ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ಮಾಲಿನ್ಯ ನಿವಾರಣೆ ಆಗಬೇಕಿದೆ

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬಿಹಾರದ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರು ದೇವಾಲಯವೊಂದಕ್ಕೆ ಭೇಟಿ ನೀಡಿದ ನಂತರ ಆ ದೇವಾಲಯವನ್ನು  ಶುದ್ಧೀಕರಿ­ಸಿದ ಸಂಗತಿ­ಯನ್ನು ಓದಿ ನೋವಾ­ಯಿತು(ಪ್ರ.ವಾ. ಸೆ.30).   ಅವರು ದಲಿತರೆಂಬ ಕಾರಣ­­ಕ್ಕಾಗಿಯೇ ಈ ಶುದ್ಧೀಕರಣದ ಕ್ರಿಯೆ ನಡೆದಿ­ರು­ವುದು ಸ್ಪಷ್ಟ. ರಾಜ್ಯವೊಂದರ ಮುಖ್ಯಮಂತ್ರಿ­ಗಳಿಗೆ ಈ ಗತಿಯಾ­ದರೆ ಇನ್ನು ಸಾಮಾನ್ಯ ದಲಿತರ ಪಾಡೇನು? ಸ್ವಾತಂತ್ರ್ಯ ಬಂದು, ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿ­ಗೊಂಡು ಆರೇಳು ದಶಕಗಳಾಗುತ್ತ ಬಂದರೂ ಜಾತಿ ಆಧಾರಿತ ಭೇದ­ಭಾವ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ಶೋಚನೀಯ.

ಈ ಹಿಂದೆ ನಮ್ಮ ದೇಶದ  ರಕ್ಷಣಾ ಮಂತ್ರಿಗಳಾ­ಗಿದ್ದ ದಿವಂಗತ ಬಾಬು ಜಗಜೀವನ್‌­ರಾಂ ಅವರು ಕಾಶಿಯಲ್ಲಿ ಯೋಗಿಯೊಬ್ಬರ ಪುತ್ಥಳಿ­­ಯೊಂದನ್ನು ಸ್ಪರ್ಶಿಸಿ ಉದ್ಘಾಟನೆ ಮಾಡಿ­ಬಂದ ನಂತರ ಪುರೋ­ಹಿತರು ಗಂಗಾಜಲದಿಂದ ಆ ಮೂರ್ತಿಯನ್ನು ಶುದ್ಧೀಕರಿಸಿ, ಅಸ್ಪೃಶ್ಯತೆ ಆಚರಿಸಿದ ಸಂಗತಿ ದೊಡ್ಡ ಸುದ್ದಿಯಾಗಿ ಕೋಲಾಹಲಕ್ಕೆ ಕಾರಣವಾಗಿತ್ತು.

ಇತ್ತೀಚಿಗೆ ದಲಿತ ಹುಡುಗನೊಬ್ಬ ಕೈಗೆ ವಾಚು ಕಟ್ಟಿಕೊಂಡು ಶಾಲೆಗೆ ಹೋದರೆ ಅದನ್ನು ಸಹಿಸದೆ ಆತನ ಕೈಯನ್ನೇ ಕತ್ತರಿಸಲಾಯಿತು. ಇಂಥ ದುಷ್ಟ ಕೃತ್ಯಗಳು ಮರುಕಳಿ­ಸುತ್ತಲೇ ಇವೆ. ಇದಕ್ಕೆ ಕಾರಣ ಮನಸ್ಸಿನ ಮಾಲಿನ್ಯ. ಸಹಮಾನವರನ್ನು ತನ್ನಂತೆ ಬಗೆಯದೆ ಜಾತಿ ಕಾರಣಕ್ಕಾಗಿ ಕೀಳಾಗಿ ಕಾಣು­ವುದು, ಅಸ್ಪೃಶ್ಯತೆ ಆಚರಿಸುವುದು ಖಂಡನೀಯ.

ತಳಸ­ಮು­­ದಾ­­ಯದವರನ್ನು ಕೀಳಾಗಿ ಕಂಡು ಅವರನ್ನು ಅವಮಾನಿಸುವುದು, ಅವರಿಗೆ ಸಾಮಾ­ಜಿಕ, ಧಾರ್ಮಿಕ ಹಕ್ಕು ಸವಲತ್ತು­ಗಳು ದೊರಕ­ದಂತೆ ಸಂಚು ರೂಪಿಸುವುದು ಅತ್ಯಂತ ಹೇಯ. ಇದು ದೇಶ ಹಿನ್ನೆಡೆಗೆ ಸರಿಯು­ತ್ತಿರುವುದರ ಸೂಚನೆ. ಜಾಗತೀಕರಣದ ಇಂದಿನ ಆಧುನಿಕ ಸಮಾಜದಲ್ಲಿ ಅಸ್ಪೃಶ್ಯತೆಯಂಥ ದುಷ್ಟ ಆಚರಣೆಗಳು ಚಾಲ್ತಿಯ­ಲ್ಲಿ­ರುವುದು ತಲೆತಗ್ಗಿಸುವ ಸಂಗತಿಯಾಗಿದೆ. ಎಲ್ಲಿಯವರೆಗೆ ತಳಸಂಸ್ಕೃತಿಯ ಜನರನ್ನು ಪ್ರೀತಿ, ಮಮತೆಯಿಂದ ಎದೆಗೆ ಅಪ್ಪಿ­ಕೊಂಡು ಅವರಿಗೆ ನೀಡಬೇಕಾದ ಹಕ್ಕು, -ಸವಲತ್ತು, ಘನತೆ– ಗೌರವವನ್ನು ನೀಡುವುದಿಲ್ಲವೋ ಅಲ್ಲಿಯವರೆಗೆ ಭಾರತ ಪ್ರಕಾಶಿಸಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT