ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೆಳೆವ ಕುಬ್ಜ ರಾಣಿಯರು

ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕು ಅಂಕಲಗಿ ಹೋಬಳಿ ಬೂದಿಹಾಳ ಗ್ರಾಮದಿಂದ ಬಂದು ಮೂವತ್ತು ವರ್ಷಗಳಿಂದ ಅರಮನೆ ನಗರಿ ಮೈಸೂರಿನಲ್ಲಿ ನೆಲೆಸಿರುವ ಬಾಳಪ್ಪ ದೊಡ್ಡಮನಿ ಅವರದ್ದು ವಿಶೇಷ ಹವ್ಯಾಸ. ತಮ್ಮ ನಿವೇಶನದಲ್ಲಿ ‘ಬೋನ್ಸಾಯ್’ ಕಾನನ ಸೃಷ್ಟಿಸಿದ್ದಾರೆ.

  ದಟ್ಟಗಳ್ಳಿಯ ಕೆಇಬಿ ವೃತ್ತದ ಬಳಿಯ ಮೂರನೇ ಅಡ್ಡರಸ್ತೆಯಲ್ಲಿ ಸುಕೃತ ಪಿಯು ಕಾಲೇಜಿನ ಪಕ್ಕದಲ್ಲಿರುವ 80/80 ಅಡಿ ಚದರ ಅಡಿ ನಿವೇಶನದಲ್ಲಿ ಈ ‘ಕುಬ್ಜ’ ಕಾನನ ಸೃಷ್ಟಿಯಾಗಿದೆ. ಈ ಕಾನನದಲ್ಲಿ ‘ಬೋನ್ಸಾಯ್’ ಶೈಲಿಯಲ್ಲಿ ಬೆಳೆಸಿದ ಆಲ, ಅರಳಿ, ಬಸರಿ, ಅಶೋಕ, ಸೈರಸ್‌, ಪೈರಸ್‌, ಬೋಗನ್‌ವಿಲ್ಲಾ (ಕಾಗದದ ಹೂ), ಹುಣಸೆ, ಮಾವು, ಚಿಕ್ಕು, ಸೀತಾಫಲ, ನಿಂಬೆ, ಗಜನಿಂಬೆ, ಬೆಟ್ಟದ ನೆಲ್ಲಿ, ದಾಳಿಂಬರಿ, ದಾಸವಾಳ, ಪಾರಿಜಾತ, ಕ್ಯಾಕ್ಟಸ್‌ (ಪಾಪಸು ಕಳ್ಳಿ), ಬನ್ನಿ, ಬಿದಿರು, ನಂದಬಟ್ಟಲ, ಪಾಂಡಾ, ಮದರಂಗಿ, ನೇರಳೆ, ದಾಲ್ಚಿನಿ, ಕರಿಲಕ್ಕಿ, ಹೊಂಗೆ, ಬುಗುರಿ, ಕಾಬಾಳಿ, ಹೆನಿಲೀಯಾ, ಡಿಸೈನ್‌ ಬೇಕಿಯಾ, ಜರಿಸಸ್ಯಗಳು, ಡ್ಯುರಾಂಟಾ, ಯುಫೋರ್ಬಿಯಾ, ಡ್ರೆಸಿನಾ... ಮೊದಲಾದ ವೃಕ್ಷಗಳನ್ನು ಕಾಣಬಹುದು. ಇಲ್ಲಿ ಧಾರವಾಡ, ಬೆಳಗಾವಿ, ಹಳಿಯಾಳ, ಬೆಂಗಳೂರು, ಹಾಸನ, ಮಂಡ್ಯ, ಶಿವಮೊಗ್ಗ, ಮೈಸೂರು, ಬಿಳಿಗಿರಿರಂಗನಬೆಟ್ಟ –ಹೀಗೆ ವಿವಿಧ ಸ್ಥಳಗಳಿಂದ ತಂದ 600ಕ್ಕೂ ಹೆಚ್ಚಿನ ಕುಬ್ಜ ಸುಂದರಿಯರು ನಳನಳಿಸುತ್ತಿದ್ದಾರೆ.

ತೋಟದ ಪ್ರವೇಶದ್ವಾರದ ಬಳಿ ಆಲಂಕಾರಿಕ ಸಸಿಗಳಿಂದ ಕಂಗೊಳಿಸುತ್ತಿರುವ 36ರ ಹರೆಯದ ಕುಬ್ಜ ಆಲದ ಮರ ಇಲ್ಲಿನ ವೃಕ್ಷ ಕನ್ನಿಕೆಯರಲ್ಲಿ ‘ಸೀನಿಯರ್‌ ಮೋಸ್ಟ್‌’. ಒಂದು ವರ್ಷ ವಯೋಮಾನದಿಂದ 36 ವರ್ಷ ವಯೋಮಾನದವರೆಗಿನ ವೈವಿಧ್ಯಮಯವಾದ ಜಾತಿ, ಆಕಾರ, ಬಣ್ಣಗಳಲ್ಲಿ ಬದಲಾವಣೆ ಇರುವ ಗಿಡಗಳು ಇಲ್ಲಿವೆ.

ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಬಾಳಪ್ಪ, 37 ವರ್ಷಗಳ ಹಿಂದೆ ಕೊಳ್ಳೇಗಾಲದಲ್ಲಿ ಕಂದಾಯ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆಯನ್ನು ಆರಂಭಿಸಿ, ಮೈಸೂರು, ತಿ. ನರಸೀಪುರ, ಪಾಂಡವಪುರಗಳಲ್ಲಿ ಸೇವೆ ಸಲ್ಲಿಸಿ ಶಿರಸ್ತೇದಾರ್‌ ಹುದ್ದೆಗೇರಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. 30 ವರ್ಷಗಳ ಹಿಂದೆ ಮೈಸೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾಗ ಅಂಗಳದ ಅಲಂಕಾರಕ್ಕೆಂದು ತಂದ ಜರಿ

ಸಸ್ಯಗಳ ಬೆಳವಣಿಗೆ ಹಾಗೂ ಅಂದ–ಚೆಂದವನ್ನು ಕಂಡು ‘ಗಾರ್ಡನಿಂಗ್’ನತ್ತ ಆಕರ್ಷಿತರಾದ ಬಾಳಪ್ಪ ತದನಂತರ ಅದನ್ನೇ ಹವ್ಯಾಸವನ್ನಾಗಿಸಿಕೊಂಡರು.

ಬಾಳಪ್ಪ ವೃಕ್ಷ ಕೃಷಿಯ ಯಾವುದೇ ತರಬೇತಿ ಅಥವಾ ತಜ್ಞರ ಮಾರ್ಗದರ್ಶನ ಪಡೆದಿಲ್ಲ. ಅವರು ಬೆಳೆಸಿರುವ ಅದೆಷ್ಟೋ ಗಿಡಗಳ ಹೆಸರೂ ಅವರಿಗೂ ಗೊತ್ತಿಲ್ಲ. ‘ಬೋನ್ಸಾಯ್‌’ ಕೃಷಿಯಲ್ಲಿ ವೃಕ್ಷಗಳ ಎತ್ತರ 4.5 ಅಡಿ ಮೀರಬಾರದು ಎಂಬ ನಿಯಮ ಇದೆ ಎಂಬುದು ಮಾತ್ರ ಅವರಿಗೆ ಗೊತ್ತು. ಮನೆ–ಮನೆ ತಿರುಗಿ, ಊರೂರು ಸುತ್ತಿ ಬೋನ್ಸಾಯಿ ಕೃಷಿಯ ಕುರಿತು ಮಾಹಿತಿ ಸಂಗ್ರಹಿಸಿ, ಸಿಕ್ಕಲ್ಲಿಂದ ಸಸಿಗಳನ್ನು ತಂದು ಅವುಗಳನ್ನು ಪೋಷಿಸಿ, ಬೆಳೆಸಿ ಇಂದು ತಮ್ಮ ಕಲ್ಪನೆಯ ಕೈತೋಟದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಇತರರಿಗಿಂತ ಭಿನ್ನ
‘ಬೋನ್ಸಾಯ್‌ ಮಾದರಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ ನಾನು ಗಿಡಗಳನ್ನು ಕಟ್ಟುವುದು ಅಥವಾ ಬಗ್ಗಿಸುವುದು ಮಾಡಿಲ್ಲ. ಬದಲಿಗೆ ನೈಸರ್ಗಿಕವಾಗಿ ಅವುಗಳನ್ನು ಬೆಳೆಯಲು ಬಿಟ್ಟು ಅವಶ್ಯಕತೆಗೆ ಅನುಗುಣವಾಗಿ ರೆಂಬೆ ಹಾಗೂ ಎಲೆಗಳನ್ನು ಕತ್ತರಿಸಿದ್ದೇನೆ. ಇತರರಂತೆ ಲಕ್ಷಾಂತರ ರೂಪಾಯಿ ವ್ಯಯಿಸಿ ನೂರಿನ್ನೂರು ವರ್ಷಗಳಷ್ಟು ಹಳೆಯದಾದ ‘ಬೋನ್ಸಾಯ್‌’ ವೃಕ್ಷಗಳನ್ನು ನಾನು ಕೊಂಡುತಂದಿಲ್ಲ’ ಎನ್ನುತ್ತಾರೆ ಬಾಳಪ್ಪ.

‘ತೋಟದ ನಿರ್ವಹಣೆಗೆ ವರ್ಷವೊಂದಕ್ಕೆ ಕನಿಷ್ಠ ಒಂದು ಲಕ್ಷ ರೂಪಾಯಿ ವ್ಯಯಿಸಬೇಕಾಗುತ್ತದೆ. ಇದರಲ್ಲಿ ರೀ–ಪಾಟಿಂಗ್‌, ಮಣ್ಣು ಬದಲಿಸುವಿಕೆ, ಸಾವಯವ ಗೊಬ್ಬರದ ವೆಚ್ಚ, ಹೊಸ ಸಸಿಗಳ ಖರೀದಿ, ಆಳುಗಳ ವೆಚ್ಚ ಸೇರಿದೆ. ವರ್ಷದ ನಿರ್ವಹಣೆಯಲ್ಲಿ ರೀ–ಪಾಟಿಂಗ್‌ ಮಾಡಲು ಕನಿಷ್ಠ 5 ಜನ 2 ತಿಂಗಳ ಕೆಲಸ ಮಾಡಬೇಕಾಗುತ್ತದೆ. ರೀ–ಪಾಟಿಂಗ್‌ ಬಲು ಸೂಕ್ಷ್ಮ ಕ್ರಿಯೆ. ಈ ಹಂತದಲ್ಲಿ ಗಿಡದ ಬೇರು, ಕಾಂಡಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು. ಹೀಗಾಗಿ 600ಕ್ಕೂ ಹೆಚ್ಚು ವೃಕ್ಷಗಳ ರೀ–ಪಾಟಿಂಗ್‌ ಮಾಡಲು ಹೆಚ್ಚು ವೇಳೆ ಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸ್ವಯಂ ನಿವೃತ್ತರಾದ ನಂತರ ಈ ವೃಕ್ಷ ಸಂಕುಲದ ಪೋಷಣೆಯಲ್ಲಿಯೇ ಹೆಚ್ಚಿನ ಸಮಯ ವ್ಯಯಿಸುತ್ತಿರುವ ಬಾಳಪ್ಪ ‘ಈ ಗಿಡ–ಮರ–ಬಳ್ಳಿಗಳನ್ನು ನನ್ನ ಮಕ್ಕಳಿಗಿಂತ ಹೆಚ್ಚಿನ ಕಾಳಜಿವಹಿಸಿ ಸಲಹಿದ್ದೇನೆ. ಪ್ರತಿ ದಿನ ಬೆಳಗಿನ 6.30ರಿಂದ 8.30ರವರೆಗೆ ನಾನು ಈ ವೃಕ್ಷಗಳ ಸೇವೆಯಲ್ಲಿ ತೊಡಗುತ್ತೇನೆ. ನನ್ನ ಕುಟುಂಬವೂ ತೋಟದ ಉಳಿವು– ಬೆಳವಿಗೆ ಸಹಕರಿಸುತ್ತಿದೆ. ನನಗೀಗ 68 ವರ್ಷ, ನನ್ನ ನಂತರ ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳು ಈ ತೋಟವನ್ನು ಸಾಕಿ ಸಲಹುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಅಭಿಮಾನದಿಂದ ಹೇಳುತ್ತಾರೆ.

2011ರವರೆಗೆ ದಸರಾ ಫಲ–ಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಇವರು ‘ವೃಕ್ಷಾಲಂಕಾರ ಹಾಗೂ ಬೋನ್ಸಾಯ್‌’ ವಿಭಾಗದಲ್ಲಿ ಆರು ಬಾರಿ ಪ್ರಥಮ ಸ್ಥಾನ ಪಡೆದಿದ್ದಾರೆ. ‘ದಸರಾ ವೇದಿಕೆ ಕೇವಲ ಫಲ– ಪುಷ್ಪ ‘ಪ್ರದರ್ಶನ’ಕ್ಕೆ ಸೀಮಿತವಾಗಬಾರದು. ಭೇಟಿ ನೀಡುವ ಜನರಲ್ಲಿ ‘ವೃಕ್ಷಪ್ರಜ್ಞೆ’ ಜಾಗೃತಿಗೊಳಿಸಿ ಮನೆಯಂಗಳದಲ್ಲಿ ಕನಿಷ್ಠ ಎರಡು ಗಿಡಗಳನ್ನು ಬೆಳೆಸಲು ಅವರನ್ನು ಪ್ರೇರೇಪಿಸುವಂತಿರಬೇಕು’ ಎಂಬ ವಿಚಾರ ಬಾಳಪ್ಪನವರದು. 2012ರಲ್ಲಿ ನಡೆದ ಸುತ್ತೂರು ಜಾತ್ರೆಯ ಸಂದರ್ಭದಲ್ಲಿ ಆಯೋಜಿಸಿದ್ದ ‘ಕೃಷಿ ಮೇಳ’ದಲ್ಲಿ ಇವರಿಗೆ ‘ದೇಶಿಕೇಂದ್ರ ಪದಕ’ ನೀಡಿ ಗೌರವಿಸಲಾಗಿದೆ.
ಮಾಹಿತಿಗೆ ಮೊ: 88465 95255 ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT