ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೆಳೆವ ಹರ್ಷಾಲಿ ಮೌನ

Last Updated 16 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಮುದ್ದಾದ ಮುಖ, ಮನಸೆಳೆಯುವ ನಟನೆ, ಹಾವ ಭಾವ, ಮೌನದ ಮೂಲಕವೇ ಮನಗೆದ್ದ ಪುಟ್ಟ ಪೋರಿ ಹರ್ಷಾಲಿ ಮಲ್ಹೋತ್ರಾ. ಮುಂಬೈ ಮೂಲದ ಏಳು ವರ್ಷದ ಈ ಬಾಲೆ ‘ಬಜರಂಗಿ ಭಾಯಿಜಾನ್‌’ ಚಿತ್ರದ ಮೂಲಕ ಮನೆಮಾತಾದವಳು. ಇತ್ತೀಚೆಗೆ ಒರಾಯನ್‌ ಮಾಲ್‌ನಲ್ಲಿ ‘ದಿ ಚಿಲ್ಡ್ರನ್ಸ್‌ ಪ್ಲೇಸ್‌’ ಮಳಿಗೆ ಉದ್ಘಾಟನಾ ಕಾರ್ಯಕ್ರಮದ ಸಲುವಾಗಿ ನಗರಕ್ಕೆ ಆಗಮಿಸಿದ್ದ ಹರ್ಷಿತಾ ತುಂಟ ನಗು, ಮಿತ ಮಾತುಗಳಿಂದ ಇಷ್ಟವಾಗುತ್ತಾಳೆ. ‌

ಒರಾಯನ್‌ ಮಾಲ್‌ನ ನೆಲಮಹಡಿಯಲ್ಲಿ ಒಪ್ಪವಾಗಿ ಜೋಡಿಸಿಟ್ಟ ಮಕ್ಕಳ ದಿರಿಸುಗಳ ಮೂಲಕ ಸ್ವಾಗತವೀಯುತ್ತದೆ ಚಿಲ್ಡ್ರನ್ಸ್‌ ಪ್ಲೇಸ್‌. ಇದು ಅಮೆರಿಕ ಬ್ರಾಂಡ್‌ ಆಗಿದ್ದು, ವಿವಿಧ ವಿನ್ಯಾಸ ಹಾಗೂ ಬಣ್ಣಗಳ ಮೆರುಗಿನಿಂದ ಆಕರ್ಷಣೀಯವಾಗಿದೆ.

ಚಿಲ್ಡ್ರನ್ಸ್‌ ಪ್ಲೇಸ್ ಉಡುಪು ಧರಿಸಿ ಅಮ್ಮ ಕಾಜೋಲ್‌ ಕೈಹಿಡಿದು ಮಳಿಗೆ ಪ್ರವೇಶಿಸಿದ ಹರ್ಷಾಲಿ ಮೊಗದ ತುಂಬ ಹರ್ಷ. ‘ಈ ಡ್ರೆಸ್‌ ಚೆನ್ನಾಗಿದೆ, ಐ ಲೈಕ್‌ ಪಿಂಕ್‌’ ಎನ್ನುತ್ತಾ ಇಡೀ ಮಳಿಗೆಯ ತುಂಬೆಲ್ಲಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟಳು. ಅಲ್ಲಿ ನೆರೆದಿದ್ದ ಜನರೆಲ್ಲಾ ‘ಸ್ಟಾರ್‌ ಕಿಡ್‌’ ಸುತ್ತ ಸುತ್ತುವರೆದು ಕ್ಯಾಮೆರಾ ಕಣ್ಣು ತೆರೆಯಲಾರಂಭಿಸುತ್ತಿದ್ದಂತೆ ಖುಷಿಯ ಹೂವು ಮೊಗ್ಗಿನಂತಾಯಿತು. ಮೌನ ಮನೆಮಾಡಿತು. ಕಣ್ಣಂಚಿನಲ್ಲಿ ತೊಟ್ಟಿಕ್ಕುತ್ತಿದ್ದ ಕಣ್ಣೀರನ್ನು ಅದುಮಿಟ್ಟುಕೊಳ್ಳುತ್ತ ಅಮ್ಮನ ತೋಳಲ್ಲಿ ಸೆರೆಯಾದಳು ಹರ್ಷಾಲಿ.

‘ಯು ಆರ್‌ ವೆರಿ ಕ್ಯೂಟ್‌ ಯಾರ್‌, ಸ್ಮೈಲ್‌ ಪ್ಲೀಸ್‌, ವಿಚ್‌ ಡ್ರೆಸ್‌ ಡು ಯು ಲೈಕ್‌, ಸಲ್ಮಾನ್‌ ಅಂಕಲ್‌ ಕೈಸಾ ಲಗ್ತಾ ಹೈ’ ಎನ್ನುತ್ತಾ ಅಲ್ಲಿದ್ದವರು ಹರ್ಷಾಲಿ ಮೊಗದಲ್ಲಿ ಅಂತೂ ಇಂತೂ ನಗುವುಕ್ಕಿಸಿ ಮುದ್ದು ಮುಖದ ನಗುವನ್ನು ಬಾಚಿಕೊಂಡರು. ಎಲ್ಲ ಪ್ರಶ್ನೆಗಳಿಗೂ ನಗುವೊಂದನ್ನೇ ಉತ್ತರವಾಗಿ ನೀಡುತ್ತಿದ್ದ ಹರ್ಷಾಲಿ ಕೊನೆಗೂ ‘ಗುಡ್‌’ ಎನ್ನುವ ಮೂಲಕ ಮೌನ ಮುರಿದಳು.

ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದ ಹರ್ಷಾಲಿಗೆ ಈ ನಗರ ತುಂಬ ಇಷ್ಟವಾಯಿತಂತೆ. ಅದುವರೆಗೆ ಹಾವಭಾವದಲ್ಲೇ ಹೆಚ್ಚಿನ ಉತ್ತರಗಳನ್ನು ನೀಡುತ್ತಿದ್ದ ಆಕೆ, ‘ಬೆಂಗಳೂರಿನಲ್ಲಿ ಏನು ನೋಡಿದೆ’ ಎಂಬ ಪ್ರಶ್ನೆಗೆ ‘ಕಪಡಾ’ ಎಂದು ಉತ್ತರಿಸಿದಳು.

ಭಾರತೀಯ ಮಕ್ಕಳ ಫ್ಯಾಷನ್‌ ಲೋಕಕ್ಕೆ ‘ದಿ ಚಿಲ್ಡ್ರನ್ಸ್‌ ಪ್ಲೇಸ್‌’ ಅನ್ನು ಪರಿಚಯಿಸಿದ ಅರವಿಂದ್‌ ಲೈಫ್‌ಸ್ಟೈಲ್‌ ಬ್ರ್ಯಾಂಡ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಜೆ.ಸುರೇಶ್‌, ದಿ ಚಿಲ್ಡ್ರನ್ಸ್‌ ಪ್ಲೇಸ್‌ನ ಅಂತರರಾಷ್ಟ್ರೀಯ ಹಿರಿಯ ಉಪಾಧ್ಯಕ್ಷೆ ಎಡ್ರೀನಾ ಜರ್ನಾರ್ಡ್‌, ಉಪಾಧ್ಯಕ್ಷ ಮೃದುಮೇಶ್‌ ರಾಯ್‌ ಇದ್ದರು. 

ಮಗುವಿನ ಆಸಕ್ತಿ ಶೋಧಿಸಿ
ಮುಂಬೈನ ಸೆವೆನ್‌ ಸ್ಕ್ವೇರ್‌ ಅಕಾಡೆಮಿಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಹರ್ಷಾಲಿ ವಿದ್ಯಾಭ್ಯಾಸದಲ್ಲೂ ಮುಂದು. ಈಗಾಗಲೇ  ‘ಕಬೂಲ್‌ ಹೈ’ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಹರ್ಷಾಲಿ, ಫೇರ್‌ ಎನ್‌ ಲವ್ಲಿ, ಪಿಯರ್ಸ್‌, ಹಾರ್ಲಿಕ್ಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಜಾಹೀರಾತುಗಳಲ್ಲಿ ಪರಿಚಿತ ಮುಖ.

‘ಬಜರಂಗಿ ಭಾಯಿಜಾನ್‌’ ಚಿತ್ರದ ಮೂಲಕ ಮನೆಮಾತಾಗಿರುವ ಮಗಳ ಬಗ್ಗೆ ‘ಅತೀವ ಹೆಮ್ಮೆ ಇದೆ’ ಎಂದು ಹೇಳಿಕೊಳ್ಳುವ ತಾಯಿ ಕಾಜೋಲ್‌ ಮಲ್ಹೋತ್ರಾ ಕಣ್ಣಲ್ಲಿ ಆನಂದ ಭಾಷ್ಪ ಜಿನುಗುತ್ತದೆ. ನಟಿ ಆಗಬೇಕು ಎಂಬುದು ಆಕೆಯ ಗುರಿಯಾಗಿತ್ತು ಎಂದು ಹೇಳುವ ಕಾಜೋಲ್‌ ಮೆಟ್ರೊ ಮಾತಿಗೆ ಸಿಕ್ಕರು.

* ಮಗಳಲ್ಲಿ ನಟನಾ ಆಸಕ್ತಿ ಇರುವುದನ್ನು ಗುರುತಿಸಿದ್ದು ಯಾವಾಗ?
ಹರ್ಷಾಲಿಗೆ ಎರಡು ವರ್ಷವಾಗಿದ್ದಾಗಲೇ ಅಭಿನಯಿಸುವಂತೆ ಅವಕಾಶಗಳು ಬಂದವು. ಆ ಸಂದರ್ಭದಲ್ಲಿ ಕೆಲವು ಬ್ರಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿದಳು. ಕ್ರಮೇಣ ಆಕೆ ಮಾತನಾಡಲಾರಂಭಿಸುತ್ತಿದ್ದಂತೆ ನಾನು ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಬೇಕು ಎನ್ನುತ್ತಿದ್ದಳು.

* ‘ಬಜರಂಗಿ ಭಾಯಿಜಾನ್‌’ ಚಿತ್ರಕ್ಕೆ ಆಯ್ಕೆಯಾದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?
ನನಗೆ ನಂಬಲಾಗಲಿಲ್ಲ. ಸುಮಾರು 5000 ಮಕ್ಕಳಲ್ಲಿ ಈಕೆ ಆಯ್ಕೆಯಾಗಿದ್ದಳು. ಸಲ್ಮಾನ್‌ ಖಾನ್‌ ತರಹದ ದೊಡ್ಡ ನಟರೊಂದಿಗೆ ನಟಿಸಲು ಅವಳಿಗೆ ಅವಕಾಶ ಸಿಕ್ಕಾಗ ನಾನಂತೂ ತುಂಬ ಎಕ್ಸೈಟ್‌ ಆಗಿಬಿಟ್ಟಿದ್ದೆ. ಸಿನಿಮಾದ ಭಾವನಾತ್ಮಕ ಸನ್ನಿವೇಶದ ಬಗ್ಗೆ ಒಂದು ದಿನ ಚರ್ಚಿಸುತ್ತಾ ಕುಳಿತಿದ್ದೆವು. ‘ಅಮ್ಮ ನಟನೆ ಅಂದರೆ ನಾನು ಪ್ರೇಕ್ಷಕರೊಂದಿಗೆ ನೇರ ಸಂಪರ್ಕ ಹೊಂದುವಂತಿರಬೇಕು ಎಂದು ನನಗೆ ಗೊತ್ತು. ನಾನು ಅಳುವುದನ್ನು ನೋಡಿ ಅವರೂ ಅಳಬೇಕು, ಅಲ್ಲವೇ’ ಎಂದಳು. ಕ್ಯಾಮೆರಾ ಎದುರು ನಿಂತಾಗ ಆಕೆ ನಿಜಜೀವನದ ಹರ್ಷಾಲಿ ಆಗಿರುವುದೇ ಇಲ್ಲ. ನಟನೆಯನ್ನು ಪ್ರೀತಿಸುವ ಅವಳು ಎಲ್ಲಿಯವರೆಗೆ ಇವುಗಳನ್ನು ಸಾಧಿಸುತ್ತಾಳೆ ಗೊತ್ತಿಲ್ಲ. ಆದರೆ ಅವಳ ಬಗ್ಗೆ ನನಗೆ ತುಂಬ ಹೆಮ್ಮೆ ಇದೆ.

* ಶಾಲೆ ಹಾಗೂ ನಟನೆಯನ್ನು ನಿಭಾಯಿಸುವುದು ಅವಳಿಗೆ ಕಷ್ಟ ಎನಿಸುವುದಿಲ್ಲವೇ?
ಹಾಗೆ ಎಂದೂ ಎನಿಸಿಲ್ಲ. ವಿದ್ಯಾಭ್ಯಾಸದಲ್ಲೂ ಮುಂದಿದ್ದಾಳೆ. ಬೇಕೆಂದಲ್ಲಿ ಆಡುತ್ತಾ ಇರುತ್ತಾಳೆ. ನಾನು ಅವಳ ಊಟ–ತಿಂಡಿ, ವಿದ್ಯಾಭ್ಯಾಸದ ಬಗ್ಗೆ ತಲೆಕೆಡಿಸಿಕೊಳ್ಳುತ್ತೇನೆ. ಉಳಿದಂತೆ ನಟನೆಯನ್ನು ಅವಳೇ ನಿಭಾಯಿಸಿಕೊಳ್ಳುತ್ತಾಳೆ. 

* ಬಾಲ್ಯದ ಮೋಜು ಮಸ್ತಿ ಅವಳಿಗೆ ಸಿಗುತ್ತಿಲ್ಲ ಎನ್ನಿಸುವುದಿಲ್ಲವೇ?
ಇಲ್ಲ. ಅವಳು ತುಂಬಾ ಆಸ್ಥೆಯಿಂದ ನಟನಾ ಕ್ಷೇತ್ರಕ್ಕೆ ಇಳಿದಿದ್ದಾಳೆ. ಮಗುವಾಗಿ ಬೇಕಾದಷ್ಟು ತುಂಟತನ, ಆಟ ಎಲ್ಲವುಗಳಿಗೂ ಅವಳಲ್ಲಿ ಸಮಯವಿದೆ. ಅನೇಕ ತಂದೆ–ತಾಯಿಗಳು ಮಕ್ಕಳ ಬಾಲ್ಯ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಯಾವ ಕ್ಷೇತ್ರದಲ್ಲೂ ತೊಡಗಿಸಲು ಮುಂದಾಗುವುದಿಲ್ಲ. ಆದರೆ ಮಕ್ಕಳ ಆಸಕ್ತಿ, ಏನು ಮಾಡಿದರೆ ಅವರು ಸಂತೋಷ ಪಡುತ್ತಾರೆ ಎನ್ನುವುದನ್ನು ಗುರುತಿಸಿ ಅದೇ ಕ್ಷೇತ್ರದಲ್ಲಿ ಹುರಿದುಂಬಿಸುವುದು ತಂದೆ ತಾಯಿಗಳ ಕರ್ತವ್ಯ. ಹಾಗೆಂದ ಮಾತ್ರಕ್ಕೆ ಆಸಕ್ತಿ ಇಲ್ಲದ ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯ ಹೇರುವುದೂ ತರವಲ್ಲ. ಅನೇಕ ಆಡಿಶನ್‌ ಸಂದರ್ಭದಲ್ಲಿ ತಂದೆ–ತಾಯಿಗಳು ಉತ್ತಮ ನಟನೆ ನೀಡುವಂತೆ ಮಕ್ಕಳಿಗೆ ಒತ್ತಡ ಹೇರಿದ್ದನ್ನು ಕಂಡಿದ್ದೇನೆ. ಈ ರೀತಿಯ ನಡವಳಿಕೆಯಿಂದಾಗಿ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭಗಳೂ ಬರಬಹುದು. ಹೀಗಾಗಿ ಮಗುವಿನ ಒಳಮನಸ್ಸಿನ ಆಸಕ್ತಿಗೆ ಹೆಚ್ಚು ಆದ್ಯತೆ ನೀಡುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT