ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದ ಅಮೆರಿಕ ಅಧ್ಯಕ್ಷ ಒಬಾಮ
Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಚನ್ನಪಟ್ಟಣದ ಬೃಹತ್‌ ಗೊಂಬೆಗಳ ಸ್ತಬ್ಧಚಿತ್ರ  ಜನಮನ ಸೂರೆ­ಗೊಂ­ಡವು. ಅದರಲ್ಲೂ ವಿಶೇಷ­ವಾಗಿ ಮಕ್ಕಳು ಗೊಂಬೆಗಳನ್ನು ಕಂಡು ಪುಳುಕಿತರಾದರು.

ಪಥಸಂಚಲನ ಮುಕ್ತಾಯಗೊಂಡು ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾದ ಬಳಿಕ ಸ್ತಬ್ಧಚಿತ್ರಗಳ ಸಾಲಿನಲ್ಲಿ ಚನ್ನಪಟ್ಟಣ ಬೃಹತ್‌ ಹಾಗೂಆಕರ್ಷಕ ಬೊಂಬೆಗಳನ್ನು ಹೊತ್ತ ಕರ್ನಾಟದ ಸ್ತಬ್ಧಚಿತ್ರ  ಮೊದಲನೆಯದಾಗಿ ಪ್ರವೇಶ
ನೀಡಿತು. ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಹಾಗೂ ಸರ್ದಾರ್ ಸರೋವರ ಯೋಜನೆಗಳ ಸ್ತಬ್ಧಚಿತ್ರ ಗಮನ ಸೆಳೆಯಿತು. ಮಕ್ಕಳ ನೃತ್ಯಗಳನ್ನು ಮಿಷೆಲ್‌ ಒಬಾಮ ತದೇಕ ಚಿತ್ತದಿಂದ ಆಸ್ವಾದಿಸಿದರು.

ಅಮೆರಿಕ ಅಧ್ಯಕ್ಷರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಸ್ವಾಗತಿಸಿದರು.  ಒಬಾಮ ದಂಪತಿ ಕಾರಿನಿಂದ ಇಳಿದ ಕೆಲ ಹೊತ್ತಿನಲ್ಲಿ ತುಂತುರು ಮಳೆ ಸುರಿಯಿತು.  ಒಬಾಮ ದಂಪತಿ ಕೊಡೆ ಹಿಡಿದು ವೇದಿಕೆಯಲ್ಲಿ ರಾಷ್ಟ್ರಪತಿಗಾಗಿ ಕಾಯ್ದು ಕುಳಿತರು.ಪ್ರಧಾನಿಯಾಗಿ ಮೊದಲ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಮೋದಿ ತಲೆಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಬಂದೇಜ್‌ ಸಫಾ ರಾಜಸ್ತಾನಿ ಪೇಟಾ ಧರಿಸಿದ್ದರು. ಈ ಸಮಯದಲ್ಲಿ 45 ಸಾವಿರ ಭದ್ರತಾ ಸಿಬ್ಬಂದಿ ದೆಹಲಿ ಕಾವಲು ಕಾಯುತ್ತಿದ್ದರು.

ಪುಳಕ ತಂದ ಪಥಸಂಚಲ­ನ
ನವದೆಹಲಿ: ದೇಶದ ಗಣರಾಜ್ಯೋತ್ಸವ ಸಮಾ­ರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿ­ರುವ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬರಾಕ್‌ ಒಬಾಮ, ಸೋಮವಾರ ಎರಡು ಗಂಟೆಗಳ ಕಾಲ ಪಥಸಂಚಲ­ನದ ಸೊಬಗು ಕಣ್ತುಂಬಿಕೊಂಡರು.

ಕಡುಗಪ್ಪು ಬಣ್ಣದ ಕ್ಯಾಡಿಲ್ಯಾಕ್‌  ಒನ್‌ ಕಾರು ‘ದ ಬೀಸ್ಟ್‌’ನಲ್ಲಿ ಒಬಾಮ  ದಂಪತಿ ರಾಜಪಥಕ್ಕೆ ಬಂದಾಗ  ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸ್ವಂತ ಕಾರಿನಲ್ಲಿ ಬರುವ ಮೂಲಕ  ಅತಿಥಿಯಾದವರು ರಾಷ್ಟ್ರಪತಿ ಜತೆ ಕಾರಿನಲ್ಲಿ ಬರುವ ಸಂಪ್ರದಾಯವನ್ನೂ ಒಬಾಮ ಮುರಿದರು.

ದೇಶದ ಸೇನಾ ಸಾಮರ್ಥ್ಯ ಹಾಗೂ  ಸಾಂಸ್ಕೃತಿಕ ವೈವಿಧ್ಯವನ್ನು ಅನಾವರಣ­ಗೊಳಿಸುತ್ತಿದ್ದ ಗಣ­ರಾಜ್ಯೋತ್ಸವ ಈ ಬಾರಿ ಭಾರತದ ‘ಸ್ತ್ರೀ ಶಕ್ತಿ’ಯನ್ನೂ ಬಿಂಬಿಸಿತು. ಮೂರು ಸೇನಾ ಪಡೆಗಳ ಪ್ರತ್ಯೇಕ ಮಹಿಳಾ ತಂಡಗಳು ಮೊದಲ ಬಾರಿಗೆ ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ನಾರಿ ಶಕ್ತಿಯನ್ನು ಪ್ರತಿಬಿಂಬಿಸುವ ಪ್ರತ್ಯೇಕ ಸ್ತಬ್ಧಚಿತ್ರಗಳೂ ಗಮನಸೆ­ಳೆದವು.
ಕಾರ್ಯಕ್ರಮದ ಅಂತ್ಯದಲ್ಲಿ ಬಿಎಸ್‌ಎಫ್‌ ಯೋಧರ ‘ಜಾನ್‌­ಬಾಜ್‌’ ತಂಡ ಪ್ರದರ್ಶಿಸಿದ ಮೈನವಿರೇಳಿಸುವ ಮೋಟಾರ್‌ ಸೈಕಲ್‌ ಸಾಹಸ ಒಬಾಮ ಅವರನ್ನು ನಿಬ್ಬೆರಗಾಗಿಸಿತು.

ಲೋಕಾಭಿರಾಮಕ್ಕೆ ಭಂಗವಿಲ್ಲ!
ನವದೆಹಲಿ (ಪಿಟಿಐ):
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಗಹನ ಚರ್ಚೆಗಳ ನಡುವೆಯೂ ಲೋಕಾಭಿರಾಮವಾಗಿ ಇರಲು ಸಿಗುವ ಗಳಿಗೆಗಳನ್ನು ಆನಂದಿಸದೆ ಬಿಡುತ್ತಿಲ್ಲ!  ಇಲ್ಲಿನ ಗಣರಾಜ್ಯೋತ್ಸವ ಪಥಸಂಚಲನ ಸಮಾರಂಭಕ್ಕೆ ಹಾಜರಾಗಲು ಬೆಳಿಗ್ಗೆ ಬಂದ ಒಬಾಮ ಅವರನ್ನು ಮೋದಿ ಅವರು ಆತ್ಮೀಯ ಹಸ್ತಲಾಘವದೊಂದಿಗೆ ಹಾಗೂ ತಮ್ಮ ಬಲಗೈಯಿಂದ ಹಿಡಿದು ಸ್ವಾಗತಿಸಿದರು. ಇಬ್ಬರೂ ನಾಯಕರು ಜನಸ್ತೋಮದೆಡೆಗೆ ನಗುಮುಖದಿಂದ ಕೈಬೀಸುತ್ತಿದ್ದಂತೆಯೇ ನೆರೆದಿದ್ದವರ ಕೂಗು ಮುಗಿಲುಮುಟ್ಟಿತು.

ಪಥಸಂಚಲನದ ವೇಳೆಯೂ ಇಬ್ಬರೂ ನಾಯಕರು ಸಂಭಾಷಣೆಯಲ್ಲಿ ನಿರತವಾಗಿದ್ದರು. ಒಬಾಮ ಅವರು ಆಗಾಗ ತಮ್ಮ ಬಲ ಭಾಗದಲ್ಲಿದ್ದ ಮೋದಿ ಅವರೆಡೆಗೆ ಬಾಗಿ ಮಾತನಾಡುತ್ತಿದ್ದರು. ವಿಶೇಷವಾಗಿ ಸ್ತಬ್ಧಚಿತ್ರಗಳ ಮೆರವಣಿಗೆ ಸಾಗುವಾಗ ಮತ್ತು ಶಾಲಾ ಮಕ್ಕಳು ಪ್ರದರ್ಶನ ಕೊಡುವಾಗ ಇಬ್ಬರೂ ನಾಯಕರು ಹಲವು ಸಲ ಪರಸ್ಪರ ಮುಗುಳ್ನಕ್ಕರು. ಒಬಾಮ ಅವರು ಶೌರ್ಯ ಪ್ರಶಸ್ತಿ ವಿಜೇತ ಮಕ್ಕಳೆಡೆಗೆ ಕೈಬೀಸಿ ಅಭಿನಂದನೆಗಳನ್ನು ಸಲ್ಲಿಸಿದರು. ಜತೆಗೆ ಒಬಾಮ ಅವರಿಗೆ ಬಿಎಸ್‌ಎಫ್‌ ಯೋಧರು ಪ್ರದರ್ಶಿಸಿದ ಬೈಕ್‌ ಕಸರತ್ತುಗಳು ತುಂಬಾ ಇಷ್ಟವಾದಂತೆ ತೋರಿತು. ಈ ಸಂದರ್ಭದಲ್ಲಿ ಅವರು ಚಪ್ಪಾಳೆಯಿಂದ ಖುಷಿ ತಟ್ಟಿ ಮೆಚ್ಚುಗೆ ಹೊರಚೆಲ್ಲಿದರು.

ಮೋದಿ ದಿರಿಸಿಗೂ ವಿವಾದದ ಕಾಟ!
ಪ್ರಧಾನಿ ನರೇಂದ್ರ ಮೋದಿ ಭಾನು­ವಾರ  ಧರಿಸಿದ್ದ ಬಂದ್‌ಗಲಾ ಕೋಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಅತ್ಯಂತ ಸಮೀಪದಿಂದ ಸೆರೆ ಹಿಡಿದ  ಚಿತ್ರದಲ್ಲಿ ಕೋಟಿನ ತುಂಬಾ ಎಂಬ್ರಾ­ಯ್ಡಿರಿ­ಯಲ್ಲಿ ಚಿಕ್ಕದಾಗಿ ‘ನರೇಂದ್ರ ದಾಮೋದರ್‌­ದಾಸ್‌ ಮೋದಿ’  ಎಂದು ಬರೆದಿರುವುದು ಭಾರಿ ಟೀಕೆಗೆ ಕಾರಣ­ವಾಗಿದೆ. ಇದು ಸ್ವಯಂ ಪ್ರಶಂಸೆಯ ಪರಾಕಾಷ್ಠೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಮೋದಿ ಮುಖ್ಯಮಂತ್ರಿಯಾದ ದಿನ­ದಿಂದಲೂ ಅವರ ಉಡುಪುಗಳ ವಿನ್ಯಾಸ ಮಾಡುತ್ತಿರುವ ಅಹಮದಾ­ಬಾದ್‌ನ ‘ಜೇಡ್‌ ಬ್ಲ್ಯೂ’ ಈ ಕೋಟನ್ನು ಸಿದ್ಧಪಡಿಸಿದ್ದಾರೆ. ಈಜಿಪ್ಟ್‌ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್‌ ಕೂಡ ತಮ್ಮ ಹೆಸರುಳ್ಳ  ಕೋಟು ಧರಿಸುತ್ತಿದ್ದರು ಎಂದು ಮೋದಿ ಅವರನ್ನು ಮುಬಾರಕ್‌ ಅವರಿಗೆ ಹೋಲಿಸಲಾಗಿದೆ. ಇನ್ನೂ ಕೆಲವರು ಅವರ ಉಡುಪನ್ನು ಸಮರ್ಥಿಸಿ­ಕೊಂಡಿ­ದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಬೆಂಬಲಿಗರು ಪ್ರಶ್ನಿಸಿದ್ದಾರೆ.

ಶಿಷ್ಟಾಚಾರ ಉಲ್ಲಂಘಿಸಿದ ಒಬಾಮ!
ಗಣ­ರಾಜ್ಯೋತ್ಸ­ವದ ಸೊಬಗನ್ನು ಸವಿಯುತ್ತ ಮೈಮರೆತ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಇದೇ ಮೊದಲ ಬಾರಿಗೆ ತಮ್ಮ ಭದ್ರತಾ ವ್ಯವಸ್ಥೆಯ ಶಿಷ್ಟಾ­ಚಾರ­ವನ್ನೂ ಉಲ್ಲಂಘಿ­ಸಿದ ಅಪರೂಪದ ಘಟನೆ ನಡೆದಿದೆ. ಒಬಾಮ ಎಲ್ಲಿಯೂ ಒಂದೇ ಸ್ಥಳ­ದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಹೊತ್ತು ಈ ರೀತಿಯ ಸಭೆ, ಸಮಾ­ರಂಭಗಳಲ್ಲಿ ಭಾಗವಹಿಸಿದ ನಿದರ್ಶನಗಳಿಲ್ಲ.

ಅಮೆರಿಕ ಭದ್ರತಾ ವ್ಯವಸ್ಥೆಯ ಕಟ್ಟುನಿಟ್ಟಿನ ಶಿಷ್ಟಾಚಾರ ಉಲ್ಲಂಘಿಸಿದ ಅವರು ಎರಡು ಗಂಟೆಗಳ ಕಾಲ ಬಯಲು ಸ್ಥಳ­ದಲ್ಲಿ ನಡೆದ ಸಮಾ­ರಂಭದಲ್ಲಿ ಕಳೆದಿರುವುದು ಇದೇ ಮೊದಲು ಎನ್ನಲಾಗಿದೆ.   ಅಮೆರಿಕ ಅಧ್ಯಕ್ಷರ ಭದ್ರತಾ ವ್ಯವಸ್ಥೆಯ ನಿಯಮಾವಳಿಯ ಪ್ರಕಾರ ಅವರು ಎಲ್ಲಿಯೂ ಮುಕ್ತ ಸ್ಥಳಗಳಲ್ಲಿ 45 ನಿಮಿ­ಷಗಳಿಗಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ. ಈ ನಿಯಮವನ್ನು ಅಮೆರಿಕದ ಎಲ್ಲ ಅಧ್ಯಕ್ಷರೂ ಕಡ್ಡಾಯವಾಗಿ ಪಾಲಿಸುತ್ತಾ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT